ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು: ಕೊಳ್ಳದ ಹಾದಿ, ನಾಡಿಮಿಡಿತ ಪುಸ್ತಕಗಳ ಓದು

Last Updated 13 ಜುಲೈ 2019, 19:45 IST
ಅಕ್ಷರ ಗಾತ್ರ

ಕೊಳ್ಳದ ಹಾದಿ

ಇದು ಲೇಖಕರ ನಾಲ್ಕನೇ ಕಥಾ ಸಂಕಲನ. ಐದಾರು ವರ್ಷಗಳಲ್ಲಿ ಬರೆದ ಕಥೆಗಳು ಇದರಲ್ಲಿವೆ. ಧರ್ಮ, ಸ್ವಾರ್ಥ, ಸಿಟ್ಟು–ಸೆಡವುಗಳ ಚೌಕಟ್ಟು ಮನುಷ್ಯ–ಮನುಷ್ಯರ ನಡುವಿನ ಕಂದಕಕ್ಕೆ ಕಾರಣವಾಗುವ ಪರಿಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಲೇಖಕರು. ಅಂತೆಯೇ ಮಾನವೀಯ ಮೌಲ್ಯಗಳ ಸಾರರೂ‍ಪಿ ಬರಹ ಈ ಪುಸ್ತಕ. ಬದುಕು ಉದ್ದನೆಯ ‘ಕೊಳ್ಳ’ದ ಹಾಗೆ. ನಡೆದಷ್ಟೂ ಹರವು, ದೂರದೂರದ ಪಯಣ. ಒಮ್ಮೊಮ್ಮೆ ರಭಸದ ಹರಿವು. ಮತ್ತೊಮ್ಮೆ ನಿಧಾನ. ಅದೆಷ್ಟೋ ನಿಲ್ದಾಣಗಳು. ಪಯಣಿಸುತ್ತಿರಬೇಕಷ್ಟೆ ಎನ್ನುವ ಲೇಖಕರು ಎದುರಾಗಬಹುದಾದ ಅನಿರೀಕ್ಷಿತತೆಗಳನ್ನು ಒಪ್ಪಿ ಮುನ್ನಡೆಯಬೇಕೆನ್ನುತ್ತಾರೆ. ಎದ್ದು ಎದೆಗುದ್ದುವ ಪ್ರಶ್ನೆಗಳಿಗೆ, ಹುಡುಕಿದರೆ ಹಲವು ಉತ್ತರಗಳು ಕಾಣುತ್ತವೆ ಎನ್ನುವುದನ್ನು ಈ ಪುಸ್ತಕ ನಿಚ್ಚಳವಾಗಿಸಿದೆ. ಓದುತ್ತಾ ಹೋದಂತೆ ಪುಸ್ತಕದ ಜತೆಗಿನ ಆಪ್ತತೆ ಹೆಚ್ಚಾಗುತ್ತದೆ. ಒಂದೇ ಉಸಿರಿಗೆ ಓದಿ ಮುಗಿಸುವಂತಹವುಗಳಲ್ಲ ಈ ಕಥೆಗಳು. ಇಷ್ಟಿಷ್ಟೇ ಓದುತ್ತಾ ಬೊಗಸೆ ತುಂಬಿಕೊಳ್ಳಬೇಕಾದ, ಭಿನ್ನ–ಭಾವಗಳಿಗೆ ಮರುಗುವ ಗುಣವಿರುವ ಈ ಕಥೆಗಳು ಓದುಗರನ್ನು ಬದುಕಿನ ಜತೆ ಮುಖಾಮುಖಿಯಾಗಿಸುವುದು ವಿಶೇಷ.

ನಾಡಿಮಿಡಿತ

ವ್ಯಕ್ತಿಯ ವರ್ತನೆ, ಬದಲಾವ‌ಣೆ, ಕೈಂಕರ್ಯಗಳಿಗೆ ವ್ಯವಸ್ಥೆ, ಬಡತನ, ಕೌಟುಂಬಿಕ ಹಿನ್ನೆಲೆ ಮುಂತಾದವುಗಳ ಕಾರ್ಯ–ಕಾರಣ ಸಂಬಂಧಗಳನ್ನ ವಿವರಿಸುತ್ತದೆ ಈ ಕಾದಂಬರಿ. ಇದು ಲೇಖಕರ ಕನ್ನಡದ ಚೊಚ್ಚಲ ಹೊತ್ತಿಗೆ. ರಘು ಮತ್ತು ಲಕ್ಷ್ಮಣ ಎಂಬೆರಡು ಪ್ರತಿಮೆಗಳ ಮೂಲಕ ದ್ವಂದ್ವ ಮತ್ತು ಅಸಮಾನತೆಯ ಆಯಾಮಗಳನ್ನ ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ ಲೇಖಕರು. ಬಡತನದ ಹಿನ್ನೆಲೆಯ ಯುವಕರಿಬ್ಬರ ಮೆಡಿಕಲ್ ಕಾಲೇಜಿನ ವಿದ್ಯಾಭ್ಯಾಸದ ಕತೆಯಂತೆ ಶುರುವಾದ ಪ್ರಸಂಗ ಇಡೀ ಭಾರತ ಹಾಗೂ ಅದರ ಒಳಹುಗಳನ್ನು ಕಣ್ಣಿಗೆ ಕಟ್ಟಿದಂತೆ ನಿರೂಪಿಸಿರುವ ರೀತಿ ಭಿನ್ನ. ‘ಬಡತನ ಲಕ್ಷ್ಮಣನಿಗೆ ತ್ಯಾಗವನ್ನು ಕಲಿಸಿದ್ದರೆ, ರಘುವಿಗೆ ದಾಹವನ್ನು ಕಲಿಸಿತ್ತು’ ಎಂಬ ಸಾಲುಗಳು ಕಾದಂಬರಿಯ ಆತ್ಮ ಎನ್ನುತ್ತಾರೆ ಜೋಗಿ. ಅದು ನಿಜವೂ ಹೌದು. ಆದರೆ ಭಿನ್ನ ಉದ್ದೇಶಗಳು ಕ್ರಮೇಣ ಸಾಮ್ಯತೆಯ ಹಾದಿ ಹಿಡಿದು, ಸಮಾಜದ ಆರೋಗ್ಯಕ್ಕೆ ದುಡಿಯುವ ನಿರ್ಧಾರ ಕೈಗೊಳ್ಳುವುದು ಕಾದಂಬರಿಯ ಒಟ್ಟಂದವನ್ನು ಸುಂದರಗೊಳಿಸಿವೆ.

ಸ್ಥವಿರ ಜಂಗಮಗಳಾಚೆ

ವೈವಿಧ್ಯ ಕಥಾವಸ್ತು, ಭಾಷೆ, ಪಾತ್ರ ನಿರೂಪಣೆಯ 15 ಕತೆಗಳ ಗುಚ್ಛವೆ ‘ಸ್ಥವಿರ ಜಂಗಮಗಳಾಚೆ’. ಇಲ್ಲಿನ ಎಲ್ಲ ಕತೆಗಳಲ್ಲಿ ಸಾಮಾಜಿಕ ಕಳಕಳಿ, ಸಮಗ್ರ ಜೀವನಾನುಭವ, ವ್ಯಕ್ತಿಗಳ ಒಡನಾಟ ಎದ್ದು ಕಾಣುತ್ತದೆ. ಓದುತ್ತಾ ಹೋದಂತೆ ಇದು ನಮ್ಮ ಕತೆಯೂ ಹೌದೆನಿಸಿದರೆ ಅಚ್ಚರಿಯೇನಿಲ್ಲ. ಇಡಿಯಾಗಿ ಒಂದೇ ಉಸಿರಿಗೆ ಓದಿ ಮುಗಿಸುವಂತಹ ಕತೆಗಳಲ್ಲ ಇವು. ಓದಿನ ಕೊನೆಗೊಮ್ಮೆ ನಿಡಿದಾದ ನಿಟ್ಟುಸಿರು ಹೊರಹೊಮ್ಮುತ್ತದೆ ಓದುಗರಿಂದ. ಬಹುಕಾಲ ಬೆಂಬತ್ತಿ ಕಾಡುವ ಕತೆಗಳಿವೆ ಇಲ್ಲಿ. ಇಲ್ಲೇ ನಮ್ಮ ಪಕ್ಕದಲ್ಲೇ ನಡೆಯುತ್ತಿರುವ ಘಟನೆಗಳ ಪ್ರತಿಬಿಂಬವನ್ನಷ್ಟೆ ಲೇಖಕಿ ನಮ್ಮೆದುರು ತೆರೆದಿಟ್ಟಿದ್ದಾರೆ. ವೈರಾಗ್ಯ, ಮುಪ್ಪು, ಪ್ರೇಮ–ಕಾಮ, ಸಂಬಂಧ, ಒಂಟಿತನ, ಕಾಡುವ ಬಯಕೆ ಹೀಗೆ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುತ್ತಾ ಸಾಗುತ್ತದೆ ಈ ಪುಸ್ತಕ. ಸುತ್ತಲಿನ ಆಗು ಹೋಗುಗಳಿಗೆ ಜಡವಸ್ತುಗಳೂ ಪ್ರತಿಕ್ರಿಯಿಸುವುದು, ಮರುಕ ಪಡುವುದು ಇಲ್ಲಿನ ವಿಶೇಷ. ಮನುಷ್ಯನ ಕ್ರೌರ್ಯ, ಹಿಂಸೆ, ಪಾತಕಗಳು ಮನುಷ್ಯನನ್ನು ಮಾತ್ರವಲ್ಲದೆ ಇತರೆ ಜೀವಿಗಳನ್ನು ಕಾಡುವ, ಕೊಲ್ಲುವ ಸಂಗತಿಗಳನ್ನು ಲೇಖಕಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕೆಲವು ಕತೆಗಳಲ್ಲಿನ ಅವರ ಉತ್ತರ ಕರ್ನಾಟಕದ ಭಾಷಾ ಶೈಲಿ ವಿಶಿಷ್ಟವಾಗಿದೆ. ಇಲ್ಲಿನ ಕೆಲ ಕತೆಗಳು ಹಲವು ವರ್ಷಗಳ ಹಿಂದಿನ ಜಾಡಾದರೆ ಇನ್ನೂ ಕೆಲವು ಅತ್ಯಾಧುನಿಕ ವಿಷಯಗಳಿಂದ ಕೂಡಿದವುಗಳಾಗಿವೆ. ಎಲ್ಲ ನೋವಿನಾಚೆಗು ಬದುಕು ಕಾದಿರುತ್ತದೆ ನಮಗಾಗಿ ಎಂದು ನಿರೂಪಿಸಿರುವ ಲೇಖಕಿ ತಮ್ಮ ಕತೆಗಳ ಮೂಲಕ ಬದುಕಿನ ಬಗ್ಗೆ ಭರವಸೆ ತುಂಬುತ್ತಾರೆ. ಮಾತ್ರವಲ್ಲ ಮತ್ತೆ ಮತ್ತೆ ಓದಬೇಕೆನಿಸುವ ಕತೆಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT