ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು ಕನ್ನಡದ ಬೆವರುಪ್ಪಿನ ಸುವಾಸನೆ

Last Updated 2 ಮೇ 2020, 19:30 IST
ಅಕ್ಷರ ಗಾತ್ರ

ಕಡಲತೀರದಲ್ಲಿ ಕುಳಿತಾಗ ಅಲ್ಲಿಯ ಗಾಳಿಯಲ್ಲೊಂದು ಬೆವರು ಮತ್ತು ಉಪ್ಪಿನ ಮಿಶ್ರಣದ ವಾಸನೆ ಗ್ರಹಿಕೆಗೆ ಬರುವುದುಂಟು. ಹೊಸಬರಿಗೆ ಇದು ಸ್ವಲ್ಪ ಅಸಹನೀಯ ಅನ್ನಿಸಿದರೂ, ಕರಾವಳಿಯಲ್ಲೇ ಹುಟ್ಟಿ ಬೆಳೆದವರಿಗೆ ಇದು ಬದುಕಿನ ಭಾಗವೇ ಹೌದು. ಹೊರನಾಡ ಕನ್ನಡತಿ ಸ್ನೇಹಲತಾ ದಿವಾಕರ್‌ ಕುಂಬ್ಳೆಯವರ ’ಮಗ್ಗ‘ ಕಥಾಸಂಕಲನದ ಎಲ್ಲ ಕಥೆಗಳನ್ನೂ ಓದಿ ಮುಗಿಸಿದಾಗ ಕಾಸರಗೋಡು ಕನ್ನಡದ ಈ ಪರಿಮಳ ಮೂಗಿಗೆ ಅಡರಿದ್ದು ಸುಳ್ಳಲ್ಲ. ಇಲ್ಲಿರುವ ಕಥೆಗಳಲ್ಲಿ ಬರುವ ಪಾತ್ರಸಂಘರ್ಷಗಳು ಅಂತಹದ್ದು. ಕನ್ನಡ ಕಥಾ ಲೋಕದಲ್ಲಿ ಮೊಗೆದಷ್ಟೂ ಭರವಸೆ ಉಕ್ಕಿಸುವ ವೈವಿಧ್ಯಮಯ ಕಥೆಗಳಿವೆ ಎನ್ನುವುದನ್ನು ನಿರೂಪಿಸುವ ಸಂಕಲನವಿದು. ಇಲ್ಲಿರುವ ಹತ್ತು ಕಥೆಗಳಲ್ಲಿ 2–3 ಕಥೆಗಳು ನಿಸ್ಸಂಶಯವಾಗಿಯೂ ಇತ್ತೀಚೆಗೆ ಓದಿದ ಅತ್ಯುತ್ತಮ ಕಥೆಗಳಲ್ಲಿ ಸೇರುತ್ತವೆ.

ಸ್ನೇಹಲತಾ ಅವರ ಕಥಾಪಾತ್ರಗಳಲ್ಲಿ ಸ್ಥಾಯಿಭಿತ್ತಿಯಾಗಿ ಕಾಣುವುದು ಹೆಂಗರುಳಿನ ವಾತ್ಸಲ್ಯ. ಅವರು ನಿರೂಪಿಸುವ ಗಂಡುಪಾತ್ರಗಳಲ್ಲೂ ಅದರ ಒಳಸೆಲೆಯನ್ನು ಗಮನಿಸಬಹುದು. ಆದರೆ ಕಾಸರಗೋಡು ಕನ್ನಡದ ಬಿಡುಬೀಸಿನ ಲಯದಲ್ಲಿ ಆ ವಾತ್ಸಲ್ಯವನ್ನು ಹುಡುಕುವ ಸಾಮರ್ಥ್ಯ ಓದುಗನಿಗೆ ಇರಬೇಕು. ಕಾಸರಗೋಡನ್ನು ಕರ್ನಾಟಕದ ಕನ್ನಡಿಗರು ದಿನೇ ದಿನೇ ಭಾವಲೋಕದಿಂದ ದೂರ ಸರಿಸುತ್ತಿದ್ದರೂ, ಇಂತಹ ಸಣ್ಣ ಕಥೆಗಳು ಮತ್ತೆ ಕನ್ನಡಿಗರ ಭಾವಬಂಧವನ್ನು ಗಟ್ಟಿಗೊಳಿಸುತ್ತವೆ. ಮುನ್ನುಡಿಯಲ್ಲಿ ಮಹೇಶ್ವರಿ ಯು. ಅವರು ಗುರುತಿಸಿದ ಹಾಗೆ ಕಾಸರಗೋಡಿನ ಕಥೆಗಳಿಗೆ ಸತ್ವಯುತ ಪರಂಪರೆ ರೂಢಿಸಿದವರಲ್ಲಿ ನಮಗೆ ಥಟ್ಟನೆ ನೆನಪಾಗುವವರು ಎಂ.ವ್ಯಾಸ. ಹಾಗೆಯೇ ಕೆ.ವಿ.ತಿರುಮಲೇಶ್‌, ಜನಾರ್ದನ ಎರ್ಪಕಟ್ಟೆ, ಶಶಿ ಭಾಟಿಯಾ ಮುಂತಾದವರೂ. ಈ ಪರಂಪರೆಯನ್ನು ಮುಂದುವರಿಸುವಂತೆ ಸ್ನೇಹಲತಾ ಅವರ ಇಲ್ಲಿಯ ಕಥೆಗಳಿವೆ.

ಇಲ್ಲಿಯ ಕಥೆಗಳ ವೈವಿಧ್ಯ ಗಮನ ಸೆಳೆಯುತ್ತದೆ. ‘ಕರುಪ್ಪ ಮತ್ತು ಕಡಲಮ್ಮ’ ಕಟ್ಟಿಕೊಡುವ ವಾತಾವರಣವೇ ಬೇರೆ; ‘ಬದುಕು’ ತೋರಿಸುವ ಭಾವಲೋಕದ ಸಂಘರ್ಷವೇ ಬೇರೆ. ಇನ್ನು ಕಥಾ ಸಂಕಲನದ ಮುಖ್ಯ ಕಥೆಯಾದ ‘ಮಗ್ಗ’ ಎತ್ತಿಕೊಡುವ ಪ್ರತಿಮೆಗಳ ಲೋಕವೇ ವಿಭಿನ್ನ. ಹಾಗೆ ನೋಡಿದರೆ ಈ ಮೂರು ಕಥೆಗಳು ಸಂಕಲನದ ಒಟ್ಟು ಮೌಲ್ಯವನ್ನು ಇನ್ನಿಲ್ಲದಂತೆ ಎತ್ತರಿಸಿವೆ. ಕರುಪ್ಪನ ಕಥೆ, ಕಡಲಮಕ್ಕಳ ಬದುಕಿನ ಸಂಕಟ ಮತ್ತು ಸಂವೇದನೆಗಳನ್ನು ಒಟ್ಟಿಗೇ ಬಿಂಬಿಸುತ್ತಿದ್ದು, ಈ ಕಥೆಯಲ್ಲಿ ಕಡಲು ಕೂಡಾ ಒಂದು ಮುಖ್ಯಪಾತ್ರವಾಗಿ ಹೊಮ್ಮಿರುವುದು ಕುತೂಹಲಕರ.

‘ಬದುಕು’ ಕಥೆ ಮುಂದಿಡುವ, ಕಾಮ–ಪ್ರೇಮಗಳ ನಡುವೆ ಜೀಕುವ ಕ್ರೂರವ್ಯಂಗ್ಯದ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ತನ್ನದಲ್ಲದ ಬದುಕನ್ನು ತನ್ನ ತಂಗಿಯರಿಗಾಗಿ ಮುಡಿಪಿಡುವ ಕಥಾನಾಯಕಿ ಆ ಪ್ರಶ್ನೆಗೆ ತನ್ನದೇ ಆದ ಉತ್ತರವನ್ನು ಕಂಡುಕೊಳ್ಳಲು ಕೊನೆಗೆ ಮನೆಬಿಡುತ್ತಾಳೆ. ಮನೆಯ ಅಂಗಳ ದಾಟುವಾಗ ತಂಗಿಯರಿಂದ ‘ಅಕ್ಕಾ...ಎಲ್ಲಿಗೆ..?’ ಎಂಬ ಪ್ರಶ್ನೆ ನಿರೀಕ್ಷಿಸಿ ಹಿಂತಿರುಗಿ ನೋಡಿ ನಿರಾಶೆಯಾಗುವ ಆ ಪಾತ್ರವನ್ನು ಕಥೆಗಾರ್ತಿ ಅತ್ಯುತ್ತಮ ಎನ್ನುವಂತೆ ಕಟ್ಟಿಕೊಟ್ಟಿದ್ದಾರೆ. ಕಥೆ ಓದಿ ಮುಗಿಸಿದ ಬಳಿಕ ‘ಅರೆ... ಈ ಕಥಾನಾಯಕಿಗೊಂದು ಹೆಸರನ್ನೂ ಕೊಟ್ಟಿಲ್ಲವಲ್ಲ.. ಕಥೆಗಾರ್ತಿ’ ಎನ್ನುವುದು ಹೊಳೆದು ಮನಸ್ಸು ಭಾರವಾಗುತ್ತದೆ. ಹೆಸರಿದ್ದರೂ ಹೆಸರೇ ಇಲ್ಲದಂತೆ ಬದುಕುವ ಎಷ್ಟೊಂದು ಹೆಣ್ಣುಗಳಿಲ್ಲ ಈ ಸಮಾಜದಲ್ಲಿ!

‘ಮಗ್ಗ’ ಕಥೆ ನಿಸ್ಸಂಶಯವಾಗಿಯೂ ಈ ಸಂಕಲನದ ಅತ್ಯುತ್ತಮ ಕಥೆ. ಪರಂಪರಾಗತ ಕುಲಕಸುಬುಗಳೆಲ್ಲ ನಗರೀಕರಣದ ಹೊಡೆತಕ್ಕೆ ನೆಲಕಚ್ಚುವ ಸನ್ನಿವೇಶದಲ್ಲಿ ಕುಟುಂಬವೆಂಬ ಮಗ್ಗವೂ ನೂಲು ಬಿಚ್ಚಿಕೊಳ್ಳುವುದಕ್ಕೆ ಇಳಿವಯಸ್ಸಿನಲ್ಲಿ ಸಾಕ್ಷಿ ಹೇಳುವ ಚೆಟ್ಟಿಯಾರ್‌ ಪಾತ್ರ ಓದುಗರನ್ನು ಹೊಸದೇ ಲೋಕಕ್ಕೆ ಕರೆದೊಯ್ಯುತ್ತದೆ. ಕಾಸರಗೋಡಿನ ಪದಪ್ರಯೋಗಗಳು ಈ ಕಥೆಯಲ್ಲಿ ಸೀರೆಯೊಳಗೊಂದಾದ ಬಣ್ಣದ ನೂಲಿನಂತೆ ಗಮನ ಸೆಳೆಯುತ್ತವೆ.

ಬಿಡಿಬಿಡಿಯಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಈ ಕಥೆಗಳ ಸಂಕಲನದ ವಿಶೇಷವೊಂದಿದೆ. ಈ ಕಥೆಗಳನ್ನು ಪ್ರೇಮಲತಾ ಅವರು ಬರೆದಿರುವುದು 30 ವರ್ಷಗಳ ವಿಶಾಲ ಅಂತರದಲ್ಲಿ. ‘ಕರುಪ್ಪ ಮತ್ತು ಕಡಲಮ್ಮ’ ಬರೆದಾಗ ಅವರಿನ್ನೂ ಕಾಲೇಜು ತರುಣಿ. ಅದಾಗಿ 15 ವರ್ಷಗಳ ಬಳಿಕ ಬರೆದ ‘ಬದುಕು’ ಮತ್ತು ಅದರ ಬಳಿಕ 12 ವರ್ಷಗಳನ್ನು ಬಿಟ್ಟು ಬರೆದ ‘ಮಗ್ಗ’ ಕಥೆಗಳನ್ನು ಒಟ್ಟಾಗಿ ಓದಿದಾಗ ಉಂಟಾಗುವ ಅನುಭವ, ಈ ಲೇಖಕಿ ಇಲ್ಲಿಯವರೆಗೆ ಕಥಾ ಸಂಕಲನವೊಂದನ್ನು ಪ್ರಕಟಿಸದೇ ಸುಮ್ಮನಿದ್ದುದೇಕೆ ಎನ್ನುವ ವಿಷಾದವನ್ನು ಹುಟ್ಟುಹಾಕುತ್ತದೆ.

20 ವರ್ಷಗಳ ಹಿಂದೆಯೇ ಇವರದ್ದೊಂದು ಸಂಕಲನ ಬಂದಿದ್ದರೆ, ಇಷ್ಟು ಹೊತ್ತಿಗೆ ಇವರು ಕನ್ನಡದ ಗಮನಾರ್ಹ ಕಥೆಗಾರ್ತಿಯಾಗಿ ಬೆಳೆಯುತ್ತಿದ್ದರೇನೋ? ಬೆನ್ನುಡಿಯಲ್ಲಿ ನಾದಾ ಅವರು ಗುರುತಿಸಿದಂತೆ, ಈಕೆ ಬರವಣಿಗೆಯನ್ನು ಮುಂದುವರಿಸಿದರೆ ಕನ್ನಡದ ಸಶಕ್ತ ಕಥೆಗಾರ್ತಿ ಆಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT