ಸೋಮವಾರ, ಜೂನ್ 21, 2021
29 °C

ಪುಸ್ತಕ ವಿಮರ್ಶೆ: ಕೆಂಡವ ಮೆಟ್ಟಿದ ಕಾಲುಗಳ ಗಾಯದ ಗುರುತು

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

Prajavani

‘ಕೆಂಡದ ಬೆಳುದಿಂಗಳು’ ಗುರುಪ್ರಸಾದ್ ಕಂಟಲಗೆರೆ ಅವರ ಎರಡನೇ ಕಥಾಸಂಕಲನ. ಇದರ ಶೀರ್ಷಿಕೆಯೇ ಹೊಸ ರೂಪಕವೊಂದನ್ನು ಕಟ್ಟಿನಿಲ್ಲಿಸುತ್ತದೆ. ಬೆಳುದಿಂಗಳ ಕನಸಲ್ಲಿ ಕಣ್ಕಟ್ಟು ಮಾಡಿ, ಕೆಂಡದ ಮೇಲೆ ನಿಂತಿರುವ ವಾಸ್ತವವನ್ನು ಮರೆಸುತ್ತಿರುವ ಕಾಲವಿದು; ಸ್ವರ್ಗದ ಪಾರಿಜಾತದ ಭ್ರಮಾಸುವಾಸನೆಯಲ್ಲಿ ಮೂಗುಮುಚ್ಚಿ, ಜೀವಂತ ಚರ್ಮ ಸುಡುತ್ತಿರುವ ವಾಸನೆಯನ್ನು ಮುಚ್ಚುತ್ತಿರುವ ಕಾಲ. ಇಲ್ಲಿನ ಬಹುತೇಕ ಕಥೆಗಳು ಸದ್ಯದ ‘ಕಣ್ಕಟ್ಟಿನ ರಾಜಕಾರಣ’ದ ಬಗ್ಗೆ ನೇರವಾಗಿ ಮಾತಾಡದೆಯೂ ಅದರ ಪರಿಣಾಮಗಳನ್ನು ಕಾಣಿಸುತ್ತ ಬೆಚ್ಚಿಬೀಳಿಸುತ್ತವೆ.

ಇಲ್ಲಿನ ಎಲ್ಲ ಕಥೆಗಳೂ ಸಮಾಜದಲ್ಲಿ ದಟ್ಟವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ನಾನಾ ರೂಪಗಳನ್ನು ಕಾಣಿಸುತ್ತವೆ. ಈ ಪ್ರಯತ್ನದಲ್ಲಿ ಆಕ್ರೋಶವಿಲ್ಲ; ಗಾಢ ವಿಷಾದವಿದೆ. ಗುರುಪ್ರಸಾದ್ ಅವರಿಗೆ ದಟ್ಟ ಅನುಭವವಿದೆ. ಕತೆ ಹೇಳುವ ಭಾಷೆಯೂ ಒಂದು ಮಟ್ಟಿಗೆ ಸಿದ್ಧಿಸಿದೆ ಎನ್ನುವುದಕ್ಕೆ ಇಲ್ಲಿನ ಹಲವು ಕತೆಗಳೇ ಪುರಾವೆ.

‘ಇವ ನಮ್ಮವ’ ಕಥೆಯ ಶೀರ್ಷಿಕೆ ಬಸವಣ್ಣನ ವಚನದ ಸಾಲು. ಆದರೆ ಅದು ಇಲ್ಲಿ ತನ್ನ ಮೂಲಾರ್ಥಕ್ಕೆ ವಿರುದ್ಧವಾಗಿ, ‘ನಮ್ಮವ’ನಾಗಿರುವುದೇ ಅಪರಾಧವಾಗಿಬಿಡುವ ದುರಂತವನ್ನು ಕಾಣಿಸುತ್ತದೆ. ನಗರವಾಸಿ ಸುಶಿಕ್ಷಿತ, ಉದ್ಯೋಗಿ ಸಾವಿತ್ರಿ ಮನೆಗೆಲಸಕ್ಕಾಗಿ ಶಿವಮ್ಮನನ್ನು ಕರೆಯುತ್ತಾಳೆ. ಒಂದು ದಿನ ಬಂದು ಹೋಗುವ ಅವಳು ಮರುದಿನದಿಂದಲೇ ಬರುವುದಿಲ್ಲ. ಕಥೆಯ ಕೊನೆಯಲ್ಲಿ ಅವಳು ಬರದಿರುವುದಕ್ಕೆ ಕಾರಣ, ‘ಸಾವಿತ್ರಿ ಕೂಡ ಶಿವಮ್ಮನ ಜಾತಿಯವಳೇ. ಕೆಳಜಾತಿಯವರ ಮನೆಗೆಲಸಕ್ಕೆ ಹೋದರೆ ಮೇಲು ಜಾತಿಯವರು ಕೆಲಸ ಕೊಡುವುದಿಲ್ಲ’ ಎಂಬುದು ಗೊತ್ತಾಗುತ್ತದೆ. ಈ ಕಥೆ ಕುತೂಹಲದಿಂದ ಓದಿಸಿಕೊಂಡು ಹೋಗಿ ಕೊನೆಯಲ್ಲಿ ಬೆಚ್ಚಿಬೀಳಿಸುವ ಜಾತಿವಿಕಾರವನ್ನು ಕಾಣಿಸುತ್ತದೆ. ಆದರೆ ಇಡೀ ಕಥೆಯ ಪಾತ್ರ, ವಿವರಗಳೆಲ್ಲವೂ ಕೊನೆಯ ‘ಶಾಕ್’ಗಾಗಿ ಟೂಲ್‌ಗಳಾಗಿ ಬಳಕೆಯಾಗಿ ಅದೊಂದನ್ನೇ ಸಾಧಿಸಿ ಸುಮ್ಮನಾಗಿಬಿಡುತ್ತವೆ.

‘ಪ್ರತಿಮೆ ತೆರವು’ ಕಥೆಯಲ್ಲಿ, ದಲಿತರ ಅಸ್ಮಿತೆಯ ಗುರುತಾಗಿರುವ ಅಂಬೇಡ್ಕರ್ ಪ್ರತಿಮೆಯನ್ನೇ ಮರೆಮಾಚಿ ತನ್ನ ಹಟ್ಟಿ ಪ್ರವೇಶಿಸಬೇಕಾದ ವಿಚಿತ್ರ ಸನ್ನಿವೇಶವೊಂದಿದೆ. ಇದು ಆಧುನಿಕ ಸಮಾಜದಲ್ಲಿ ಜಾತಿಪ್ರಜ್ಞೆ ಇನ್ನಷ್ಟು ಸಂಕೀರ್ಣವಾಗಿ, ಅದು ಹುಟ್ಟಿಸುವ ದ್ವಂದ್ವಗಳನ್ನು ತುಂಬ ಸಶಕ್ತವಾಗಿ ಹಿಡಿದಿಡುವ ರೂಪಕ. ಆದರೆ ಇದು ಒಂದು ಪಾಸಿಂಗ್ ರೆಫರೆನ್ಸ್ ಆಗಿಯಷ್ಟೇ ಬಂದು, ಕಥೆ ಮತ್ತೆ ಸವೆದ ಜಾಡಿಗೇ ಮರಳುತ್ತದೆ.

ಮೊದಲ ಕಥೆ, ‘ಚಾಕರಿ’ಯಲ್ಲಿ ಹಟ್ಟಿಯ ಹುಡುಗರು, ಊರೊಳ್ಳರ ವಿರುದ್ಧ ಸಿಡಿದು ನಿಲ್ಲಲು ಯತ್ನಿಸಿ ತಮ್ಮ ಹಟ್ಟಿಯ ಕುಲ್ವಾಡಿ ನರಸಪ್ಪನಿಂದ ಆ ಪ್ರಯತ್ನದಲ್ಲಿ ವಿಫಲರಾಗುತ್ತಾರೆ. ‘ಕುರುವು’ ಕಥೆಯನ್ನು ಇದರ ಪಕ್ಕದಲ್ಲಿ ಇಟ್ಟು ನೋಡಬೇಕು. ‘ಚಾಕರಿ’ಯಲ್ಲಿ ಶಿಕ್ಷಣವೆಂಬ ಹೊರಗಿನ ವ್ಯವಸ್ಥೆ ತಂದ ಅರಿವು ಜಾತಿ ವ್ಯವಸ್ಥೆಯ ವಿರುದ್ಧ ಬಂಡೇಳಲು ಕಾರಣವಾದರೆ ‘ಕುರುವು’ ಕಥೆಯಲ್ಲಿ ತನ್ನ ಬದುಕಿನಿಂದಲೇ ಪಡೆದುಕೊಂಡಿರುವ ಅರಿವಿನಿಂದ ದೈವವನ್ನೂ ಪ್ರಶ್ನಿಸುವ, ತಿಪ್ಪೆಗುಂಡಿಯಲ್ಲಿ ಮುಳುಗೇಳಿಸುವ ನರಸಿಂಹನ ಬಂಡಾಯವಿದೆ. ಈ ಎರಡೂ ಪಾತ್ರಗಳ ಹೆಸರು ನರಸಿಂಹ ಎಂದೇ ಆಗಿರುವುದು ಕಾಕತಾಳೀಯವೇ ಆಗಿದ್ದರೂ ಅವುಗಳ ಮುಖಾಮುಖಿ ಹೊರಡಿಸುವ ಧ್ವನಿ ಖಂಡಿತ ಕಾಕತಾಳೀಯವಲ್ಲ.

ಒಳ್ಳೆಯ ಕಥೆಯಾಗುವ ಎಲ್ಲ ಸಾಧ್ಯತೆಗಳು ಇದ್ದೂ ಆಳಕ್ಕಿಳಿಯದ ಹಗುರ ವಿವರಗಳಲ್ಲಿ ಮುಗಿದು ಸೋಲುವ ಕಥೆ ‘ಬೇರಿಗಂಟದ ಮರ’. ಈ ಕಥೆಯ ಕೇಂದ್ರದಲ್ಲಿ, ತನ್ನ ತಂದೆಯ ಕಾಲದಿಂದಲೂ ಚಪ್ಪಲಿ ರಿಪೇರಿ ಅಂಗಡಿ ಇಟ್ಟು ಬದುಕುತ್ತಿರುವ ಕಾರಜ್ಜನಿದ್ದಾನೆ. ಅವನ ಸುತ್ತಲಿನ ಜಗತ್ತು ಕ್ರಮೇಣ ಬದಲಾಗುತ್ತ ಹೋಗಿ, ಕೊನೆಗೆ ಅವನೇ ಆ ಜಗತ್ತಿಗೆ ಅನಪೇಕ್ಷಿತ ಗುರುತಾಗಿಬಿಡುವುದು ಈ ಕಥೆಯ ವಸ್ತು. ಅಜ್ಜನ ನೆರಳಿಗೆ ಒಂದು ಆಲದ ಮರವೂ ಇದೆ. ಆದರೆ ಕಥೆಗಾರನ ಈ ಸನ್ನಿವೇಶ, ಪಾತ್ರಗಳ ಒಳಗೆ ಇಳಿಯದೇ ಇರುವುದರಿಂದ, ಸಶಕ್ತ ರೂಪಕಗಳಾಗಬೇಕಾಗಿದ್ದ ಸನ್ನಿವೇಶಗಳು ಬರಿ ವಿವರಗಳಾಗಿಯಷ್ಟೇ ಉಳಿದುಬಿಡುತ್ತವೆ. ಹೀಗಾಗಿಯೇ ಆಲದ ಮರ ಉರುಳುವ ದಾರುಣ ಸಂಗತಿಯೂ ಕಾಡದೆ ಮಾಹಿತಿಯಾಗಿಯಷ್ಟೇ ಗೋಚರಿಸುತ್ತದೆ.

‘ಜಾತಿ ಮಾಂಸ’ ಈ ಸಂಕಲನದ ಹೆಚ್ಚು ಯಶಸ್ವಿಯಾದ ಕಥೆ. ವಸ್ತು, ಭಾಷೆಯ ಬಳಕೆ, ಶಿಲ್ಪ ಎಲ್ಲದರಲ್ಲಿಯೂ ಈ ಕಥೆಯ ಸೌಷ್ಠವ ಗಮನಾರ್ಹ. ಈಗ ಬಹುಚರ್ಚೆಯಲ್ಲಿರುವ, ರಾಜಕಾರಣ, ಧರ್ಮ, ಜಾತಿ ಎಲ್ಲ ಗದ್ದಲಗಳಲ್ಲಿಯೂ ಕತ್ತಿಯಾಗಿ ಬಳಕೆಯಾಗುತ್ತಿರುವ ಆಹಾರ ರಾಜಕಾರಣವನ್ನು ಬೇರೆಯದೇ ರೀತಿಯಲ್ಲಿ ನೋಡಲು ಒತ್ತಾಯಿಸುವ ಈ ಕಥೆ ಎಲ್ಲಿಯೂ ಅದನ್ನು ವಾಚ್ಯವಾಗಿ ಹೇಳುವುದಿಲ್ಲ. ಲಕ್ಷ್ಮಿದೇವ್ರ ಪೂಜಾರಿ ಊದ್ಗಡ್ಡಯ್ಯನ ಹಂದಿಮಾಂಸ ಪ್ರೀತಿಯ ಸುತ್ತಲೂ ಬೆಳೆಯುತ್ತ ಹೋಗುವ ಈ ಕಥೆ, ಆಹಾರದಲ್ಲಿ ಶ್ರೇಷ್ಠ ಕನಿಷ್ಠ ಎಂದೆಣಿಸುವ ಸಮಾಜದ ಹುಸಿ ನೈತಿಕತೆಯನ್ನು ಬಲವಾಗಿ ಪ್ರಶ್ನಿಸುತ್ತದೆ. ಹಾಗೆ ಪ್ರಶ್ನಿಸುವುದರ ಜೊತೆಗೆ ಒಂದು ಊರಿನ ಕಥನವಾಗಿ, ಊದ್ಗಡ್ಡಯ್ಯನ ಬದುಕಿನ ಕಥನವಾಗಿಯೂ ಅದು ಗೆಲ್ಲುತ್ತದೆ. ಕಥೆಗಾರನ ಯಾವ ಹೊರಗಿನ ಭಾರವನ್ನೂ ಹೊರದೆ ತನ್ನಷ್ಟಕ್ಕೆ ತಾನು ಬೆಳೆಯುವ ಕಥೆ, ಮುಗಿದ ಮೇಲೂ ಮನಸೊಳಗೆ ಬೆಳೆಯುವ ಗುಣ ಹೊಂದಿರುವಂಥದ್ದು.

‘ಎರಡನೇ ಹೆಂಡ್ತಿ’ ಇನ್ನೊಂದು ಸಶಕ್ತ ಕಥೆ. ಎರಡನೇ ಹೆಂಡತಿಯಾಗಿ ಬಂದು, ಗಂಡನನ್ನು ಕಳೆದುಕೊಂಡು ಸಂಸಾರ ಪೊರೆಯುವ ಲಕ್ಷ್ಮವ್ವನಿಗೆ ತನ್ನ ಹೆಣ್ಣುಮಕ್ಕಳನ್ನು ಮಾತ್ರ ಎರಡನೇ ಸಂಬಂಧಕ್ಕೆ ಕೊಡಬಾರದು ಎಂಬ ಹಟ. ಆದರೆ ಇಡೀ ಸಮಾಜವೇ ಅವಳ ಸುತ್ತ ನಿಂತು, ಮೂಢನಂಬಿಕೆಯನ್ನು ಕಟ್ಟಿ, ಅವಳನ್ನು ಅಸಹಾಯಕಳನ್ನಾಗಿ ಮಾಡುತ್ತದೆ. ಅನಿವಾರ್ಯವಾಗಿ ಮತ್ತೆ ಮಗಳಿಗೂ ಎರಡನೇ ಸಂಬಂಧಕ್ಕೇ ಕೊಡುವ ಸೂಚನೆಯೊಂದಿಗೆ ಈ ಕಥೆ ಮುಗಿಯುತ್ತದೆ. ಈ ಎಲ್ಲವನ್ನೂ ಅಸಹಾಯಕನಾಗಿ ನೋಡುವ ಮೋಹನನ ಶೈಕ್ಷಣಿಕ ಪ್ರಜ್ಞೆಯೂ ಸಮಾಜದ ಕ್ರೌರ್ಯದ ಎದುರು ನಿಸ್ಸಹಾಯಕವಾಗಿಬಿಡುತ್ತದೆ.

ಇಲ್ಲಿನ ಹಲವು ಕಥೆಗಳು ಪ್ರಾರಂಭವಾಗುವುದು ಒಂದು ಪಾತ್ರದಿಂದ, ನಂತರ ಕೇಂದ್ರೀಕೃತವಾಗುವುದು ಇನ್ನೊಂದು ಪಾತ್ರದ ಮೇಲೆ. ಈ ಕೇಂದ್ರದ ಪಲ್ಲಟವೇ ಕೆಲವು ಕಡೆ ಅವರ ಕಥೆಗಳ ಶಿಲ್ಪವನ್ನು ಸಡಿಲಗೊಳಿಸುವುದಿದೆ. ‘ಜಾತಿ ಮಾಂಸ’ ಕಥೆ ಕುರಿ ಭೈರನ ಗಟ್ಟಿಯಾದ ವ್ಯಕ್ತಿಚಿತ್ರಣದ ಮೂಲಕ ಆರಂಭವಾಗುತ್ತದೆ. ಆದರೆ ಅದು ಕೊನೆಗೂ ಅವನ ಕಥೆಯಲ್ಲ, ಊದ್ಗಡ್ಡಯ್ಯನ ಕಥೆ. ‘ಎರಡನೇ ಹೆಂಡ್ತಿ’ ಕಥೆಯಲ್ಲಿಯೂ ಈ ಪಲ್ಲಟ ಕಥೆಯ ಶಿಲ್ಪವನ್ನು ಶಿಥಿಲಗೊಳಿಸಿರುವುದನ್ನು ಗಮನಿಸಬಹುದು. ಹಾಗೆಂದು ಗಟ್ಟಿಯಾದ ಕೇಂದ್ರವೊಂದಕ್ಕೆ ಅಂಟಿಕೊಂಡು ಕಥೆಯನ್ನು ಬಿಗಿಯಾಗಿ ಹೆಣೆಯುವ ಶಕ್ತಿ ಗುರುಪ್ರಸಾದ್ ಅವರಿಗೆ ಇಲ್ಲವೆಂದೇನಲ್ಲ. ಅವರ ಹೆಣಿಗೆಯ ಶಕ್ತಿಯನ್ನು ‘ಟಿಪ್ಪು’ ಕಥೆಯಲ್ಲಿ ನೋಡಬಹುದು. ಈ ಸಂಕಲನದ ಯಶಸ್ವಿ ಕಥೆಗಳಲ್ಲೊಂದಾದ ‘ಟಿಪ್ಪು’, ಹೆಸರಿನ ಕಾರಣಕ್ಕೆ ಮುಗ್ಧ ಬಾಲಕನೊಬ್ಬ ದೇಶದ್ರೋಹಿಯಾಗುವ, ದಾಳಿಗೆ ಒಳಗಾಗುವ ದಾರುಣ ಸನ್ನಿವೇಶವಿದೆ. ‘ಅವನ ಹೆಸರು ಟಿಪ್ಪು’ ಎಂದೇ ಆರಂಭವಾಗುವ ಈ ಕಥೆ ಎಲ್ಲಿಯೂ ಕೇಂದ್ರದಿಂದ ಆಚೀಚೆ ಹರಿದು ಜಾಳಾಗುವುದಿಲ್ಲ. ಮನುಷ್ಯನಿಗಿಂತ ಧರ್ಮ ಮುಖ್ಯವಾಗುವ, ಹೆಸರೇ ಮಗುವಿನ ವ್ಯಕ್ತಿತ್ವದ ಹಣೆಪಟ್ಟಿಯಾಗುವ ಅತ್ಯಂತ ಹೇಯ ವಾಸ್ತವವನ್ನು ಮುಖಕ್ಕೆ ಹೊಡೆದ ಹಾಗೆ ಹೇಳುತ್ತದೆ.

ಗುರುಪ್ರಸಾದ್ ಅವರ ಕಥನಜಗತ್ತು ಜಗಮಗಿಸುವ ದೀಪದ ಬೆಳಕಿನ ಅಡಿಯ ಅಂಧಕಾರದಲ್ಲಿ ನರಳುತ್ತಿರುವ ಜೀವಗಳದ್ದು. ಆ ಜಗತ್ತಿನ ಕುರಿತು ಒಂದು ಬಗೆಯ ಆತ್ಮಾವಲೋಕನ ಮತ್ತು ವಿಷಾದದ ಭಾವದಲ್ಲಿ ಅವರು ಬರೆಯುತ್ತಾರೆ. ಎಷ್ಟೋ ವರ್ಷಗಳ ಹೋರಾಟದ ನಂತರವೂ ಕನಿಷ್ಠ ಗೌರವದ ಬದುಕು ದಕ್ಕಿಸಿಕೊಳ್ಳಲು ಆಗದ ಜನರ ಕುರಿತು, ‘ಯಾಕೆ ಹೀಗಾಗುತ್ತಿದೆ’ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳುತ್ತಲೇ ಅವರು ಬರೆಯುತ್ತಿರುವಂತಿದೆ. ಹಾಗಾಗಿಯೇ ಅವರ ಕಥೆಗಳು ಅವರೊಳಗಿನ ಪ್ರಶ್ನೆಗಳನ್ನು ನಮಗೂ ಬಹುತೀಕ್ಷ್ಣವಾಗಿ ದಾಟಿಸುತ್ತವೆ; ಬೆಂಬಿಡದೆ ಕಾಡುತ್ತವೆ. ಇದೇ ಕಾರಣಕ್ಕೆ ‘ಕೆಂಡದ ಬೆಳುದಿಂಗಳು’ ನಾವೆಲ್ಲರೂ ಓದಿಕೊಳ್ಳಬೇಕಾದ ಕೃತಿ ಮತ್ತು ಗುರುಪ್ರಸಾದ್ ಗಮನಿಸಲೇಬೇಕಾದ ಬರಹಗಾರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು