ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಪಂಚನದಿಗಳಲ್ಲಿ ಕೆನೆಗಟ್ಟಿದ ಕತೆಗಳು

Last Updated 2 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ನೆಲ, ನೀರು, ಗಾಳಿ ಪ್ರಾದೇಶಿಕ ಸ್ವಭಾವದ ವಿವಿಧಾಂಗಗಳಾಗಿದ್ದು, ಇವುಗಳ ಅಂಶಾಂಶಿ ಭಾವ ಸಂಬಂಧಗಳ ಸ್ವರೂಪವೇ ಸೃಜನಶೀಲತೆಯ ಬಹುದೊಡ್ಡ ಭೂಮಿಕೆಯಾಗಿರುತ್ತದೆ. ಇದನ್ನೇ ವಿಮರ್ಶಾ ವಲಯವು ಮಣ್ಣಿನ ವಾಸನೆ, ನೆಲದ ನಿಲುವು, ಪ್ರಾದೇಶಿಕತೆ ಎಂದು ಗ್ರಹಿಸುತ್ತದೆ.

ಇಂಥ ಮನೋಧರ್ಮದ ಪಂಚವೀಸ್ ಕತೆಗಳ ಸಂಗ್ರಹವೇ ಕಡಣಿಯ ಬೆರಗು ಪ್ರಕಾಶನವು ರಮೇಶ ಕತ್ತಿ ಅವರ ಸಂಪಾದಕತ್ವದಲ್ಲಿ ಹೊರತಂದ ‘ಮರೆಯಾಗದ ಕತೆಗಳು’.

ಬದುಕಿನ ಎಲ್ಲ ಸಂಕಟಗಳಿಗೂ ಸ್ಪಂದಿಸುವ ನೆಲ ವಿಜಯಪುರ. ನೀರಿಲ್ಲದೆ, ಅನ್ನವಿಲ್ಲದೆ, ಬಿರು ಬಿಸಿಲೆನ್ನದೆ ನಿರೀಶ್ವರವಾದಿ ಬದುಕನ್ನು ಅಳವಡಿಸಿಕೊಂಡು ಬೆಂಕಿಯನ್ನೇ ನುಂಗಿ ಬೆಳಕನ್ನು ಹರಿಬಿಡುವ ಸಾವಿರಾರು ಜನ ಸಂತರ, ಶರಣರ ನೆಲೆವೀಡಿದು. ಇಂಥ ಬೀಡಲ್ಲಿ ನೆಲದ ಸಾರಸತ್ವವನ್ನು, ಹುಳಿ ಖಾರ ಒಗರನ್ನು, ಉಪ್ಪಿನಾಂಶವನ್ನು, ರಕ್ತ ಸಂಬಂಧವನ್ನು, ಶೋಷಣೆ, ಬವಣೆ, ಬರ, ಅನ್ಯಾಯ, ಅವಜ್ಞಾನಗಳ ಪರಿಯನ್ನು ಎಳೆಎಳೆಯಾಗಿ ಬಿಡಿಸಿ ತೋರಿಸುವ ಒಂದೊಂದು ಬಗೆಯ ಚಿತ್ರಣ ಇಲ್ಲಿನ ಬಹುತೇಕ ಕತೆಗಳಲ್ಲಿ ಕಣ್ಣುಕಟ್ಟುತ್ತದೆ.

ಇಲ್ಲಿನ ಕತೆಗಳು ಸವೆದ ಬದುಕಿನ ಕತೆಗಳಲ್ಲ; ಸವಿದ ಬದುಕಿನ ಚಿತ್ರಣಗಳು.

ದೇಶೀಯತೆಯ ರಕ್ತ, ಮಾಂಸ, ಎಲುಬುಗಳಿಂದ ನಿರ್ಮಾಣಗೊಂಡಿರುವ ಇಲ್ಲಿನ ಕತೆಗಳಿಗೆ ಜೀವಸತ್ವವಿದೆ. ಸಾರಲೋಕದ ಬೆಳಕಿದೆ. ಓದುಗನ ಮನಸ್ಸನ್ನು ಗಟ್ಟಿಯಾಗಿ ಹಿಡಿದಿಡುವ ಶಕ್ತಿ ಇದೆ. ಓದುತ್ತ ಹೋದಂತೆ ಪ್ರತೀ ಕತೆಯಲ್ಲೂ ಪರಂಪರೆಯ ಪ್ರೀತಿಯೊಂದಿಗೆ ಪ್ರಗತಿಯ ಒಲುಮೆಯೂ ಮಡುವುಗಟ್ಟಿರುವುದು ಗೋಚರವಾಗುತ್ತದೆ. ತಬ್ಬಲಿತನದಿಂದ ಆರಂಭಗೊಂಡು ಹೊಸ ಚಿಗುರಿನ ಜಾಜಿ ಮಲ್ಲಿಗೆಯವರೆಗೆ ಅರಳಿನಿಂತ ಇಲ್ಲಿನ ಒಟ್ಟು ಕತೆಗಳ ನೋಟ ಕನ್ನಡ ಕಥಾನಕದ ಪ್ರಾಚೀನ ಮತ್ತು ಆಧುನಿಕ ಕಾಲಘಟ್ಟದ ಎಲ್ಲ ಮಜಲುಗಳಲ್ಲಿಯೂ ತನ್ನ ಹರವು ಚಾಚಿಕೊಂಡಿರುವುದನ್ನು ಕಾಣಿಸುತ್ತದೆ.

ಉದಯ ಹೊರಹೊಮ್ಮಬೇಕು ಎಂಬ ಜೀವಪರ ಧೋರಣೆಯ ‘ತಬ್ಬಲಿಗಳು’ (ರಾಘವೇಂದ್ರ ಖಾಸನೀಸ) ರಾಷ್ಟ್ರೀಯತೆಗೆ ಬಡಿದಾಡುವವರ ಕುಟುಂಬದಲ್ಲಿನ ಸಹಜ ಗೊಂದಲಗಳನ್ನು ಹೃದಯ ಬಿಚ್ಚಿ ಮಾತನಾಡುವ ‘ಬಾಗಿಲು ತೆರೆದಿತ್ತು’ (ವರದರಾಜ ಹುಯಿಲಗೋಳ) ಸೇಡೆಂಬ ಹಾವು ಹೆಣ್ಣಿನ ಸ್ವಭಾವಕ್ಕೆ ತಳುಕು ಹಾಕಿಕೊಂಡು ಹೆಡೆ ಬಿಚ್ಚಿ ಕಾಡುವ ಹೃದಯಹೀನತೆಯ ವಿಹಂಗಮ ನೋಟ ಸಾರುವ ‘ಬಾರುಕೋಲು’ (ಶಾಂತಾದೇವಿ ಕಣವಿ) ಗಾಢವಾಗಿ ಕಾಡುತ್ತವೆ.

ಆಕಾಂಕ್ಷೆ (ಸುಶೀಲಾ ಕಮತಗಿ), ತೂತಿನ ದುಡ್ಡು ಮತ್ತು ನೀರು (ಅರವಿಂದ ಮಾಲಗತ್ತಿ), ಸಂಪಿಗೆ ತಾಯವ್ವ (ಶಂಕರ ಕಟಗಿ), ಒಂದು ಹೆಣದ ಸುತ್ತ (ವೀರಭದ್ರ ಕೌದಿ), ಪರಿವರ್ತನೆ (ಸಂಗಮನಾಥ ಲೋಕಾಪೂರ), ಮಧ್ಯಂತರ (ಕೃಷ್ಣ ಕೊಲ್ಹಾರ ಕುಲಕರ್ಣಿ), ಹೆಬ್ಬಾವಿನ ಕಣ್ಣುಗಳು (ಭಾರತಿ ಪಾಟೀಲ), ಚಮ್ಮಾವುಗೆ (ಎಚ್.ಟಿ.ಪೋತೆ) ಜುಮ್ಮಣ್ಣನ ಕಂಚಿನ ಮೂರ್ತಿ (ಚನ್ನಪ್ಪ ಕಟ್ಟಿ) ಈ ಸಂಕಲನದ ಗಮನಾರ್ಹ ಕತೆಗಳು. ಮಿಕ್ಕ ಕತೆಗಳೂ ಬಾಳಿನ ವಿವಿಧ ಮುಖಗಳನ್ನು ವಿಶ್ಲೇಷಿಸುವಲ್ಲಿ ಸಫಲವಾಗಿವೆ. ಇದೊಂದು ವಿಜಯಪುರ ಜಿಲ್ಲೆಯ ಸಣ್ಣಕತೆಗಳಿಗೆ ಸಂಬಂಧಿಸಿದ ಆಕರಗ್ರಂಥವಾಗಿ ನಿಲ್ಲಬಲ್ಲ ಕೃತಿ ಎಂದರೆ ಅತಿಶಯೋಕ್ತಿ ಏನಿಲ್ಲ. ನವೋದಯ ಕಾಲಘಟ್ಟದಿಂದ ದಲಿತ ಬಂಡಾಯದವರೆಗಿನ ಎಲ್ಲಾ ಪ್ರಯೋಗಗಳ ಕತೆಗಳನ್ನು ಅಡಕಗೊಳಿಸಿರುವ ಕ್ರಮವೂ ಸರಿಯಾಗಿದೆ. ಒಂದು ಶತಮಾನದ ವ್ಯಾಪ್ತಿಯ ಇಪ್ಪತ್ತೈದು ಕತೆಗಳನ್ನು ತುಂಬಾ ಶ್ರಮವಹಿಸಿ ಸಂಪಾದಿಸಿ ಕೊಟ್ಟಿರುವ ಸಾಹಸ ಮೆಚ್ಚುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT