ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ

Last Updated 10 ಜುಲೈ 2021, 17:14 IST
ಅಕ್ಷರ ಗಾತ್ರ

ಜೆ. ಬಾಲಕೃಷ್ಣ ಅವರ ‘ಮೌನವಸಂತ’ ಕೃತಿಯು ಅದೃಶ್ಯವಾಗಿ ಅರಳಿದ ಹತ್ತು ಮಹಿಳೆಯರ ಜೀವನ ಸಾಧನೆಗಳ ಕಥನವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಮನರಂಜನೆಗೆಂದು, ಗಂಡಸಿನ ದೈಹಿಕ ಹಾಗೂ ಮಾನಸಿಕ ಸುಖಕ್ಕೆಂದು ದೇವರು ಸೃಷ್ಟಿ ಮಾಡಿದ್ದಾನೆ, ಆದ್ದರಿಂದ ಗಂಡಿನ ಅಡಿಯಾಳಾಗಿದ್ದುಕೊಂಡು ತನ್ನ ಸಾಧನೆಗಳನ್ನು ಗಂಡಿನ ಸಾಧನೆಗಳೆಂದು ಬಿಂಬಿಸುತ್ತಿರಬೇಕು ಎಂಬ ನಂಬಿಕೆ ಹುಟ್ಟುಹಾಕಲಾಗಿದೆ.

ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ, ಗೊತ್ತು ಗುರಿಗಳಿವೆ, ಅವಕಾಶ ಸಿಕ್ಕಿದರೆ ಅವರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೇ ಅವರಿಗಿಂತ ಶ್ರೇಷ್ಠಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಡಾಕ್ಟರ್‌ಗಳು, ಎಂಜಿನಿಯರ್‌ಗಳು, ವಕೀಲರು, ವಿಜ್ಞಾನಿಗಳು ಹೀಗೆ ತಮಗೊದಗಿದ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಪ್ರಸಿದ್ಧರಾಗಿದ್ದಾರೆ. ಮತ್ತೆ ಕೆಲವರು ಎಲೆಮರೆಕಾಯಿಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರೂ ಇದ್ದಾರೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಇಂತಹ ಸಾಧನೆ ಮಾಡಿರುವವರ ಹೆಸರು ಬೆಳಕಿಗೆ ಬರದೆ ಇರುವ ಉದಾಹರಣೆಗಳು ಇವೆ. ಈ ಕೃತಿಯಲ್ಲಿ ಕ್ರಿಸ್ತಪೂರ್ವದಲ್ಲಿದ್ದ ಪೈಪೋಶಿಯಾ ಎಂಬ ಸಾಧಕಳಿಂದ ಹಿಡಿದು ಇಪ್ಪತ್ತನೇ ಶತಮಾದಲ್ಲಿದ್ದ ಲೇಖಕಿ ಇಸ್ಮತ್ ಚುಗ್ತಾಯ್‌ವರೆಗಿನ ಹೆಣ್ಣು ಮಕ್ಕಳ ಸಾಧನೆ ಸಿದ್ಧಿಗಳು, ಪುರುಷರ ಮೇಲರಿಮೆಯ ನಡುವೆಯೂ ಅವರು ಸಾಧಿಸಿದ ಸಾಧನೆಗಳು, ಬದುಕಿನ ವಿವರಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಡಿಎನ್‌ಎ ರಚನೆಯ ಸ್ವರೂಪದ ಕುರಿತು ಸಂಶೋಧನೆ ಮಾಡಿದ ರೊಸಾಲಿಂಡ್ ಫ್ರ್ಯಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿ ತೀರಿಕೊಳ್ಳುತ್ತಾಳೆ. ಡಿಎನ್‌ಎ ಕುರಿತ ಅವಳ ಸಂಶೋಧನೆಯನ್ನು ವಾಟ್ಸನ್ ಮತ್ತು ಕ್ರಿಕ್ ತಮ್ಮ ಸಂಶೋಧನೆಯೆಂದು ಬಿಂಬಿಸಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ. ಇದು ಪುರುಷ ವಿಜ್ಞಾನಿಗಳು ರೊಸಾಲಿಂಡ್ ಅವರ ಬೌದ್ಧಿಕತೆಗೆ, ಜ್ಞಾನಕ್ಕೆ ಮಾಡಿದ ವಂಚನೆಯಾಗಿದೆ.

ರೇಚಲ್ ಕಾರ್ಸನ್, ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕವು ಮುಂದೆ ಇಡೀ ಜೈವಿಕ ಜಾಲವನ್ನೇ ಹಾಳುಮಾಡಿ ಮಾನವ ಕುಲವೇ ನಾಶವಾಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದವರು. ‘ಪ್ರಕೃತಿಯ ವಿರುದ್ಧ ಹೂಡುವ ಯುದ್ಧ, ಮನುಷ್ಯ ತನ್ನ ವಿರುದ್ಧ ತಾನೇ ಕೂಡಿಕೊಳ್ಳುವ ಯುದ್ಧ’ ಎಂದು ಹೇಳಿದಾಕೆ. ಅವರನ್ನು ಹುಚ್ಚಿ ಎಂದು ಕರೆಯಲಾಗುತ್ತದೆ. ಆಕೆ ಬರೆದ ‘ಮೌನವಸಂತ’ ಕೃತಿಯನ್ನು ಓದದಂತೆ ಜಾಗತಿಕ ಮಟ್ಟದ ಕಂಪನಿಗಳು ಪಿತೂರಿ ಮಾಡುತ್ತವೆ.

‘ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು’ ಹಿಟ್ಲರ್‌ನ ಜನಾಂಗೀಯ ದ್ವೇಷಕ್ಕೆ ಬಲಿಯಾದ ಆನ್ ಫ್ರಾಂಕ್ ಎಂಬ 15 ವರ್ಷದ ಬಾಲಕಿಯನ್ನು ಕುರಿತ ಬರಹ. ಈ ಬಾಲೆ ಲೇಖಕಿ, ಪತ್ರಕರ್ತೆಯಾಗಬೇಕೆಂಬ ಕನಸು ಕಂಡವಳು. ಆದರೆ ಆಕೆಯನ್ನು ಹಿಟ್ಲರ್‌ನ ಕ್ಯಾಂಪಿಗೆ ಎಳೆದೊಯ್ದು ಹಿಂಸೆ ನೀಡಿ ಸಾಯಿಸುತ್ತಾರೆ. ‘ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ತನ್ನ ‘ಡೈರಿ’ಯಲ್ಲಿ ಬರೆದಿಟ್ಟಿದ್ದಾಳೆ. ಈ ಬಾಲೆಯ ಕಥನವೂ ಇಲ್ಲಿದೆ. 20ನೇ ಶತಮಾನದ ಉರ್ದು ಲೇಖಕಿ ಇಸ್ಮತ್ ಚುಗ್ತಾಯ್ ಅವರು ‘ಲಿಹಾಫ್’ ಎಂಬ ಕತೆ ಬರೆದಾಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೂ ತನ್ನ ಬರವಣಿಗೆಯನ್ನು ಮುಂದುವರಿಸಿ ಸಾಧನೆ ಮಾಡುತ್ತಾಳೆ.

14ನೇ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಅನುಭಾವಿ ಕವಿ ಲಲ್ಲೇಶ್ವರಿ, ಕಪ್ಪು ಮಹಿಳೆ ಹನ್ರಿಟಾ ಲ್ಯಾಕ್ಸ್, ಅಲೆಕ್ಸಾಂಡ್ರಿಯಾದ ಹೇಪೇಶಿಯಾ ಸೂಸಾನ್ ಸೊಂತಾಗ್, ಮಾತಾಹರಿ ಇವರ ಸಾಧನೆಗಳನ್ನು ಬದುಕಿನ ಸ್ವರೂಪವನ್ನು ಕಥನದ ಸ್ವರೂಪದಲ್ಲಿ ಕನ್ನಡದ ಓದುಗರಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಾಧಕಿಯರ ಬರವಣಿಗೆಯ ಕೆಲವು ಪುಟಗಳ ಲೇಖನಗಳನ್ನು ಅನುವಾದಿಸಿ ಓದುಗರಿಗೆ ಕೊಟ್ಟಿದ್ದಾರೆ. ಇಲ್ಲಿನ ನಿರೂಪಣೆ ಬರವಣಿಗೆಯ ಶೈಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ.

ಕೃತಿ:

ಮೌನವಸಂತ– ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು

ಲೇ: ಜೆ. ಬಾಲಕೃಷ್ಣ

ಪ್ರ: ಅವಿರತ ಪುಸ್ತಕ, ಬೆಂಗಳೂರು

ಸಂ:9449935103

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT