ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಲೋಕದಿ ಹೊಸ ಮಳೆಬಿಲ್ಲು

Last Updated 5 ಜೂನ್ 2021, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಕೆ. ಶಿವಲಿಂಗಪ್ಪ ಹಂದಿಹಾಳು, ಮಕ್ಕಳ ಸಾಹಿತ್ಯ ರಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬರಹಗಾರ. ಶಿಕ್ಷಕರಾಗಿ ಮಕ್ಕಳೊಂದಿಗೆ ನಿತ್ಯ ಒಡನಾಟದಲ್ಲಿರುವ ಅವರು, ಎಳೆಯರ ಮನಸ್ಸನ್ನು ಬಲ್ಲವರು ಹಾಗೂ ಆ ಮನಸ್ಸಿಗೆ ಯಾವುದು ರುಚಿಸುತ್ತದೆಂದು ಬಲ್ಲವರು; ಆ ರುಚಿಯ ಅಡುಗೆಯನ್ನು ರೂಪಿಸಲು ಪ್ರಯತ್ನಿಸುತ್ತಿರುವವರು.

ನೀತಿ ಸಾಹಿತ್ಯದ ಚೌಕಟ್ಟಿನಿಂದ ಹೊರಗಿಣುಕಿ ಮಕ್ಕಳ ಮನೋವಿಕಾಸ ಮತ್ತು ಮನರಂಜನೆಗೆ ಪೂರಕವಾದ ಸಾಹಿತ್ಯವನ್ನು ಸೃಷ್ಟಿಸುವುದು ಯಾವುದೇ ಬರಹಗಾರನಿಗೆ ಸವಾಲಿನ ಸಂಗತಿ. ಈ ಸವಾಲನ್ನು ಸ್ವೀಕರಿಸುವ ಮಾತಿರಲಿ, ಅರ್ಥ ಮಾಡಿಕೊಳ್ಳಲಿಕ್ಕೂ ಪ್ರಯತ್ನಿಸದೆ ಮಕ್ಕಳ ಗಂಟಲಲ್ಲಿ ನೀತಿಬೋಧೆಯ ಕಥೆ–ಕವಿತೆಯ ಕಡುಬು ತುರುಕುವ ಜೀವಮಾನ ಸಾಧನೆಯ ಬರಹಗಾರರಿದ್ದಾರೆ. ಆದರೆ, ‘ಕನ್ನಡ ಮಕ್ಕಳ ಸಾಹಿತ್ಯ: ಫ್ಯಾಂಟಸಿಯ ಸ್ವರೂಪ’ ವಿಷಯದ ಬಗ್ಗೆ ಪಿಎಚ್‌.ಡಿ. ಪದವಿ ಪಡೆದಿರುವ ಶಿವಲಿಂಗಪ್ಪ, ಮಕ್ಕಳ ಸಾಹಿತ್ಯದಲ್ಲಿ ಹೊಸ ಚಲನೆ ಸಾಧ್ಯವಾಗಬೇಕೆಂಬ ಹಂಬಲವುಳ್ಳವರು. ಆ ಹಂಬಲದ ಭಾಗವಾಗಿಯೇ ‘ನೋಟ್‌ಬುಕ್‌’ ಸಂಕಲನದ ಮಕ್ಕಳ ಕಥೆಗಳನ್ನು ಗಮನಿಸಬಹುದು.

‘ನೋಟ್‌ಬುಕ್‌’ ಕನ್ನಡದ ಮಟ್ಟಿಗೆ ವಿಶಿಷ್ಟವಾದ ಮಕ್ಕಳ ಕೃತಿ. ಹೊಳಪು ಹಾಗೂ ಬಣ್ಣದ ಚಿತ್ರಗಳ ಮಕ್ಕಳ ಕೃತಿಗಳು ಇಂಗ್ಲಿಷಿನಲ್ಲಿ ಸಹಜ; ಕನ್ನಡದಂಥ ದೇಸಿ ಭಾಷೆಗಳಲ್ಲಿ ದುರ್ಲಭ ಎನ್ನುವಂಥ ಸಂದರ್ಭದಲ್ಲಿ ‘ನೋಟ್‌ಬುಕ್‌’ ಅಚ್ಚರಿಯ ಕೃತಿಯಾಗಿ ಸಹೃದಯರನ್ನು ಎದುರುಗೊಳ್ಳುತ್ತದೆ. ಹೊಳಪು ಕಾಗದ ಹಾಗೂ ಬಣ್ಣದ ಚಿತ್ರಗಳ ಜೊತೆಗೆ, ಪ್ರತೀ ಕಥೆಯ ಆರಂಭದಲ್ಲಿ ಕಥಾವಾಚನ ವಿಡಿಯೊದ ಕ್ಯೂಆರ್‌ ಸಂಕೇತವಿದೆ. ಓದುವುದು, ಕೇಳುವುದು ಮತ್ತು ನೋಡುವುದು, ಮೂರೂ ಸಾಧ್ಯತೆಗಳ ಈ ಕೃತಿ ಹೊಸಕಾಲದ ಕಂದಮ್ಮಗಳಿಗೆ ಇಷ್ಟವಾಗುವಂತಿದೆ.

ಶಿವಲಿಂಗಪ್ಪನವರು ತಮ್ಮ ಪುಸ್ತಕವನ್ನು ಸರ್ಕಾರಿ ಶಾಲೆ ಮತ್ತು ಮಕ್ಕಳಿಗೆ ಅರ್ಪಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ತವಕತಲ್ಲಣಗಳೇ ಇಲ್ಲಿನ ಕಥೆಗಳಲ್ಲಿ ಕಾಣಿಸಿಕೊಂಡಿವೆ. ‘ನನಗೂ ಬಟೆಗೂಳು ಕೊಡ್ರಿ ಸಾ...ರ್‌’ ಎನ್ನುವ, ಕಲಿಕೆಯ ಸುಖದಿಂದ ವಂಚಿತನಾದ ‘ನಾನು ಶಾಲೆಗೆ ಸೇರಿದೆ’ ಕಥೆಯ ವೆಂಕಟೇಶಿ, ಶಿವಣ್ಣ ಮೇಷ್ಟ್ರ ಕಾಳಜಿಯಿಂದಾಗಿ ಶಾಲೆಗೆ ಸೇರುತ್ತಾನೆ. ‘ಖುಷಿ’ ಕಥೆಯ ಖುಷಿ, ಕುಟುಂಬದ ಬಡತನದಿಂದಾಗಿ ಕನಸುಗಳನ್ನು ಕಳೆದುಕೊಂಡ ನತದೃಷ್ಟೆ. ಗೆಳತಿಯರಂತೆ ಹೊಸ ಬಟ್ಟೆ ಹೊಲಿಸಿಕೊಳ್ಳಲು ಸಾಧ್ಯವಾಗದ ಮತ್ತೊಬ್ಬಳು ಖುಷಿಯ ಕಥೆ ‘ಹೊಸಬಟ್ಟೆ’, ಇವೆಲ್ಲವೂ ಗ್ರಾಮೀಣ ಮಕ್ಕಳ ಬದುಕನ್ನು ಆವರಿಸಿಕೊಂಡಿರುವ ಬಡತನ ಹಾಗೂ ಆ ಬಡತನದ ಕಾರಣದಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗಿರುವ ಸಮಾಜದ ದಾರುಣ ವಾಸ್ತವವನ್ನು ಚಿತ್ರಿಸುತ್ತವೆ.

ಮಕ್ಕಳ ಮನಸ್ಸನ್ನು ಗಾಸಿಗೊಳಿಸುವಂಥ ಕಥೆಗಳ ಜೊತೆಗೆ ಮುದಗೊಳಿಸುವ ರಚನೆಗಳೂ ‘ನೋಟ್‌ಬುಕ್‌’ನಲ್ಲಿವೆ. ಕಟ್ಟೆಗೆ ಬೀಳಲಿದ್ದ ಮೋಡದ ಮರಿಯನ್ನು ಅರುಣನೆಂಬ ಬಾಲಕ ರಕ್ಷಿಸಿ ಮನೆಯ ಫ್ರಿಜ್‌ನಲ್ಲಿ ಸಂರಕ್ಷಿಸುವ ‘ಕೂಸುಮೋಡ’ ಕಥೆಯ ಕಲ್ಪನೆಯೇ ಸೊಗಸಾಗಿದೆ. ‘ಶಿವಣ್ಣ ಮೇಷ್ಟ್ರು ಮತ್ತು ಮಳೆಬಿಲ್ಲು’ ಕಥೆ ಮಕ್ಕಳ ಕಲ್ಪನಾಲಹರಿಗೆ ಇಂಬು ನೀಡುವಂತಹದ್ದು. ವಿಜ್ಞಾನ ಮೇಷ್ಟ್ರ ಪೀರಿಯಡ್‌ ನಡೆಯುವಾಗ ತರಗತಿಯ ಹೊರಗೆ ಸುರಿಯುವ ಮಳೆ ವಿದ್ಯಾರ್ಥಿಗಳ ಗಮನಸೆಳೆಯುತ್ತದೆ. ತಕ್ಷಣವೇ ಮಕ್ಕಳು ಬಯಲಿಗೆ ಧಾವಿಸಿ ಮಳೆಯಲ್ಲಿ ಹಾಡಿ ಕುಣಿಯುತ್ತಾರೆ. ಮಕ್ಕಳ ಸಂಭ್ರಮದಲ್ಲಿ ಮೇಷ್ಟ್ರೂ ಸೇರಿಕೊಳ್ಳುತ್ತಾರೆ. ಆ ಸಂಭ್ರಮವನ್ನು ಹೆಚ್ಚಿಸುವಂತೆ ಮುಗಿಲ ಬಯಲಿನಲ್ಲಿ ಮೂಡುವ ಮಳೆಬಿಲ್ಲು ಮಕ್ಕಳ ಕಲ್ಪನಾಲಹರಿ ಗರಿಬಿಚ್ಚಲು ಕಾರಣವಾಗುತ್ತದೆ. ಆದರೆ, ಮಕ್ಕಳ ಸಂಭ್ರಮವನ್ನು ಕನಸಿಗೆ ಸೀಮಿತಗೊಳಿಸುವುದು ಕಥೆಯ ಮಿತಿಯೂ ಆಗಿದೆ. ಶಾಲೆಯಿಂದ ಹೊರಬಿದ್ದ ಬಡ್ಯೆಗ ಎನ್ನುವ ಬಾಲಕ, ವಿದ್ಯುತ್‌ ಕಂಬದ ಪ್ರೇರಣೆಯಿಂದ ಊರವರೆಲ್ಲರ ಗಮನಸೆಳೆಯುವ ಸಾಧನೆ ಮಾಡುವ ‘ಲೈಟುಕಂಬ’ ಕಥೆ ಕಲ್ಪನಾವಿಲಾಸದ ಕಾರಣದಿಂದ ಗಮನಸೆಳೆದರೂ, ಕಥೆಯಲ್ಲಿ ಕಲ್ಪನೆಗಿಂತಲೂ ಹೆಚ್ಚು ಒಡೆದುಕಾಣುವುದು ಬಡ್ಯೆಗನ ಬಗೆಗಿನ ಕಥೆಗಾರನ ಅಂತಃಕರಣ. ಸೈಕಲ್‌ಗಾಗಿ ಹಂಬಲಿಸಿ, ಅದರ ಚಿತ್ರವನ್ನು ಪುಸ್ತಕದಲ್ಲಿ ಬರೆದುಕೊಂಡು ಸಮಾಧಾನಪಡುವ ಸುಮಾ ಎನ್ನುವ ಬಾಲಕಿಯ ಬದುಕಿನಲ್ಲಿ ಸಂಭವಿಸುವ ಜಾದೂ ಕೂಡ ಕಥೆಗಾರನ ಕರುಣೆಯಂತೆಯೇ ಕಾಣಿಸುತ್ತದೆ.

ಕಾಮನಬಿಲ್ಲು, ಸೈಕಲ್ಲು, ಹೊಸಬಟ್ಟೆ, ಐಸ್‌ಕ್ರೀಂ, ಇವೆಲ್ಲವೂ ಸೌಲಭ್ಯ ವಂಚಿತ ಗ್ರಾಮೀಣ ಕಾರ್ಮಿಕ ಕುಟುಂಬಗಳ ಮಕ್ಕಳ ಅಸಹಾಯಕತೆಯನ್ನು ಸೂಚಿಸುವ ರೂಪಕಗಳಾಗಿ ಶಿವಲಿಂಗಪ್ಪನವರಿಗೆ (ಕಥೆಗಳಲ್ಲಿನ ಶಿವಣ್ಣ ಮೇಷ್ಟ್ರಿಗೆ) ಒದಗಿಬಂದಿವೆ. ಶಿಕ್ಷಕರಾಗಿ ಮಕ್ಕಳ ಬಗೆಗಿನ ಕಥೆಗಾರರ ಕಾಳಜಿಯನ್ನು ಈ ಕಥೆಗಳು ಸೂಚಿಸುತ್ತವೆ. ಸಂಕಟಗಳ ಲೋಕವನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶ ಒಳ್ಳೆಯದೇ. ಆದರೆ, ಈ ಕಥೆಗಳು ಮಕ್ಕಳ ಮನಸ್ಸಿನಲ್ಲಿ ಸಂತೋಷಕ್ಕಿಂತಲೂ ಹೆಚ್ಚಾಗಿ ಸಂಕಟವನ್ನು ಉಳಿಸುವುದಿಲ್ಲವೇ? ಮಕ್ಕಳ ಸಾಹಿತ್ಯದ ಪ್ರಮುಖ ಉದ್ದೇಶಗಳಾದ ಮನೋವಿಕಾಸ ಮತ್ತು ಮನರಂಜನೆ ಸಾಧ್ಯತೆ ಹಿನ್ನೆಲೆಗೆ ಸರಿಯುವುದಿಲ್ಲವೇ? ಶಿವಲಿಂಗಪ್ಪನವರ ಜೊತೆಗೆ ಮಕ್ಕಳ ಸಾಹಿತ್ಯದ ಬಗ್ಗೆ ಗಂಭೀರವಾದ ಆಸಕ್ತಿಯುಳ್ಳವರೆಲ್ಲರೂ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳಿವು.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT