ಮಂಗಳವಾರ, ಜೂನ್ 2, 2020
27 °C

ಪುಸ್ತಕ ವಿಮರ್ಶೆ: ಕಾಡಿ, ಕೂಡಿದ ಕವಿತೆಗಳ ಬೆರಗು

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

ಕವಿ ಜಿ.ಕೆ. ರವೀಂದ್ರಕುಮಾರ್‌ ಕನ್ನಡ ಕಾವ್ಯಲೋಕದಲ್ಲಿ ಚಿರಪರಿಚಿತ ಹೆಸರು. ಮೂರೂವರೆ ದಶಕದ ಕಾವ್ಯಯಾನದಲ್ಲಿ ಐದು ಕವನ ಸಂಕಲನಗಳು ಬಂದಿವೆ– ಸಿಕಾಡ, ಪ್ಯಾಂಜಿಯಾ, ಕದವಿಲ್ಲದ ಊರಿನಲ್ಲಿ, ಒಂದು ನೂಲಿನ ಜಾಡು ಮತ್ತು ಮರವನಪ್ಪಿದ ಬಳ್ಳಿ. ಈ ಐದೂ ಸಂಕಲನಗಳ ಕವಿತೆಗಳನ್ನು ವಿಷಯಾನುಸಾರ ಮರುವಿಂಗಡಿಸಿ, ಹೊಸ ಕವಿತೆಗಳನ್ನೂ ಸೇರಿಸಿ ‘ಇದಕ್ಕೊಂದು ಪದವ ತೊಡಿಸು’ ಎಂಬ ಶೀರ್ಷಿಕೆಯನ್ನು ಕವಿಯೇ ನೀಡಿದ್ದಾರೆ. ಇಲ್ಲಿ ಕವಿತೆಗಳ ವಿಂಗಡಣೆಯೂ ಕುತೂಹಲಕರ. ‘ಕವಿಯ ಸಮಯ’ ಮೊದಲ ಭಾಗವಾದರೆ, ‘ಚರಿತ ಸಮಯ’ ಎರಡನೇ ಭಾಗ. ‘ಗೀತ ಸಮಯ’, ‘ನೀಳ್ಗವಿತಾ ಸಮಯ’, ‘ಸರಪಳಿ ಸಮಯ’, ‘ಅಂತಃಪುರ ಸಮಯ’, ‘ಸಂಗೀತ ಸಮಯ’ ಮತ್ತು ‘ಮಹಾಯಾನದ ಸಮಯ’ ಹೀಗೆ ಉಳಿದ ಭಾಗಗಳಿವೆ.

ಕನ್ನಡ ಕಾವ್ಯಲೋಕದಲ್ಲಿ ‘ಕವಿಸಮಯ’ದ ಕುರಿತು ಚರ್ಚೆ ಹಳೆಯದ್ದು. ಕವಿತೆ ಹುಟ್ಟುವ ಕ್ಷಣದ ಹುಡುಕಾಟ ಮತ್ತು ವ್ಯಾಖ್ಯಾನವದು. ಇಲ್ಲಿ ಆರಂಭದ ವಿಂಗಡಣೆಗೆ ರವೀಂದ್ರಕುಮಾರ್‌ ಬಳಸಿರುವುದು ‘ಕವಿಯ ಸಮಯ’.  ಕೊನೆಯಲ್ಲಿ ಕೊಟ್ಟಿರುವುದು ‘ಮಹಾಯಾನದ ಸಮಯ’ ಎನ್ನುವ ಶೀರ್ಷಿಕೆ. ಈಗ ಈ ಕವಿತೆಗಳನ್ನು ಸಮಗ್ರವಾಗಿ ಓದುವ ಹೊತ್ತಲ್ಲಿ ಕವಿ ನಮ್ಮ ನಡುವೆ ಇಲ್ಲ. ವೈಯಕ್ತಿಕ ಬದುಕಿನಲ್ಲಿ ಪಾಲಿಸಿದ ಸಮಯದ ಶಿಸ್ತಿನಂತೆಯೇ ಕವಿತೆಯ ವಿಷಯದಲ್ಲೂ ಅವರ ಶಿಸ್ತು ಈ ಸಂಕಲನದಲ್ಲಿ ಎದ್ದು ಕಾಣಿಸುತ್ತಿದೆ. ‘ನನ್ನ ಕವಿತೆಗಳನ್ನು ಹೀಗೆ ಈ ಅನುಕ್ರಮಣಿಕೆಯಲ್ಲಿ ಓದಿ’ ಎಂದು ವಿಂಗಡಿಸಿ ಕೊಟ್ಟು ನಿರ್ಗಮಿಸಿದ್ದಾರೆ. ಅವರು ಇದ್ದಿದ್ದರೆ ಈ ಸಂಕಲನಕ್ಕೆ ಅಡಿಬರಹ ‘ಈಚೀಚಿನವರೆಗಿದ್ದು’ ಎಂದಿರುತ್ತಿತ್ತು. ಅವರ ಹಠಾತ್‌ ನಿರ್ಗಮನದ ಬಳಿಕ ಆಪ್ತರು ಸೇರಿ ಹೊರತಂದಿರುವ ಸಂಕಲನ ‘ಸಮಗ್ರ’ ಎಂದಾಗಿದೆ. 

ರವೀಂದ್ರಕುಮಾರ್‌ ಕವಿತೆ ಮಾತ್ರವಲ್ಲ, ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರಹಗಳನ್ನೂ ಬರೆದಿದ್ದಾರೆ. ಆದರೆ ಈ  ಕವಿತೆಗಳ ಸಮಗ್ರವನ್ನು ಓದಿದಾಗ, ‘ಅವರು ಹುಟ್ಟಿದ್ದೇ ಕವಿತೆ ಬರೆಯಲಿಕ್ಕೆ ಇರಬೇಕು’ ಎಂದನ್ನಿಸುವುದು ಸುಳ್ಳಲ್ಲ. ಅಷ್ಟೊಂದು ವಿಷಯ ವೈವಿಧ್ಯ, ಬಂಧ ವೈವಿಧ್ಯ ಮತ್ತು ಜ್ಞಾನ ವೈವಿಧ್ಯ ಇಲ್ಲಿದೆ. ಪುಸ್ತಕಕ್ಕೊಂದು ಸುದೀರ್ಘ ಪ್ರಸ್ತಾವನೆಯನ್ನು (ನನ್ನ ಕಾವ್ಯದ ಹಾದಿ) ಅವರೇ‌ ಬರೆದಿದ್ದಾರೆ. ಮೂರೂವರೆ ದಶಕದ ಈ ಕಾವ್ಯಯಾನದಲ್ಲಿ ತಾನು ಏನನ್ನು ಹೇಳಬಯಸಿದ್ದೇನೆ ಎನ್ನುವ ವಿನಮ್ರ ಒಪ್ಪಿಸುವಿಕೆಯದು. 

ರವೀಂದ್ರಕುಮಾರ್‌, ಕವಿತೆಯ ವ್ಯಕ್ತಿತ್ವವನ್ನು ಮುಟ್ಟಲು ಸದಾ ಹಾತೊರೆಯುತ್ತಿದ್ದ ಕವಿ. ಕವಿತೆಯೇ ಏಕೆಂದರೆ, ಅಲ್ಲಿ ಕಾವ್ಯಾರ್ಥ ಜಿಗಿತದ ಮೂಲಕ ಪಾತ್ರ, ಪರಿಕರ, ವಿವರ, ವಿಸ್ತಾರಗಳ ಗೊಡವೆಯಿಲ್ಲದೆ ಉತ್ಕಟ ಅನುಭವ ಹೊಂದಲು ಹೆಚ್ಚು ಅವಕಾಶವಿದೆ. ಇಲ್ಲಿಯ ಕವಿತೆಗಳಲ್ಲಿ ಈ ಸ್ವಚ್ಛಂದ ಜಿಗಿತ ಎದ್ದು ಕಾಣುತ್ತದೆ. ಯಾವ ಇಸಂಗಳ ಗೊಡವೆಯಿಲ್ಲದೆ, ಕಾವ್ಯವೇ ಒಂದು ಇಸಂ ಎನ್ನುವಂತೆ ಕಣ್ಣಿಗೆ, ಭಾವಕ್ಕೆ, ಬೆರಗಿಗೆ, ಅಂತಃಚಕ್ಷುವಿಗೆ ಕಂಡದ್ದೆಲ್ಲ ಇಲ್ಲಿ ಕವಿತೆಗಳಾಗಿವೆ. ಹಾಗೆ ಕವಿತೆಗಳು ರೂಪುಗೊಳ್ಳುವಾಗ ಅಲ್ಲಲ್ಲಿ ರಮ್ಯ, ನವ್ಯ, ಸುಗಮ, ಬಂಡಾಯಗಳ ಸೆರಗಿನ ಗಾಳಿಯೂ ಹದವಾಗಿ ಬೀಸಿದೆ. 

ಅವರ ಮೊದಲ ಕವನ ಸಂಕಲನ ‘ಸಿಕಾಡ’ದಲ್ಲಿ ಹೊಚ್ಚ ಹೊಸ ಪ್ರತಿಮೆಯೊಂದರ ಉಗಮವನ್ನು ನನ್ನಂತಹ ಕಾವ್ಯಾಸಕ್ತರು ಬೆರಗುಗಣ್ಣುಗಳಿಂದ ನೋಡಿದ್ದೆವು. ಹದಿನೇಳು ವರ್ಷ ಭೂಮಿಯೊಳಗಿದ್ದೇ ಬದುಕುವ ಸಿಕಾಡ, ಮೇಲೆ ಬಂದು ಒಂದೇ ತಿಂಗಳು ಬದುಕುತ್ತದೆ. ಆದರೆ ಅಷ್ಟೂ ವರ್ಷಗಳ ಕಾಲ ನಿರಂತರವಾಗಿ ‘ಜಿಂವ್‌’ ಎಂದು ಸದ್ದು ಮಾಡುತ್ತಾ ಇರುತ್ತದೆ. ‘ನಿನ್ನ ಧ್ಯಾನದ ಅರಿವು ನಮಗಿಹುದೇ ಸಿಕಾಡ/ ನಮ್ಮ ದಾರಿಯ ತಿಳಿವು ನಮಗಿಹುದೇ ಸಿಕಾಡ?’ ಎಂದು ಕವಿ ಕೊನೆಯಲ್ಲಿ ಪ್ರಶ್ನಿಸುತ್ತಾರೆ. ಈಗ ಈ ಸಮಗ್ರವನ್ನು ಓದಿದ ಬಳಿಕ, ಖಂಡಿತವಾಗಿಯೂ ತಮ್ಮದೇ ಆದ ಕಾವ್ಯದಾರಿಯೊಂದನ್ನು ಕಂಡುಕೊಳ್ಳುವಲ್ಲಿ ಕವಿ ದೃಢಹೆಜ್ಜೆಗಳನ್ನು ಊರಿದ್ದು ಗೋಚರಿಸುತ್ತದೆ. ಈ ಹೆಜ್ಜೆ ಗುರುತುಗಳಲ್ಲಿ ಹೊಸಕಾಲದ ಕವಿಗಳಿಗೆ ಹತ್ತಾರು ಹೊಸ ಹೊಳಹುಗಳಿವೆ. 

ಎರಡನೇ ಸಂಕಲನ ‘ಪ್ಯಾಂಜಿಯಾ’ದಲ್ಲೂ ಸಿಡಿದು ಹೋದ ಭೂಮಿ ಮತ್ತೆ ಒಂದಾಗುವ ಈ ವಿಸ್ಮಯದ ಭಾವ ಮುಂದುವರೆದಿತ್ತು. ಆದರೆ ಆ ಬಳಿಕ ಅವರದ್ದು ಹೊರಳುಹಾದಿ. ‘ಕದವಿಲ್ಲದ ಊರಲ್ಲಿ’ ಕನಸುಗಳ ಬೆನ್ನುಹತ್ತುವ ಗೀಳು, ಆ ಬಳಿಕದ ಸಂಕಲನಗಳಲ್ಲಿ ಅರಿವು ಮೀರುವ ತಹತಹ.  ಸಂಕಲನದಲ್ಲಿರುವ ಇತ್ತೀಚಿನ ಕವಿತೆಗಳಂತೂ ಅಧ್ಯಾತ್ಮಕ್ಕೂ ಮಿಂಚುಗಣ್ಣಾಗಿವೆ.

ಇಲ್ಲಿನ ಕವಿತೆಗಳಲ್ಲಿ ನಿರ್ಲಿಪ್ತ ಭಾವವ್ಯೂಹಗಳಂತೆಯೇ, ವಿಚಾರ ಪ್ರಚೋದನೆಯೂ ಇದೆ. ಆದರೆ ಗಟ್ಟಿಧ್ವನಿಯ ಕಿರುಚಾಟವಾಗಲೀ, ಅಳುವಾಗಲೀ ಇಲ್ಲ. ಗಾಳಿಮರದ ತೋಪಿನಲ್ಲಿ ತಂಗಾಳಿ ಸುಂಯೆನ್ನುವಂತೆ ಕವಿಯ ಹುಡುಕಾಟ. ನಿಧಾನಕ್ಕೆ ರೂಪುಗೊಳ್ಳುವ ಚಿತ್ರಕಶಕ್ತಿ. ಶಬ್ದಗಳ, ಅಕ್ಷರಗಳ, ಛಂದಸ್ಸಿನ ಜೊತೆಗೆ ಕವಿಯ ಆಟವನ್ನು ಗಮನಿಸಲೆಂದು ಮತ್ತೆ ಓದಿದರೆ ಅರ್ಥವ್ಯಾಪ್ತಿ ಥಟ್ಟೆಂದು ಹಿಗ್ಗುತ್ತದೆ. 

ನನಗೆ ಇಷ್ಟವಾದ ಕವಿತೆಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಉದಾಹರಿಸುತ್ತೇನೆ. ‘ಅಮ್ಮಾ ತುಜೇ ಸಲಾಂ’ ಎನ್ನುವ ಸರಳ ಕವಿತೆಯದು. ಶಾಲೆಯ ಹೋಮ್‌ವರ್ಕ್ ಪ್ರಕಾರ, ಮಗು ದೇಶದ ನಕಾಶೆ ಸಿದ್ಧಗೊಳಿಸುತ್ತಿದೆ. ಇನ್ನೇನು ಶಾಲೆಗೆ ಹೋಗಲು ಆಟೋ ಬರುತ್ತದೆ, ಅಷ್ಟರೊಳಗೆ ಅವಸರದಲ್ಲಿ ದೇಶ ಕಟ್ಟಬೇಕು. ‘ಯಾರು ಮಾಡಿದ ದೇಶವೋ/ ಬೇಕಾದಂತೆ ಕಟ್ಟುವ ಸ್ವಾತಂತ್ರ್ಯವಿಲ್ಲ/ ಪ್ರಾಣಿಗಳ ಚಿತ್ರವೇ ವಾಸಿ/ ತಲೆಬಾಲವಾದರೂ ಇರುತ್ತೆ’ ಎಂದು ಆ ಮಗು ಯೋಚಿಸುತ್ತದೆ! ಇಂತಹ ಚಿಕಿತ್ಸಕ ನೋಟಗಳು ಬಹಳಷ್ಟು ಕವಿತೆಗಳಲ್ಲಿವೆ. ‘ಅವನ ಶಂಖ ಜಾಗಟೆಯ ಸಂಭ್ರಮದ ಮುಂದೆ / ಪರವಶದ ಮೌನ/ ಭಿಕ್ಷೆ ಪಡೆಯದೇ ಹಾಗೆ ಹೊರಟುಬಿಟ್ಟನಲ್ಲ ಅವನು’ (ಛಾಯಾಗೀತ್‌) ಎನ್ನುವ ಕವಿ, ‘ಜೀವ ಕಾಗುಣಿತ’ ಎನ್ನುವ ಕವಿತೆಯಲ್ಲಿ ‘ಸಾವ ಕಟ್ಟುವ ಲಯದಲ್ಲಿ/ ಬದುಕ ಮುಟ್ಟುವ ಸಾವಿನಲ್ಲಿ/ ಕಾ ಕಾ ಎಂದು ಕರೆಯುವ ಜೀವ ಕಾಗುಣಿತ’ ಎನ್ನುವಾಗ ಭಾಷೆಯನ್ನು ಹಲವು ಸ್ತರಗಳಲ್ಲಿ ದುಡಿಸಿಕೊಳ್ಳುವ ಸಾಮರ್ಥ್ಯ ಎದ್ದುಕಾಣುತ್ತದೆ.

ಸಿಕಾಡದಂತೆ, ರವೀಂದ್ರಕುಮಾರರ ಕಾವ್ಯ ಕಾವ್ಯಾಸಕ್ತರ ಎದೆಯೊಳಗೆ ಜೀಂವ್ ಎನ್ನುವ ಸದ್ದು ಮಾಡುತ್ತಲೇ ಇರುತ್ತದೆ. ಅವರ ಮೊದಲ ಕವಿತೆ ಪ್ರಕಟವಾದದ್ದು ‘ಪ್ರಜಾವಾಣಿ’ಯಲ್ಲಿ; ಹಾಗೆಯೇ ಕೊನೆಯ ಕವಿತೆಯೂ! ಆದರೆ ಅವರ ಕವಿತೆಯ ಕುರಿತು ಅವಲೋಕನ ಇಲ್ಲೇ ಕೊನೆಯಾಗದಿರಲಿ. 

***

ಇದಕ್ಕೊಂದು ಪದವ ತೊಡಿಸು

(ಸಮಗ್ರ ಕವಿತೆಗಳು)

ಲೇ: ಜಿ.ಕೆ.ರವೀಂದ್ರಕುಮಾರ್‌

ಪ್ರ: ಪರಸ್ಪರ ಪ್ರಕಾಶನ, ಬೆಂಗಳೂರು

ಮೊ: 88841 51513

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.