ಸೋಮವಾರ, ಜುಲೈ 4, 2022
21 °C

ನೀಲ ಆಕಾಶದಲ್ಲಿ ಕಂಡ ಕಾವ್ಯಪ್ರಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀಲ ಆಕಾಶ
ಲೇ: ನಾ. ಮೊಗಸಾಲೆ
ಪ್ರ: ಸ್ನೇಹಾ ಎಂಟರ್‌ಪ್ರೈಸಸ್‌
ಮೊ: 9845062549
ಪುಟಗಳು: 960, ಬೆಲೆ: 750

ನಾ.ಮೊಗಸಾಲೆ – ಕನ್ನಡದ ಸಾಹಿತ್ಯ–ಸಾಂಸ್ಕೃತಿಕ ಲೋಕದಲ್ಲಿ ಗಟ್ಟಿ ಹೆಜ್ಜೆ ಗುರುತನ್ನು ಮೂಡಿಸಿದ ದೊಡ್ಡ ಹೆಸರು. ಕಾಸರಗೋಡಿನ ಕೋಳ್ಯೂರಿನಿಂದ ವೈದ್ಯಾಧಿಕಾರಿಯಾಗಿ ಕಾರ್ಕಳ ತಾಲ್ಲೂಕಿನ ಕಾಂತಾವರಕ್ಕೆ ಅವರು ಬಂದಾಗ, ಆ ಹಳ್ಳಿಯ ಕುರಿತು ಕಾರ್ಕಳದ ಸೀಮೆಯಾಚೆಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ, ಅದೇ ಊರೀಗ ನಾಡಿನ ಸಾಂಸ್ಕೃತಿಕ ನಕ್ಷೆಯಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡಿದೆ. ಯುವಕ ಮಂಡಳ, ಕನ್ನಡ ಸಂಘ, ವರ್ಧಮಾನ ಪ್ರಶಸ್ತಿ ಪೀಠ, ಅಲ್ಲಮಪ್ರಭು ಪೀಠ – ಈ ನಾಲ್ಕು ಸಂಘಟನೆಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದವರು ಮೊಗಸಾಲೆ.

ಸಮಾಜವನ್ನು ಕಾಡುವ ಕಾಯಿಲೆಗಳಿಗೆ ವೈದ್ಯನಾಗಿ ಚಿಕಿತ್ಸೆ ನೀಡಿದರೆ ಸಾಲದು, ಸಾಹಿತ್ಯದ ಮದ್ದನ್ನೂ ಅರೆಯಬೇಕು ಎಂದು ನಂಬಿದ ಮೊಗಸಾಲೆಯವರು 21 ಕಾದಂಬರಿಗಳು, ಏಳು ಲೇಖನ ಸಂಗ್ರಹಗಳು, ಅಷ್ಟೇ ಸಂಖ್ಯೆಯ ವೈದ್ಯಕೀಯ ಕೃತಿಗಳನ್ನೂ ತಂದಿದ್ದಾರೆ. ಕನ್ನಡದ ಸಾಹಿತ್ಯಲೋಕ ಕೂಡ ಅವರನ್ನು ಕಾದಂಬರಿಕಾರರನ್ನಾಗಿ, ಕತೆಗಾರರನ್ನಾಗಿ ಗುರ್ತಿಸಿದೆ. ಅವರ ಕಾವ್ಯಪ್ರತಿಭೆ ಎಷ್ಟೇ ಉಜ್ವಲವಾಗಿ ಬೆಳಗಿದರೂ ವಿಮರ್ಶಾ ಕ್ಷೇತ್ರ ಅದನ್ನು ಅಷ್ಟಾಗಿ ಗುರ್ತಿಸಿಲ್ಲ. ಈ ಕನ್ನಡ ಸಂಘಟಕನ ಮೂಲ ಸೆಲೆ ಇರುವುದೇ ಕಾವ್ಯದಲ್ಲಿ ಎನ್ನುವುದಕ್ಕೆ ಸಾಕ್ಷಿಯಾಗಿ ಅವರ ಈತನಕದ ಕವಿತೆಗಳ ಸಂಗ್ರಹ ‘ನೀಲ ಆಕಾಶ’ ಈಗ ನಮ್ಮ ಮುಂದಿದೆ.

ಮೊಗಸಾಲೆ ಅವರು ಮೊದಲು ನವೋದಯಕ್ಕೆ ಅಂಟಿಕೊಂಡು ನಂತರ ನವ್ಯಕ್ಕೆ ಜಿಗಿದವರು ಎಂಬ ವಿಮರ್ಶೆಯೂ ಅವರ ಕಾವ್ಯದ ಮೇಲೆ ಬಂದಿದ್ದುಂಟು. ಅದಕ್ಕೆ ಕವಿಯ ಉತ್ತರ ಹೀಗಿದೆ: ‘ಯಾವ ಬದ್ಧತೆಗೂ ಒಳಗಾಗದೆ ಸದಾ ಚಲನಶೀಲತೆಯನ್ನು ಕಾಪಾಡಿಕೊಂಡು ಬಂದವನು ನಾನು.’ ಹೌದು, ಅವರ ಹೊಸದಾರಿಯ ಹುಡುಕಾಟ ಕಾವ್ಯ ಕೃಷಿಯಲ್ಲಿ ಬಹು ಢಾಳಾಗಿ ಎದ್ದುಕಾಣುತ್ತದೆ. ನವೋದಯದ ಭಾವಲೋಕ, ನವ್ಯದ ಪ್ರತಿಮಾ ವಿಧಾನ, ಬಂಡಾಯ ಮತ್ತು ದಲಿತ ಸಾಹಿತ್ಯದ ಸಾಮಾಜಿಕ ಸಮಾನತೆಯ ಆಶಯ –ಎಲ್ಲವೂ ಮೊಗಸಾಲೆ ಅವರ ಕಾವ್ಯದಲ್ಲಿ ಅಂತರ್ಗತವಾಗಿವೆ.

ಕೃತಿಗೆ ಸುದೀರ್ಘ ಮುನ್ನುಡಿ ಬರೆದಿರುವ ಟಿ. ಯಲ್ಲಪ್ಪ ಅವರು ಮೊಗಸಾಲೆಯವರ ನಾಲ್ಕೂವರೆ ದಶಕಗಳ ಕಾವ್ಯ ಪಯಣದ ಹೆಗ್ಗುರುತುಗಳನ್ನು ದಾಖಲಿಸುವ ಯತ್ನ ಮಾಡಿದ್ದಾರೆ. ‘ವ್ಯಕ್ತದಿಂದ ಅವ್ಯಕ್ತಕ್ಕೆ, ಸರಳತೆಯಿಂದ ಸಂಕೀರ್ಣತೆಗೆ, ವಾಚ್ಯದಿಂದ ಧ್ವನಿಪೂರ್ಣತೆಗೆ ಅವರ ಕಾವ್ಯದ ಹರಿವು ಸಾಗಿದೆ’ ಎಂಬ ಅವರ ವಿಶ್ಲೇಷಣೆ ಕವಿಯ ಗತಿಚಲನೆಯ ದಿಕ್ಕನ್ನು ಗುರ್ತಿಸುತ್ತದೆ.

‘ನಿದ್ದೆ ಹೋದವರ ಬಡಿದೆಬ್ಬಿಸಬೇಡಿ; ಕವಿತೆಗಳನ್ನು ಹಿಡಿದು, ಮಲಗಲಿ ಪಾಪ ಅವರಷ್ಟಕ್ಕೆ’ ಎನ್ನುವ ಕವಿ ಇವರಾಗಿದ್ದಾರೆ. ‘ಹಕ್ಕಿಗೆ ರೆಕ್ಕೆಗಳಾಗಿ ಹಾರಿದ ಕವಿತೆ, ಇಳಿಯಿತು ಚೆಂಡಿನಂತೆ ಕೆಳಕ್ಕೆ‌| ಎರಡೂ ಕೈಗಳನ್ನೆತ್ತಿ ಹಿಡಿಯ ಹೊರಟೆ, ಸಿಕ್ಕಿಯೂ ಸಿಕ್ಕದಂತಾಗಿ ಬಿತ್ತು ನೆಲಕ್ಕೆ|’ ಎಂಬ ಸಾಲುಗಳ ಮೂಲಕ ಕಾವ್ಯದ ಹೊಸ ಬೆಡಗು ಕಾಣಿಸುತ್ತಾರೆ.

ಕವಿ ಹೃದಯದ ಮೊಗಸಾಲೆ ಅವರಿಗೆ ಎಲ್ಲ ವಿಷಯಗಳ ಕುರಿತೂ ಬೆರಗು. ಆದರೆ, ಕಟುವಾಸ್ತವದ ಕುರಿತು ಹೇಳುವಾಗ ಯಾವುದೇ ಮುಲಾಜನ್ನು ಇಟ್ಟುಕೊಂಡವರಲ್ಲ. ಗ್ರಾಮ ಬದುಕಿನ ಸೌಂದರ್ಯದ ಕುರಿತು ಕಾವ್ಯಪುಷ್ಪ ಅರಳಿಸಿರುವ ಅವರು, ಅಲ್ಲಿನ ಗಬ್ಬುನಾರುವ ಜಾತಿ ವ್ಯವಸ್ಥೆಯ ವಿಷಯವಾಗಿ ನಿರ್ಬಿಢೆಯಿಂದ ಬರೆದಿದ್ದಾರೆ. ಗ್ರಾಮ ಭಾರತದ ಸಂಸ್ಕೃತಿ ಅವರ ಬರಹದಲ್ಲಿ ಮಡುಗಟ್ಟಿದೆ. ಸ್ತ್ರೀಪರ ಚಿಂತನೆಯಲ್ಲೂ ಅವರ ಕಾವ್ಯಗಂಧ ಹರಡಿದೆ. ಮಹಿಳೆಯ ಅಸಹಾಯಕತೆಯನ್ನು ಚಿತ್ರಿಸುತ್ತಲೇ ಅವಳ ಅಸ್ಮಿತೆಯ ಹಿರಿಮೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಅವರ ಕಾವ್ಯ ಮಾಡುತ್ತದೆ.

ಮೊಗಸಾಲೆ ಅವರ ಕಾವ್ಯಶೋಧದ ಮತ್ತೊಂದು ಗುಣ ದೈವತ್ವದ ಹುಡುಕಾಟ. ಆಸ್ತಿಕ ಇಲ್ಲವೆ ನಾಸ್ತಿಕ ವಾದಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳದೆ ಮಾನವೀಯ ನೆಲೆಯಲ್ಲಿ ದೈವತ್ವವನ್ನು ಹುಡುಕ ಹೊರಟಿದ್ದು ಅವರ ಕಾವ್ಯದ ವೈಶಿಷ್ಟ್ಯ. ಅವರ ಕಾವ್ಯ ಪ್ರತಿಭೆಯ ಒಂದು ಝಲಕ್‌ ನೋಡಿ:

‘ಒಡೆದದ್ದನ್ನೆಲ್ಲ ಇಡಿಯಾಗಿಸುವ ಹುಚ್ಚು ನನಗೆ ಇಡಿ ಇದ್ದುದನ್ನೆಲ್ಲ ಒಡೆದುನೋಡುವ ಇಚ್ಛೆ ನಿಮಗೆ’

ಹಿಂದೆಂದೋ ಅವರು ಬರೆದ ಈ ಕವಿತೆ, ಇವತ್ತಿನ, ಈ ಸಂದರ್ಭಕ್ಕಾಗಿಯೇ ಹೇಳಿ ಬರೆಸಿದಂತಿದೆ. ಕಾಲದ ಪರೀಕ್ಷೆಯನ್ನು ದಾಟಿಬರುವ ಈ ತಾಕತ್ತೇ ಮೊಗಸಾಲೆ ಅವರ ಕಾವ್ಯಕ್ಕಿರುವ ಶಕ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು