ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಕೆಂಡವನ್ನು ತಣ್ಣಗೆ ಹಾಯುವ ಕಥೆ

Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬಯಲೆಂಬೊ ಬಯಲು

ಲೇ: ಎಚ್.ಟಿ.ಪೋತೆ

ಪ್ರ: ಕುಟುಂಬ ಪ್ರಕಾಶನ

ಮೊ: 9449163751

ಪುಟ: 214

ಬೆಲೆ: ₹200/-

ಎಚ್.ಟಿ.ಪೋತೆಯವರು ಜನಪದ ಸಾಹಿತ್ಯದಲ್ಲಿ ಕೃಷಿ ಮಾಡುತ್ತಲೇ ವೈಚಾರಿಕ ಬರಹಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಅಂಬೇಡ್ಕರ್‌ ಅವರ ಚಿಂತನೆಗಳ ಬಗೆಗೆ ತಲಸ್ಪರ್ಶಿಯಾದ ಅಧ್ಯಯನ ಮಾಡಿದ್ದಾರೆ. ಶೋಷಣೆಗೊಳಗಾಗಿ ನಲುಗಿದ ದಮನಿತ ವರ್ಗದವರಲ್ಲಿ ಸಾಹಿತ್ಯದ ಮೂಲಕ ಆತ್ಮವಿಶ್ವಾಸವನ್ನು ತುಂಬಲೂ ಶ್ರಮಿಸುತ್ತಿದ್ದಾರೆ.

ಕನ್ನಡ ಕಾದಂಬರಿ ಲೋಕಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಅವರ ‘ಬಯಲೆಂಬೊ ಬಯಲು’ ತುಂಬ ವಿಶಿಷ್ಟ ಮತ್ತು ಮಹತ್ವದ ಕೃತಿ. ಇದೊಂದು ಬಯೋಪಿಕ್ ಕಾದಂಬರಿ. ಇಲ್ಲಿನ ಕಥಾನಕ ಅವರ ಕುಟುಂಬದ್ದೇ ಎನಿಸಿದರೂ ಸಾಮುದಾಯಿಕ ಕಥನವಾಗಿ ಗಮನ ಸೆಳೆಯುತ್ತದೆ. ಮೂರು ತಲೆಮಾರುಗಳ ದಲಿತರ ಜೀವನಾನುಭವಗಳ ಒಳತೋಟಿಯನ್ನು ಎಳೆಎಳೆಯಾಗಿ ತೆರೆದಿಡುವ ಈ ಕಾದಂಬರಿಯನ್ನು ಒಂದೇ ಉಸಿರಿಗೆ ಓದಲು ಸಾಧ್ಯವಿಲ್ಲ. ಇತರ ಸಮುದಾಯಗಳಿಂದ ಅವಮಾನಕ್ಕೊಳಗಾದ ಇಲ್ಲಿನ ಪಾತ್ರಗಳ ಸಂಕಟಗಳು, ಮೂಕವಾಗಿ ಅನುಭವಿಸಿದ ಅಮಾನವೀಯ ಸನ್ನಿವೇಶಗಳು, ಮೋಸದ ಪ್ರಸಂಗಗಳು ಓದುಗರನ್ನು ತಲ್ಲಣಕ್ಕೆ ಈಡುಮಾಡುತ್ತವೆ. ಆಲೋಚನೆಗೆ ಹಚ್ಚಿ ಕಾಡುತ್ತವೆ.

ಕಿತ್ತು ತಿನ್ನುವ ಬಡತನ ಕಾದಂಬರಿಯಲ್ಲಿ ಚಿತ್ರಣಗೊಂಡ ರೀತಿ ಗಾಢವಾಗಿ ಕಾಡುತ್ತದೆ. ಅವಮಾನದಿಂದ ಎದ್ದು ನಿಂತು, ಬದುಕನ್ನು ಸ್ವಾಭಿಮಾನ, ಛಲದಿಂದ ಕಟ್ಟಿಕೊಂಡ ಎದೆಗಾರಿಕೆಯ ನೋಟವೂ ಇಲ್ಲಿದೆ. ಎಂತಹ ಸಂದರ್ಭದಲ್ಲೂ ವಿಘಟನೆಗೆ ಒಳಗಾಗದೆ ಪ್ರೀತಿ, ವಿಶ್ವಾಸವನ್ನು ಉಸಿರಾಡುವ ಅವಿಭಕ್ತ ಕುಟುಂಬದ ಆದರ್ಶ ಜಗತ್ತೊಂದು ಎದ್ದು ಕಾಣುತ್ತದೆ. ಕಾದಂಬರಿಯುದ್ದಕ್ಕೂ ತಲೆಮಾರಿನಿಂದ ತಲೆಮಾರಿನಲ್ಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಪಲ್ಲಟಗಳನ್ನು ಮಾನವೀಯ ನೆಲೆಯಲ್ಲಿ ಹಿಡಿದಿಡಲಾಗಿದೆ. ಲೇಖಕರ ಈ ಆಲೋಚನಾ ಕ್ರಮದ ಹಿಂದೆ ಅಂಬೇಡ್ಕರ್‌ ಅವರ ಚಿಂತನಧಾರೆ, ಹೋರಾಟದ ಬದುಕು, ದಾರಿದೀಪವಾಗಿ ಜೀವಸೆಲೆಯಾಗಿ, ಆದರ್ಶವಾಗಿ ಮುನ್ನಡೆಸಿದೆ. ಲೇಖಕರು ಅನಾವರಣಗೊಳಿಸಿದ ಅಧೋ ಜಗತ್ತಿನ ಲೋಕ, ನಮ್ಮ ಸಾಮಾಜಿಕ ವ್ಯವಸ್ಥೆಯ ಹುನ್ನಾರಗಳನ್ನು ಬಹಳ ಸೂಕ್ಷ್ಮವಾಗಿ ಬಯಲು ಮಾಡುವಲ್ಲಿ ಯಶಸ್ವಿಯಾಗಿದೆ.

ಲೇಖಕರಿಗೆ ಅಂಬೇಡ್ಕರ್‌ ವಾದದ ತಾತ್ವಿಕತೆ, ಹೋರಾಟದ ಬದುಕಿನ ಪರಿಕಲ್ಪನೆ, ವ್ಯಾಪಕ ಓದಿನ ಅರಿವು, ಬದುಕಿನ ಕೆಂಡಗಳನ್ನು ಹಾಯುತ್ತಲೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಕೌಶಲವನ್ನು ಕಲಿಸಿದೆ. ಪ್ರಧಾನವಾಗಿ ಸಮಾನತೆಗೆ ಹಂಬಲಿಸುವ, ಸಮಾಜದ ಮುಖ್ಯವಾಹಿನಿಯತ್ತ ಸಾಗುವ, ಗುರಿ ಮುಟ್ಟುವಂತಹ ಕನಸುಗಳು ಕೃತಿಯುದ್ದಕ್ಕೂ ಹರಡಿಕೊಂಡಿವೆ.

ದಲಿತ ಲೋಕದ ಅವಮಾನದ ಚಹರೆಗಳು, ಹೊಸ ಸಮಾಜದ ಬಗೆಗಿನ ಚಡಪಡಿಕೆಗಳು, ವರ್ತಮಾನದ ಬಿಕ್ಕಟ್ಟುಗಳು, ಮಾನವೀಯ ವಿಸ್ತಾರದ ಮನೋವಿನ್ಯಾಸಗಳು ಈ ಕಾದಂಬರಿಗೆ ಒಂದು ವಿಸ್ತೃತವಾದ ಭಿತ್ತಿಯನ್ನು ಒದಗಿಸಿವೆ.

ಮೊದಲ ತಲೆಮಾರಿನ ರಾಮಪ್ಪನವರ ಬದುಕಿನೊಂದಿಗೆ ಇಲ್ಲಿನ ಕಥನ ಬಿಚ್ಚಿಕೊಳ್ಳುತ್ತದೆ. ಸ್ವಾಭಿಮಾನ, ಧೈರ್ಯ, ಕಾಯಕಪ್ರಜ್ಞೆ, ಸಮುದಾಯಕ್ಕಾಗಿ ಮಿಡಿವ ಗುಣದಿಂದಾಗಿ ರಾಮಪ್ಪನವರ ವ್ಯಕ್ತಿತ್ವ ಗಮನಸೆಳೆಯುತ್ತದೆ. ಎರಡನೆಯ ತಲೆಮಾರಿನ ತಿಪ್ಪಣ್ಣನವರು ಬದುಕನ್ನು ಭದ್ರಗೊಳಿಸಲು ಹೆಣಗುತ್ತಲೇ ಮಕ್ಕಳನ್ನು ಅಕ್ಷರದ ಅರಿವಿನ ಬೆಳಕಿಗೆ ಕರೆದುಕೊಂಡು ಬರಲು ತೋರಿದ ದಿಟ್ಟತನ, ಎದುರಿಸಿದ ಸಾಮಾಜಿಕ ಸಂಘರ್ಷದಿಂದಾಗಿ ಓದುಗರ ಪ್ರೀತಿಗೆ ಪಾತ್ರರಾಗುತ್ತಾರೆ.

ಮೂರನೆಯ ತಲೆಮಾರಿನ ಹನುಮನಲ್ಲಿ ಎರಡೂ ತಲೆಮಾರಿನ ಗುಣಗಳು ಮೇಳೈಸಿವೆ. ಜೊತೆಗೆ ವರ್ತಮಾನದ ದಂದುಗಗಳಿಗೆ ಕಣ್ಣು, ಕಿವಿಯಾಗುತ್ತಲೇ ಸಮುದಾಯಕ್ಕಾಗಿ ಮಿಡಿಯುವುದು, ಅನ್ಯಾಯದ ವಿರುದ್ಧ ತಣ್ಣಗೆ ಪ್ರತಿರೋಧ ಒಡ್ಡುವುದು, ಅಕ್ಷರದ ಬೆಳಕಿನ ಮೂಲಕ ಹಂತ ಹಂತವಾಗಿ ಮೇಲೆ ಬರುವುದು ಮೊದಲಾದ ಘಟನೆಗಳ ಮೂಲಕ ಕಥನ ಮತ್ತೊಂದು ಮಜಲನ್ನು ಮುಟ್ಟುತ್ತದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳು ಎಂತಹ ಸಂದರ್ಭದಲ್ಲೂ ಬದುಕಿಗೆ ವಿಮುಖವಾಗದೇ ಛಲ ಹೊತ್ತು ಸಾಗುವ, ಎಲ್ಲ ಬಗೆಯ ದಮನಗಳಿಂದ ಮುಕ್ತರಾಗಲು ಹಂಬಲಿಸುವ, ಆತ್ಮಸ್ಥೈರ್ಯ ಕುಂದದಂತೆ ಜೀವನೋತ್ಸಾಹವನ್ನು ಪ್ರಕಟಿಸುವ ಬಗೆ ಹೆಮ್ಮೆಯನ್ನು ಮೂಡಿಸುತ್ತದೆ.

ಮಹಿಳಾ ಪಾತ್ರಗಳಾದ ಲಗಸೆವ್ವ ಮತ್ತು ಅಂಬವ್ವರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ತಾಯ್ತನ, ಮಾನವೀಯತೆಯ ವ್ಯಕ್ತಿತ್ವದ ಮೂಲಕ ತಮ್ಮ ಇರುವಿನ ಗುರುತನ್ನು ಮೂಡಿಸುತ್ತಾರೆ.

ಪೋತೆಯವರು ತಮ್ಮ ಸಂವೇದನೆಗಳನ್ನು ಅಕ್ಷರರೂಪಕ್ಕೆ ಇಳಿಸಿ, ಅದನ್ನು ಓದುಗರಿಗೆ ದಾಟಿಸುವ ವಿಧಾನ ಅನನ್ಯವಾಗಿದೆ. ಎಲ್ಲೂ ಕಥೆಯು ಭಾವುಕತೆಯಿಂದ ಭಾರವಾಗದೆ ಸಹಜವಾಗಿ ಅರಳುತ್ತಾ ಹೋಗುವುದು ಇಲ್ಲಿನ ವಿಶೇಷ. ವಿಜಯಪುರದ ಜವಾರಿ
ಭಾಷೆ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT