ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ‘ದೆಂಗ’ದಲ್ಲಿ ಅಡಗಿರುವ ಸೂಕ್ಷ್ಮಗಳು

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕರಾವಳಿ ಭಾಗದಲ್ಲಿನ ಅಡುಗೆ ಮನೆಯಲ್ಲಿ ಅತ್ತ ನೆಲದಲ್ಲೂ ಅಲ್ಲ, ಇತ್ತ ಅಟ್ಟದಲ್ಲೂ ಅಲ್ಲ, ಕೈಗೆ ಎಟಕುವಷ್ಟು ಎತ್ತರದಲ್ಲಿ, ಸಾಮಾನ್ಯವಾಗಿ ತಲೆಯ ಮಟ್ಟಕ್ಕೆ ಮರದ ಹಲಗೆಯೊಂದನ್ನು ನೇತಾಡಿಸಿ ಅಥವಾ ಗೋಡೆಗೆ ಮರದ ರೀಪುಗಳನ್ನು ಹೊಡೆದು ಇಡುವುದಕ್ಕೆ ‘ದೆಂಗ’ ಎನ್ನುತ್ತಾರೆ. ಉರಿಸಿದ ಒಲೆಯ ಕಾವು ತಾಗಲೆಂದೇ ಅದನ್ನು ಒಲೆಯ ಮೇಲೆಯೇ ಇಡುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅಥವಾ ಆಧುನಿಕ ಯುಗದಲ್ಲಿ ಇದಕ್ಕೆ ‘ರ್‍ಯಾಕ್‌’ ಎನ್ನಬಹುದು.

ಹೀಗೆ ಇಡುವುದಕ್ಕೂ ಒಂದು ವೈಜ್ಞಾನಿಕ ಕಾರಣವಿತ್ತು. ಒಲೆಯ ಕಾವು ಈ ದೆಂಗದ ಮೇಲೆ ಇಡುತ್ತಿದ್ದ ದಿನಬಳಕೆ ಅಡುಗೆಯ ವಸ್ತುಗಳಿಗೆ ಬಾಳಿಕೆ ನೀಡುತ್ತಿದ್ದವು. ‘ದೆಂಗ’ ಎಂಬ ಪರಿಕಲ್ಪನೆಯಲ್ಲಿ, ಪಾತ್ರಗಳಿಗೆ ಜೀವ ತುಂಬುತ್ತಾ ಇಡೀ ಕೃತಿಯ ಜೀವಾಳವನ್ನು ಕಟ್ಟಿಕೊಟ್ಟಿದ್ದಾರೆ ಲೇಖಕಿ ಅಕ್ಷಯ. ಸುದೀರ್ಘವಾದ ಮುನ್ನುಡಿ ಬರೆಯುತ್ತಾ ಈ ಜೀವಾಳವನ್ನು ತೆರೆದಿಡುವ ವಿವೇಕ ರೈ ಅವರು, ‘ದೆಂಗ ಎಂದರೆ ಅಡಗಿಸಿಡುವುದು ಎನ್ನುವ ಅರ್ಥವೂ ಇದೆ. ದೆಂಗದಲ್ಲಿ ಇಟ್ಟ ವಸ್ತುಗಳು ಮಕ್ಕಳ ಕೈಗೆ ಸಿಗುವುದಿಲ್ಲ. ಅದನ್ನು ತೆಗೆದುಕೊಡಲು ಹಿರಿಯರೇ ಬರಬೇಕು. ನಮ್ಮ ಮನಸ್ಸು, ಮಿದುಳು ಎನ್ನುವುದೂ ಒಂದು ದೆಂಗವೇ. ಅದರಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಿಲ್ಲ. ಇದರೊಳಗೆ ನಮಗೆ ಅರಿವಿಲ್ಲದಂತೇ ಕೆಲವು ವಿಷಯಗಳು ಸೇರಿಕೊಳ್ಳುತ್ತವೆ. ಕೆಲವು ವಿಷಯಗಳನ್ನು ಹೊರಹಾಕಬೇಕು ಎಂದರೂ ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಏನು ಮಾಡುತ್ತೇವೆ ಎಂದರೆ, ಹೊಸ ವಿಷಯಗಳನ್ನು ಪೇರಿಸಿ, ಹಳೆಯ ವಿಚಾರಗಳನ್ನು ಮರೆಮಾಚುವಂತೆ ಮಾಡುತ್ತೇವೆ. ಇದೇ ರೀತಿಯ ಕಾದಂಬರಿಯನ್ನು ಅಕ್ಷಯ ಅವರು ತುಳುವಿನಲ್ಲಿ ಕೊಟ್ಟಿದ್ದಾರೆ’ ಎನ್ನುತ್ತಾರೆ.

ಪ್ರಸ್ತುತ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ, ‘ನನ್ನ ಹಾದಿ’, ‘ಬದುಕು ಭಾವದ ತೆನೆ’... ಹೀಗೆ ಹಲವು ಕವನ ಸಂಕಲನಗಳನ್ನು ಬರೆದಿರುವ ಅಕ್ಷಯ ಅವರ ಮೊದಲ ತುಳು ಕಾದಂಬರಿ ಇದು. ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿಯ ಗರಿಯೂ ಈ ಕೃತಿಗಿದೆ. ತುಳುನಾಡಿನ ಬದುಕು, ದೈವಾರಾಧನೆ, ಜಾನಪದ ಹಿನ್ನೆಲೆ, ಕೃಷಿ, ಪರಿಸರ ಹೀಗೆ ಹಲವು ವಿಷಯಗಳು ಬೀರಿದ ಪ್ರಭಾವವೇ ಈ ಕೃತಿಯ ವಸ್ತುವಿನ ಆಯ್ಕೆಗೆ ಕಾರಣ ಎಂಬುವುದು ಲೇಖಕಿಯ ಅಂಬೋಣ.

ತುಳುನಾಡಿನ ಸಂಸ್ಕೃತಿ, ಆಚರಣೆಗಳನ್ನು ಒಡಲಲ್ಲಿ ಇರಿಸಿ, ಆಳದಲ್ಲಿ ಹಲವು ಸೂಕ್ಷ್ಮಗಳನ್ನು ಕೃತಿ ಕಟ್ಟಿಕೊಟ್ಟಿದೆ. ಕನ್ನಡ ಲಿಪಿಯಲ್ಲಿ ತುಳುವನ್ನು ಸುದೀರ್ಘವಾಗಿ ಓದುವುದು ಕೊಂಚ ತ್ರಾಸದಾಯಕ. ಹೀಗಿದ್ದರೂ, ಭಾಷೆಯ ಸೆಳೆತ ಇದ್ದವರಿಗೆ ಇದು ಅಡ್ಡಿಯಾಗಲಾರದು.

ಕೃತಿ: ದೆಂಗ(ತುಳು ಕಾದಾಂಬರಿ)
ಲೇ: ಅಕ್ಷಯ ಆರ್‌. ಶೆಟ್ಟಿ
ಪ್ರ: ಬಹುರೂಪಿ
ಸಂ: 7019182729
ಪುಟ: 256
ದರ: 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT