ಶನಿವಾರ, ಮೇ 8, 2021
20 °C
ವಿದ್ವಾಂಸರಿಬ್ಬರ ಪರಿಶ್ರಮದಲ್ಲಿ ಹೊರ ಬಂದ ಏಳು ಅನುವಾದ ಕೃತಿಗಳು

PV Web Exclusive: ಇಂಗ್ಲಿಷ್‌ನಲ್ಲಿ ಮಿಡಿದ ತುಳುವರ ‘ಹೃದಯ ಬಡಿತ’

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ತುಳು ಭಾಷೆಯ ಸಾಹಿತ್ಯ, ಆ ಮೂಲಕ ತುಳು ಪರಂಪರೆಯ ಅನನ್ಯತೆಯ ಹರವನ್ನು ವಿಸ್ತರಿಸುವ ಹಂಬಲದಿಂದ ನಿವೃತ್ತ ಪ್ರಾಧ್ಯಾಪಕರಿಬ್ಬರು ಸೇರಿ ಸಿದ್ಧಪಡಿಸಿರುವ ಇಂಗ್ಲಿಷ್ ಅನುವಾದ ಯೋಜನೆಯ ಏಳನೆಯ ಸಂಪುಟ ಪ್ರಕಟಗೊಂಡಿದೆ. ಸುಮಾರು 2100 ಪುಟಗಳ ಏಳು ಅನುವಾದ ಕೃತಿಗಳು, ತುಳು ಸಂಸ್ಕೃತಿಯ ಕಾವ್ಯ, ಕಾದಂಬರಿ, ಸಣ್ಣ ಕತೆಗಳು, ಶ್ರಮಿಕ ಗೀತೆಗಳು, ಜನಪದ ಹಾಡುಗಳ ಪ್ರಾತಿನಿಧ್ಯವನ್ನು ಬಿಂಬಿಸುವ ಮೌಲಿಕ ಕೃತಿಗಳಾಗಿವೆ.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಕೆ. ಚಿನ್ನಪ್ಪ ಗೌಡ ಹಾಗೂ ಇತಿಹಾಸ ಪ್ರಾಧ್ಯಾಪಕ ಬಿ. ಸುರೇಂದ್ರ ರಾವ್ ಅವರು ಈ ಅನುವಾದ ಸರಣಿಯ ಜನಕರು. ಇಬ್ಬರು ತುಳು ಮಾತೃ ಭಾಷಿಕ ವಿದ್ವಾಂಸರು ಅನುವಾದಿಸಿದ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಪ್ರಕಟಿಸಿದೆ. ಅನುವಾದ ಸರಣಿಯ ಏಳನೆಯ ಹಾಗೂ ಕೊನೆಯ ಕೃತಿ ‘ಹಾರ್ಟ್‌ಬೀಟ್ಸ್‌’ ಇತ್ತೀಚೆಗೆ ಬಿಡುಗಡೆಗೊಂಡಿತು. 544 ಪುಟಗಳ ಈ ಕೃತಿಯು 42 ತುಳು ಕತೆಗಾರರ 50 ಪ್ರಾತಿನಿಧಿಕ ಸಣ್ಣಕತೆಗಳನ್ನು ಒಳಗೊಂಡಿದೆ. 

ಅನುವಾದ ಸರಣಿಯ ವಿಶೇಷ ಏನು?: ಪ್ರೊ. ಸುರೇಂದ್ರ ರಾವ್ ಹಾಗೂ ಪ್ರೊ. ಚಿನ್ನಪ್ಪ ಗೌಡರು ನಿವೃತ್ತರಾದ ಮೇಲೆ ತುಳು ಭಾಷೆಯ ಮೇಲಿನ ಪ್ರೀತಿಯಿಂದ 2016ರಲ್ಲಿ ಅನುವಾದ ಯೋಜನೆ ರೂಪಿಸಿದರು. ತುಳು ಕೃತಿಗಳ ಓದಿನ ಪರಿಧಿ ವಿಸ್ತರಿಸುವ ಆಶಯದೊಂದಿಗೆ ಇವರಿಬ್ಬರು ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ನಿರ್ಧಾರ ತಳೆದರು. ಇವರ ಈ ಕನಸು ಈಗ ಏಳು ಸಂಪುಟಗಳಲ್ಲಿ ಟಿಸಿಲೊಡೆದಿದೆ.

‘ನಮ್ಮಿಬ್ಬರದ್ದೂ ಮನೆ ಮಾತು ತುಳು. ಅಪಾರ ಓದಿನ ಜ್ಞಾನವಿರುವ ಬಿ. ಸುರೇಂದ್ರ ರಾವ್ ಅವರ ಇಂಗ್ಲಿಷ್ ಭಾಷೆಯ ತಜ್ಞತೆ ಹಾಗೂ ನನ್ನ ತುಳುವಿನ ತುಡಿತ ಈ ಸಮ್ಮಿಲನಕ್ಕೆ ಕಾರಣವಾಯಿತು. ತುಳು ಲಿಪಿ ಕನ್ನಡವೇ ಆಗಿರುವ ಕಾರಣ, ಕನ್ನಡ ಓದಬಲ್ಲ ತುಳುವರು ತುಳು ಓದುತ್ತಾರೆ. ತುಳು ಓದುಗರೇ ಕನ್ನಡ ಓದುಗರೂ ಹೌದು. ಹೀಗಾಗಿ, ಕನ್ನಡ ಭಾಷೆ ಆಚೆಗಿನ ಇತರ ಭಾಷಿಕರಿಗೆ ತುಳು ಸಾಹಿತ್ಯ ತಲುಪಬೇಕು, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದಕ್ಕಿಂತ ಇತರರು ತುಳು ಸಾಹಿತ್ಯವನ್ನು ಪ್ರಶಂಸಿಸಬೇಕು ಎಂಬುದು ಅನುವಾದಕ್ಕೆ ಇಂಗ್ಲಿಷ್ ಭಾಷೆ ಆಯ್ದುಕೊಂಡಿದ್ದರ ಉದ್ದೇಶ. ಏಳು ಪ್ರಾತಿನಿಧಿಕ ಕೃತಿಗಳನ್ನು ಹೊರತಂದೆವು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುರೇಂದ್ರ ರಾವ್ ನಮ್ಮನ್ನು ಅಗಲಿದರು. ಹೀಗಾಗಿ, ತುಳುವಿನ ಹೃದಯ ಬಡಿತ ಅನಾವರಣಗೊಳಿಸುವುದರೊಂದಿಗೆ ನಮ್ಮಿಬ್ಬರ ಅನುವಾದ ಯೋಜನೆ ಕೊನೆಗೊಂಡಿದೆ’ ಎನ್ನುವಾಗ ಚಿನ್ನಪ್ಪ ಗೌಡರಿಗೆ ಸಂತೃಪ್ತಿಯ ಜೊತೆಗೆ ಅವ್ಯಕ್ತ ವಿಷಾದವೂ ಇತ್ತು.

ವಾದಿರಾಜದ ‘ಪತ್ತವತಾರ’ದಿಂದ...: 2017ರಲ್ಲಿ ಪ್ರಕಟಗೊಂಡ ಸರಣಿಯ ಮೊದಲ ಸಂಪುಟ ‘Ladle in a Golden Bowl’ ಆಧುನಿಕ ತುಳು ಕವನಗಳ ಅನುವಾದ. ತುಳುವಿನ ಮೊದಲ ಕವನ ವಾದಿರಾಜರ ‘ಪತ್ತವತಾರ’ದಿಂದ ಇಂದಿನವರೆಗಿನ 69 ಕವಿಗಳ 114 ಕವನಗಳು ಈ ಕೃತಿಯಲ್ಲಿವೆ. ಡಾ. ಬಿ.ಕೆ. ಚೌಟ(ಆನಂದಕೃಷ್ಣ)ರ ‘ಮಿತ್ತಬೈಲಿನ ಯಮುನಕ್ಕೆ ಒಂಜಿ ಗುತ್ತುದ ಕತೆ’ ಕಾದಂಬರಿಯು ‘Mittabail Yamunakka; A Tale of a Landlord's Household’ ಹೆಸರಿನಲ್ಲಿ 2017ರಲ್ಲಿ ಪ್ರಕಟಗೊಂಡಿದೆ. ತುಳುವಿನ ಅದ್ಭುತ ಸಾಂಸ್ಕೃತಿಕ ಜಗತ್ತನ್ನು ಸೆರೆ ಹಿಡಿದ ಕಾದಂಬರಿ ಇದು. ಕೃಷಿ, ಆರಾಧನೆ, ಕೌಟುಂಬಿಕ, ರಾಜಕೀಯ ಎಲ್ಲವನ್ನೂ ಒಳಗೊಂಡ ತುಳು ಸಮಾಜದ ಸಂಕಟ ಮತ್ತು ಸಂಭ್ರಮಗಳ ಪಲ್ಲಟಗಳನ್ನು ನಿರೂಪಿಸಿದೆ ಈ ಕೃತಿ.

ಸರಣಿಯ ಮೂರನೇ ಕೃತಿಯಾಗಿ 2018ರಲ್ಲಿ 60 ತುಳು ಜಾನಪದ ಕತೆಗಳ ಸಂಗ್ರಹ ‘The Rainboy: Tulu Folk Tales’ ಪ್ರಕಟಗೊಂಡಿದೆ. ‘ತುಳು ಕತೆಗಳನ್ನು ಆಧರಿಸಿಯೇ ಜಾನಪದ ಸಿದ್ಧಾಂತಗಳು ರೂಪುಗೊಂಡಿವೆ. ಹೀಗಾಗಿ, ತುಳು ಜಾನಪದ ಕತೆಗಳನ್ನು ಅನುವಾದಿಸಿದರೆ, ಜಾನಪದ ವಿದ್ವಾಂಸರಿಗೆ ಈ ಕೃತಿ ಆಕರ ಗ್ರಂಥವಾಗಬಹುದು, ತುಳುತನದ ಸೊಬಗನ್ನು ಅರಿಯಲು ಸಾಧ್ಯವಾಗಬಹುದೆಂದು ಯೋಚಿಸಿ, ಈ ಕೃತಿಯನ್ನು ತಂದೆವು’ ಎಂದು ಚಿನ್ನಪ್ಪ ಗೌಡರು ಹಿಂದಿನ ಆಶಯವನ್ನು ನೆನಪಿಸಿಕೊಂಡರು.

Anthology of Tulu Work Songs and Dance Songs, ‘When the Moon Light is Very Hot’ ತುಳು ಕೆಲಸದ ಹಾಡುಗಳು ಮತ್ತು ಕುಣಿತದ ಹಾಡುಗಳ 4ನೇ ಅನುವಾದ ಸರಣಿ 2018ರಲ್ಲಿ ಪ್ರಕಟಗೊಂಡಿದೆ. ಇದರಲ್ಲಿ ಶ್ರಮಿಕ ಜೀವಿಗಳ ಕೆಲಸದ (ಕಬಿತ ಹಾಡುಗಳು) ಹಾಡುಗಳು, ಕುಣಿತದ ಹಾಡುಗಳು, ಶಿಶುಪ್ರಾಸಗಳು ಸೇರಿ ಸುಮಾರು 53ರಷ್ಟು ಪದ್ಯಗಳು ಇವೆ. ಮಹಿಳೆಯರ ನೋವು, ನಿರಾಸೆ, ಕನಸು, ಸಂಭ್ರಮ, ಗದ್ದೆ ಕೆಲಸ ಸಾಮೂಹಿಕ ಹಾಡುಗಳು, ಬಡತನ ಮತ್ತು ಭರವಸೆಯ ನಡುವೆ ಭಾವ ಬೆಸೆಯುವ, ಮಹಿಳಾ ಅಭಿವ್ಯಕ್ತಿಯ ಗೀತೆಗಳು ಇವಾಗಿವೆ.

ಎಸ್.ಯು. ಪಣಿಯಾಡಿ ಅವರು 1921ರಲ್ಲಿ ಬರೆದ, ಪ್ರಸ್ತುತ ನೂರು ವರ್ಷ ತುಂಬಿರುವ ಕಾದಂಬರಿ ‘ಸತಿ ಕಮಲೆ’ ಅನುವಾದ ಸರಣಿಯ 5ನೆಯ ಕೃತಿ. ವಿವಿಧ ಭಾಷೆಗಳ ಮೊದಲ ಕಾದಂಬರಿಯ ಬಗ್ಗೆ ಚರ್ಚೆ ನಡೆಯುವಾಗ, ಸಾಮಾಜಿಕ ಸುಧಾರಣೆ, ದೇಶಭಕ್ತಿ ಎಲ್ಲವನ್ನೂ ಒಳಗೊಂಡಿರುವ ತುಳುವಿನ ಮೊದಲ ಕಾದಂಬರಿಯೂ ಚರ್ಚೆಯ ಮುನ್ನೆಲೆಗೆ ಬರಲಿ ಎಂಬುದು ಅನುವಾದಕರ ನಿರೀಕ್ಷೆ.

ಆರನೆಯದು ಕಾಲ್ಪನಿಕ ಕಥಾನಕವುಳ್ಳ ರಮ್ಯ ಚೌಕಟ್ಟಿನ ಕೃತಿ ಪೊಳಲಿ ಶೀನಪ್ಪ ಹೆಗ್ಗಡೆ ಅವರ ‘ಮಿತ್ಯ ನಾರಾಯಣ ಕತೆ, ‘Tale of Narayana The Imposter‘ 2019ರಲ್ಲಿ ಪ್ರಕಟಗೊಂಡಿದೆ. ಇದು ಫ್ಯಾಂಟಸಿ ಮಾದರಿಯ ತುಳುವಿನ ಮೊದಲ ಗದ್ಯ ರಮ್ಯ ಕಥನ, ಕಾದಂಬರಿ ಪೂರ್ವದ ರಚನೆಯಾಗಿದೆ.

‘ಎಲ್ಲ ಕೃತಿಗಳನ್ನು ಒಟ್ಟಂದದಲ್ಲಿ ನೋಡಿದರೆ ಸುಮಾರು 2100 ಪುಟಗಳಾಗುತ್ತವೆ. ಅದರಲ್ಲಿ 250ರಷ್ಟು ಪುಟಗಳಲ್ಲಿ ನಾವು ಬರೆದಿರುವ ಪೀಠಿಕೆಗಳು ಇವೆ. ತುಳು ಕಾವ್ಯದ ಆಶಯ, ವೈವಿಧ್ಯ, ಆಯಾ ಸಂಪುಟದ ವಸ್ತುವಿಗೆ ಸಂಬಂಧಿಸಿದ ಉಗಮ, ಬೆಳವಣಿಗೆ ವೈಶಿಷ್ಟ್ಯವನ್ನು ಪ್ರಸ್ತಾವನೆಯಲ್ಲಿ ತಿಳಿಸಿದ್ದೇವೆ. ತುಳು ಸಾಹಿತ್ಯದ ತಿಳಿವಳಿಕೆ ಓದುಗನಿಗೆ ತಲುಪುವ, ತುಳು ಜಾನಪದ ಪರಂಪರೆಯನ್ನು ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಮೂಲ ಕೃತಿಯನ್ನು ಇಟ್ಟುಕೊಂಡು ಅನುಸೃಷ್ಟಿ ಮಾಡಿದ್ದೇವೆ. ತುಳುವಿನ ಆವರಣದಿಂದ ಇಂಗ್ಲಿಷ್ ಆವರಣಕ್ಕೆ ಒಯ್ದಿದ್ದೇವೆ. ತುಳು ತನ್ನದೇ ಆದ ಸಾಹಿತ್ಯ, ಜಾನಪದ ಪರಂಪರೆಯನ್ನು ಹೊಂದಿದೆ ಎನ್ನುವುದನ್ನು ನಿರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ’ ಎಂದು ಚಿನ್ನಪ್ಪ ಗೌಡ ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

‘ಈ ಪ್ರಕಟಣೆಗಳ ಕುರಿತಂತೆ ತುಳು ಅಕಾಡೆಮಿ, ಸಾಹಿತ್ಯ ವಿಮರ್ಶಕರು ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ. ಈ ಬಗೆಯ ಅನುವಾದಗಳ ಅಗತ್ಯವನ್ನು ಮನಗಾಣಬೇಕಾಗಿದೆ. ಅನುವಾದ ಪರಂಪರೆಯನ್ನು ಮುಂದುವರಿಸುವ ಮೂಲಕವೇ ತುಳು ಸಾಹಿತ್ಯ, ಓದುಗರ ವಲಯವನ್ನು ವಿಸ್ತರಿಸಬಹುದು’ ಎಂಬುದು ಅವರ ಆಶಯ.

‘ತುಳು ನೆಲದ ಭಾಷೆಯ ಋಣ ತೀರಿಸುವ ಪ್ರಯತ್ನ ಇದು. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಹೋರಾಟ ಬಹಳ ವರ್ಷಗಳಿಂದ ನಡೆಯುತ್ತಿದೆ. ಆದರೆ, ಬೇರೆ ಬೇರೆ ಕಾರಣಗಳಿಗಾಗಿ ಆ ಮಾನ್ಯತೆ ಸಿಕ್ಕಿಲ್ಲ. ಏಳು ಸಂಪುಟಗಳ ಅನುವಾದದ ಮೂಲಕ ಈ ಪ್ರಯತ್ನಕ್ಕೆ ಸಾಂಸ್ಕೃತಿಕ ರಾಜಕಾರಣದ ಆಯಾಮವೂ ದೊರೆತಂತಾಗಿದೆ. ತುಳುವಿನಲ್ಲಿ ಸತ್ವಯುತ ಪರಂಪರೆ ಇದೆ ಎನ್ನುವುದನ್ನು ಸಾಬೀತುಪಡಿಸಲಾಗಿದೆ. ತುಳು ತಲೆಯೆತ್ತಿ ನಿಲ್ಲುವ ಪ್ರಯತ್ನ ಆಯಾ ಕಾಲಘಟ್ಟದಲ್ಲಿ ಆಗುತ್ತಲೇ ಇದೆ. ಇದಕ್ಕೆ ನಮ್ಮದೊಂದು ಕೊಡುಗೆ ಏಳು ಪುಸ್ತಕಗಳ ಅನುವಾದ ಸರಣಿ ಯೋಜನೆ’ ಎಂದು ಅವರು ಮಾತಿಗೆ ವಿರಾಮವಿಟ್ಟರು.


ಇತ್ತೀಚೆಗೆ ಲೋಕಾರ್ಪಣೆಗೊಂಡ ‘ಹಾರ್ಟ್‌ಬೀಟ್ಸ್‌’ ಕೃತಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು