ಬುಧವಾರ, ಆಗಸ್ಟ್ 4, 2021
23 °C

ಪ್ರಜಾವಾಣಿ ವರದಿ ಫಲಶ್ರುತಿ| ಯಕ್ಷಗಾನ ಕಲಾವಿದರಿಗೆ ಪೂರ್ಣ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನ ನಡೆಸುತ್ತಿರುವ ಯಕ್ಷಗಾನ ಮೇಳಗಳ ಕಲಾವಿದರಿಗೆ ಕರಾರಿನಂತೆ ಪೂರ್ಣ ವೇತನ ನೀಡುವಂತೆ ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಆದೇಶ ನೀಡಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಎರಡು ತಿಂಗಳ ಮುಂಚಿತವಾಗಿ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡಿ ದ್ದವು. ಯಕ್ಷಗಾನ ಪ್ರದರ್ಶನವನ್ನು ನಂಬಿಕೊಂಡಿದ್ದ ಕಲಾವಿದರ ಕುರಿತಾಗಿ ಮೇ 14 ರಂದು ಪ್ರಜಾವಾಣಿ ’ಸಂಕಷ್ಟದಲ್ಲಿ ಯಕ್ಷಗಾನ ಕಲಾವಿದರು’ ಎಂಬ  ಶೀರ್ಷಿಕೆ ಅಡಿ ವಿಶೇಷ ಲೇಖನ ಪ್ರಕಟಿಸಿ ಗಮನ ಸೆಳೆದಿತ್ತು.

ಕಲಾವಿದರು ಹಾಗೂ ದೇವಳದ ನಡುವೆ ಆರು ತಿಂಗಳ ತಿರುಗಾಟ ನಡೆಸುವ ಕುರಿತು ಒಪ್ಪಂದವಾಗಿರುತ್ತದೆ. ಆದರೆ, ಅವಧಿಗಿಂತ ಮುಂಚಿತ ಮೇಳ ಸ್ಥಗಿತಗೊಂಡಿದ್ದರಿಂದ ವೇತನ ಸಿಗುವ ಸಾಧ್ಯತೆ ಬಹಳ ಕಡಿಮೆಯಿತ್ತು. ಈ ಕುರಿತು ಕಲಾವಿದರು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಪೂರ್ಣ ವೇತನ ಪಾವತಿಸುವಂತೆ ಮನವಿ ಸಲ್ಲಿಸಿದ್ದರು.

ಪ್ರಕರಣದ ಗಂಭೀರತೆ ಹಾಗೂ ಕಲಾವಿದರ ಸಮಸ್ಯೆ ಅರಿತ ಸಚಿವರು ಪೂರ್ಣ ವೇತನ ಪಾವತಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದರು. ಈತನ್ಮಧ್ಯೆ ದೇವಳದಲ್ಲಿ ವರಮಾನವಿಲ್ಲದೆ ಕಲಾವಿದರಿಗೆ ಪೂರ್ಣ ವೇತನ ನೀಡಲು ಸಾಧ್ಯವಿಲ್ಲವೆಂದು ಮಾರಣಕಟ್ಟೆ ದೇವಳದ ಆಡಳಿತ ಮಂಡಳಿ ಇಲಾಖೆಗೆ ಪತ್ರ ಬರೆದಿದ್ದರು.

ಆದರೆ, ಸಚಿವ ಕೋಟ ಪಟ್ಟುಬಿಡದೆ ದೇವಳದಲ್ಲಿ ಆದಾಯವಿಲ್ಲದಿದ್ದರೆ ಅಲ್ಲಿರುವ ಎಫ್ ಡಿ ಹಣ ಬಳಸಿ ವೃತ್ತಿ ಯಕ್ಷಗಾನ ಕಲಾವಿದರು ಹಾಗೂ ನೇಪಥ್ಯ ಕಾರ್ಮಿಕರಿಗೆ ವೇತನ ನೀಡುವಂತೆ ನಿರ್ದೇಶಿಸಿದ್ದರು. ಅದರಂತೆ ಬುಧವಾರ ಕಂದಾಯ (ಧಾರ್ಮಿಕ ದತ್ತಿ)ಇಲಾಖೆ ಅಧೀನ ಕಾರ್ಯದರ್ಶಿ ಎಂ.ಎಲ್ ವರಲಕ್ಷ್ಮೀ ಅವರು ಈ ಕುರಿತು ಕರಾರಿನಂತೆ ವೇತನ ಕಡಿತಗೊಳಿಸದೆ ಪಾವತಿಸುವಂತೆ ಆದೇಶವನ್ನು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು