ಭಾನುವಾರ, ಮೇ 16, 2021
22 °C

ಮೀಸೆಯಿಲ್ಲದ ಬೆಕ್ಕುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೀಸೆಯಿಲ್ಲದ ಬೆಕ್ಕುಗಳು
ಬೆಕ್ಕಿನ ಚಿತ್ರವನ್ನು ಕಣ್ಣ ಮುಂದೆ ತಂದುಕೊಂಡಾಗಲೆಲ್ಲ ನೆನಪಾಗುವುದು ಅವುಗಳ ಉದ್ದದ ಮೀಸೆ. ಆದರೆ, ಸ್ಪಿಂಕ್ಸ್‌ ಬೆಕ್ಕುಗಳು ಹಾಗಲ್ಲ. ರೋಮಗಳು ಇಲ್ಲದ ಮೈಚರ್ಮ ಇವುಗಳ ವೈಶಿಷ್ಟ್ಯ. ಹಾಗೆಯೇ, ಇವುಗಳ ಮೈಚರ್ಮ ನೆರಿಗೆಗಟ್ಟಿರುತ್ತದೆ. ಈ ಬೆಕ್ಕುಗಳ ಮೈಚರ್ಮವು ವೆಲ್ವೆಟ್ ವಸ್ತ್ರದಂತೆ ಕಾಣುವುದುಂಟು.

ಇವುಗಳಿಗೆ ಬಾವಲಿಗಳಿಗೆ ಇರುವಂತೆ ಅಗಲವಾದ ಕಿವಿಗಳು ಇರುತ್ತವೆ. ಇವುಗಳ ಕಣ್ಣು ನಿಂಬೆ ಹಣ್ಣಿನ ಆಕಾರ ಹೊಂದಿವೆ. ಸ್ಪಿಂಕ್ಸ್‌ ಬೆಕ್ಕುಗಳ ಕುತ್ತಿಗೆ ಬಲಿಷ್ಠವಾಗಿದ್ದು, ಚಿಕ್ಕ ಚಾಟಿಯಂತಹ ಬಾಲ, ದಪ್ಪಗಾಗಿಯೂ ಮೃದುವಾಗಿಯೂ ಇರುವ ಪಾದಗಳನ್ನು ಹೊಂದಿರುತ್ತವೆ. ಕೆಲವು ಬೆಕ್ಕುಗಳಿಗೆ ಉದ್ದನೆಯ ಮೀಸೆ ಇರುವುದೂ ಇದೆ. ಇವುಗಳ ಮುಖಲಕ್ಷಣವು ಈಜಿಪ್ಟ್‌ನ ಬೆಕ್ಕಿನ ಶಿಲ್ಪಗಳನ್ನು ಹೋಲುತ್ತದೆ.

ಈ ಜಾತಿಯ ಬೆಕ್ಕುಗಳು ಪ್ರೀತಿ ತೋರಿಸುವ ಗುಣ ಹೊಂದಿವೆ. ಅವುಗಳಿಗೆ ಬೆಚ್ಚಗಿರಲು ಮನುಷ್ಯನ ಆಸರೆ ಬೇಕು. ಮನುಷ್ಯರು ತಮ್ಮನ್ನು ಅಪ್ಪಿಕೊಳ್ಳಲಿ ಎಂದು ಬಯಸುತ್ತವೆ ಕೂಡ. ಅವುಗಳ ಬುದ್ಧಿವಂತಿಕೆ, ಕುತೂಹಲದ ಮನಸ್ಸು, ಶಕ್ತಿಶಾಲಿ ದೇಹದ ಕಾರಣದಿಂದಾಗಿ ಅವು ಪುಂಡನ ತರಹ ವರ್ತಿಸುತ್ತವೆ!

ಗೊಂಬೆಗಳ ಆಸ್ಪತ್ರೆ
ಪೋರ್ಚುಗಲ್ ದೇಶದ ರಾಜಧಾನಿ ಲಿಸ್ಬನ್. ಈ ನಗರದಲ್ಲಿ ಒಂದು ವಿಶೇಷ ಇದೆ. ಇಲ್ಲಿ ವಿಶ್ವದ ಅತ್ಯಂತ ಹಳೆಯ ‘ಗೊಂಬೆಗಳ ಆಸ್ಪತ್ರೆ’ ಇದೆ. ಇದನ್ನು ಸ್ಥಾಪಿಸಿದ್ದು 1830ರಲ್ಲಿ. ಇಲ್ಲಿ ಗೊಂಬೆಗಳ ವೈದ್ಯರು, ಗೊಂಬೆಗಳಿಗೆ ಚಿಕಿತ್ಸೆ ಕೊಡುತ್ತಾರೆ.

ಅಂದರೆ, ಗೊಂಬೆಗಳ ಮುಖ ಹಾಳಾಗಿದ್ದರೆ, ಅವುಗಳ ಕೈ–ಕಾಲು ಮುರಿದಿದ್ದರೆ, ಅವುಗಳ ಕೂದಲು ಸಿಕ್ಕಾಗಿದ್ದರೆ, ಕಣ್ಣುಗಳು ಉದುರಿಹೋಗಿದ್ದರೆ ಸರಿ ಮಾಡಿಕೊಡಲಾಗುತ್ತದೆ. ಸರಿಪಡಿಸಿದ ಗೊಂಬೆಗಳನ್ನು ಪುನಃ ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡಲಾಗುತ್ತದೆ.

ಅಳಿಲಿನ ಮರೆವು!
ಉತ್ತರ ಅಮೆರಿಕದ ಒಂದು ಜಾತಿಯ ಅಳಿಲುಗಳು ವಿಶೇಷ ಗುಣವೊಂದನ್ನು ಹೊಂದಿವೆ. ಅವು ತಮ್ಮ ಆಹಾರವನ್ನು ಗುಟ್ಟಾಗಿ ಅಡಗಿಸಿಡುತ್ತವೆ, ತಮ್ಮ ಆಹಾರ ಎಲ್ಲಿದೆ ಎಂಬುದು ಬೇರೆ ಯಾರಿಗಾದರೂ ಗೊತ್ತಾಗಿದೆಯೇ ಎಂಬುದನ್ನೂ ನೋಡುತ್ತಿರುತ್ತವೆ!

ಈ ಅಳಿಲುಗಳು ತಮ್ಮ ಆಹಾರವನ್ನು ಒಂದೇ ಕಡೆ ಅಡಗಿಸಿ ಇಡುವುದಿಲ್ಲ. ಅವನ್ನು ಮತ್ತೆ ಮತ್ತೆ ಬೇರೆ ಬೇರೆ ಕಡೆ ಅಡಗಿಸಿ ಇಡುತ್ತಿರುತ್ತವೆ. ಆದರೆ, ತಮಗೆ ಆ ಆಹಾರ ಬೇಕಾದಾಗ ಅವನ್ನು ಅಡಗಿಸಿಟ್ಟಿದ್ದು ಎಲ್ಲಿ ಎಂಬುದನ್ನೇ ಹಲವು ಬಾರಿ ಮರೆತುಬಿಡುತ್ತವಂತೆ!

ಲಕ್ಷ್ಮಣ
ಲಕ್ಷ್ಮಣನು ಅಯೋಧ್ಯೆಯ ರಾಜ ದಶರಥ ಮತ್ತು ಸುಮಿತ್ರೆಯ ಮಗ. ರಾಮನ ಪ್ರೀತಿಯ, ನಿಷ್ಠಾವಂತ ತಮ್ಮ. ರಾಮ ವನವಾಸಕ್ಕೆ ಹೊರಟಾಗ ಅವನ ಜೊತೆ ತಾನೂ ಬಂದವ.

ಶೂರ್ಪನಖಿಯು ರಾಮನ ಮೇಲೆ ಮೋಹಗೊಂಡು, ಸೀತೆಯ ಮೇಲೆ ಆಕ್ರಮಣ ಮಾಡಿದಾಗ, ಶೂರ್ಪನಖಿಯ ಮೂಗು ಮತ್ತು ಕಿವಿಗಳನ್ನು ಲಕ್ಷ್ಮಣ ಕತ್ತರಿಸಿದ್ದ. ರಾಮ ಸೀತೆಯ ಹುಡುಕಾಟ ನಡೆಸುತ್ತಿದ್ದಾಗ, ಹೆಬ್ಬಂಡೆಯಂತೆ ಅವನ ಬೆನ್ನಿಗೆ ನಿಂತವ ಲಕ್ಷ್ಮಣ. ರಾವಣನ ಜೊತೆಗಿನ ಯುದ್ಧದಲ್ಲಿ ಕೂಡ ರಾಮನಿಗೆ ಹೆಗಲು ಕೊಟ್ಟವ ಲಕ್ಷ್ಮಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು