ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ವಿದುಷಿ, ಉಭಯಗಾನ ವಿಶಾರದೆ ಶ್ಯಾಮಲಾ ಜಿ ಭಾವೆ

Last Updated 22 ಮೇ 2020, 5:22 IST
ಅಕ್ಷರ ಗಾತ್ರ

ಬೆಂಗಳೂರು: ಆರು ವರ್ಷದ ಆ ಪುಟ್ಟ ಬಾಲೆಗೆ ಜಗತ್ತಿನ ಅರಿವು ಇತ್ತೋ ಇಲ್ಲವೋ. ಆದರೆ, ಸಂಗೀತವನ್ನು ಮಾತ್ರ ಸರಾಗವಾಗಿ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದುದು ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು.

1950ರ ದಶಕದಲ್ಲಿ ಅದೇ ಬಾಲ ಪ್ರತಿಭೆ ಭಾರತದ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಎರಡೂ ಪ್ರಾಕಾರಗಳಲ್ಲಿ ತನ್ನದೇ ಛಾಪು ಮೂಡಿಸಿತ್ತು. ಆ ಬಾಲ ಪ್ರತಿಭೆಯೇ ಶ್ಯಾಮಲಾ ಜಿ. ಭಾವೆ.

ಆರು ವರ್ಷಕ್ಕೆ ಪ್ರತಿಭೆ ಪ್ರದರ್ಶನ ತೋರಿದಶ್ಯಾಮಲಾ ಜಿ. ಭಾವೆ ನಂತರ ಸತತ73ವರ್ಷಗಳ ಕಾಲ ಸೇವೆ ಸಲ್ಲಿಸಿ ಸಂಗೀತ ಕ್ಷೇತ್ರದಲ್ಲಿ ಉಭಯಗಾನ ವಿಶಾರದೆ ಎಂಬ ಹೆಸರು ಗಳಿಸಿದರು.

ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ಸೇರಿದಂತೆ ಹಲವು ಸಂಗೀತ ಪ್ರಾಕಾರಗಳಲ್ಲಿಶ್ಯಾಮಲಾ ಜಿ. ಭಾವೆ (79)ಅವರು ಖ್ಯಾತಿಗಳಿಸಿದ್ದರು.ಇವರ ಇಡೀ ಕುಟುಂಬ ಮೂರು ತಲೆಮಾರುಗಳಿಂದಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದೆ. ತಮ್ಮ ಮನೆಯಲ್ಲಿಯೇ ಸಂಗೀತ ಶಾಲೆ ಆರಂಭಿಸಿ ಹಲವು ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯನ್ನಾಗಿ ನೀಡಿದ ಖ್ಯಾತಿಶ್ಯಾಮಲಾ ಜಿ.ಭಾವೆ ಅವರ ಕುಟುಂಬಕ್ಕಿದೆ.

ಶ್ಯಾಮಲಾ ಜಿ.ಭಾವೆ ಅವರುಹಿಂದೂಸ್ಥಾನಿ,ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಜಾನಪದಸಂಗೀತದಲ್ಲಿ ವಿಶೇಷ ಅಭ್ಯಾಸ ನಡೆಸಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅವರು ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿಉಭಯ ಗಾನ ವಿದುಷಿ ಎಂದು ಖ್ಯಾತರಾಗಿಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರಾಗಿದ್ದರು.

ಶ್ಯಾಮಲಾ ಭಾವೆ ಅವರು 1941ರ ಮಾರ್ಚ್ 14ರಂದು ಬೆಂಗಳೂರಿನಲ್ಲಿಜನಿಸಿದರು.ಅವರದು ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಮನೆತನ. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯಲ್ಲಿ ಖ್ಯಾತಿ ಹೊಂದಿದ್ದವರು. ತಂದೆ ಗೋವಿಂದ ವಿಠಲ ಭಾವೆ ಗಾಯಕರಷ್ಟೇ ಅಲ್ಲದೆ ಹದಿನಾಲ್ಕು ವಾದ್ಯ ನುಡಿಸಬಲ್ಲ ಪ್ರತಿಭಾನ್ವಿತರಾಗಿದ್ದರು.ಶ್ಯಾಮಲಾ ಅವರ ತಂದೆ ಗೋವಿಂದ ಭಾವೆ ಅವರು ಸಂಗೀತೋದ್ಧಾರಕ ಪಂಡಿತ್ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯರಾಗಿದ್ದರು. ತಾಯಿಲಕ್ಷ್ಮೀ ಭಾವೆ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದಿದ್ದರು.ಇಂತಹ ಸಂಗೀತ ವಾತಾವರಣದ ಮನೆತನದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ 3ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಗೆ ನಾಂದಿಯಾಯಿತು. 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಇವರದು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟ ಖ್ಯಾತಿ ಶ್ಯಾಮಲಾ ಜಿ ಭಾವೆ ಅವರದು. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತವನ್ನೂ, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಾಟಕ ಸಂಗೀತದ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.

1930ರಲ್ಲಿ ಬೆಂಗಳೂರಿನಲ್ಲಿ ಶ್ಯಾಮಲಾ ಅವರ ತಂದೆ ಗೋವಿಂದ ವಿಠಲ ಭಾವೆಯವರು ಪ್ರಪ್ರಥಮ ಹಿಂದುಸ್ಥಾನಿ ಸಂಗೀತ ಶಾಲೆ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಅದನ್ನು ಸಮರ್ಥವಾಗಿ ಮುನ್ನಡೆಸುತ್ತ, ಸಹಸ್ರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ. ಪಂ. ಜಸರಾಜ್‌ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದ ಅವರು ಅನೇಕ ಚಲನಚಿತ್ರ, ಸಾಕ್ಷ್ಯಚಿತ್ರ, ಗ್ರಾಮಫೋನ್‌ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂಭತ್ತು ಭಾಷೆಗಳ ಸುಮಾರು 1500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ.

ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದ ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ‘ಸ್ವರ ಸಾಧನಾ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ. ಅವರಿಗೆ, ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕಾದ ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (2007), ಭಾರತ ಗೌರವ್‌, ‘ವರ್ಷದ ಮಹಿಳೆ’ (1997), ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಹಲವೆಡೆಸಂಚರಿಸಿದ ಶ್ಯಾಮಲಾ ಜಿ ಭಾವೆ ಅವರು ತಮ್ಮ ಪ್ರತಿಭಾ ಪ್ರದರ್ಶನ ನೀಡಿದ್ದಾರೆ.ಇವರ ಶಿಷ್ಯರು ದೇಶ ವಿದೇಶಗಳಲ್ಲಿ ಇಂದಿಗೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT