ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದುಡಿದ ಕಲೆ ಅರಳಿದಾಗ..: ಸಂಗೀತದ ಹೊನಲಿನಲ್ಲೂ ನೆರವಿನ ಧಾರೆ

Last Updated 5 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರದರ್ಶನ ಕಲೆಗಳ ಪಾಲಿಗೆ ಕೋವಿಡ್‌–19 ಒಂದು ರೀತಿಯಲ್ಲಿ ಸುಂಟರಗಾಳಿಯಾಗಿ ಪರಿಣಮಿಸಿತು. ಅನ್ನದ ಮಾರ್ಗ ಕಾಣದೆ, ಸ್ವಾಭಿಮಾನದ ಹಾದಿಯನ್ನೂ ಬಿಡದೆ ಸಾವಿರಾರು ಸಂಖ್ಯೆಯ ಕಲಾವಿದರು ಹಸಿದ ಹೊಟ್ಟೆಯಲ್ಲೇ ಜೀವನ ಸಾಗಿಸಬೇಕಾದ ಸಂದರ್ಭ ಸೃಷ್ಟಿಯಾಯಿತು. ಅವರ ಕಷ್ಟವನ್ನು ನೋಡಲಾಗದೆ ಹಲವು ಕಲಾವಿದರು, ಕಲಾ ಸಂಸ್ಥೆಗಳು ಸದ್ದಿಲ್ಲದೆ ನೆರವಿಗೆ ಧಾವಿಸಿದ ವಿವರಗಳು ಅಪ್ಪಟ ಮಾನವೀಯ ಕಥನಗಳು. ಜಗತ್ತು ನಿಧಾನವಾಗಿ ಮತ್ತೆ ಪ್ರದರ್ಶನ ಕಲೆಗಳಿಗೆ ದಾರಿ ಮಾಡಿಕೊಡುತ್ತಿರುವ ಈ ಹೊತ್ತಿನಲ್ಲಿ ಅಂತಹ ಮಾನವೀಯ ಕಥನಗಳ ಮೇಲೊಂದು ಹಿನ್ನೋಟ...

***

ಸಂಕಷ್ಟದಿಂದ ನೊಂದ ಮನಕ್ಕೆ ಸಂಗೀತ ಸಾಂತ್ವನ ಬೇಕು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಬಡ ಕಲಾವಿದರ ಬದುಕೇ ಸೊರಗಿರುವಾಗ ಸಂಗೀತ ಸಾಂತ್ವನ ಹೇಗೆ ಸಾಧ್ಯ? ಇಂಥ ಸಂದರ್ಭದಲ್ಲಿ ಕಲಾವಿದರ ಉದರ ಪೋಷಣೆಯೂ ಇದೇ ತುರ್ತಿನ ಸಾಲಿಗೆ ಸೇರಿದೆ.

ನಾಡಿನ ಕೆಲ ವಿದ್ವಾಂಸರು ಬಡ ಕಲಾವಿದರ ಬದುಕನ್ನು ಹಸನುಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕೆಲವು ಸಂಗೀತ ಸಂಸ್ಥೆಗಳು ಆನ್‌ಲೈನ್‌ ಕಛೇರಿಗಳನ್ನು ನಿರಂತರವಾಗಿ ನಡೆಸಿದವು. ಹೆಸರಾಂತ ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್‌ ಪ್ರತೀ ವಾರಾಂತ್ಯದಲ್ಲಿ ಫೇಸ್‌ಬುಕ್‌ ಲೈವ್‌ ಸಂಗೀತ ಕಛೇರಿಯನ್ನು ತಮ್ಮ ‘ಶ್ರೀರಾಮ ಕಲಾ ವೇದಿಕೆ’ ವತಿಯಿಂದ ಏರ್ಪಡಿಸುತ್ತಾ ಬಂದಿದ್ದು ಮನಸ್ಸಿಗೆ ಸಾಂತ್ವನ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

‘ಅನನ್ಯ’ ಸಹಾಯಹಸ್ತ
ಬಡಕಲಾವಿದರ ಬವಣೆ ಗಮನಿಸಿದ ಬೆಂಗಳೂರಿನ ‘ಅನನ್ಯ ಸಂಗೀತ ಸಂಸ್ಥೆ’ ಧನಸಹಾಯ ಮಾಡಿದೆ. ಸಂಗೀತ, ನೃತ್ಯ, ವಾದ್ಯ ತಯಾರಕರು ಸೇರಿ ಒಟ್ಟು 350 ಕಲಾವಿದರಿಗೆ ಬದುಕಿನ ಮೇಲೆ ಹೊಸ ಭರವಸೆ ಮೂಡಿಸಿರುವುದು ‘ಅನನ್ಯ’ ಹೆಗ್ಗಳಿಕೆ.

‘ಸಂಕಷ್ಟದಲ್ಲಿರುವ ಬಡಕಲಾವಿದರನ್ನು ಗುರುತಿಸಿ ಸುಮಾರು ₹ 18 ಲಕ್ಷ ನಿಧಿ ಸಂಗ್ರಹ ಮಾಡಿ ಅವರ ಕುಟುಂಬದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದ್ದೇವೆ. ಇನ್ನು ಕೆಲವು ಕಲಾವಿದರು ಸಂಕಷ್ಟದಲ್ಲಿದ್ದರೂ ಧನಸಹಾಯ ಕೇಳಲು ಹಿಂಜರಿದವರಿದ್ದಾರೆ. ಅಂಥವರಿಗೆ ಆನ್‌ಲೈನ್‌ನಲ್ಲಿ ಅವರ ಕಛೇರಿ ಏರ್ಪಡಿಸಿ ಸಂಭಾವನೆ ರೂಪದಲ್ಲಿ ಸಹಾಯ ಮಾಡಿದ್ದೇವೆ. ಇಂಥ ಒಟ್ಟು 135 ಕಲಾವಿದರು, ಬೇರೆ ಊರುಗಳಲ್ಲಿರುವ ಯಕ್ಷಗಾನವೂ ಸೇರಿದಂತೆ ಇತರ ಕಲಾ ಪ್ರಕಾರದವರಿಗೆ ಸಹಾಯಹಸ್ತ ಚಾಚಿದ್ದೇವೆ. ಅವರವರ ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ಮೂರರಿಂದ ಹತ್ತು ಸಾವಿರದವರೆಗೂ ಒಂದೊಂದು ಕುಟುಂಬಕ್ಕೆ ಹಣ ನೀಡಲಾಗಿದೆ.ನೆಲಮಂಗಲದ ನೃತ್ಯ ಕಲಾವಿದರ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತು. ಅಪಘಾತ ಹಾಗೂ ಕಾಯಿಲೆಯಿಂದ ತತ್ತರಿಸಿ ದಿಕ್ಕೇ ತೋಚದಂತಾಗಿದ್ದ ಈ ಕುಟುಂಬಕ್ಕೆ ಒಂದೇ ಸಲ ₹10 ಸಾವಿರ ರೂಪಾಯಿ ನೀಡಿದೆವು’ ಎಂದು ವಿವರ ನೀಡುತ್ತಾರೆ ‘ಅನನ್ಯ’ ಸಂಸ್ಥೆಯ ರೂವಾರಿ ರಾಘವೇಂದ್ರ.

‘ಶಮ’ದ ‍ಪರಿಶ್ರಮ
ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್‌ ಹುಟ್ಟುಹಾಕಿದ ಸಂಸ್ಥೆ ‘ಶಮ’. ಇದರ ಮೂಲಕ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಜನಪದ, ಆರ್ಕೆಸ್ಟ್ರಾ, ಗೀಗೀಪದ, ಜೋಗತಿ ಹಾಡುವವರು ಸೇರಿದಂತೆ ಅನೇಕ ಕಲಾವಿದರ ಪೋಷಣೆ ಮಾಡಲಾಗಿದೆ. ‘ಧನ ಸಂಗ್ರಹಕ್ಕಾಗಿ ನಮ್ಮೊಂದಿಗೆ ಆದಿಚುಂಚನಗಿರಿ ಸಂಸ್ಥಾನ ಮಠ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಐದು ಸಾವಿರ ರೂಪಾಯಿಯಂತೆ 130 ಕುಟುಂಬಗಳಿಗೆ ಸಹಾಯ ಮಾಡಿದ್ದೇವೆ. ಮಾನವೀಯತೆ ನೆಲೆಯಲ್ಲಿ ಇದೊಂದು ಸಮಾಜಸೇವೆ ಎಂಬುದೇ ನನ್ನ ಅನಿಸಿಕೆ’ ಎನ್ನುತ್ತಾರೆಶಮಿತಾ.

ನೋವಿನಲ್ಲಿರುವ ಕಲಾವಿದರಿಗೆ ಸ್ಪಂದಿಸಿದವರಲ್ಲಿ ಗಾಯಕ ಪುತ್ತೂರು ನರಸಿಂಹ ನಾಯಕ್‌ ಕೂಡ ಪ್ರಮುಖರು. ‘ಇಂತಹ ಕಷ್ಟದಲ್ಲಿರುವವರಿಗಾಗಿಯೇ ವರ್ಚುವಲ್‌ ಕಛೇರಿ ಮಾಡಿ ಅಮೆರಿಕ, ಆಸ್ಟ್ರೇಲಿಯಾದಲ್ಲಿರುವ ಹಣವಂತರಿಂದ ನಿಧಿ ಸಂಗ್ರಹಿಸಿ ಇಲ್ಲಿನ 28 ಬಡಕಲಾವಿದರಿಗೆ ನೀಡಿದ್ದೇನೆ. ಅಲ್ಲದೆ ಒಂದಿಬ್ಬರು ಹೊರರಾಜ್ಯದ ಕಲಾವಿದರಿಗೂ ಹಣ ನೀಡಲಾಗಿದೆ. ಗ್ರಾಮೀಣ ಭಾಗದ ಕಲಾವಿದರಿಗೂ ನೆರವಿನ ಸಹಾಯಹಸ್ತ ಚಾಚಿದ್ದೇವೆ’ ಎನ್ನುತ್ತಾರೆ ನರಸಿಂಹ ನಾಯಕ್‌.

ಬಡಕಲಾವಿದರನ್ನು ಪೋಷಿಸಲೆಂದೇ ಸಂಗೀತ ನಿರ್ದೇಶಕ ಪ್ರವೀಣ್‌ ಡಿ. ರಾವ್‌, ‘ಕರ್ನಾಟಕ ಆರ್ಟಿಸ್ಟ್ಸ್ ಅಸೋಸಿಯೇಷನ್‌’ ಹುಟ್ಟುಹಾಕಿ ಬದುಕಿನಲ್ಲಿ ಭರವಸೆ ಕಳೆದುಕೊಂಡ ಕಲಾವಿದರನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡಿರುವುದು ಕೂಡ ಸ್ತುತ್ಯರ್ಹವೇ.

ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ಸಹಾಯ, ಫುಡ್‌ಕಿಟ್‌ ನೀಡುವ ಮೂಲಕ ಇವರ ಬದುಕನ್ನು ಹಸನುಗೊಳಿಸುವ ಪ್ರಯತ್ನವನ್ನು ಪಿಟೀಲು ವಿದ್ವಾಂಸ ಮೈಸೂರು ಮಂಜುನಾಥ್‌ ಅವರೂ ಮಾಡಿದ್ದಾರೆ.

‘ಕೊರೊನಾ ಸಂಕಷ್ಟದ ಆರಂಭದ ದಿನಗಳನ್ನು ನೆನಪಿಸುವ ಮೈಸೂರು ಮಂಜುನಾಥ್‌, ಇದು ಯಾವ ಮಟ್ಟಕ್ಕೆ ಹೋಗುತ್ತದೆಂದು ಯಾರಿಗೂ ಗೊತ್ತಿರಲಿಲ್ಲ. ಮೇಯಲ್ಲಿ ಬಡ ಕಲಾವಿದರಿಗೆ ದಿನಸಿ ಹಂಚಿದೆವು. ಕುಟುಂಬದವರಂತಿರುವ ‘ಸಂಗೀತ ಬಂಧು’ಗಳಿಗೆ ಆದ ತೊಂದರೆಯಿಂದ ನನಗೆ ವ್ಯಥೆ ಉಂಟಾಗಿ ಅವರಿಗೆ ನೆರವಾದೆ. ಇದು ಸಹಾಯಹಸ್ತ ಅಲ್ಲ, ಸ್ನೇಹದ ಬಾಂಧವ್ಯ ವೃದ್ಧಿಗೆ ಸಿಕ್ಕಿದ ಅವಕಾಶ. ಮೈಸೂರಿನ ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಬೆಂಗಳೂರಿನ ಯದುಗಿರಿ ಯತಿರಾಜ ಮಠದ ಸಂಸ್ಥಾನದ ಸ್ವಾಮೀಜಿ ಹಾಗೂ ಮೈಸೂರಿನ ಸ್ಥಳೀಯ ಮುಖಂಡರು ಸೇರಿ ಕಲಾವಿದರ ಪುನಶ್ಚೇತನಕ್ಕಾಗಿ ಶ್ರಮಿಸಿದ್ದಾರೆ’ ಎನ್ನುತ್ತಾರೆ ಮೈಸೂರು ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT