ಸೋಮವಾರ, ಅಕ್ಟೋಬರ್ 26, 2020
27 °C
ಎಸ್‌ಪಿಬಿ, ಪಿಬಿಎಸ್, ಎಂಬಿ - ಎಲ್ಲರಲ್ಲೂ 'ಬಾಲು' ಇದ್ದಾರೆ

PV Web Exclusive: ಬಾಲು ಸರ್, ವಿ ರಿಯಲೀ ಮಿಸ್ ಯೂ ಸರ್!

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

SP Balasubrahmanyam

ನಮ್ಮ ಪ್ರೀತಿಯ ಬಾಲು ಸರ್,

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ, ಅಥವಾ ಎಸ್ಪಿಬಿ. ಆದರೆ, ನಮಗೆಲ್ಲ ನೀವಿನ್ನೂ ಮಗುವಿನ ನಗುವಿನ ಬಾಲನೇ, ಅದೇ ಬಾಲು ಸರ್. ಆವತ್ತು ನೀವು ಚೆನ್ನೈ ಎಂಜಿಎಂ ಆಸ್ಪತ್ರೆಯಲ್ಲಿದ್ದೀರಿ ಅಂತ ಕೇಳಿದಾಗಲೇ ಕುಗ್ಗಿ ಹೋಗಿದ್ದ ನಮಗೆಲ್ಲಾ ಹಾಸಿಗೆಯಿಂದಲೇ ಧೈರ್ಯ ತುಂಬಿದಾಗ, ನೀವು ಹಾಡಲು ಬಂದೇ ಬರುತ್ತೀರಿ ಅಂದುಕೊಂಡಿದ್ದೆವು ಸರ್. ಆದರೆ, ಆಸ್ಪತ್ರೆ ವಾಸದಿಂದ ಸುಸ್ತಾಯಿತೇ? ಇದರಿಂದಾಗಿ ನಮ್ಮನ್ನು ಮರೆತು ಹೋದಿರೋ? ಇಲ್ಲ ಖಂಡಿತಾ ಮರೆಯಲಾರಿರಿ. ಆ ದೇವರಿಗೆ ನಿಮ್ಮ ಗಾಯನ ಕೇಳಬೇಕೆನಿಸಿದೆ, ಹೀಗಾಗಿ ಭೌತಿಕ ಶರೀರ ಬಿಟ್ಟು ಹೋಗಿಬಿಟ್ಟಿರಿ. ನಮ್ಮನ್ನು ಎದೆಯಾಳದಿಂದ ನೂರೊಂದು ನೆನಪುಗಳಲ್ಲಿ ಬಿಟ್ಟು ಹೋದಿರಿ. ನೀವು ಆಳಿದ ಗಾಯನಲೋಕದಲ್ಲಿ ನಮ್ಮನ್ನು ಅನಾಥರನ್ನಾಗಿಸದೆ, ನಿಮ್ಮ ಅಜರ ಅಮರ ಹಾಡುಗಳನ್ನು ನಮ್ಮ ರಕ್ಷಣೆಗಾಗಿ ಬಿಟ್ಟು ಹೋದಿರಿ, ಸರ್.

ಆದರೂ, ಇಲ್ಲಿ ನಿಮ್ಮ ಗಾಯನ ಸುಧೆ ಮತ್ತಷ್ಟು ಹರಿಯಬೇಕಿತ್ತು, ಹೀಗಾಗಿ ನೀವು ಖಂಡಿತವಾಗಿಯೂ ಮತ್ತೆ ಬಂದು ತಮ್ಮ ಕಂಠ ಸಿರಿಯನ್ನು ಮೆರೆಸುತ್ತೀರಿ, ಕೋವಿಡ್ ಸಂಕಷ್ಟದ ಕಾಲದಲ್ಲಿ ಕುಗ್ಗಿ ಹೋದ ಮನಗಳ ದುಃಖ ಮರೆಸುತ್ತೀರಿ; 2020ರ ಕರಾಳ ನೆನಪುಗಳನ್ನು ಅಳಿಸುತ್ತೀರಿ ಅಂತಾನೇ ನಂಬಿದವರು ನಾವು.

ಬಹುಶಃ ನಿಮ್ಮ ಗಾಯನ ಸುಧೆಯನ್ನು ಕೇಳುವ ತುಡಿತ ತಾಳದೆ ಆ ದೇವರು ಕರೆಸಿಕೊಂಡೇ ಬಿಟ್ಟ. ಆಸ್ಪತ್ರೆಯಲ್ಲಿರುವಾಗಲೂ ನಿಮ್ಮ ಅಭಿಮಾನಿಗಳು ಮತ್ತು ದೇವರ ನಡುವೆ ಬಹುಶಃ ನೀವು ಯಾರಿಗೆ ಸೇರಬೇಕು ಎಂಬುದರ ಬಗ್ಗೆಯೇ ಮಾತುಕತೆಯೇ ನಡೆಯುತ್ತಿತ್ತೇನೋ! ನೀವು ಇಕ್ಕಟ್ಟಿನಲ್ಲಿ ಸಿಲುಕಿದ್ದೀರಿ ಎಂಬುದು ನಮಗೆ ಗೊತ್ತು. ಆದರೆ, ದೇವರ ವಾದ ಇದ್ದ ನಾದದ ತಕ್ಕಡಿ ಅತ್ತ ಕಡೆಯೇ ವಾಲಿತು. ನಮ್ಮನ್ನು ಗಂಧರ್ವ ನಾದದಲ್ಲಿ ತೇಲಾಡಿಸಿದ್ದ ನೀವು ಈಗ ದೇವ-ಗಂಧರ್ವಲೋಕಕ್ಕೆ ಪಯಣಿಸಿದಿರಿ.

ಇದನ್ನೂ ಓದಿ:

55 ವರ್ಷಗಳ ವೃತ್ತಿ ಜೀವನ, 40 ಸಾವಿರಕ್ಕೂ ಹೆಚ್ಚು ಹಾಡುಗಳು - ಈ ಲೆಕ್ಕ ಬಹುಶಃ ನಿಮಗಿರಲಾರದು. ನೀವು ಹಾಡುತ್ತಲೇ ಹೋದಿರಿ, ನಿಮ್ಮ ಕಂಠವಂತೂ ಮನೆ ಮನೆಗಳಲ್ಲಿ ಕೇಳಿ ಬರುತ್ತಲೇ ಇದೆ. 1966ರಲ್ಲಿ ಮೊದಲ ಬಾರಿಗೆ ನೀವು ತೆಲುಗಿನ ಶ್ರೀಶ್ರೀ ಮರ್ಯಾದಾ ರಾಮಣ್ಣ ಚಿತ್ರಕ್ಕೆ ಹಾಡಿದಿರಿ ಎಂದಾದರೂ ಕೂಡ, ಅದನ್ನು ನಾನಂತೂ ಕೇಳಿಲ್ಲ. ಆದರೆ ನನ್ನ ಮನಸ್ಸಲ್ಲಿನ್ನೂ ಹಚ್ಚ ಹಸಿರಾಗಿರುವುದು, ನಭೂತೋ ನ ಭವಿಷ್ಯತಿ ಎಂಬಂತೆ ನಿರ್ಮಾಣವಾಗಿದ್ದ ಶಂಕರಾಭರಣಂ ಚಿತ್ರದ ಆ ನಿಮ್ಮ ಕಂಠದಲ್ಲಿ ಮೂಡಿಬಂದ ಶಾಸ್ತ್ರೀಯ ಗಾಯನಸುಧೆ.

"ಶಂಕರಾ, ನಾದ ಶರೀರಾ ಪರಾ" ಮತ್ತು ಓಂಕಾರ ನಾದಾನುಸಂಧಾನ ಎಂಬ ಹಾಡುಗಳನ್ನು ಕ್ಯಾಸೆಟ್ ಮೂಲಕವಾಗಿ ಕೇಳಿದಾಕ್ಷಣ ಚಿಕ್ಕಂದಿನಲ್ಲಿ ನನ್ನ ಮನಸ್ಸು ಯಾವ ರೀತಿ ಕುಣಿಯುತ್ತಿತ್ತೋ, ಈಗ ಸಿಡಿ, ಡಿವಿಡಿ, ಪೆನ್‌ಡ್ರೈವ್‌ಗಳ ಎಂಪಿ3 ಕಾಲದಲ್ಲಿ ಇಂದಿಗೂ ಅದು ಹಾಗೆಯೇ ಇದೆ. ತೆಲುಗು ಅರ್ಥವಾಗದಿದ್ದರೂ ಅದೆಷ್ಟು ಬಾರಿ ಮೆಲುಕು ಹಾಕಿದ್ದೇನೋ? ನಿನ್ನೆಯಷ್ಟೇ ಆ ಧ್ವನಿ ಸುರುಳಿಯನ್ನೇ ಪ್ಲೇ ಮಾಡಿದ್ದೆ! ದೊರಕುನಾ ಇಟುವಂಟಿ ಸೇವಾ, ಮಾನಸ ಸಂಚರರೇ, ಪಲುಕೇ ಬಂಗಾರಮಾಯೆನಾ, ರಾಗಂ ತಾನಂ ಪಲ್ಲವಿ, ಸಾಮಜ ವರಗಮನ, ಯೇ ತಿರುಗ ನನು - ಇವೆಲ್ಲ ಹಾಡುಗಳನ್ನು ಮೀರಿಸಿದವರುಂಟೇ?

ಶಂಕರಾಭರಣಂ ಚಿತ್ರದಲ್ಲಿ ನೀವು ಹಾಡಬೇಕಾದ ಸಂದರ್ಭದ ಬಗ್ಗೆ ಕೇಳಿದ್ದೆ. 80ರ ದಶಕದ ಆ ಚಿತ್ರದಲ್ಲಿ ಹಾಡುಗಳಿಗೆ ನೀವೇ ಧ್ವನಿಯಾಗಬೇಕು ಎಂದು ತೆಲುಗಿನ ನಿರ್ದೇಶಕ ಕೆ.ವಿಶ್ವನಾಥ್ ಎಂಬವರು ನಿಮ್ಮನ್ನು ಹುಡುಕಿಕೊಂಡು ಬಂದಿದ್ದರಂತೆ. ಸಂಗೀತಪ್ರಧಾನ ಚಿತ್ರದಲ್ಲಿ ಹಾಡುವುದು ನನಗಾಗದು, ಶಾಸ್ತ್ರೀಯ ಸಂಗೀತ ಕಲಿತಿಲ್ಲ ಎಂದಿದ್ದಿರಂತೆ ನೀವು! ಆದರೆ, ಒತ್ತಾಸೆ ತಡೆಯದಾದಾಗ, ಇದಕ್ಕೆ ನ್ಯಾಯ ಒದಗಿಸಬೇಕಿದ್ದರೆ ನಾನು ಸಂಗೀತ ಕಲಿಯಲೇಬೇಕು ಎಂದು ಹಠ ಮಾಡಿ, ಕಲಿತುಕೊಂಡು, ಚಿತ್ರದ ಅಷ್ಟೂ ಹಾಡುಗಳನ್ನು ಹಾಡಿದ್ದಷ್ಟೇ ಅಲ್ಲದೆ, ಈ ಹಾಡುಗಳಿಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದ ಸಾಧಕ ನೀವಲ್ಲವೇ?

ಕನ್ನಡದ ಮಲಯ ಮಾರುತ ಚಿತ್ರದ ಹಾಡುಗಳನ್ನು ಮರೆಯಲಾದೀತೇ? ತಮಿಳಿನಲ್ಲಿಯೂ ಸಂಗೀತಪ್ರಧಾನವಾದ ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣದಲ್ಲೂ ಮೆರಿದ್ದೀರಿ ಅಥವಾ ಚಿತ್ರಗಳನ್ನು ಮೆರೆಸಿದ್ದೀರಿ. ಆದರೆ ನಾನದನ್ನು ಆಲಿಸಿಲ್ಲ. ಮೈನೇ ಪ್ಯಾರ್ ಕಿಯಾದಲ್ಲಿ ನೀವು ಹಾಡಿದ ದಿಲ್ ದೀವಾನಾ... ನನ್ನ ಕಾಲೇಜು ದಿನಗಳಿಗೆ ಹೊಸ ಹುರುಪು ತಂದದ್ದಂತೂ ಹೌದು. ನಿಮ್ಮ ಧ್ವನಿಯಿಂದಲೇ ಈ ಚಿತ್ರ, ಸಲ್ಮಾನ್ ಖಾನ್ ಕೂಡ ಅಚ್ಚಳಿಯದ ನೆನಪಾಗುಳಿಯಿತು ಅಂತ ನನಗೆ ಖಂಡಿತಾ ಗೊತ್ತು. ಅದಕ್ಕೂ ಮೊದಲು ನೀವು ಹಾಡಿದ, ಏಕ್ ದೂಜೇ ಕೇಲಿಯೇ ಚಿತ್ರದ, 'ತೇರೇ ಮೇರೇ ಬೀಚ್ ಮೇ' ಹಾಡು ಯೌವನ ಕಾಲದ ನನ್ನ ಕನಸುಗಳಿಗೆ ಜೀವ ತುಂಬಿದ್ದಂತೂ ಸತ್ಯ. ಬಳಿಕಾಬಳಿಕ ಹಂ ಆಪ್‌ಕೇ ಹೈ ಕೌನ್ ಚಿತ್ರದಲ್ಲಿ ಲತಾ ಮಂಗೇಷ್ಕರ್ ಅವರೊಂದಿಗಿನ ಡ್ಯುಯಟ್ ಹಾಡು, ದೀದೀ ತೇರಾ ದೇವರ್ ದೀವಾನಾ ಅದನ್ನು ನೆನಪಿಸಿಕೊಳ್ಳದಿದ್ದರೆ ಹೇಗೆ?

ಬಂಧನ ಚಿತ್ರದ ನೂರೊಂದು ನೆನಪು ಎದೆಯಾಳದಿಂದ ಮರೆತು ಹೋಗದ ಅನರ್ಘ್ಯ ಧ್ವನಿಯಾಗಿತ್ತಲ್ಲವೇ ನಿಮ್ಮದು? ಅದಿರಲಿ, ನಮ್ಮ ರವಿಚಂದ್ರನ್ ಅವರ ಪ್ರೇಮ ಲೋಕದಲ್ಲಿ ಹಂಸಲೇಖರ ಸಾಹಿತ್ಯಕ್ಕೆ ನಿಮ್ಮ ಧ್ವನಿ ಮರೆಯಲಾದೀತೇ? ಕನ್ನಡದಲ್ಲಿ ವಿಷ್ಣುವರ್ಧನ್ ಅವರಿಗೆ 'ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ' (ಚಿತ್ರ: ರಾಯರು ಬಂದರು ಮಾವನ ಮನೆಗೆ) ಎನ್ನುತ್ತಾ, ರವಿಚಂದ್ರನ್‌ಗೆ 'ನೀನು ನೀನೇ ಇಲ್ಲಿ ನಾನು ನಾನೇ' (ಚಿತ್ರ: ಗಡಿಬಿಡಿ ಗಂಡ) ಅಂತ ರಂಜಿಸಿದ ಕಂಠವಲ್ಲವೇ ನಿಮ್ಮದು? ತಮಿಳಿನಲ್ಲಿ ರಜನೀಕಾಂತ್, ಕಮಲಹಾಸನ್ ಅವರನ್ನು ಜನ ಮೆಚ್ಚುವಂತೆ ಮಾಡುವಲ್ಲಿ ನಿಮ್ಮ ಸಿರಿಕಂಠದ ಕೊಡುಗೆ ಏನೆಂಬುದು ನಮಗೆ ಗೊತ್ತಿದೆ ಸಾರ್.

ಅಷ್ಟೇ ಅಲ್ಲ, ನಿಮ್ಮ ಆ ಅಮೂಲ್ಯ ಕಂಠದ ಮೂಲಕ ರಜನೀಕಾಂತ್, ಕಮಲಹಾಸನ್, ವಿಷ್ಣು ವರ್ಧನ್, ಸಲ್ಮಾನ್ ಖಾನ್, ಭಾಗ್ಯರಾಜ್, ಗಿರೀಶ್ ಕಾರ್ನಾಡ್, ಅನಿಲ್ ಕಪೂರ್, ಅರ್ಜುನ್ ಸರ್ಜಾ, ಜೆಮಿನಿ ಗಣೇಶನ್ ಮುಂತಾದವರನ್ನೆಲ್ಲ ಪರದೆಯ ಮೇಲೆ ಮೆರೆಯುವಂತೆ, ಪರದೆಯ ಹೊರಗೂ ಮರೆಯದಂತೆ ಮಾಡಿದವರು ನೀವಲ್ಲವೇ?

ಹೌದು, ನಿಮ್ಮನ್ನು ಎದೆ ತುಂಬಿ ಹಾಡುವೆನು ಟಿವಿ ರಿಯಾಲಿಟಿ ಶೋಗಳಲ್ಲಿ ನೋಡಿದಾಗ, ಕಿರಿಯರಿಗೆ, ಹಿರಿಯರಿಗೆ ನೀವು ಮುಗ್ಧ ಧ್ವನಿಯಿಂದ, ಅಷ್ಟೇ ವಿನಯದಿಂದ 'ಸರ್' ಅಂತ ಸಂಬೋಧಿಸುತ್ತಿದ್ದ ಮಗುವಿನಂತಹಾ ಮುಗ್ಧ ಭಾವದ ಧ್ವನಿ ಈಗಲೂ ಕಣ್ಣಿಗೆ ಕಟ್ಟುತ್ತಿದೆ. ಇದಕ್ಕಾಗಿಯೇ ನೀವು ನಮಗೆ ಯಾವತ್ತಿದ್ದರೂ ಬಾಲು ಸರ್!

ಸಂಗೀತದ ಮೇಲೆ ನಿಮಗಿದ್ದ ಅಪಾರ ಕಾಳಜಿ, ಹಾಡುವ ಮಕ್ಕಳ ಪ್ರತಿಭೆಯ ಖನಿ ಕಂಡು ನೀವೂ ಮಗುವಾಗಿ ಆನಂದಿಸಿದ ಆ ಪರಿ, ಈಗಲೂ ಕಣ್ಣಿಗೆ ಕಟ್ಟುತ್ತಿದೆ ಬಾಲು ಸರ್. ಬರೇ ಹಾಡುವುದಲ್ಲ, ಅನುಭವಿಸಿ ಹಾಡಬೇಕು, ಭಾವ ತುಂಬಿ ಹಾಡಬೇಕು ಅಂತ ಕಿರಿಯರಿಗೆಲ್ಲ ಮಾರ್ಗದರ್ಶನ ನೀಡುತ್ತಲೇ, ಅವರು ಮಾಡಿ ತೋರಿಸಿದಾಗ ಮಗುವಿನಂತೆ ಸಂಭ್ರಮಿಸುವ ನಿಮ್ಮ ಆ ಮುದ್ದುಮುಖ ಈಗಲೂ ನೆನಪಾಗುತ್ತಿದೆ, ಅನ್ಯಾದೃಶವದು. ನಮಗೆ ಗೊತ್ತು, ನೀವು ಹಾಡಿನ ಪಲ್ಲವಿ ಮತ್ತು ಚರಣವನ್ನು ನಮಗಾಗಿ ಇಲ್ಲೇ ಬಿಟ್ಟು ಹೋಗಿದ್ದೀರಿ ಅಂತ. ಅದಕ್ಕಾಗಿಯೇ ನಿಮ್ಮ ಮಕ್ಕಳಿಗೆ ಅದೇ ಹೆಸರಿಟ್ಟಿದ್ದೀರಲ್ಲವೇ? ನಿಮ್ಮ ಸಂಗೀತದ ಮೇಲಿನ ಈ ಪ್ರೀತಿಯೇ ಅಲ್ಲವೇ ಭರಿಸಲಾಗದ ದುಃಖರಾಶಿಯ ನಡುವೆ ನಮಗಿಂದು ಸ್ವಲ್ಪ ಮಟ್ಟಿಗಾದರೂ ಸಾಂತ್ವನ ನೀಡುತ್ತಿರುವುದು! ಎಂ.ಎಸ್.ಸುಬ್ಬುಲಕ್ಷ್ಮಿಯವರ ಶ್ರೀ ವೇಂಕಟೇಶ ಸುಪ್ರಭಾತ ಹೇಗೋ, ಹಾಗೆಯೇ ನಿಮ್ಮ ಕಂಠಸಿರಿಯಲ್ಲಿ ಮೂಡಿಬಂದಿರುವ ಲಿಂಗಾಷ್ಟಕ, ಬಿಲ್ವಾಷ್ಟಕಗಳು ಇಂದಿಗೂ ಅದೆಷ್ಟೋ ಮನೆಗಳಲ್ಲಿ ಬೆಳಗನ್ನು ಬೆಳಗುತ್ತಿರುವುದೂ ಸುಳ್ಳಲ್ಲ.

ದಕ್ಷಿಣೋತ್ತರ ಭಾರತದಲ್ಲಿ ಗಾಯನ ಲೋಕದ ಗಾರುಡಿಗರಾಗಿ ಮನೆ ಮಾತಾಗಿ, ಹಲವರಿಗೆ ಉಸಿರಾಗಿ, ಹಲವರ ಬದುಕನ್ನು ಹಸಿರಾಗಿಸಿ ಮೆರೆದ ದಿಗ್ಗಜರೆಂದರೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್ ಹಾಗೂ ಎಂ.ಬಾಲ ಮುರಳಿಕೃಷ್ಣ. ಇವರೆಲ್ಲರನ್ನೂ ನಾನು ಕ್ಯಾಸೆಟ್ ಕೇಳುತ್ತಿದ್ದಾಗಿನಿಂದಲೂ ಜನರು ಪ್ರೀತಿಯಿಂದ ಶಾರ್ಟಾಗಿ, ಸ್ವೀಟಾಗಿ, ಎಸ್ಪಿಬಿ, ಪಿಬಿಎಸ್, ಎಂಬಿ ಅಂತ ಕರೀತಿದ್ರು. ವಿಶೇಷವೇನು ಗೊತ್ತೇ ನನ್ನ ಪ್ರೀತಿಯ ಬಾಲು ಸರ್? ಎಲ್ಲರಲ್ಲೂ ನೀವು ಇದ್ದೀರಿ, ಅಂದರೆ 'ಬಿ' ಫಾರ್ ಬಾಲು ಇದ್ದಾರೆ ಅಂತಾನೇ ನಾನು ಅಂದಿನಿಂದಲೂ ಯೋಚಿಸುತ್ತಿದ್ದುದು. ಆ ಇಬ್ಬರು ದಿಗ್ಗಜರ ಧ್ವನಿಯನ್ನು ನಿಮ್ಮಲ್ಲಿ ಕಂಡವನು ನಾನು. ಪಿಬಿಎಸ್ ಅವರಂತೂ ಎಸ್‌ಪಿಬಿಗೆ ತೀರಾ ಹತ್ತಿರ. ಪಿಬಿ ಪಕ್ಕದಲ್ಲೇ ಎಸ್ ಎನ್ನುತ್ತಾ ಮಗುವೊಂದು ನಿಂತಂತೆ ನನಗೆ ನೆನಪಾಗುತ್ತದೆ.

ಎಲ್ಲರನ್ನೂ ಧ್ವನಿಮಾತ್ರದಿಂದಲೇ ಎಲ್ಲರ ಮುಖದಲ್ಲಿ ನಗುವರಳಿಸುತ್ತಿದ್ದ, ಖುಷಿಪಡಿಸುತ್ತಿದ್ದ, ಅಳುವಂತೆ ಮಾಡುತ್ತಿದ್ದ, ಭಕ್ತಿ ಪ್ರಜ್ಞೆ ಜಾಗೃತಗೊಳಿಸುತ್ತಿದ್ದ ಆ ದೈವೀಕ ಧ್ವನಿಯನ್ನು, ಭಾವುಕ ಕಂಠವನ್ನು ಇನ್ನು ಮುಂದೆ ನಿಮ್ಮ ಮುಗ್ಧ ಮಗುವಿನ ಮುಖಭಾವದ ಸಹಿತವಾಗಿ ನೇರವಾಗಿ ಕೇಳಲಾಗುವುದಿಲ್ಲವಲ್ಲ ಎಂಬ ಕೊರಗು ಬಹುಶಃ ಜೀವಮಾನಪೂರ್ತಿ ಕಾಡುತ್ತದೆ ಸರ್.

ಈ ಭುವಿಯ ಮೇಲೆ ಸೂಪರ್‌ಸ್ಟಾರ್‌ಗಳನ್ನೆಲ್ಲ ನಿಮ್ಮ ಧ್ವನಿಯ ಕೊಡುಗೆಯಿಂದಲೇ ನೆನಪಲ್ಲಿಟ್ಟುಕೊಳ್ಳುವಂತೆ ಮಾಡಿದ ನಿಮ್ಮನ್ನು ಭಾರವಾದ ಹೃದಯದಿಂದಲೇ ಬೀಳ್ಕೊಡುತ್ತಿದ್ದೇವೆ. ಹೋಗಿ ಬನ್ನಿ ಅಂತ ಹೇಳುವುದಿಲ್ಲ. ಆ ಗಾಯನ ಗಂಧರ್ವರ ಲೋಕದಲ್ಲಿಯೂ ಇದೇ ವಿನೀತ ಭಾವದಿಂದ ಎಲ್ಲರನ್ನೂ ರಂಜಿಸಲು ಹೋಗುತ್ತಿದ್ದೀರಿ ಎಂಬ ಸದಾಶಯದೊಂದಿಗೆ, ನಿಮ್ಮ ದೇಹ ಮಾತ್ರ ಹೋಗಿದೆಯಷ್ಟೇ, ನಿಮ್ಮ ಧ್ವನಿಯಂತೂ ನಮ್ಮೊಂದಿಗೆ ತಂಗಾಳಿಯಂತೆ ಜೊತೆಗಿರುತ್ತದೆ. ಕನ್ನಡದ ಪ್ರತಿಯೊಂದು ಮನಸ್ಸು ಕೂಡ ಒಂದಿಲ್ಲೊಂದು ದಿನ ನಿಮ್ಮ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಗುನುಗುನಿಸುತ್ತಾ ಇರುತ್ತದೆ. ಹೀಗೆಯೇ ನೀವೂ ಇರುತ್ತೀರಿ ನಾವು ಇರುವವರೆಗೂ, ನಂತರವೂ!

You will B always with us, Balu Sir. ನಿಮಗೆ ಭಾವಪೂರ್ಣ ಸ್ವರಾಂಜಲಿ, ಶ್ರದ್ಧಾಂಜಲಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು