ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೋಧದ ಹೊಸ ಹಾಡು; ದೇಸಿ ರ‍್ಯಾಪ್‌

Last Updated 10 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿರುವ ತಮಿಳು ರ‍್ಯಾಪ್ ಹಾಡು ‘ಎಂಜಾಯ್ ಎಂಜಾಮಿ’ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಬಿಡುಗಡೆಯಾದ ಮೂರು ವಾರಗಳಲ್ಲಿ ಸುಮಾರು 12 ಕೋಟಿ ವೀಕ್ಷಣೆ ಪಡೆದಿರುವ ಈ ಹಾಡು ಕೇವಲ ಮನರಂಜನೆಗಾಗಿ ರಚಿತವಾದದ್ದಲ್ಲ. ಸಮಾನತೆ, ಸಹಬಾಳ್ವೆ, ಸಮಪಾಲಿನ ಆಶಯದಲ್ಲಿ ಸಂಯೋಜನೆಗೊಂಡಿರುವ ಈ ಹಾಡು, ಕೇವಲ ಒಂದು ಪ್ರಯೋಗವಲ್ಲ; ಮೌನಕ್ರಾಂತಿಯ ಭಾಗ...

ಪ್ರತಿರೋಧದ ಅಭಿವ್ಯಕ್ತಿಗೆ ಭಿನ್ನ ಮಾರ್ಗಗಳನ್ನು ಆಯ್ದುಕೊಂಡ ಸಮಕಾಲೀನ ದಲಿತ ಕಾವ್ಯದ ಮೂಲ ಪ್ರೇರಣೆಯನ್ನು ದೇಸಿ ಪರಂಪರೆಯಲ್ಲಿ ಹುಡುಕುವುದಾದರೆ, ದಕ್ಷಿಣದಲ್ಲಿ ತಮಿಳುನಾಡಿನ ತಿರುವಳ್ಳುವರ್, ಕರ್ನಾಟಕದ ವಚನ ಚಳವಳಿಯ ಮಾದಾರ ಚೆನ್ನಯ್ಯ, ಉರಿಲಿಂಗ ಪೆದ್ದಿ, ದೋಹರ ಕಕ್ಕಯ್ಯ ಅವರಿಂದ ಬೇರು ಬಿಟ್ಟಿದ್ದರೆ, ಉತ್ತರದಲ್ಲಿ ಸಂತ ಕಬೀರರ ಸಮಕಾಲೀನರಾಗಿದ್ದ ವಾರಾಣಸಿಯ ಸಂತ ರವಿದಾಸ ಬೃಹತ್ತಾಗಿ ನಿಂತಿದ್ದಾರೆ. ತಿರುಕ್ಕುರಳ್ ಆಗಲಿ, ವಚನಗಳಾಗಲಿ ಅಥವಾ ಸಿಖ್ಖರ ಪವಿತ್ರ ಆದಿ ಗ್ರಂಥದಲ್ಲಿ ಅಡಕವಾಗಿರುವ ರವಿದಾಸರ 41 ಶ್ಲೋಕಗಳಾಗಲಿ ಕೇವಲ ಓದುವುದಕ್ಕಾಗಿ ರಚಿಸಿದ್ದಲ್ಲ. ಭಕ್ತಿ ಪರಂಪರೆಯ ಭಾಗವಾಗಿ ಎಲ್ಲರಮನಸ್ಸುಗಳನ್ನು ಪ್ರಭಾವಿಸಲು ರಚಿತವಾದ ಕೀರ್ತನೆಗಳೂ ಹೌದು.

ಆ ಪರಂಪರೆಯ ಮುಂದುವರೆದ ಭಾಗವಾಗಿ ಭಾರತದ ವಿವಿಧ ಭಾಷೆಗಳಲ್ಲಿ ಹಲವು ಮಂದಿ ಸೃಜನಶೀಲ ಬರವಣಿಗೆ ಮತ್ತು ಕಾವ್ಯ ರಚನೆಯಲ್ಲಿ ತೊಡಗಿ ಯಶಸ್ವಿಯೂ ಆಗಿದ್ದಾರೆ. ಮರಾಠಿ ಭಾಷೆಯ ದಲಿತ ಪ್ಯಾಂಥರ್ ನಾಮದೇವ್ ಢಸಳರ ಗೋಲ್ಪಿಥಾ ಖಂಡ ಕಾವ್ಯ, ಕನ್ನಡದ ಸಿದ್ಧಲಿಂಗಯ್ಯ ಮತ್ತಿತರರ ಬಂಡಾಯದ ಕವಿತೆಗಳು, ತಮಿಳಿನ ಮೀನಾ ಕಂದಸಾಮಿ ಅವರಂತಹ ಪ್ರಖರ ದಲಿತ ಮಹಿಳಾ ಧ್ವನಿ... ಆಯ್ದ ಕೆಲವು ನಿದರ್ಶನಗಳಷ್ಟೆ.

ವಿಶೇಷವಾಗಿ ಮರಾಠಿ, ಪಂಜಾಬಿ ಮತ್ತು ಕನ್ನಡ ಭಾಷೆಗಳಲ್ಲಿ ದಲಿತ ಕಾವ್ಯ, ಕೇವಲ ಪುಸ್ತಕ ರೂಪದ ಕವನ ಸಂಕಲನಗಳಿಗೆ ಸೀಮಿತವಾಗದೆ ಪ್ರತಿಭಟನೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹೋರಾಟದ ಹಾಡುಗಳಾಗಿ ಬಳಸಲ್ಪಟ್ಟಿದೆ. ದಲಿತ ಚಳವಳಿ ಇರಬಹುದು ಅಥವಾ ಎಡಪಂಥೀಯ ಹೋರಾಟಗಳಿರಬಹುದು ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು, ಗೋವಿಂದಯ್ಯನವರ ಎ, ಬಿ, ಸಿ ಮತ್ತು.. ಮತ್ತಿತರ ಬಂಡಾಯದ ಹಾಡುಗಳು ಇರಲೇಬೇಕಿತ್ತು. ಒಂದರ್ಥದಲ್ಲಿ ದಲಿತ ಚಳವಳಿ ಸೃಜನಶೀಲ ಅಭಿವ್ಯಕ್ತಿಗೆ ವೇದಿಕೆಯಾಗಿತ್ತು ಎಂದರೆ ತಪ್ಪಾಗಲಾರದು.

ಇಂಥ ಬಂಡಾಯದ ಹಾಡುಗಳು ಭಾರತದ ಕೆಲವು ಭಾಷೆಗಳಿಗಷ್ಟೇ ಸೀಮಿತವಾಗಿಲ್ಲ. ಇದು ಸಾರ್ವತ್ರಿಕ ಮತ್ತು ಸಾರ್ವಕಾಲಿಕ. ಎಲ್ಲಾ ದೇಶಗಳಲ್ಲಿಯೂ ಎಲ್ಲಾ ಕಾಲಘಟ್ಟಗಳಲ್ಲಿಯೂ ಆಯಾ ಪ್ರದೇಶದ ಸವಾಲುಗಳು, ಸಂಕಷ್ಟಗಳಿಗೆ ಪ್ರತಿಸ್ಪಂದನೆಗಳಾಗಿ ಬಂಡಾಯದ ಹಾಡುಗಳು ಸೃಷ್ಟಿಯಾಗಿವೆ. ಕರ್ನಾಟಕದಲ್ಲಿ ದಲಿತರ ಹಾಡುಗಳು ತಮಟೆಯ ಸದ್ದಿನಲ್ಲಿ, ಬಂಡಾಯದ ಸಭೆಗಳ ಮಾತುಗಳಲ್ಲಿ ಹಿಮ್ಮೇಳಗಳಾಗಿ ಉಳಿದು, ಸಂಗೀತ ಪ್ರಕಾರವಾಗಿ ವಿಕಾಸಗೊಳ್ಳದೆ ಮೂಲೆಗುಂಪಾಗಿವೆ. ಆದರೆ, ಅಮೆರಿಕದ ಬಂಡಾಯದ ಹಾಡುಗಳು ಹಾಗಲ್ಲ. ಅವು ಒಂದೆಡೆ ಪ್ರತಿಭಟನೆಯ ಹಾಡುಗಳಾಗಿ ಗೆದ್ದರೆ, ಮತ್ತೊಂದೆಡೆ ಜಾಗತಿಕ ಸಂಗೀತದಲ್ಲಿ ಕೂಡ ಅತ್ಯಂತ ಜನಪ್ರಿಯ ಎನಿಸಿಕೊಂಡಿವೆ.

ಸಂಗೀತದ ಮೂಲಕ ಸಾಮಾಜಿಕ ಬದಲಾವಣೆ ತುಡಿತದಕ್ಯಾಸ್ಟ್‌ಲೆಸ್‌ ಕಲೆಕ್ಟಿವ್‌ ತಂಡ...
ಸಂಗೀತದ ಮೂಲಕ ಸಾಮಾಜಿಕ ಬದಲಾವಣೆ ತುಡಿತದಕ್ಯಾಸ್ಟ್‌ಲೆಸ್‌ ಕಲೆಕ್ಟಿವ್‌ ತಂಡ...

ರೆಗ್ಗೆ ಎಂಬ ಬಂಡಾಯದ ಸಂಗೀತ

ಕೆರೆಬಿಯನ್ ದ್ವೀಪಗಳ ಮೂಲದಿಂದ ಬಂದ ಜಮೈಕಾದ ಖ್ಯಾತ ಗಾಯಕ, ರೆಗ್ಗೆ ಸಂಗೀತದ ಹರಿಕಾರ ಬಾಬ್ ಮಾರ್ಲಿ ಹಾಡು ಪ್ರತಿಭಟನಾ ಸಂಗೀತದ ಬಹುಮುಖ್ಯ ಅಭಿವ್ಯಕ್ತಿಗಳಲ್ಲೊಂದು. 1999ರಲ್ಲಿ ಟೈಮ್ ಮ್ಯಾಗಜಿನ್‍ನಿಂದ ಶತಮಾನದ ಆಲ್ಬಂ ಎಂಬ ಗೌರವಕ್ಕೆ ಪಾತ್ರವಾದ ಮಾರ್ಲಿಯ ‘ಎಕ್ಸೋಡಸ್’ ಮತ್ತು ಲೆಜೆಂಡ್ ಆಲ್ಬಂನ ‘ಬಫೆಲೋ ಸೋಲ್ಜರ್ಸ್’ ಹಾಡು ಅಮೆರಿಕದ ವರ್ಣಾಧಾರಿತ ದಬ್ಬಾಳಿಕೆ ಮತ್ತು ಜೀತಪದ್ಧತಿಯ ಅಂಕುಶಕ್ಕೆ ಸಿಲುಕಿ ನರಳಿದ ಕಪ್ಪುಜನರ ಪ್ರತಿಭಟನೆಯ ಸಂಕೇತಗಳಾಗಿವೆ. ರೆಗ್ಗೆ, ರ‍್ಯಾಪ್, ಹಿಪ್ ಹಾಪ್‍ಗಳು ಪ್ರತಿಭಟನೆಯ ಸಂಗೀತ ಪ್ರಕಾರಗಳಷ್ಟೇ ಅಲ್ಲ, ಜಗತ್ತಿನಾದ್ಯಂತ ಸೂಪರ್‌ಸ್ಟಾರ್‌ಗಳನ್ನು ಹುಟ್ಟುಹಾಕಿರುವ ಮತ್ತು ಜಾಗತಿಕ ಸಂಗೀತ ಉದ್ಯಮದ ಅತ್ಯಂತ ಯಶಸ್ವಿ ಮಾದರಿಗಳೂ ಹೌದು. ಆಧುನಿಕ ಸಂಗೀತ ವಾದ್ಯಗಳು, ಉತ್ಕೃಷ್ಟ ರೆಕಾರ್ಡಿಂಗ್ ಮತ್ತು ಸೋನಿ ಬಿಎಂಜಿ, ಯೂನಿವರ್ಸಲ್, ವಾರ್ನರ್‌ನಂತಹ ಜಾಗತಿಕ ಮ್ಯೂಸಿಕ್ ಲೇಬಲ್‍ಗಳ ಬೆಂಬಲದಿಂದ ರೆಗ್ಗೆ, ರ‍್ಯಾಪ್, ರಾಕ್ ಪ್ರಕಾರಗಳ ಆಲ್ಬಂಗಳು ಜಾಗತಿಕ ಮನ್ನಣೆ ಪಡೆದಿವೆ.

ರ‍್ಯಾಪ್ ಸಂಗೀತದಲ್ಲಿ ಬಹುಶಃ ಎಮಿನೆಮ್ ಒಬ್ಬನನ್ನು ಹೊರತುಪಡಿಸಿದರೆ, ಎಲ್ಲಾ ಸ್ಟಾರ್‌ಗಳು ಅಮೆರಿಕದ ಗಲ್ಲಿಗಳಿಂದ, ಸ್ಲಂಗಳಿಂದ, ಬಡ ಮಧ್ಯಮವರ್ಗದ ಕುಟುಂಬಗಳಿಂದ ಮೇಲೆದ್ದು ಬಂದ ಅದ್ಭುತ ಕಪ್ಪು ಪ್ರತಿಭೆಗಳು. ಫಿಫ್ಟಿ ಸೆಂಟ್ಸ್, ಸ್ನೂಪ್ ಡಾಗ್, ಜೇ ಜೆಂಡ್, ಕಾನ್ಯೆ ವೆಸ್ಟ್ ಹೀಗೆ ಪಟ್ಟಿ ಬಹಳ ದೊಡ್ಡದಿದೆ. ಆಫ್ರೋ-ಅಮೆರಿಕನ್ನರು ಪ್ರತಿಭಟನೆಯ ಸಂಗೀತಕ್ಕಷ್ಟೇ ಸೀಮಿತರಾಗಿಲ್ಲ. ರಾಕ್, ಸಾಫ್ಟ್ ರಾಕ್ ಪ್ರಕಾರಗಳಲ್ಲಿ ಮೈಕೆಲ್ ಜಾಕ್ಸನ್, ಸ್ಟೀವಿ ವಂಡರ್, ರೇ ಚಾರ್ಲ್ಸ್‌, ನ್ಯಾಟ್ ಕಿಂಗ್ ಕೋಲ್, ಲಯೋನಲ್ ರಿಚಿ ಮತ್ತಿತರರು ಸಾರ್ವಕಾಲಿಕ ಸ್ಟಾರ್‌ಗಳೇ.

ಯೂಟ್ಯೂಬ್‍ನಲ್ಲಿ ಇತ್ತೀಚೆಗೆ ಹೊಸ ಸಂಚಲನವನ್ನೇ ಮೂಡಿಸಿರುವ ತಮಿಳು ರ‍್ಯಾಪ್ ಹಾಡು ‘ಎಂಜಾಯ್ ಎಂಜಾಮಿ’ ಜಾಗತಿಕ ಪ್ರತಿರೋಧದ ಸಂಗೀತಕ್ಕೆ ಹೊಸ ಸೇರ್ಪಡೆ. ಈ ಹಾಡು ಅತ್ಯದ್ಭುತ ಸಂಗೀತ ಸಂಯೋಜನೆ ಮತ್ತು ಗುಣಮಟ್ಟದ ನಿರ್ಮಾಣದ ಮೂಲಕ ದೇಸಿ ದಲಿತ ಸಂವೇದನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಮಾರ್ಚ್ 7ರಂದು ಬಿಡುಗಡೆಯಾದ ಈ ಹಾಡು, ಈ ಲೇಖನ ಬರೆಯುವ ಹೊತ್ತಿಗೆ 12 ಕೋಟಿ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

‘ರೌಡಿ ಬೇಬಿ’ ಖ್ಯಾತಿಯ ಧೀ ಮತ್ತು ತಮಿಳು ರ‍್ಯಾಪರ್ ‘ಅರಿವು’ ಎಂದೇ ಪ್ರಖ್ಯಾತರಾಗಿರುವ ಅರಿವರಸು ಲೈನೇಸನ್ ರಚಿಸಿ, ಹಾಡಿರುವ ‘ಎಂಜಾಯ್ ಎಂಜಾಮಿ’ ಹಾಡಿಗೆ ‘ಕಬಾಲಿ’ ಸಿನಿಮಾ ಸಂಗೀತ ನಿರ್ದೇಶಕ ಸಂತೋಷ್‌ ನಾರಾಯಣನ್ ಸಂಗೀತ ಸಂಯೋಜನೆಯಿದೆ. ಸಮಾನತೆ, ಸಹಬಾಳ್ವೆ, ಸಮಪಾಲು, ಇಂತಹ ಆಶಯಗಳನ್ನಿಟ್ಟುಕೊಂಡು ತಮಿಳಿನ ‘ಒಪ್ಪಾರಿ’ ಮತ್ತು ‘ಗಾನಾ’ (ಚರಮಗೀತೆ/ Funeral song) ಪ್ರಭಾವಳಿಯಲ್ಲಿ ಸಂಯೋಜನೆಗೊಂಡಿರುವ ಈ ಹಾಡನ್ನು, ಕೇವಲ ಒಂದು ಪ್ರಯೋಗವಾಗಿ ಅಲ್ಲ, ಒಂದು ಮೌನಕ್ರಾಂತಿಯ ಭಾಗವಾಗಿ ನೋಡಬೇಕಿದೆ.

ನೆಲ, ಜಲ, ಕಾಡು, ಜೀವವೈವಿಧ್ಯ ಎಲ್ಲದರ ಬಗ್ಗೆ ಹಾಡಿನಲ್ಲಿ ಉಲ್ಲೇಖವಿದೆ. ‘ನಾಯಿ, ನರಿ, ತೋಳಗಳಿಗೂ ಈ ಭೂಮಿ, ಕೆರೆಕುಂಟೆಗಳು, ನದಿ ಸಾಗರಗಳ ಮೇಲೆ ಹಕ್ಕಿದೆ’ ಎಂಬ ಸಾಲು ಸಾಕು ಇದು ಸಾಮಾನ್ಯ ರ‍್ಯಾಪ್ ಸಾಂಗ್ ಅಲ್ಲ ಎನ್ನುವುದಕ್ಕೆ. ಹಾಡಿನ ಉದ್ದಕ್ಕೂ ಮಣ್ಣಿನ ಘಮಲು ಅನುಭವಕ್ಕೆ ಬರುತ್ತದೆ. ‘ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿದ ಭೂಮಿಯಲ್ಲಿ ಮನುಷ್ಯರಿಗೆ, ಪ್ರಾಣಿಪಕ್ಷಿಗಳಿಗೆ, ಸಸ್ಯಸಂಕುಲಕ್ಕೆ ಎಲ್ಲರಿಗೂ ಹಕ್ಕಿದೆ. ಎಲ್ಲರೂ ಸಹಬಾಳ್ವೆಯಿಂದ ಸಂತಸ ಹಂಚಿಕೊಳ್ಳೋಣ’ ಎಂಬ ಆಶಯವಿದೆ. ಎ.ಆರ್. ರೆಹಮಾನ್ ಹುಟ್ಟು ಹಾಕಿರುವ ಮಾಝಾ ಎಂಬ ಸಂಗೀತ ಸಂಸ್ಥೆ ಈ ಹಾಡನ್ನು ನಿರ್ಮಿಸಿದ್ದು, ಅಮಿತ್ ಕೃಷ್ಣನ್ ಮ್ಯೂಸಿಕ್ ವಿಡಿಯೊ ನಿರ್ದೇಶಿಸಿದ್ದಾರೆ.

‘ಕಡಲು, ಮಳೆ, ನೆಲ, ಕೊಳ ಎಲ್ಲವೂ ಎಲ್ಲರಿಗೂ ಸೇರಿದ್ದು’ ಎಂಬ ಆಶಯ ವ್ಯಕ್ತವಾದರೂ, ‘ಇಂತಹ ಸುಂದರವಾದ ತೋಟ ಬೆಳೆಸಿದ ನಮ್ಮ ಗಂಟಲುಗಳು ಈಗಲೂ ಒಣಗಿವೆ’ ಎಂಬ ವಿಷಾದ ಕೂಡ ಇದೆ. ಒಂದು ರೀತಿಯಲ್ಲಿ ಬ್ರಾಹ್ಮಣ್ಯದ ಪ್ರಭಾವಳಿಯಿಂದ ತುಂಬಿಹೋಗಿರುವ ದಕ್ಷಿಣ ಭಾರತದ ಸಾಂಸ್ಕೃತಿಕ ಜಗತ್ತಿನಲ್ಲಿ ಸಂಗೀತ ಮತ್ತು ದೃಶ್ಯಗಳ ಮೂಲಕ ಈ ಸೀಮಿತ ಚೌಕಟ್ಟನ್ನು ಮೀರುವ ಬಂಡಾಯದ ಹೊಸ ಮಾದರಿಯಾಗಿ ರ‍್ಯಾಪ್ ಅನ್ನು ನೋಡಬಹುದು.

ತಮಿಳುನಾಡಿನ ಸಂಗೀತ ಜಗತ್ತಿನಲ್ಲಿ ಇಂತಹ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿವೆ. ಖ್ಯಾತ ನಿರ್ದೇಶಕ ಪಾ. ರಂಜಿತ್ ಹುಟ್ಟುಹಾಕಿರುವ ‘ಕ್ಯಾಸ್ಟ್‌ಲೆಸ್‌ ಕಲೆಕ್ಟಿವ್’ ಮ್ಯೂಸಿಕ್ ಬ್ಯಾಂಡ್ ಉತ್ಕೃಷ್ಟ ಗುಣಮಟ್ಟದ ಸಂಗೀತದ ಮೂಲಕ ದಲಿತ ಸಂವೇದನೆಯನ್ನು ಅಭಿವ್ಯಕ್ತಿಸುತ್ತಿದೆ. ‘ಅರಿವು’ ಇದೇ ತಂಡದ ಸದಸ್ಯ. ಜಾಗತಿಕ ಮಟ್ಟಕ್ಕೆ ಸ್ಥಳೀಯ ಸ್ವತಂತ್ರ ಸಂಗೀತ ಕಲಾವಿದರನ್ನು ಪರಿಚಯಿಸಬೇಕೆಂದು ಎ.ಆರ್. ರೆಹಮಾನ್ ಹುಟ್ಟುಹಾಕಿರುವ ಮಾಝಾ ಮ್ಯೂಸಿಕ್ ಲೇಬಲ್ ಗುರುತಿಸಿರುವ ಪ್ರತಿಭೆಗಳಲ್ಲಿ ‘ಕ್ಯಾಸ್ಟ್‌ಲೆಸ್‌ ಕಲೆಕ್ಟಿವ್’ ತಂಡ ಕೂಡ ಒಂದು.

2008ರಲ್ಲಿ ಕೆ.ಎಂ.ಮ್ಯೂಸಿಕ್ ಕನ್ಸರ್ವೇಟರಿ ಎಂಬ ಸಂಗೀತ ಶಾಲೆ ಪ್ರಾರಂಭಿಸಿರುವ ರೆಹಮಾನ್, ಇದರ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಂಗೀತ ಪ್ರತಿಭೆಗಳನ್ನು ಒಗ್ಗೂಡಿಸಿ ‘ಸನ್‌ಶೈನ್ ಆರ್ಕೆಸ್ಟ್ರಾ’ ಎಂಬ ಭಾರತದ ಮೊತ್ತಮೊದಲ ಸಿಂಫೊನಿ ಆರ್ಕೆಸ್ಟ್ರಾವನ್ನು ಪ್ರಾರಂಭಿಸಿದ್ದಾರೆ. ಇದಕ್ಕೆ ಹೆಚ್ಚೇನೂ ಪ್ರಚಾರ ದೊರಕಿಲ್ಲ. ಆದರೆ, ಮುಂಬೈನ ಧಾರಾವಿ ಸ್ಲಂನಲ್ಲಿ ಹುಟ್ಟಿ ಬೆಳೆದ ಅಪ್ಪಟ ಪ್ರತಿಭೆ ಡಿವೈನ್ ಮತ್ತು ನೇಸಿ ಡೀ ಎಂದೇ ಖ್ಯಾತರಾದ ನವೇದ್ ಶೇಖ್ ಮಹಾನಗರದ ಹೃದಯಭಾಗದ ಕೊಳಚೆ ಪ್ರದೇಶಗಳಲ್ಲಿನ ಜನಜೀವನದ ಬಗ್ಗೆ ರ‍್ಯಾಪ್ ಹಾಡುಕಟ್ಟಿ ಪ್ರವರ್ಧಮಾನಕ್ಕೆ ಬಂದ ರೋಮಾಂಚಕ ಕಥನ ‘ಗಲ್ಲಿಬಾಯ್’, ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಭಾರತದಿಂದ ಆಯ್ಕೆಯಾದ ಸಿನಿಮಾ ಎಂದು ವ್ಯಾಪಕ ಪ್ರಚಾರ ಪಡೆದುಕೊಂಡಿತು.

ಇನ್ನು ಹಿಪ್ ಹಾಪ್ ಮಾದರಿಯಲ್ಲಿ ಮಲಯಾಳಂನ ಹೊಸ ತಲೆಮಾರಿನ ಯುವ ಪ್ರತಿಭೆಗಳು ಮೌನ ಕ್ರಾಂತಿಯನ್ನೇ ಸೃಷ್ಟಿಸುತ್ತಿದ್ದಾರೆ. ಶ್ರೀನಾಥ್ ಭಸಿ ಮತ್ತು ಶೇಖರ್ ಮೆನನ್ ಅವರ ‘ಕೋಳಿಪಂಕ್’ ಕವಿ ಸಚ್ಚಿದಾನಂದನ್ ಅವರ ಖ್ಯಾತ ವ್ಯಂಗ್ಯ ಕವಿತೆಯ ಆಧುನಿಕ ಮರುಸೃಷ್ಟಿಯಾಗಿ ಗಮನ ಸೆಳೆದಿದೆ. ರೋಹಿತ್ ವೇಮುಲ, ಗೌರಿ ಲಂಕೇಶ್, ದಾದ್ರಿ ಹತ್ಯೆ ಮತ್ತಿತರ ಕಾಡುವ ವಿದ್ಯಮಾನಗಳು ಮ್ಯೂಸಿಕ್ ವಿಡಿಯೊದಲ್ಲಿವೆ.

ಆರಂಭದಲ್ಲಿ ಸಿನಿಮಾವೊಂದಕ್ಕೆ ಜೆಸ್ಸಿ ಗಿಫ್ಟ್‌ ಸಂಯೋಜಿಸಿದ ‘ಲಜ್ಜಾವತಿಯೇ...’ ಹಾಡಿನ ಮೂಲಕ ಪ್ರಾರಂಭವಾದ ಮಲಯಾಳಂ ಹಿಪ್ ಹಾಪ್ ಸಂಗೀತ ಹೊಸ ತಲೆಮಾರಿನ ಯುವ ಪ್ರತಿಭೆಗಳ ಕೈಯಲ್ಲಿ ಪ್ರತಿಭಟನೆಯ ಮಾದರಿಯಾಗಿ ವಿಕಾಸಗೊಂಡಿದೆ. ಶ್ರೀನಾಥ್ ಭಸಿ, ವೇದನ್‍ರಂತಹ ಸ್ವತಂತ್ರ ಸಂಗೀತಗಾರರು ಪ್ರತಿಭಟನಾ ಸಂಗೀತದ ಹೊಸ ಮಾದರಿಯನ್ನು ಹುಟ್ಟುಹಾಕುತ್ತಿದ್ದಾರೆ. ‘ಧ್ವನಿಯಿಲ್ಲದವರ ಧ್ವನಿ’ ಎಂಬ ಹಾಡಿನಲ್ಲಿ ವೇದನ್ ತಾರತಮ್ಯದ ತಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ಈ ಭೂಮಿಯ ಮಾಲೀಕರು ಯಾರು, ಗುಲಾಮರು ಯಾರು? ಇದನ್ನು ಸಾವಿರಾರು ತುಂಡುಗಳಾಗಿ ಮಾಡಿ ಬೇಲಿ ಹಾಕಿದವರಾರು? ಇಲ್ಲಿ ಎಷ್ಟು ವಂಶಗಳು ನಿರ್ವಂಶವಾದವೋ? ನಿಮ್ಮ ಬೆನ್ನುಹುರಿಗಳು ಬಾಗಿವೆ, ತಲೆಗಳು ತೂಗುತ್ತಿವೆ, ಇನ್ನೆಷ್ಟು ದಿನ ಬದುಕುವಿರಿ ನೀವು?’ ಇಂಥ ಸಾಲುಗಳು ಸಮಾಜದ ಸಾಕ್ಷಿಪ್ರಜ್ಞೆಗೆ ಸವಾಲೆಸೆಯದೆ ಬಿಡುವುದಿಲ್ಲ.

ಬರೀ ಯುವತಿಯರು, ಬಾರ್, ಪಬ್‍ಗಳು, ಮದ್ಯ, ಮದಿರೆಯ ಸುತ್ತಲೇ ಗಿರಕಿ ಹೊಡೆಯುವ ಹಾಡುಗಳನ್ನೇ ರ‍್ಯಾಪ್ ಎಂದುಕೊಂಡಿರುವ ಬಹಳಷ್ಟು ಮಂದಿ ತಮಿಳಿನ ಅರಿವು, ಹಿಂದಿಯ ಡಿವೈನ್, ಮಲಯಾಳಂನ ವೇದನ್‍ರಂತಹ ರ‍್ಯಾಪರ್‌ಗಳ ಹಾಡುಗಳನ್ನು ಕೇಳಿರಲಿಕ್ಕಿಲ್ಲ. ಕನ್ನಡದಲ್ಲಿ ಇಂತಹ ಪ್ರಯೋಗಗಳು ಇದುವರೆಗೂ ಕಂಡುಬಂದಿಲ್ಲ.

ಆದರೆ ತಮಿಳು, ಮಲಯಾಳಂ, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಹಿಪ್ ಹಾಪ್ ಮತ್ತು ರ‍್ಯಾಪ್, ಪ್ರತಿರೋಧದ ಹೊಸ ಕಲಾಪ್ರಕಾರಗಳಾಗಿ ಹೊರಹೊಮ್ಮುತ್ತಿವೆ. ಸಿನಿಮಾ, ಆಲ್ಬಂ ಹಾಡುಗಳು, ರ‍್ಯಾಪ್‍ನಂತಹ ಆಧುನಿಕ ಜನಪ್ರಿಯ ಕಲಾ ಮಾದರಿಗಳಲ್ಲಿ ದಲಿತ ಸಂವೇದನೆಯ ಗಂಭೀರ ವಿಚಾರಗಳು, ವ್ಯಾವಹಾರಿಕ ದೃಷ್ಟಿಯಿಂದಲೂ ಗೆಲ್ಲುವ ಶ್ರೇಷ್ಠ ಅಭಿವ್ಯಕ್ತಿಗಳಾಗಿ ಇತ್ತೀಚೆಗೆ ಮುಖ್ಯವಾಹಿನಿಯಲ್ಲಿ ಕಂಡುಬರುತ್ತಿವೆ. ಚಿಂತಕ ರಾಬಿನ್ ಜೆಫ್ರಿ, ಭಾರತೀಯ ಮಾಧ್ಯಮ ರಂಗದಲ್ಲಿ ದಲಿತರ ಪ್ರತಿನಿಧೀಕರಣದ ಬಗ್ಗೆ ಬರೆಯುತ್ತಾ, ‘ದಲಿತರಿಗೆ ಸಂಬಂಧಪಟ್ಟ ವಿಚಾರಗಳು ದೊಡ್ಡಮಟ್ಟದಲ್ಲಿ ಚರ್ಚೆಯಾಗಬೇಕಾದರೆ, ಜಾಗತಿಕ ಗುಣಮಟ್ಟದ ಪತ್ರಿಕೆಗಳು, ಮ್ಯಾಗಜಿನ್‍ಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದಲಿತರ ಮಾಲೀಕತ್ವದಲ್ಲಿ ಸೃಷ್ಟಿಯಾಗಬೇಕು’ ಎನ್ನುತ್ತಾರೆ. ಒಟ್ಟಾರೆ ಮಾಧ್ಯಮರಂಗದಲ್ಲಿ ಅಲ್ಲದಿದ್ದರೂ, ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಇಂಥ ಪ್ರಯತ್ನಗಳಾಗುತ್ತಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT