ಶನಿವಾರ, ಮಾರ್ಚ್ 25, 2023
22 °C

ಅಮರತ್ವದ ಶಾಲೆ: ಮೆಹಬೂಬ್‌ ಮುಲ್ತಾನಿ ಅವರ ಕವನ

ಮೆಹಬೂಬ್‌ ಮುಲ್ತಾನಿ Updated:

ಅಕ್ಷರ ಗಾತ್ರ : | |

Prajavani

ಗೋಡೆ ಮೇಲೆ ಹೂವೊಂದು ಚಂದಗೆ ಅರಳಿ ನಿಂತಾಗ
ಎಲ್ಲಿಂದಲೋ ಹಾರಿ ಬಂದ ದುಂಬಿಯೊಂದು ಜೊತೆಯಾಯಿತು

ಮೈಲುದ್ದ ದಾರಿ ಸವೆಸಿ ಮೈಲುಗಲ್ಲಾಗುವ ಹೊತ್ತು

ಅವರಿಬ್ಬರ ಇತಿಹಾಸ ಮಾತು ಮಾತಿಗೆ ಜಾರಿ ಬೆರಳಿಗಂಟಿತು

ಈ ಜಗತ್ತಿನ‌ ಅಮರ ಪ್ರೇಮಿಗಳೆಂದರೆ ಲೈಲಾ-ಮಜ್ನೂ, ರೊಮಿಯೋ-ಜೂಲಿಯಟ್
ಅಲ್ಲವೇ ಅಲ್ಲ....!

ಹೂವು ಮತ್ತು ದುಂಬಿ

ರಾತ್ರಿ ಕಳೆದರೆ ಸಾಕು
ಹೂವು ಮತ್ತು ದುಂಬಿ
ನಮ್ಮ ಕಣ್ಣ ಮುಂದಿನ ಬೆಳಕು

ದುಂಬಿಯ ಝೇಂಕಾರದಿ ಹೂವು ಲಯ ಕಂಡರೆ
ದುಂಬಿ ಮಕರಂದದಿ ಸಾಕ್ಷಾತ್ಕಾರ ಕಂಡಿತು

ಲಯ ಮತ್ತು ಸಾಕ್ಷಾತ್ಕಾರ
ಅಮರತ್ವದ ಎರಡು ಶಾಲೆಗಳು
ನಾನು ಮತ್ತು ನೀನು ಕೂಡಾ

ಕಿರುಬೆರಳು ಹಿಡಿದು ಮುನ್ನೆಡುಸುವಾಗ ಬಲವಾದ ನಂಬಿಕೆ ನನಗೆ
ಇತಿಹಾಸದ ಮೇಲಲ್ಲ ನಿನ್ನ ಕಿರುಬೆರಳ ಮೇಲೆ

ಹಳೆಯ ಪ್ರೇಮಿಗಳಿಗೆ
ಹೂವು ಮತ್ತು ದುಂಬಿಯ ಚಿತ್ರ ಬಿಡಿಸುವುದು ಸಲೀಸು

ಗಡಿಯಾರದ ಮುಳ್ಳು ತಿರುಗಿದಂತೆ ಬದಲಾಗುತ್ತದೆ ಇತಿಹಾಸ

ಹೂವು ,
ದುಂಬಿ ,
ನಾನು,
ನೀನು

ಅಲ್ಲೊಂದು ರಾಜಕೀಯವಿದೆ

ನೀನು ಬೆರಳು ಆಡಿಸಿದರೆ
ಗಡಿ ಕೊರೆದ ಅನುಭವ ನನಗೆ
ಹೂವು ಮತ್ತು ದುಂಬಿಗೂ

ಪ್ರೀತಿ ಹುಟ್ಟುವಲ್ಲೇ ಸ್ವರ್ಗದ ಗಡಿರೇಖೆ
ಕಾವಲು ಕಾಯುವವರ ಕೈಯಲ್ಲಿ ಕೋವಿ
ದಾಟಬೇಕಿದೆ ಗಡಿ
ನಾನು- ನೀನು,
ಹೂವು-ದುಂಬಿ

ಪ್ರೀತಿ ಯಾವ ಕಾಲದ ಸತ್ಯ ಗೊತ್ತಿಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು