ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ಫ್ಯೂ’ ನಡುವೆ ‘ದಿನವಿಡೀ ಕವಿ ಗೋಷ್ಠಿ’

ದುರಿತ ಕಾಲದಲ್ಲೊಂದು ಆನ್‌ಲೈನ್‌ ಕವಿತೆ ವಾಚನ
Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19 ಸೋಂಕು, ಜನತಾ ಕರ್ಫ್ಯೂ, ಇಂಥ ಸಂದಿಗ್ಧಕಾಲದಲ್ಲಿ ಪ್ರೀತಿ, ಭರವಸೆ ಮತ್ತು ಸ್ವಾಸ್ಥ್ಯಕ್ಕಾಗಿ ‘ದಿನವಿಡೀ ಕವಿತೆ’ ಎಂಬ ಫೇಸ್‌ಬುಕ್‌ ಲೈವ್ ಕವಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ಕವಿಗೊಷ್ಠಿ ಆಯೋಜನೆ ರೂವಾರಿ ಕವಿ ಪ್ರವೀಣ ಬೆಳಗಾವಿ. ‘ಜನತಾ ಕರ್ಫ್ಯೂ‘ ದಿನದಂದು ಕನ್ನಡ ಸಾಹಿತ್ಯ, ಪದ್ಯದ ರಸದೌತಣವನ್ನು ನೀಡಲು ಈ ಕಾರ್ಯಕ್ರಮ ಆಯೋಜಿಸಿದ್ದರು.

ಸುಮಾರು 19 ಮಂದಿ ಕವಿ, ಕವಯತ್ರಿಯರು ದಿನವಿಡೀ ಪದ್ಯ ಓದಿ ಪದ್ಯಾಸಕ್ತರ ಮನತಣಿಸಿದ್ದಾರೆ.

ಒಂದು ವಿಚಾರವಾಗಿ ಪದ್ಯದ ಓದಿನ ಮೂಲಕ ತಮ್ಮ ಅಭಿಪ್ರಾಯವನ್ನು ದಾಖಲಿಸುವುದು, ಪ್ರತಿಭಟಿಸುವುದು, ಸ್ಪಂದಿಸುವುದು ಇಂದಿಗೆ ಕಷ್ಟವಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಯಾವ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಂತ ಸುಮ್ಮನೆ ಕೂರಬೇಕಾಗೂ ಇಲ್ಲ. ಸಾಮಾಜಿಕ ಜಾಲತಾಣವೇ ಇದಕ್ಕೆ ವೇದಿಕೆ ಎಂದು ಈ ಕವಿಗಳು ನಿರೂಪಿಸಿದ್ದಾರೆ.

ಬೆಳಿಗ್ಗೆ 10ರಿಂದ ಆರಂಭವಾಗಿ ಪ್ರತಿಯೊಬ್ಬರು ಮೂರುನಾಲ್ಕು ಕವಿತೆಗಳನ್ನು ಓದಿ; ಸಂಜೆ 6ರವರೆಗೆ ಕವಿಗೋಷ್ಠಿಯನ್ನು ನಡೆಸಿದ್ದಾರೆ. ಪ್ರತಿಯೊಬ್ಬ ಕವಿ ಒಬ್ಬರಾದ ಮೇಲ್ಲೊಬ್ಬರು ತಮ್ಮ ಪೇಸ್‌ಬುಕ್‌ ವಾಲ್‌ನಲ್ಲಿ ಲೈವ್‌ ಬಂದು ಕವಿತೆ ವಾಚನ ಮಾಡಿದ್ದಾರೆ. ಅದನ್ನು ಪ್ರವೀಣ ಅವರು ತಮ್ಮ ವಾಲ್‌ನಲ್ಲಿ ಶೇರ್‌ಮಾಡಿ ಗ್ರೂಪ್‌ವಾಚ್‌ಗೂ ಅನುವು ಮಾಡಿಕೊಟ್ಟಿದ್ದಾರೆ.

’ಆಧುನಿಕ ಕಾಲದಲ್ಲಿ ನಾವೆಲ್ಲಾ ಒಂದೆಡೆ ಸೇರಿ ಕವಿತೆ ವಾಚಿಸೋದು ಆ ಮೂಲಕ ಪ್ರತಿಭಟನೆ, ಪ್ರತಿನಿಧಿತ್ವ ಪ್ರತಿಪಾದಿಸೋದು ಕಷ್ಟಸಾಧ್ಯವಾದ ಕೆಲಸ. ಬದುಕಿನ ಧಾವಂತಗಳಲ್ಲಿ ಸಿಲುಕಿಕೊಂಡರುವ ಮನುಷ್ಯ ದೂರದೂರದ ಊರುಗಳಲ್ಲಿ ನೆಲೆಕಂಡುಕೊಂಡಿದ್ದಾನೆ. ಸಮಯ, ಶ್ರಮ, ಹಣ ಎಲ್ಲದರ ಉಳಿತಾಯದ ಜೊತೆಗೆ ಎಲ್ಲ ರೀತಿಯ‌ಮನಸ್ಸುಗಳನ್ನು ಒಂದು ಮಾಡುವ ವೇದಿಕೆಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬಹುದು. ದುರದೃಷ್ಟವಶಾತ್ ಇಂತಹ ತಾಣಗಳಲ್ಲಿ ಈಗ ಹೆಚ್ಚು ಮನುಷ್ಯ ವಿರೋಧಿ ನಿಲುವುಗಳ ಪ್ರಸಾರ ಜಾಸ್ತಿಯಾಗಿಬಿಟ್ಟಿದೆ. ಅಂತಹದರಿಂದ ಜನರ ಗಮನವನ್ನು ಬೇರೆಡೆಗೆ, ವಾಸ್ತವಕೆ ತಿರುಗಿಸಿ, ಸಮಾಜ ಸ್ವಾಸ್ಥ್ಯವನ್ನು ಕಾಪಾಡಲು ಇಂತಹ ಕವಿತಾ ವಾಚನಗಳು, ಮಾತುಕತೆಗಳು, ಸಂಗೀತ-ಚಿತ್ರ ಮುಂತಾದ ಕಲಾಮಾರ್ಗಗಳು ಮದ್ದಾಗಬಲ್ಲವು ಎಂಬುದು ನನ್ನ ನಂಬುಗೆ‘ ಎನ್ನುತ್ತಾರೆ ಕವಿ ರಾಜೇಂದ್ರ ಪ್ರಸಾದ್.

**
ಜನತೆಯ ಕರ್ಪ್ಯೂನಲ್ಲಿ ದೇಶದ ಹಲವು ಕಡೆಗಳಲ್ಲಿ ಚಪ್ಪಾಳೆ, ಗಂಟೆ, ಜಾಗಟೆ, ತಟ್ಟೆ ಲೋಟ ಬಾರಿಸಿ ಗುಂಪುಗುಂಪಾಗಿ ಸೇರಿ ಮೌಢ್ಯತೆಯ ಬಿತ್ತಿ ‘ಸೋಷಿಯಲ್ ಡಿಸ್ಟೆನ್ಸಿಂಗ್’ ಅನ್ನೋ ಅಂಶವನ್ನೇ ‘ಸೋಷಿಯಲ್ ಕ್ರೌಡಿಂಗ್’ ಅನ್ನೋತರ ಮಾಡಿ ವಿಶ್ವದ ಕಣ್ಣಲ್ಲಿ ದೇಶ ಹಾಸ್ಯಾಸ್ಪದವಾಯ್ತು. ಇದನ್ನ ನೋಡಿದರೆ, ದಿನವಿಡೀ ಕವಿಗೋಷ್ಠಿಯ ಮಹತ್ವ ಅರಿವಿಗೆ ಬರುತ್ತೆ. ಕವಿಗಳೆಲ್ಲಾ ಅವರವರ ಮನೆಯೊಳಗಿದ್ದೇ ‘ನೇರ ಪ್ರಸಾರ‘ದಲ್ಲಿ ಪದ್ಯ ಓದಿದರು. ಉಳಿದವರು ತಾವು ಇರುವಲ್ಲಿಯೇ ಪದ್ಯಕೇಳಿದರು. ಇದು ಏಕಕಾಲಕ್ಕೆ ಫಿಜಿಕಲ್ ಆಗಿ ಸೋಷಿಯಲ್ ಡಿಸ್ಟೆನ್ಸಿಂಗನ್ನೂ ಮತ್ತು ಕಾವ್ಯದ ಓದಿನ ವೈಚಾರಿಕ ಸೂಕ್ಷ್ಮತೆಯನ್ನೂ ಮೂಡಿಸುವ ಒಂದು ಪ್ರಯತ್ನದಂತೆ ಕಾಣುತ್ತದೆ. ಮೌಢ್ಯ ಸಮೂಹ ಸನ್ನಿಯಂತೆ ಹೆಚ್ಚುತ್ತಿರುವಾಗ ವೈಚಾರಿಕ ಸೂಕ್ಷ್ಮತೆ ಬೆಳೆಸುವ ಇಂತಹ ಪ್ರಯೋಗ ನಿಜಕ್ಕೂ ಮಹತ್ವದ್ದು.
–ಅರುಣ್ ಜೋಳದಕೂಡ್ಲಿಗಿ, ಕವಿ

**
‘ಲೈವ್‌‘ನಲ್ಲಿ ಕವಿತೆ ಓದಿದವರು
ಪ್ರವೀಣ, ವೀರಣ್ಣ ಮಡಿವಾಳರ, ಅರುಣ್ ಜೋಳದಕೂಡ್ಲಿಗಿ, ರಾಜೇಂದ್ರ ಪ್ರಸಾದ್, ಮೆಹಬೂಬ್ ಮುಲ್ತಾನಿ, ಭುವನಾ ಹಿರೇಮಠ, ರೇಣುಕಾ ರಮಾನಂದ, ಕೈದಾಳ ಕೃಷ್ಣಮೂರ್ತಿ, ಭಾಗ್ಯಜ್ಯೋತಿ‌ ಹಿರೇಮಠ, ಸುಮಿತ್‌ ಮೇತ್ರಿ, ವೀರಪ್ಪ ತಾಳದವರ, ನದೀಮ ಸನದಿ, ಪ್ರವರ ಕೊಟ್ಟೂರು, ಕೃಷ್ಣ ದೇವಾಂಗಮಠ, ರುಕ್ಮಿಣಿ ನಾಗಣ್ಣವರ, ಲಕ್ಷ್ಮಣ ಬಾದಾಮಿ, ಆನಂದ ಋಗ್ವೇದಿ, ಬಸವಣ್ಣೆಪ್ಪ ಕಂಬಾರ, ಡಿ. ಎಸ್. ರಾಮಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT