ಸದಾಶಿವ್ ಸೊರಟೂರು ಅವರು ಬರೆದ ಕವನ: ಊರಿಗೆ ಹೆಣ ಹೋಗುವ ಮುನ್ನ...

ಊರು ಬಿಡುವ ಮುನ್ನ ದಿನ ತಿನ್ನುವ
ಬುತ್ತಿ ಕನಿಕರದಿಂದ ಹೇಳಿತ್ತು
ಕಂದಾ ಅಲ್ಲಿ ಹಸಿದಿರುವುದನ್ನೂ ಕಲಿ
ಹೊತ್ತು ಹೊತ್ತಿಗೆ ಬುತ್ತಿ ಸಿಕ್ಕಲಾರದು
ಮತ್ತೆ ಊರು ನೆನಪಾದೀತು..!
ಊರು ಬಿಡುವ ರಾತ್ರಿ ಆವರಿಸಲಿದ್ದ
ನಿದ್ದೆ ದುಃಖಪಟ್ಟು ಹೇಳಿತ್ತು
ಮಗು ಇಂದೇ ಬೇಕಾದಷ್ಟು ಮೊಗೆದು ಬಿಡು
ಅಲ್ಲಿ ನಿನಗೆ ನನ್ನ ಇರುವು ದುರ್ಲಭವೇ
ದೇಹ ಸಿರಿ ಕದಡೀತು..!
ಊರು ಬಿಟ್ಟು ಬರುವಾಗ ಕಾಲಿಗೆ
ಎಡವಿದ ಕಲ್ಲು ಮರುಕದಿಂದ ಹೇಳಿತ್ತು
ಕಂದಾ ಹುಷಾರು ಅಲ್ಲಿ-
-ಎಡವ ಬೇಡ ಬಿದ್ದರೆ ಎತ್ತುವವರಿಲ್ಲ
ಬಿದ್ದು ಗಾಯವಾದೀತು..!
ಎಡವಿ ಮುಗ್ಗರಿಸಿದಾಗ ಜೇಬಿನಿಂದ
ಹಾರಿ ಬಿದ್ದ ಪುಡಿಗಾಸಿ ಸಂಕಟಪಟ್ಟು
ಹೇಳಿತ್ತು
ಮಗಾ ಅಲ್ಲಿ ಕಾಸುಗಳಿಗೆ ಬೆಲೆ ಇಲ್ಲ
ನೀನು ನೋಟುಗಳನು ದುಡಿಯಬೇಕು
ಹೊಟ್ಟೆ ಖಾಲಿ ಉಳಿದೀತು..!
ಊರ ಬೀದಿಯಲಿ ಹಾದು ಬರುವಾಗ
ಮನೆಗಳಿಂದ ಹಾದು ಬಂದು
ಪರಿಚಿತ ದನಿಗಳು ಎಚ್ಚರಿಸಿದ್ದವು
ಅಲ್ಲಿ ಮಾತುಗಳಿರುವುದಿಲ್ಲ
ಅಪರಿಚಿತ ಮೌನ ಹುಚ್ಚು ಹಿಡಿಸೀತು..!
ಹೊಲದ ಎದೆಯಿಂದ ಹೆಜ್ಜೆ ಎತ್ತಿಡುವಾಗ
ಮಮತೆಯಲಿ ಮಣ್ಣು ಹೇಳಿತ್ತು
ಮಗು ಅಲ್ಲಿ ಅನ್ನ ಹುಟ್ಟದಿದ್ದಾಗ ಮರಳಿಬಿಡು
ನಾನೆಂದೂ ಬಂಜೆಯಲ್ಲ ಹಿಡಿ ಬೀಜ ಸಾಕು
ಗೇಣು ಹೊಟ್ಟೆಗೆ ಎಷ್ಟು ಬೇಕಾದೀತು..!
ಊರನ್ನು ಇಷ್ಟಿಷ್ಟೆ ಕೊಂದು ತಂದು
ರಕ್ತ ಮಾಂಸ ಮೂಳೆಗಳನು ರಂಗಾಗಿ
ಜೋಡಿಸಿದ ನಗರದ ಬೀದಿಯಲಿ
ಯಾರದೊ ನಿಟ್ಟುಸಿರ ಮೇಲೆ ನಡೆಯುವಾಗ
ಊರು ಮತ್ತೆ ಮತ್ತೆ ನೆನಪಾದೀತು..!
ಎಲ್ಲಾ ಇದ್ದು ಏನೂ ಇಲ್ಲವೆನಿಸಿದೆ ಇಲ್ಲಿ
ಬೆಳೆಸಿದ ನಗರವೇ ಕೈ ಬಿಟ್ಟು ನಡೆದಿದೆ
ಊರು ಹೇಳಿದ ಮಾತು ಆಗ ಕಿವಿತುಂಬದೆ
ಇಂದು ಎದೆಯೊಳಗೆ ಅಲೆ ಎಬ್ಬಿಸಿವೆ
ಹೆಣ ಹೋಗುವ ಮುನ್ನ ನಾವೇ ಹೋಗುವ
ಉಳಿದ ಬಾಳು ಎಷ್ಟಿದ್ದೀತು..!?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.