ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದಲೋಟಿ ರಂಗನಾಥ್ ಬರೆದ ಕವಿತೆ: ‘ಬೆಚ್ಚಿ ಬೆವರಿ ನಿಂತ ನಡಿಗೆ’

Last Updated 11 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಒಂಟಿ ನಡಿಗೆ
ಬೀಸುವ ಗಾಳಿಯ ಚುಂಬನ
ಹಕ್ಕಿಪಕ್ಷಿಯ ಸ್ವತಂತ್ರದ ಕೂಗು
ನಾಯಿಯೊಂದು ನಡೆದು ಹೋದ ಹೆಜ್ಜೆ ಗುರುತು

ನಿಶ್ಯಬ್ಧದಲಿ
ನಿಶ್ಯಕ್ತಿಯೊಂದು ಬಿಟ್ಟು ಹೋದ
ಬಂಧನದ ಧ್ವನಿ
ಚುಕ್ಕಿ ಬಿದ್ದು ಗಾಯಗೊಂಡ
ದಾರಿ ಮೇಲಿನ ಗುರುತು

ಬಣ್ಣಗೆಟ್ಟ ತುಂಡು ತುಂಡು ಲಂಗದ ಚೂರುಗಳು
ಕಾಮಚಲ್ಲಿದ ವಾಸನೆಯ ಹೊತ್ತು
ಕೊಸರಿದ್ದ ಗೆದ್ದಲು ಹತ್ತಿದ ಸೀರೆ ತುಂಡುಗಳು
ನರಳಿ ಹೊರಳಿ ಬಿದ್ದ ಸುಖವುಂಡ ಬೆವರು

ನಂಬಿಕೆಯಲಿ ಬೆನ್ನಾಕಿ ಕೂತಿದ್ದ
ಮರವೊಂದಕ್ಕೆ ಆದ ಗುರುತು
ಯಾರೂ ನಡೆಯದ ಕಾಡಾದಿ ಮೇಲೆ
ಹುಲಿ ಪರಚಿದ ಗಾಯದ ಹೆಗ್ಗುರುತು

ಯಾವೂದೂ ಕೂಡದ ಹಾದಿಯ
ಮುಚ್ಚಿಟ್ಟ ಬಾದೆಹುಲ್ಲಿನ ಎಸಳು
ಕಾಡುಮೃಗಗಳು ಕಚ್ಚಾಡಿ ತಿಂದು
ಸೊಕ್ಕಿ ನಿದ್ದೆ ಹೋಗಿದ್ದರ ಅವುಗಳದೇ
ಅಳಿಸದ ಚಿತ್ರ
ಚಲ್ಲಾಡಿದ್ದ ಹೆಣ್ಣೊಂದರ
ಮನುಷ್ಯ ಮಾಂಸದ ಮೊಳೆಗಳು

ನಡೆದು ಹೋದವನ ಕಿವಿಗೆ ಬಿದ್ದ
ಇನ್ನೂ ನಿಲ್ಲದ ಆಲಾಪದ ದನಿ
ಬೆಚ್ಚಿ ಬೆವರಿ ನಿಂತು ನೋಡಿದವನಿಗೆ
ಕಾಲ ನಿರ್ಣಯದ ಬಲೆಯ ತೂತುಗಳು
ಮುಳ್ಳು ತಂತಿ ಹೊತ್ತು ನಡೆಯುತ್ತಿದ್ದವು

ಸಾಕ್ಷಿ ನುಂಗಿದ ಗೆದ್ದಲು ಹುಳುಗಳಿಗೆ
ಹಸಿವು ಬಾಯಾರಿದ ಸಂಕಟ
ನಾಡನಡುವಿನ ನಂಟು
ಕೊರಳು ಚೂರಿಯ ಬಾಯಿಗೆ ಅನ್ನ

ಅಲ್ಲೆಲ್ಲಾ ತಾನೆತ್ತ ಮಗ
ತಾಯಿಗಾಗಿ ಹಂಬಲಿಸಿ
ಏನೂ ಸಿಗದೆ
ನಡೆದ ಹೋದ ನಿಟ್ಟುಸಿರ ಕಣ್ಣೀರು
ಸೀಳಾದಿ ಉದ್ದಕ್ಕೂ ಬಿದ್ದ ಗುರುತು

ಕಂಗೆಟ್ಟ ಗಾಳಿಯಂತೆ
ಮನುಷ್ಯತ್ವ ನನ್ನೊಳಗೂ
ಹೆಪ್ಪುಗಟ್ಟಿದರೂ
ಏರುಪೇರಾದ ತಕ್ಕಡಿಯ ಮುಂದೆ
ಕೈ ಚಲ್ಲಿದ ಗುರಿ.!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT