ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು?

Last Updated 24 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಸುಮಾರು 15 ವರ್ಷಗಳ ಹಿಂದಿನ ಘಟನೆ. ನಾನು ಆಗಿನ್ನೂ ಎರಡನೇ ವರ್ಷದ ಪದವಿ ಓದುತ್ತಿದ್ದೆ. ಸರ್ಕಾರದ ಇಲಾಖೆಯೊಂದರಿಂದ ಪ್ರಕಟವಾಗುವ ಮಾಸ ಪತ್ರಿಕೆಯೊಂದನ್ನು ಕಾಲೇಜು ಗ್ರಂಥಾಲಯದಲ್ಲಿ ತಿರುವಿ ಹಾಕುತ್ತಿದ್ದೆ. ಮೊದಲ ಪುಟದಲ್ಲೇ ಪ್ರಕಟವಾಗಿದ್ದ ಸಂಪಾದಕೀಯ ಓದುತ್ತಿದ್ದಂತೆಯೇ ಇದನ್ನೆಲ್ಲೋ ಹಿಂದೆ ಓದಿದ್ದೆನಲ್ಲ ಎನಿಸಿತು. ಮುಂದಿನ ಒಂದೆರಡು ಸಾಲು ಓದುತ್ತಿದ್ದಂತೆಯೇ ಇದು ಎಲ್ಲೋ ಓದಿದ್ದಲ್ಲ, ನಾನೇ ಬರೆದದ್ದು ಎಂಬುದು ಸ್ಪಷ್ಟವಾಯಿತು. ಅದರ ಹಿಂದಿನ ವರ್ಷವಷ್ಟೇ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನ ಈ ಪತ್ರಿಕೆಯಲ್ಲಿ ಸಂಪಾದಕೀಯವಾಗಿತ್ತು. ಕೊನೆಯಲ್ಲಿ ಐ.ಎ.ಎಸ್ ಅಧಿಕಾರಿಯೊಬ್ಬರ ಸಹಿಯೂ ಇತ್ತು. ಅವರು ಆ ಇಲಾಖೆಯ ಮುಖ್ಯಸ್ಥರಾದ್ದರಿಂದ ಅವರೇ ಆ ಪತ್ರಿಕೆಯ ಸಂಪಾದಕರು. ಚಕಿತನಾಗಿ ಆ ಪುಟದ ಜೆರಾಕ್ಸ್ ಪ್ರತಿ ತೆಗೆದು ನಮ್ಮ ಅಧ್ಯಾಪಕರಿಗೆ ವಿಷಯ ತಿಳಿಸಿದೆ. ಅವರು ಏನು ಹೇಳಿದರೋ ಈಗ ನೆನಪಿಲ್ಲ. ಎಂತೆಂತಹ ಕಳ್ಳರಿದ್ದಾರೆ ಎಂದು ಮೊದಲ ಬಾರಿಗೆ ಅನುಭವಕ್ಕೆ ಬಂದ ಘಟನೆ ಅದು.

ಇತ್ತೀಚೆಗೂ ಇಂಥ ಒಂದೆರಡು ಘಟನೆಗಳು ಗಮನಕ್ಕೆ ಬಂದವು. 2016 ಜೂನ್ 2ರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ನನ್ನ ‘ಹಾಜರಾತಿ ಕೊರತೆಯ ಅಡಕತ್ತರಿ’ ಲೇಖನ ಕಳೆದ ವರ್ಷ ಎರಡು ಪತ್ರಿಕೆಗಳಲ್ಲಿ ಒಂದು ವಾರದ ಅಂತರದಲ್ಲಿ ಅದೇ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಒಂದೂ ಅಕ್ಷರ ಹೆಚ್ಚೂಕಮ್ಮಿ ಇರಲಿಲ್ಲ. ಲೇಖಕ ಮಾತ್ರ ಬೇರೆ. ಈ ಪುಣ್ಯಾತ್ಮ ವಿಶ್ವವಿದ್ಯಾನಿಲಯವೊಂದರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿದ್ದ ವ್ಯಕ್ತಿಯೆಂದು ತಿಳಿಯಿತು. ಪತ್ರಿಕೆಗಳಿಗೆ ಮಾಹಿತಿ ನೀಡಿದೆ. ಬರೆದವ–ನಿಗೂ ಮೇಲ್ ಮಾಡಿ ‘ನೋಡಪ್ಪಾ, ಕೃತಿಸ್ವಾಮ್ಯ ಕಾಯ್ದೆ ಪ್ರಕಾರ ಇದು ಗಂಭೀರ ಅಪರಾಧ. ನಾನು ನಿನ್ನ ಮೇಲೆ ಕೇಸ್ ಹಾಕಬಹುದು. ಆದರೆ ನೀನು ವಿದ್ಯಾರ್ಥಿ, ನಾನು ಅಧ್ಯಾಪಕ. ಹಾಗೆ ಮಾಡಲು ಹೋಗುವುದಿಲ್ಲ. ಇದು ಒಳ್ಳೆಯ ಕೆಲಸ ಅಲ್ಲ ಎಂಬುದನ್ನಾದರೂ ಅರ್ಥ ಮಾಡಿಕೋ. ಸ್ವಂತಿಕೆ ಬೆಳೆಸಿಕೋ. ಹೆಸರು ಮಾಡುವುದಕ್ಕೆ ತುಂಬ ದಾರಿಗಳಿವೆ’ ಎಂದೆ. ಅವನೋ ಆ ಘಟನೆ ಉದ್ದೇಶಪೂರ್ವಕ ಅಲ್ಲವೆಂದೂ ಆಕಸ್ಮಿಕವೆಂದೂ ಸಮಜಾಯಿಷಿ ನೀಡಿ, ಕ್ಷಮೆ ಕೋರಿದ. ಅವು ನಂಬುವಂತೆ ಇರಲಿಲ್ಲವಾದರೂ, ಮುಂದುವರಿಸುವ ಉದ್ದೇಶ ನನಗೆ ಇರಲಿಲ್ಲ.

ಕೆಲದಿನಗಳ ಹಿಂದೆ ಇಂಟರ್ನೆಟ್ ಜಾಲಾಡು– ತ್ತಿದ್ದಾಗ ಮತ್ತೆ ನಾನೇ ಬರೆದ ಸಾಲುಗಳು ಕಣ್ಣಿಗೆ ಬಿದ್ದವು. ಕನ್ನಡ ಪತ್ರಿಕೆಯೊಂದರ ಆನ್‍ಲೈನ್ ಆವೃತ್ತಿಯ ಲೇಖನದ ಲಿಂಕ್ ಅದು. ಪ್ರಕಟವಾಗಿ ಎರಡು ಮೂರು ತಿಂಗಳಾಗಿತ್ತು. ಆನ್‍ಲೈನ್ ಇದ್ದುದರಿಂದ ಈಗ ಗಮನಕ್ಕೆ ಬಂತು. ಪೂರ್ತಿ ಓದಿದರೆ ಮುಕ್ಕಾಲು ಪಾಲು ಲೇಖನ ನಾನು 2015ರಲ್ಲಿ ಪತ್ರಿಕೆಯೊಂದಕ್ಕಾಗಿ ಬರೆದ ಅಂಕಣವೊಂದರ ಯಥಾ ನಕಲು ಆಗಿತ್ತು. ಕೊನೆಯ ಎರಡು ಮೂರು ಪ್ಯಾರಾಗಳು ಮಾತ್ರ ಬೇರೆ ಇದ್ದವು. ನಡುನಡುವೆ ಒಂದೆರಡು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿತ್ತು. ನಾನು ಫೇಸ್‍ಬುಕ್ಕಿನಲ್ಲಿ ಎರಡು ಮಾತು ಬರೆದು ಸುಮ್ಮನಾದೆ.

ಕೋರ್ಟ್ ಮೆಟ್ಟಿಲೇರಿದ ಕೂಡಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದಿಲ್ಲ. ಕೃತಿಚೌರ್ಯ ಇಂದು ನಿನ್ನೆಯ ವಿಷಯ ಅಲ್ಲ. ಕ್ರಿ.ಶ. 1 ಮತ್ತು 2ನೇ ಶತಮಾನದ ನಡುವೆ ಬದುಕಿದ್ದ ಮಾರ್ಷಲ್ ಕವಿ ತನ್ನ ಸಾಲುಗಳನ್ನು ಇನ್ನೊಬ್ಬ ಕವಿ ಅಪಹರಿಸಿದ್ದಾನೆಂದು ದೂರಿದ್ದಿದೆ. ಆಮೇಲಿನ ನೂರಾರು ವರ್ಷಗಳಲ್ಲಿ ಕಲೆ- ಸಾಹಿತ್ಯದ ಇತಿಹಾಸದಲ್ಲಿ ಕೇಳಿಬಂದ ಕೃತಿಚೌರ್ಯದ ವಾಗ್ವಾದಗಳಿಗಂತೂ ಲೆಕ್ಕವೇ ಇಲ್ಲ. ಸೃಜನಶೀಲಯ ರಚನೆಗಳಲ್ಲಿ ಯಾವುದು ಮೂಲ, ಯಾವುದು ಖೋಟಾ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ. ಅದರಲ್ಲೂ ಮುಕ್ತ ಬಳಕೆಯ ಹಕ್ಕುಗಳ ಚಳವಳಿ (ಫ್ರೀ ಬುಕ್ ಕಲ್ಚರ್) ವಿಸ್ತಾರಗೊಳ್ಳುತ್ತಿರುವ ಈ ಕಾಲದಲ್ಲಿ ‘ಬೌದ್ಧಿಕ ಆಸ್ತಿ’, ‘ಹಕ್ಕುಸ್ವಾಮ್ಯ’ ಮುಂತಾದ ಪದಗಳೂ ಗೊಂದಲಮಯ ಅನ್ನಿಸುವುದುಂಟು. ಹಾಗಂತ ಇನ್ನೊಬ್ಬ ದುಡಿದು ಬೆಳೆದ ಫಸಲನ್ನು ತಮ್ಮದೇ ಎಂದು ಉಂಡು ಬದುಕುವ ಮಂದಿಯನ್ನು ಸಮಾಜ ಎಚ್ಚರದಿಂದ ಗಮನಿಸುವ ಅಗತ್ಯವಂತೂ ಇದ್ದೇ ಇದೆ.

ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಂಶೋಧನಾ ವಲಯದಲ್ಲಿ ಕೃತಿಚೌರ್ಯವೆಂಬ ಅಪ್ರಾಮಾಣಿಕತೆ ಆಳವಾಗಿ ಬೇರುಬಿಟ್ಟಿದೆ. ಅದರಲ್ಲೂ ಭಾರತದ ಸಂಶೋಧನ ಕ್ಷೇತ್ರ ಪ್ರಪಂಚದಲ್ಲೇ ಕೃತಿಚೌರ್ಯಕ್ಕೆ ಕುಪ್ರಸಿದ್ಧವಾಗಿದೆ. ‘ಜನಸಾಮಾನ್ಯರು ಕದ್ದರೆ ಕೃತಿಚೌರ್ಯ, ಪ್ರಾಧ್ಯಾಪಕರು ಕದ್ದರೆ ಸಂಶೋಧನೆ’ ಎಂಬಷ್ಟರ ಮಟ್ಟಿಗೆ ಭಾರತದ ಸಂಶೋಧನಾ ಕ್ಷೇತ್ರ ನಗೆಪಾಟಲಿಗೀಡಾಗಿದೆ. ಇನ್ನೊಬ್ಬರ ಸಂಶೋಧನ ಪ್ರಬಂಧವನ್ನೇ ಇಡಿಯಾಗಿ ಕದ್ದು ಪಿಎಚ್‍.ಡಿ ಗಿಟ್ಟಿಸಿಕೊಂಡ ಮಹಾನುಭಾವರಿದ್ದಾರೆ. ಬೇರೊಬ್ಬರ ಸಂಶೋಧನ ಫಲಿತಾಂಶಗಳನ್ನು ತಮ್ಮದೇ ಎಂದು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿ ರಾತೋರಾತ್ರಿ ಪ್ರಸಿದ್ಧರಾಗಿ ಅದನ್ನು ಸಮರ್ಥಿಸಿಕೊಂಡ ನಿರ್ಲಜ್ಜರಿದ್ದಾರೆ. ರಾಷ್ಟ್ರೀಯ- ಅಂತರರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ–ಗಳಲ್ಲಿ ಮಂಡನೆಯಾಗುವ ಪ್ರಬಂಧಗಳಲ್ಲಿ ಸ್ವಂತದ್ದಲ್ಲದ ಹೂರಣವೆಷ್ಟೋ ಲೆಕ್ಕಕ್ಕಿಲ್ಲ. ಈಗಂತೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಸಂಬಳ ಪೀಕುವ ಕೆಲವು ಅಧ್ಯಾಪಕರನ್ನು ವಿಷಯ ಪರಿಣಿತರು ಎನ್ನುವುದಕ್ಕಿಂತಲೂ ‘ವಿಕಿಪೀಡಿಯ ತಜ್ಞ’ರೆಂದು ಕರೆಯುವುದೇ ಹೆಚ್ಚು ಸೂಕ್ತ.

ನೈನಿತಾಲ್‍ನ ಕುಮಾಲ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಬಿ.ಎಸ್. ರಜಪೂತ್ ಕೃತಿಚೌರ್ಯದ ಆರೋಪದಿಂದಾಗಿ 2002ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಆರಂಭದಲ್ಲಿ ಅವರು ಆರೋಪ ನಿರಾಕರಿಸಿದರೂ ಜಗತ್ತಿನ ಹಲವು ಪ್ರಸಿದ್ಧ ಸಂಶೋಧಕರು ಇದನ್ನು ದೃಢಪಡಿಸಿ ರಾಷ್ಟ್ರಪತಿಗೆ ಪತ್ರ ಬರೆದ ಮೇಲೆ ಅವರು ಕೃತಿಚೌರ್ಯ ಒಪ್ಪಿಕೊಂಡು ರಾಜೀನಾಮೆ ನೀಡಿದರು.

2016ರಲ್ಲಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಚಂದ್ರಾ ಕೃಷ್ಣಮೂರ್ತಿಯವರೂ ಇಂತಹದೇ ಆರೋಪ ಎದುರಾದ್ದರಿಂದ ತಮ್ಮ ಹುದ್ದೆ ತ್ಯಜಿಸಬೇಕಾಯಿತು. ಅವರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ದೀರ್ಘ ಹೋರಾಟ ನಡೆಸಿದ್ದರು. ಕೊನೆಗೂ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಅವರ ವಜಾಕ್ಕೆ ಆದೇಶಿಸಿದ ಬಳಿಕ ತಾವೇ ರಾಜೀನಾಮೆ ನೀಡಿದರು.

ಸಂಶೋಧಕರನ್ನೇಕೆ, ನ್ಯಾಯಾಧೀಶರನ್ನೂ ಕೃತಿಚೌರ್ಯದ ಆರೋಪ ಹೊರತು ಮಾಡಿಲ್ಲ ಎಂಬುದನ್ನು ಗಮನಿಸಬೇಕು. 2015ರಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೊಂದು ನೀಡಿದ ತೀರ್ಪಿನಲ್ಲೇ ಮೂಲವನ್ನು ಉಲ್ಲೇಖಿಸದೆ ಶ್ವೇತ್ರಶ್ರೀ ಮಜುಂದಾರ್ ಮತ್ತು ಈಶಾನ್ ಘೋಷ್ ಎಂಬುವರ ಪ್ರಬಂಧದ 33 ಪ್ಯಾರಾಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು. ಕೊನೆಗೆ ಆ ತೀರ್ಪು ನೀಡಿದ ನ್ಯಾಯಾಧೀಶರು ಆಗಿರುವ ಪ್ರಮಾದ ಒಪ್ಪಿಕೊಂಡು ‘ಇದು ಇಂಟರ್ನಿಯೊಬ್ಬರು ಮಾಡಿದ ತಪ್ಪಿನಿಂದಾದ ಎಡವಟ್ಟು’ ಎಂದು ವಿಷಾದ ವ್ಯಕ್ತಪಡಿಸಿದಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು.

ಅಕಡೆಮಿಕ್ ವಲಯವಲ್ಲದೆ ಕಲೆ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲೂ ಕೃತಿಚೌರ್ಯದ ಕುರಿತ ಗುರುತರ ಆರೋಪಗಳು ಕೇಳಿಬರುತ್ತಲೇ ಇವೆ. 2011ರ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ‘ಬ್ಯಾರಿ’ ಸಿನಿಮಾ ತಮ್ಮ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಕಲು ಎಂದು ಸಾರಾ ಅಬೂಬಕ್ಕರ್ ಆರೋಪಿಸಿದರು. ಚೇತನ್ ಭಗತ್ ಅವರು ತಮ್ಮ ‘ಒನ್ ಇಂಡಿಯನ್ ಗರ್ಲ್’ ಕೃತಿಯಲ್ಲಿ ತಮ್ಮ ‘ಲೈಫ್, ಓಡ್ಸ್ & ಎಂಡ್ಸ್’ ಪುಸ್ತಕದ ಪಾತ್ರ, ಸ್ಥಳ ಹಾಗೂ ಭಾವನಾತ್ಮಕ ಹರಿವನ್ನು ಕದ್ದಿದ್ದಾರೆ ಎಂದು ಕಳೆದ ವರ್ಷ ಅನ್ವಿತಾ ಬಾಜಪಯೀ ಆರೋಪಿಸಿದರು. ಸ್ವತಃ ಚೇತನ್ ಭಗತ್ ಅವರು ರಾಜ್‍ಕುಮಾರ್ ಹಿರಾನಿ ಅವರ ‘ತ್ರೀ ಈಡಿಯಟ್ಸ್’ ಸಿನಿಮಾ ತಮ್ಮ ‘ಫೈವ್ ಪಾಯಿಂಟ್ಸ್ ಸಮ್‍ವನ್’ ಕೃತಿಯ ರೂಪಾಂತರದಂತಿದೆ ಎಂದು 2009ರಲ್ಲಿ ಆರೋಪಿಸಿದ್ದರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ‘ದಿ ಹಿಂದೂ’ ಪತ್ರಿಕೆಯಲ್ಲಿ 2015ರಲ್ಲಿ ಪ್ರಕಟಿಸಿದ ‘ಫ್ರಂ ವೆಲ್‍ಫೇರ್ ಟು ಪ್ಯಾಟರ್ನಲಿಸಂ’ ಲೇಖನವು ಅದೇ ಪತ್ರಿಕೆಯಲ್ಲಿ ಪ್ರಕಟವಾದ ಜಿ. ಸಂಪತ್ ಅವರ ‘ಮಿ. ಮೋದೀಸ್ ವಾರ್ ಆನ್ ವೆಲ್‍ಫೇರ್’ ಲೇಖನದ ಅನೇಕ ಪ್ಯಾರಾಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಯಿತು. ಇದನ್ನು ಸ್ವತಃ ಮೊಯಿಲಿ ಆಮೇಲೆ ಒಪ್ಪಿಕೊಂಡು, ವಿಷಾದಿಸಿದರು. ಅಮೀರ್ ಖಾನ್ ಅವರ ‘ಪಿಕೆ’, ರಜನೀಕಾಂತ್ ನಟನೆಯ ‘ಲಿಂಗಾ’, ‘ಕಾಳಕರಿಕಾಳನ್’, ಉಪೇಂದ್ರ ನಟನೆಯ ‘ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳ ವಿರುದ್ಧವೂ ಕೃತಿಚೌರ್ಯದ ಆರೋಪಗಳು ಕೇಳಿಬಂದಿವೆ.

ಕೃತಿಸ್ವಾಮ್ಯ ಕಾಯ್ದೆ 1957ರ ಹೊರತಾಗಿ ಕೃತಿಚೌರ್ಯವನ್ನು ತಡೆಗಟ್ಟುವ ಯಾವುದೇ ಕಾನೂನು ಭಾರತದಲ್ಲಿಲ್ಲ. ವಾಸ್ತವವಾಗಿ ಕೃತಿಸ್ವಾಮ್ಯ ಹಾಗೂ ಕೃತಿಚೌರ್ಯದ ತಡೆಗಟ್ಟುವಿಕೆ ಭಿನ್ನ ವಿಷಯಗಳು. ಕೃತಿಸ್ವಾಮ್ಯ ಕಾಯ್ದೆ ಕೃತಿಸ್ವಾಮ್ಯದ ಉಲ್ಲಂಘನೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆಯೇ ಹೊರತು ಕೃತಿಚೌರ್ಯವನ್ನು ವ್ಯಾಖ್ಯಾನಿಸುವುದಿಲ್ಲ. ಕಾಯ್ದೆಯ ಸೆಕ್ಷನ್ 63ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳಿನಿಂದ 3 ವರ್ಷದವರೆಗೆ ಜೈಲುಶಿಕ್ಷೆ ಹಾಗೂ ₹ 50,000ದಿಂದ ₹ 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಕಾನೂನು ನಿಯಮಗಳಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿದ್ದರೆ ಜಗತ್ತು ಯಾವತ್ತೋ ಕಲ್ಯಾಣರಾಜ್ಯವಾಗುತ್ತಿತ್ತು. ಆತ್ಮಸಾಕ್ಷಿಗಿಂತ ಮಿಗಿಲಾದ ಕಾನೂನು ಇದೆಯೇ?

ಕಳವು– ಕಡಿವಾಣ
ಅಕಡೆಮಿಕ್ ಕ್ಷೇತ್ರದ ಕೃತಿಚೌರ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂಬ ಕೂಗು ಇತ್ತೀಚೆಗೆ ಜೋರಾಗಿ ಕೇಳಿಬರುತ್ತಿದೆ. ಸಂಶೋಧನಾ ವಲಯದ ಕೃತಿಚೌರ್ಯ ತಡೆಗಟ್ಟಲು ಯು.ಜಿ.ಸಿ ಇತ್ತೀಚೆಗೆ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಯಾವುದೇ ಪಿಎಚ್‍.ಡಿ ಪ್ರಬಂಧ ಸ್ವೀಕರಿಸುವ ಮೊದಲು ಕೃತಿಚೌರ್ಯ ಪರಿಶೀಲನೆ ಕಡ್ಡಾಯಗೊಳಿಸಿದೆ. ಪರಿಶೀಲನೆ ವೇಳೆಗೆ ಶೇಕಡ 10-40ರಷ್ಟು ಕೃತಿಚೌರ್ಯ ಕಂಡುಬಂದರೆ ಸಂಶೋಧನಾರ್ಥಿಯು 6 ತಿಂಗಳೊಳಗೆ ಪ್ರಬಂಧವನ್ನು ಮರುಸಲ್ಲಿಸಬೇಕಾಗುತ್ತದೆ. ಶೇಕಡ 40-60ರಷ್ಟು ಕೃತಿಚೌರ್ಯವಿದ್ದರೆ ಅಭ್ಯರ್ಥಿಯು ಒಂದು ವರ್ಷ ಡಿಬಾರ್ ಆಗಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿದ್ದರೆ ನೋಂದಣಿಯನ್ನೇ ರದ್ದು ಮಾಡಬಹುದು. ಕೃತಿಚೌರ್ಯ ಸಾಬೀತಾದರೆ ಮಾರ್ಗದರ್ಶಕ ಪ್ರಾಧ್ಯಾಪಕರ ವೇತನ ಬಡ್ತಿಗೆ ಕತ್ತರಿ ಬೀಳಲಿದೆ. ಶೇಕಡ 60ಕ್ಕಿಂತಲೂ ಹೆಚ್ಚು ಕೃತಿಚೌರ್ಯ ಕಂಡುಬಂದರೆ ಅವರನ್ನು ಅಮಾನತುಗೊಳಿಸುವ ಇಲ್ಲವೇ ಕೆಲಸದಿಂದ ವಜಾ ಮಾಡುವ ಅವಕಾಶ ನಿಯಮದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT