ಸೋಮವಾರ, ಆಗಸ್ಟ್ 19, 2019
24 °C

ಕಡಲ ಮೀನು

Published:
Updated:
Prajavani

'ಶಾಲೆಯ ಗಂಟೆ ಹೊಡದಂತೆ ಕರಾರುವಕ್ಕಾಗಿ ಹತ್ತು ಗಂಟೆಗೇ ಮನೆ ಬಾಗಿಲು ತಲುಪಿ ಮೀನಿನ ಬುಟ್ಟಿ ಕೆಳಗಿಟ್ಟು, ಉಸ್ಸಪ್ಪ ಅಂತ ಜಗಲಿ ಮೇಲೆ ಕೂತು, ಒಂದೆರಡು ನಿಮಿಷ ಊರ ಸಮಾಚಾರ ಮಾತನಾಡಿ, ಕೊನೆಗೆ ಒಂದಿಷ್ಟು ವೇದಾಂತ ಹೇಳಿ, ಮಾರಾಟ ಮುಗಿಸಿ ಹೋಗಿಯಾಗಬೇಕಿತ್ತು ಪುಷ್ಪಕ್ಕ. ಇನ್ನೂ ಬಂದಿಲ್ಲ ಎಂದಮೇಲೆ ಬರುವುದೇ ಇಲ್ಲವೇನೋ' ಎಂದು ಗೊಣಗಿಕೊಳ್ಳುತ್ತಾ ಶತಪಥ ಹಾಕುತ್ತಿದ್ದ ಸಮಂತ. ಭಾನುವಾರ ಇವನಿರುತ್ತಾನೆಂದೇ ಅವಳು ಬರುವುದಿಲ್ಲ ಎಂಬುವುದು ಈ ಊರಿಗೆ ಬಂದು ಆರು ತಿಂಗಳಾದರೂ ಅವನಿಗೆ ಅರ್ಥವಾಗಿರಲಿಲ್ಲ. ಪುಷ್ಪಕ್ಕಳಿಂದ ಮೀನು ಕೊಳ್ಳುವುದೆಂದರೆ ಒಂದು ರೀತಿಯ ಆತ್ಮಸಂತೃಪ್ತಿ ಅವನಿಗೆ. ಅದು ಅವಳ ಮೀನುಗಳು ತಾಜಾ ಇರುತ್ತವೆ ಎನ್ನುವ ಕಾರಣಕ್ಕಾಗಿಯೋ ಅಥವಾ ಅವಳ ಗಂಡ ಅವನು ಕೆಲಸ ಮಾಡುವ ಸಂಶೋಧನಾ ಕೇಂದ್ರದಲ್ಲಿ ಕಸಗುಡಿಸುತ್ತಾನೆ ಎನ್ನುವ ಕರುಣೆಗೋ ಎನ್ನುವುದನ್ನು ಈ ತನಕ ಅವನಿಂದ ನಿರ್ಧರಿಸಲಾಗಿಲ್ಲ.

‘ಇಲ್ಲಿ ಹೀಗೆ ಕಾಲು ಚಾಚಿ ಅವಳನ್ನೇ ಕಾಯುತ್ತಾ ಕೂತರೆ ಕೆಲಸ ಕೆಡುತ್ತದೆ. ರಾತ್ರಿ ಊಟಕ್ಕೆ ಬರುತ್ತೇವೆ ಎಂದಿರುವ ಬೆಂಗಳೂರಿನ ಸ್ನೇಹಿತರಿಗೆ ಸಿಗಡಿ ಬಿರಿಯಾನಿ ಮತ್ತು ಅಂಜಲ್ ಫ್ರೈ ಬೇಕೇಬೇಕು. ಪುಷ್ಪಕ್ಕ ಬರುತ್ತಾಳೋ ಇಲ್ಲವೋ, ತಾಜಾ ಮೀನು ಮಾರ್ಕೆಟ್‌ನಲ್ಲಾದರೂ ಸಿಗುತ್ತಾ ನೋಡೋಣ’ ಅಂದುಕೊಂಡು ಅಂಗಳದಲ್ಲಿ ಬೋರಲಾಗಿ ಬಿದ್ದಿದ್ದ ಚಪ್ಪಲಿ ಮೆಟ್ಟಿ ಹೊರಗಡಿಯಿಟ್ಟ.

ನೆತ್ತಿ ಸುಡುವ ಬಿಸಿಲು, ನಡು ಮಧ್ಯಾಹ್ನ ಕಾರಣವೇ ಇಲ್ಲದೆ ಮೊರೆಯುವ ಕಡಲು, ಆಗೊಮ್ಮೆ ಈಗೊಮ್ಮೆ ಇಡೀ ದೇಹವನ್ನು ಬಳಸಿ ಅಂತರ್ಧಾನವಾಗುವ ಬಿಸಿಗಾಳಿ, ಸಾಲದ್ದಕ್ಕೆ ಚಪ್ಪಲಿ ಮೀರಿ ಹೊರಬರುವ ಹಿಂಗಾಲನ್ನು ಸುಡುತ್ತಿರುವ ಟಾರು ರಸ್ತೆ. ಮೊನ್ನೆಯಷ್ಟೇ ಕೊಂಡಿದ್ದ ಚಪ್ಪಲಿ ಅದು. ಗಡಿಬಿಡಿಯಲ್ಲಿ  ಅದರ ಸೈಜ್ ನೋಡಲು ಮರೆತಿದ್ದ. ಮರುದಿನ ಆಫೀಸಿಗೆ ಹೋಗುವಾಗಲಷ್ಟೇ ತಾನು ಮಾಮೂಲಾಗಿ ಕೊಳ್ಳುವ ಚಪ್ಪಲಿಗಿಂತ ಚಿಕ್ಕದು ಎನ್ನುವುದು ಗೊತ್ತಾಗಿತ್ತು. ಸಂಜೆ ಬೇರೆ ಕೊಂಡರಾಯಿತು ಎಂದು ಅದನ್ನೇ ಧರಿಸಿಕೊಂಡು ಹೋಗಿದ್ದ. ಆದರೆ ಕಳೆದ ಒಂದು ವಾರದಿಂದಲೂ ಕೇಂದ್ರದಲ್ಲಿ ವಿಪರೀತ ಕೆಲಸ.

ಶಾಶ್ವತ ಯೌವ್ವನ ಪಡೆದುಕೊಳ್ಳುವ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ರಷ್ಯಾದ ವಿಜ್ಞಾನಿಗಳ ತಂಡವೊಂದು ತನ್ನ ಸಂಶೋಧನೆಗೆ ಭಾರತ ಮತ್ತು ಶ್ರೀಲಂಕಾ ಸರಕಾರದ, ವಿಜ್ಞಾನಿಗಳ ನೆರವು ಕೇಳಿತ್ತು. ವಿಚಿತ್ರ ಗುಣಲಕ್ಷಣಗಳುಳ್ಳ ಮೀನಿನ ಅಸ್ಪಷ್ಟ ಚಿತ್ರಗಳು ಹಾಗೂ ಅದರ ಗುಣ, ಚರ್ಯೆ, ರೂಪಗಳನ್ನು ವಿವರಿಸಿದ ಒಂದು ದೀರ್ಘ ಡಾಕ್ಯುಮೆಂಟ್ ಮಾಡಿ ಎರಡೂ ದೇಶಗಳ ವಿಜ್ಞಾನ ಸಂಸ್ಥೆಗಳಿಗೆ ಕಳುಹಿಸಿತ್ತು. ಸಮಂತ ಶತಾಯಗತಾಯ ಆ ಮೀನಿನ ಜಾಡು ಹಿಡಿಯಲೇಬೇಕೆಂದು ನಿರ್ಧರಿಸಿದ್ದ. ಪರಿಣಾಮ, ರಾತ್ರಿ ಹಗಲುಗಳ ವ್ಯತ್ಯಾಸವೇ ಗೊತ್ತಾಗದಷ್ಟು ಕೆಲಸ ಅವನ ಹೆಗಲೇರಿತ್ತು.

ಗೆಳೆಯರು ಇವತ್ತು ಭೇಟಿಯಾಗಲು ಬರುವುದಿಲ್ಲವೆಂದಿದ್ದರೆ ಇವತ್ತೂ ಅವನು ಸಂಶೋಧನಾ ಕೇಂದ್ರದಲ್ಲೇ ಇರುತ್ತಿದ್ದ. ‘ಪುಷ್ಪಕ್ಕ ಮೀನು ತಂದಿದ್ದರೆ ಕನಿಷ್ಠ ಮನೆಯಲ್ಲಿ ಕೂತಾದರೂ ಅಧ್ಯಯನ ಮುಂದುವರೆಸಬಹುದಿತ್ತು’ ಅಂದುಕೊಳ್ಳುತ್ತಿರುವಾಗಲೇ ಕಾಲಿಗೆ ಚಳ್ಳೆಂದು ಏನೋ ಚುಚ್ಚಿದಂತಾಯಿತು. ಹಿಂಗಾಲಲ್ಲಿ ಹುಟ್ಟಿದ ನೋವು ದೇಹವಿಡೀ ಹರಿದು ಮೆದುಳಿನಲ್ಲಿ ಸ್ಥಿರವಾಯಿತು. ಉಂಗುಷ್ಟ ಕಿತ್ತು ಬಂದ ಚಪ್ಪಲಿ ಇನ್ನು ಎಡಗಾಲಿಗೆ ಆಸರೆಯಾಗಲಾರೆ ಎಂದು ಮುಷ್ಕರ ಹೂಡಿತ್ತು. ಏನು ಮಾಡಬೇಕೆಂದು ತೋಚದ ಸಮಂತ ಅಲ್ಲೇ ಪಕ್ಕದಲ್ಲಿದ್ದ ಮೈಲುಗಲ್ಲಿನ ಮೇಲೆ ಕೂತು ಚುಚ್ಚಿದ್ದ ಮುಳ್ಳು ಕಿತ್ತೆಸೆದ. ಬಳಕ್ಕನೆ ರಕ್ತ ಚಿಮ್ಮಿತು. ಅದರ ಬಗ್ಗೆ ಕಿಂಚಿತ್ತೂ ಯೋಚಿಸದ ಅವನ ಮೆದುಳು ಅಲ್ಲಿಂದ ಮಾರ್ಕೆಟ್‌ಗೆ ಇರುವ ದೂರವನ್ನೂ, ಅಷ್ಟು ದೂರ ಕ್ರಮಿಸಲು ತೆಗೆದುಕೊಳ್ಳುವ ಸಮಯವನ್ನೂ ಲೆಕ್ಕ ಹಾಕುತ್ತಿತ್ತು. ಹಾಗೆ ಲೆಕ್ಕ ಹಾಕುತ್ತಿರುವವನು ಒಮ್ಮೆ ತಲೆಕೊಡವಿ ಅಸ್ವಸ್ಥನಾಗಿ ಕುಳಿತುಕೊಂಡ.

ಆ ಕಡೆ ನೋಡಿದರೆ ಉತ್ತರ ಭಾರತೀಯನಂತೆ ಕಾಣುತ್ತಿದ್ದ ಯುವಕನೋರ್ವ ತನ್ನ ಸುತ್ತ ಒಂದಿಷ್ಟು ಜನರನ್ನು ಸೇರಿಸಿ ದೇವರ ಬಗ್ಗೆ, ಸೃಷ್ಟಿಗಳಿಗೆ ಅವನಡೆಗೆ ಇರಬೇಕಾಗಿರುವ ಬಾಧ್ಯತೆಗಳ ಬಗ್ಗೆ, ಐಹಿಕ ಬದುಕಿನ ನಶ್ವರತೆಯ ಬಗ್ಗೆ ಭಕ್ತ ಪರವಶನಾಗಿ ಉಪನ್ಯಾಸ ನೀಡುತ್ತಿದ್ದ. ‘ದೇವರ ನಿರ್ಧಾರ ಮೀರಿ ಯೌವ್ವನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವುದಕ್ಕೇ ನನಗವನು ಈ ಶಿಕ್ಷೆ ಕೊಟ್ಟು ಬಿಸಿಲಲ್ಲಿ ಕೂರುವಂತೆ ಮಾಡಿದನೇ?’ ತನ್ನ ಯೋಚನೆಗೆ ತನಗೇ ನಗು ಬಂತು ಸಮಂತನಿಗೆ.

ಅಷ್ಟರಲ್ಲಿ ಭಾರ ಬುಟ್ಟಿ ಹೊತ್ತಿದ್ದ ಹೆಂಗಸೊಬ್ಬಳು ತಾನು ಕೂತಿರುವತ್ತ ನಡೆದು ಬರುವುದು ಕಾಣಿಸಿತು. ‘ಈ ಬಿಸಿಲಲ್ಲಿ ಪ್ರವಚನ ಕೇಳಲು ಇಷ್ಟು ದೂರ ಬರುತ್ತಿದ್ದಾಳೇನೋ. ಅನಾಯಾಸವಾಗಿ ಕಿವಿಗೆ ಬೀಳುತ್ತಿರುವ ಪ್ರವಚನದ ಕಡೆಗೆ ಗಮನ ಕೊಡದೆ ಕಡಲನ್ನೂ, ಮೀನನ್ನೂ, ಯೌವ್ವನವನ್ನೂ ಧ್ಯಾನಿಸುತ್ತಿರುವ ನನ್ನ ಮೇಲೆ ಆ ದೇವರಿಗೆ ಎಷ್ಟು ಸಿಟ್ಟಿರಬಹುದೋ’ ಎಂಬ ಮತ್ತೊಂದು ಯೋಚನೆ ಕಾಡಿ ಅವನ ನಗು ಮತ್ತೂ ದೊಡ್ಡದಾಯಿತು. ಆದರೆ ಆಕೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಹೊರಲಾಗದೆ ಹೊತ್ತುಕೊಂಡಿದ್ದ ಬುಟ್ಟಿಯ ಭಾರ, ಅವಳ ನಡಿಗೆಯಲ್ಲಿದ್ದ ಧಾವಂತ ಯಾವುದೋ ಪರಿಚಿತರನ್ನು ಹೋಲುತ್ತಿದೆ ಅಂತ ಅನ್ನಿಸುವಂತೆ ಮಾಡಿತು. ಕಣ್ಣುಗಳನ್ನು ಕಿರಿದುಗೊಳಿಸಿ  ಸೂಕ್ಷ್ಮವಾಗಿ ನೋಡಿದ.

‘ಪುಷ್ಪಕ್ಕಾ’ ಪುಟ್ಟ ಸಂತಸದ ಚೀತ್ಕಾರವೊಂದು ಅವನ ಬಾಯಿಯಿಂದ ಹೊರಬಿತ್ತು. ಕಿತ್ತುಹೋದ ಚಪ್ಪಲಿ, ಒಸರುತ್ತಿರುವ ರಕ್ತ, ಉತ್ತರ ಭಾರತೀಯ, ಅವನ ಪ್ರವಚನ, ಧರ್ಮ, ದೇವರು, ವ್ಯಂಗ್ಯ, ನಗು ಎಲ್ಲ ಆ ಕ್ಷಣದಲ್ಲಿ ಮರೆತುಹೋಗಿ ಇಡೀ ವಿಶ್ವವೇ ಅವಳ ಸುತ್ತ ಭ್ರಮಿಸುತ್ತಿದೆ ಅಂತ ಅನ್ನಿಸಿತು. ಓಡಿ ಹೋಗಿ ಅವಳನ್ನು ಅಡ್ಡಗಟ್ಟಿ ಏದುಸಿರು ಬಿಡುತ್ತಾ ‘ಮೀನು ಬೇಕಿತ್ತು’ ಅಂದ.

 ಚಪ್ಪಲಿ ಇಲ್ಲದ ಅವನ ಬರಿಗಾಲು, ಅಲ್ಲಲ್ಲಿ ರಕ್ತದ ಕಲೆಯಾಗಿರುವ ಪ್ಯಾಂಟ್, ಉಸಿರಿನ ವೇಗ, ಕೆದರಿದ ತಲೆಗೂದಲು, ನಿದ್ರೆಯಿಲ್ಲದೆ ಊದಿಕೊಂಡ ಕಣ್ಣುಗಳು ಒಂದು ರೀತಿ ಅನುಮಾನದಿಂದಲೇ ಬುಟ್ಟಿ ಕೆಳಗಿಟ್ಟ ಪುಷ್ಪಕ್ಕ ‘ನಿಮಗೆ ಯಾವ ಮೀನು ಬೇಕು ನೋಡಿ?’ ಎಂದಳು. ಸಮಂತ ಬುಟ್ಟಿಗೆ ಕೈಹಾಕಿ ಪರೀಕ್ಷಿಸುತ್ತಿದ್ದಂತೆ ಸಿಗಡಿಗಳ ಮಧ್ಯೆ ಸಣ್ಣದೊಂದು ಮೀನು ಸಿಕ್ಕಿಕೊಂಡು ಇನ್ನೂ ಜೀವ ಉಳಿಸಿಕೊಂಡು ಒದ್ದಾಡುತ್ತಿರುವಂತೆ ಕಾಣಿಸಿತು. ಸಿಗಡಿಗಳ ಮಧ್ಯೆ ಇದ್ದ ಅದನ್ನು ಬಿಡಿಸಿಕೊಂಡು ಸೂಕ್ಷ್ಮವಾಗಿ ಪರಿಶೀಲಿಸತೊಡಗಿದ.

‘ಅದನ್ನು ಹೊರಗೆಸೆದು ಬಿಡಿ ಧಣಿ, ಕಳೆದ ಕೆಲವು ದಿನಗಳಿಂದಲೂ ಸಿಗಡಿಯ ಜೊತೆ ಜೊತೆಗೆ ಈ ಮೀನು ಬಲೆ ಸೇರುತ್ತಿದೆ. ಇದರ ಕೆಟ್ಟ ನೆಸೀಬಿನಿಂದಾಗಿ ಬಲೆ ಎಷ್ಟು ಕಡೆ ಹರಿದಿದೆ ಗೊತ್ತಾ...?’ ಇಷ್ಟೊಳ್ಳೆಯ ಮೀನುಗಳ ಮಧ್ಯೆ ಹೆಸರೇ ಗೊತ್ತಿಲ್ಲದ, ನೋಡುವುದಕ್ಕೆ ಸುಂದರವಾಗಿಯೂ ಇಲ್ಲದ ಮೀನೊಂದು ಸೇರಿಕೊಂಡಿರುವ ಬಗ್ಗೆ ಅವಳಿಗೆ ಇರುವ ಅಸಹನೆ ಅವಳ ಮಾತಲ್ಲಿ ಎದ್ದು ಕಾಣುತ್ತಿತ್ತು. ಆದರೆ ಅವಳ ಮಾತಿನ ಕಡೆ ಗಮನ ನೀಡದ ಸಮಂತನ ಕಣ್ಣುಗಳು ಮತ್ತಷ್ಟು ಸೂಕ್ಷ್ಮವಾದವು.

ಕಣ್ಣಿನ ಪಕ್ಕದಲ್ಲಿ ಪಾಪೆಯಂತೆ ಹರಡಿಕೊಂಡಿರುವ ಜಿಡ್ಡು ಜಿಡ್ಡಾದ ಕಪ್ಪು ಪಾಚಿಯಂಥ ಪದಾರ್ಥ, ಕಿವಿರಿನ ಹತ್ತಿರದಲ್ಲಿ ತಣ್ಣಗೆ ಹೊಳೆಯುತ್ತಿರುವ ತಿಳಿ ಹಸಿರು ಬಣ್ಣ, ಹಳದಿ ಕಣ್ಣು, ಅರ್ಧ ಕಚ್ಚಿ ಹಾಗೆಯೇ ಬಿಟ್ಟುಬಿಟ್ಟಂತೆ ಕಾಣುವ ಈಜು ರೆಕ್ಕೆ, ಪಾರದರ್ಶಕ ಬಾಲ... ನೋಡ ನೋಡುತ್ತಿದ್ದಂತೆ ಅವನ ಕಣ್ಣ ಮುಂದೆ ರಷ್ಯನ್ ವಿಜ್ಞಾನ, ಬಿರುದು ಪಾರಿತೋಷಕ, ಎಲ್ಲಕ್ಕಿಂತ ಹೆಚ್ಚಾಗಿ ಮುಪ್ಪೇ ಇಲ್ಲದ ಜೀವನ ಕುಣಿಯತೊಡಗಿತು. ಪೇಪರ್‌ಗಳಲ್ಲಿ ತಾನೇ ಬಿಡಿಸಿದ್ದ ಮೀನಿನ ಚಿತ್ರ, ರಷ್ಯಾದಿಂದ ಬಂದಿದ್ದ ಡಾಕ್ಯುಮೆಂಟ್‌ಗಳಲ್ಲಿನ ವಿವರಣೆಗಳು ಅವನ ಮೆದುಳಿನಲ್ಲೊಮ್ಮೆ ಗಿರಕಿ ಹೊಡೆದಂತೆ ಅವನ ನೋಟ ಮತ್ತಷ್ಟು ತೀಕ್ಷ್ಣವಾಯಿತು.

ಉಸಿರು ಬಿಗಿಹಿಡಿದು ಯಕಃಶ್ಚಿತ್ ಮೀನೊಂದನ್ನು ಇಷ್ಟು ಕುತೂಹಲದಿಂದ ತಿರುವು ಮುರುವು ಮಾಡಿ ಅವನು ನೋಡುವುದನ್ನು ಕಂಡಾಗ ಪುಷ್ಪಕ್ಕನಿಗೆ ಅವಳ ಗಂಡ ಹಿಂದೊಮ್ಮೆ ಇವನ ಬಗ್ಗೆ ಮಾತಾಡುತ್ತಾ ‘ರಾತ್ರಿ ಹೊತ್ತು ಒಬ್ಬೊಬ್ಬರೇ ಮಾತಾಡುತ್ತಿರುತ್ತಾರೆ. ಕೆಲಸ ಮಾಡುತ್ತಿರುವಾಗಲೇ ದಿಗ್ಗನೆ ಎದ್ದು ಕಡಲ ತೀರದತ್ತ ಹೊರಟು ಬಿಡುತ್ತಾರೆ. ಒಮ್ಮೊಮ್ಮೆ ಕಡಲ ದೆವ್ವ ಅವರಿಗೆ ಕಾಣಿಸುವುದೂ ಇದೆ ಅಂತ ಇಡೀ ಆಫೀಸು ಮಾತಾಡಿಕೊಳ್ಳುತ್ತದೆ’ ಎಂದದ್ದು ನೆನಪಾಯಿತು. ಅದಕ್ಕೆ ಸರಿಯಾಗಿ ಅವನು ಗಾಜಿನಂಥದ್ದೇನನ್ನೋ ತೆಗೆದು ಮೀನಿನ ಬಾಲದ ಹತ್ತಿರ ಹಿಡಿದು ಯಾವುದೋ ಖುಶಿಯಲ್ಲಿರುವಂತೆ ಕುಣಿದು ಕುಪ್ಪಳಿಸಿದ.

ಪುಷ್ಪಕ್ಕನಿಗೆ ಒಮ್ಮೆ ಅವನ ಇಡೀ ವರ್ತನೆ ಮಕ್ಕಳಾಟದಂತೆಯೂ ಮತ್ತೊಮ್ಮೆ ಹುಚ್ಚಿನಂತೆಯೂ ಮತ್ತೊಮ್ಮೆ ಯಾವುದೋ ಅಗೋಚರ ಶಕ್ತಿಯೊಂದಿಗೆ ಸಂಭಾಷಿಸುತ್ತಿರುವಂತೆಯೂ ತೋರಿತು. ಅವನ ನಡವಳಿಕೆ, ಅವಳ ಬುಟ್ಟಿಯಲ್ಲಿದ್ದ ಆ ವಿಚಿತ್ರ ಮೀನು, ಸುಡುವ ಸೂರ್ಯ, ಯಾವುದನ್ನೋ ಲೆಕ್ಕಹಾಕುತ್ತಿರುವಂತಹ ಅವನ ಹಾವಭಾವ ಎಲ್ಲ ಕಲಸುಮೇಲೋಗರವಾಗಿ ಅವಳ ಮನಸ್ಸು ಅವನಿಗೆ ಮತಿ ಭ್ರಾಂತಿಯಾಗಿದೆಯೆಂದೇ ನಿರ್ಧರಿಸಿತು. ಇವನು ತನಗೇನಾದರೂ ಮಾಡುವ ಮುನ್ನ ಇವನ ಕಣ್ಣ ಮುಂದಿನಿಂದ ತಪ್ಪಿಸಲೇಬೇಕು ಅಂದುಕೊಂಡು ಅವನ ಕೈಯಲ್ಲಿದ್ದ ಮೀನು ಕಸಿದು ಬುಟ್ಟಿಗೆ ಎಸೆದು ಬುಟ್ಟಿ ಸಮೇತ ಓಡತೊಡಗಿದಳು. ಕೈಗೆ ಬಂದ ಸೃಷ್ಟಿಯ ರಹಸ್ಯ ಕಣ್ಣೆದುರಲ್ಲೇ ಮಾಯವಾಗಿಬಿಡುತ್ತದೇನೋ ಎನ್ನುವ ದಿಗಿಲಿಗೆ ಬಿದ್ದ ಸಮಂತ ಅವಳ ಬೆನ್ನಹಿಂದೆಯೇ ಓಡಿ ಅವಳನ್ನು ಹಿಡಿದು ಬುಟ್ಟಿಯ ಅಷ್ಟೂ ಮೀನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅದೊಂದು ಮೀನನ್ನು ಕೈಗೆತ್ತಿಕೊಂಡ ಅವಳಿಂದ ಬಹುದೂರ ಹೋಗುವ ಹವಣಿಕೆಯಲ್ಲಿದ್ದಂತೆ ಮತ್ತೆ ಓಡತೊಡಗಿದ. ಒಂದೂ ಅರ್ಥವಾಗದ ಪುಷ್ಪಕ್ಕ ಅಮೂಲ್ಯವಾದದ್ದನ್ನು ಕಳೆದುಕೊಂಡಂತೆ ಒಂದು ವಿಚಿತ್ರ ಗಲಿಬಿಲಿಯಲ್ಲಿ ‘ಅವನನ್ನು ಹಿಡಿಯಿರಿ’ ಎಂದು ಕೂಗುತ್ತಾ ಚೀರುತ್ತಾ ಅವನ ಹಿಂದೆ ಹಿಂದೆ ಓಡತೊಡಗಿದಳು.

ಅಷ್ಟರಲ್ಲಿ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಜನ, ಪ್ರವಚನ ಕೇಳುತ್ತಿದ್ದ ಭಕ್ತಾದಿಗಳು, ಭಾನುವಾರವಾದರೂ ತೆರೆದಿದ್ದ ಅಂಗಡಿಗಳ ಮಾಲೀಕರು, ಖಾಲಿ ರಸ್ತೆಯನ್ನೇ ಮನೆ ಮಾಡಿಕೊಂಡಿರುವ ಊರ ಯುವಕರು ಪುಷ್ಪಕ್ಕನನ್ನೂ, ಅವಳು ಅಟ್ಟಿಸಿಕೊಂಡು ಹೋಗುತ್ತಿರುವವನ್ನೂ ನೋಡಿ ಇಲ್ಲೇನೋ ನಡೆಯಬಾರದ್ದು ನಡೆಯುತ್ತಿದೆ ಅಂದುಕೊಂಡು ಅವರಿಬ್ಬರನ್ನು ಹಿಂಬಾಲಿಸತೊಡಗಿದರು. ನೋಡ ನೋಡುತ್ತಿದ್ದಂತೆ ಅವರಿಬ್ಬರ ಹಿಂದೆ ಇಡೀ ಊರೇ ನೆರೆಯಿತು. ಸಂಶೋಧನೆಯ ಧಾವಂತದಲ್ಲಿ ಸಮಂತ, ಏನೋ ಕಳೆದುಕೊಳ್ಳಬಾರದ್ದನ್ನು ಕಳೆದುಕೊಳ್ಳುತ್ತೇನೇನೋ ಎನ್ನುವ ಭ್ರಾಂತಿಯಲ್ಲಿ ಪುಷ್ಪಕ್ಕ, ಪರಿಸ್ಥಿತಿಯ ವಿವರವೇ ಇಲ್ಲದೆ ಹಿಂಬಾಲಿಸುತ್ತಿರುವ ಜನಸಮೂಹ... ಓಡಿ ಓಡಿ ಸಮಂತ ಕಡಲ ತೀರಕ್ಕೇ ಬಂದು ತಲುಪಿದ. ಏದುಸಿರು ಬಿಡುತ್ತಾ ಕ್ಷಣದ ಮಟ್ಟಿಗೆ ನಿಂತ ಅವನು ಕೈಯಲ್ಲಿದ್ದ ಮೀನನ್ನು ಮತ್ತೊಮ್ಮೆ ಪರೀಕ್ಷಿಸಿದ. ಈಗವನಿಗೆ ಯಾವ ಅನುಮಾನವೂ ಉಳಿಯಲಿಲ್ಲ, ಸೃಷ್ಟಿಯ ಪರಮ ರಹಸ್ಯವೊಂದು ಅವನ ಅಂಗೈಯೊಳಗೆ ಬೆಚ್ಚನೆ ಕೂತಿತ್ತು. ಹೆಮ್ಮೆಯಿಂದ ಒಮ್ಮೆ ಕಡಲಿನತ್ತ ಮತ್ತೊಮ್ಮೆ ಮೀನಿನತ್ತ ಸಂತೃಪ್ತಿಯಿಂದ ನೋಡಿದ. ಹಿಂದಿನಿಂದ ಜನರ ಗೌಜು ಗದ್ದಲ ಹೆಚ್ಚಾಯಿತು. ತನ್ನ ಕೈಯೊಳಗಿರುವ ರಹಸ್ಯವನ್ನು ಇವರೆಲ್ಲಾ ಕಸಿಯುತ್ತಾರೆ ಎನ್ನುವ ಭೀತಿಯೊಂದು ಅವನ ಕಣ್ಣೊಳಗೆ ತೊನೆಯುತ್ತಿದ್ದಂತೆ ಮೀನಿನ ಸಮೇತ, ಉಪಾಯದಿಂದ ಎಲ್ಲರ ಕಣ್ಣು ತಪ್ಪಿಸಿ ಸಂಶೋಧನಾ ಕೇಂದ್ರಕ್ಕೆ ಹೋಗಿ ಬಾಗಿಲು ಹಾಕಿಕೊಳ್ಳಬೇಕೆಂದು‌ ನಾಲ್ಕೇ ನಾಲ್ಕು ಹೆಜ್ಜೆ ಹಿಂದಿಟ್ಟ. ಶಾಂತವಾಗಿದ್ದ ಕಡಲು ಒಮ್ಮೆಲೇ ದೊಡ್ಡ ಅಲೆಯೊಂದ ಎಬ್ಬಿಸಿ ಅವನನ್ನು ಹಿಮ್ಮುಖವಾಗಿ ಕೊಚ್ಚಿಸಿಕೊಂಡು ಹೋಯಿತು. ಕೈಯಲ್ಲಿ ಮೀನು ಹಿಡಿದಿರುವಂತೆಯೇ ಅವನು ಬದುಕುವ ಕೊನೆಯ ಯತ್ನವೆಂಬಂತೆ ಕೈಕಾಲು ಬಡಿದು ಸುಸ್ತಾಗಿ ತೇಲುತ್ತಾ ಹೋಗಿ ಕಣ್ಮರೆಯಾದ.

ಕೋಟಿ ಕೋಟಿ ವರ್ಷಗಳಿಂದ ಕಡಲೊಳಗೆ ಬಚ್ಚಿಕೊಂಡಿದ್ದ ರಹಸ್ಯವೊಂದು ಕ್ಷಣಮಾತ್ರಕ್ಕೆಂಬಂತೆ ಜಗದ ಕಣ್ಣಿಗೆ ಬಿದ್ದು ಮತ್ತೆ ಕಡಲು ಸೇರಿತು, ಒಮ್ಮೆ ಸ್ತಬ್ಧವಾದ ಕಡಲು ಮತ್ತೆ ಭೋರ್ಗರೆಯತೊಡಗಿತು. ಸಮಂತ, ಅವನ ಸಂಶೋಧನೆಯ ಬಗ್ಗೆ ಏನೇನೂ ಗೊತ್ತಿಲ್ಲದ ಜನ ಅವನ ಸಾವಿಗೆ ಮರುಗಬೇಕೋ ಬೇಡವೋ ಎನ್ನುವ ವಿಭ್ರಾಂತಿಯಲ್ಲಿ ಸುಮ್ಮನೆ ನಿಂತೇ ಇದ್ದರು.

Post Comments (+)