ಬುಧವಾರ, ಮೇ 12, 2021
24 °C

ಕಥೆ: ಪ್ರೀತಿ, ಶೀಲ, ರೋಗ…ಬಾಳು

ಎಂ. ವಿ. ಶಶಿಭೂಷಣ ರಾಜು Updated:

ಅಕ್ಷರ ಗಾತ್ರ : | |

Prajavani

ಹಾಂ ಹ್ಯಾಂಗಿದೀರಿ? ಅರಾಮ್ ಅನ್ರಿ? ಬನ್ರಿ ಬನ್ರಿ ಕೂಡ್ರಿ, ಇಲ್ಲಿ ಕೂಡ್ರಿ. ಆರಾಮವಾಗಿ ಕೂತುಗೋಳ್ರಿ, ತ್ರಾಸ ತಗೋಬೇಡಿ. ಈಗ ನಿಮಗೊಂದು ಕಥೆ ಹೇಳತೀನ್ರಿ. ನೀವು ಕೇಳಿ ಇಲ್ಲ ಬಿಡಿ, ನಾ ಅಂತೂ ಹೇಳುವವ. ಈ ಕಥೆಗೋಳು ನೋಡ್ರಿ ಏನ್ ಮೋಡಿ ಮಾಡ್ತಾವ, ಮಕ್ಕಳಿಗೆ ಊಟ ತಿನಿಸ್ತಾವ, ನಿದ್ದಿ ಬರಸ್ತಾವ, ಮನಸ್ಸಿಗೆ ಅರಾಮ ಕೊಡ್ತಾವ, ಅದಕ್ಕೆ ನೋಡ್ರಿ ನಾ ಕಥೆ ಹೇಳೋಕೆ ಹೊರಟಿದೀನ್ರೀ. ಶುರು ಮಾಡ್ರಿ ಅಂತೀರೇನು? ಹೂಂ ಮಾಡೋಣ, ನೀವು ಹೀಂಗ ಕೂಡ್ರಿ, ಹಾ ಆ ಕಂಬಕ್ಕೆ ಒರಗಿಕೊಳ್ರಿ, ಆರಾಮ ಇರತದ. ಈಗ ಶುರು ಮಾಡಲೇನು? ಹಾ ಕೇಳಿ.

ಹೀಂಗ ಒಂದು ದೇಶದೊಳಗ ಒಬ್ಬ ರಾಜ ಇದ್ದ, ಹೆಸರೇನು ಬೇಡ ಬಿಡ್ರಿ ರಾಜ ಅಂದ್ರಾತು. ಈಗಿನ ಕಾಲಕ್ಕೆ ಅದು ಒಂದು ಹೆಸರಾಗಿದೆ. ರಾಜನಿಗೆ ಒಬ್ಬ ಹೆಂಡ್ತಿ, ತುಂಬಾ ಸುಂದರವಾಗಿದ್ಲು. ಒಬ್ಬ ಹೆಂಡ್ತಿ ಅಲ್ಲಾ ಅಂತೀರೇನು, ಇಲ್ಲ ಬಿಡಿ, ಅವನಿಗೆ ಒಬ್ಬಳೇ ರಾಣಿ ಇದ್ದಳು. ರಾಜ ಬೋ ಒಳ್ಳೆಯವ, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅವರಿಗೆ ಯಾವುದೇ ಕಷ್ಟ ಬಾರದ ಹಾಗೆ ನೋಡಿಕೊಳ್ಳುತ್ತಿದ್ದ. ದೇವ್ರು ಅನ್ನೋರು ಜನ ರಾಜನಿಗೆ. ರಾಣೀನೂ ಅಷ್ಟೇ ಬೋ ಒಳ್ಳೆಯವಳು, ದಿನಾ ದೇವರಪೂಜೆ ಮೂಡಿಕೋತ, ದಾನ ರ‍್ಮ ಮೂಡಿಕೋತ ಆರಾಮವಾಗಿ ಇದ್ದಳು . ಆ ದೇಶಕ್ಕೆ ಯಾರ ಕಾಟಾನೂ ಇರಲಿಲ್ಲ. ರಾಜ ಅಜಾತಶತ್ರು ಇದ್ದ, ಯುದ್ದಾನೇ ಇಲ್ಲ ಅಂತೀನಿ, ಆ ಜನ ಪುಣ್ಯ ಮಾಡಿದ್ರಿ ಅಂದ್ರ? ಮತ್ತೇನು ಬಿಡ್ರಿ, ಈಗ ನಮ್ಮ ರಾಜಕಾರಣಿಗಳು ಏನೇನು ಮಾಡ್ತೀರಂತೀರಾ, ಅವರಿಗೆ ಅವರ ನೆಂಟರಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೂಡುಡಿತಾರಾ, ಆಗಿನ ರಾಜರಿಗೆ ಅಧಿಕಾರ ವಂಶಪಾರಂರ‍್ಯ, ರಾಜಕಾರಣಿಗಳಿಗೆ ಇಲ್ಲಾ ಅದಕ್ಕೆ ಮಾಡಿಕೊಳ್ಳುತ್ತಾರೆ ಅಂತೀರಾ ಇರಬಹದು ಬಿಡಿ.

ಹಿಂಗೇ ಆರಾಮವಾಗಿ ಇರೋದ್ರೊಳಗೆ, ಒಂದು ದಿವಸ ರಾಜ ಜ್ವರ ಅಂತ ಮಂಚ ಹಿಡಿಕೊಂಡ, ಮಾಮೂಲಿ ಜ್ವರ ಅಂದುಕೊಂಡಿದ್ದು ಕೈ ಕಾಲು ಸೆಟಗೊಂಡುಬಿಡ್ತು. ರಾಜನಿಗೆ ಮಾತಾಡೋಕು ಆಗದಂಗೆ ಮಾಡಿಬಿಡ್ತು. ಕಣ್ಣನ್ನು ತೆಗೆದು ಪಿಳಿ ಪಿಳಿ ಬಿಡಿತ್ತಿದ್ದ. ಕೈ ಕಾಲು ಎತ್ತೋಕು ಆಗವಲ್ದು. ಆಸ್ತಾನ ಪಂಡಿತರು, ಆಸ್ತಾನ ವೈದ್ಯರು ಏನೇನೂ ಮಾಡಿದರು, ಏನೂ ಆಗಲಿಲ್ಲ. ರಾಣಿ ಅಳಕೋತ ಕುತಗೊಂಡಳು. ಮಂತ್ರೀನೇ ರಾಜ್ಯಭಾರ ಮಾಡುತಿದ್ದ. ಬೇರೆ ಬೇರೆ ವೈದ್ಯರನ್ನು ಕರೆಸಿದರು, ಏನೂ ಪ್ರಯೋಜನವಾಗಲಿಲ್ಲ.

ಸರಿ ಮಂತ್ರಿಗಳು ಡಂಗೂರ ಹೊಡೆಸಿದರು. ಯಾರಾದರೂ ಬಂದು ರಾಜನಿಗೆ ಗುಣ ಮಾಡಿದ್ರೆ ಆವರಿಗೆ ರ‍್ಧ ರಾಜ್ಯ ಕೊಡ್ತೀವಿ ಅಂತ. ರಹಸ್ಯ ವಾಗಿದ್ದ ವಿಷಯ ದೇಶದಲ್ಲೆಲ್ಲ ತಿಳಿದುಹೋಯ್ತು. ಜನ ಗುಸ ಗುಸ ಪಿಸ ಪಿಸ ನಡೆಸ್ಯಾಕೆ ಹತ್ತಿದ್ರು. ದಿನ ಆಯಿತು, ವಾರ ಆಯಿತು, ತಿಂಗಳಾಯಿತು, ಯಾರೂ ಬರಲಿಲ್ಲ. ಎಲ್ಲರಿಗೂ ಚಿಂತೆಗೆ ಇಟಗೊಂತು, ಏನು ಮಾಡೋದು ಈಗ ಅಂತ. ರಾಣಿ ಗೋಳು ಹೇಳತೀರದು. ಇನ್ನೂ ಚಿಕ್ಕ ವಯಸ್ಸು, ಮಕ್ಳು ಮರಿ ಇಲ್ಲ. ಮುಂದೆ ಹೆಂಗೆ ಅಂತ ಯೋಚನೆಗೆ ಹತ್ತಿತು. ಹೀಗೆ ಯೋಚನೆ ಮಾಡಿಕೊಂಡು ಕೂತಿರಬೇಕಾದರೆ ರಾಜ ಭಟ್ಟರು ಬಂದು ನಮಸ್ಕಾರ ಮಾಡಿದ್ರು,

"ಏನ್ ಸಮಾಚಾರ" ಅಂದ್ರು ಮಂತ್ರಿಗಳು

"ಯಾರೂ ಪರದೇಶದವರು ಬಂದವ್ರೆ, ವೈದ್ಯರಂತೆ ಹೊರಗಡೆ ಇದಾರೆ" ಅಂದರು ಸೇವಕರು

" ಕಳಿಸಿ ಒಳಗೆ" ಮಂತ್ರಿ ಕಿರುಚಿದ

ವೈದ್ಯ ಒಳಗೆ ಬಂದ, ನೀವು ಯಶೋಧರ ಚರಿತೆಯೊಳಗೆ ಅಷ್ಟಾವಕ್ರನ ವರ್ಣನೆ ಕೇಳಿರುಬೋದು ಅಂಗೇ ಇದ್ದ. ಮುಖದ ತುಂಬಾ ಕುರುಗೋಳು,ತಲೆ ಮೈ ತುಂಬಾ ಕೂದಲು. ಕಪ್ಪಕ್ಕಿದ್ದ, ಸಣ್ಣಕ್ಕಿದ್ದ, ಕಣ್ಣಲ್ಲೇ ಇಂಗಿ ಅಂಗೇ ಒಳಕ್ಕೆ ಹೋಗಿದ್ವು. ಮಕ್ಕಳು ಕಂಡ್ರೆ ಕಿಟಾರನೆ ಕಿರಿಚುಕೋಬೇಕು ಅಂಗಿದ್ದ ಆ ವೈದ್ಯ. ಹೆಗಲ ಮೇಲೆ ಕಂಬ್ಳಿ ಹಾಕಿದ್ದ.

ಹಾಂಗೆ ಮುಂದೆ ಬಂದು ನಿತುಗೊಂಡ, ರಾಣಿ ತಲೆ ತಗ್ಗಿಸಿಕೊಂಡಳು, ಅಂಗಿದ್ದ ಆವ. ಮಂತ್ರಿ ಕೇಳಿದ "ವಿಷಯ ಗೊತ್ತಿರಬೋದು ನೀವು ವಾಸಿ ಮಾಡೀತೀರಾ" ಎಂದ

"ಹೌದು ಮಹಾಸ್ವಾಮಿ" ದನಿಯೂ ಕರ್ಕಶವಾಗಿತ್ತು. ಇವನ ಹೆತ್ತ ತಂದೆ ತಾಯಿ ಹೆಂಗಿದ್ರೋ ಅಂದುಕೊಂಡಳು ರಾಣಿ

ರಾಜನ ಕೊಣೆಗೆ ವೈದ್ಯನನ್ನು ಕರೆದುಕೊಂಡು ಹೋದರು. ರಾಜನಿಗೆ ವೈದ್ಯನನ್ನು ನೋಡಿ ಭಯವಾಯಿತು. ಹಿಂಗಿರೋನು, ಏನು ವೈದ್ಯ ಮಾಡತಾನೋ ಎಂದು, ಪತರುಗುಟ್ಟಿದ.

"ಹಂಗಾರೆ ಶುರು ಮಾಡ್ರಿ" ಎಂದ ಮಂತ್ರಿ

"ಆಗ್ಲಿ ಸ್ವಾಮೀ, ಆದರೆ'

"ಏನ್ ಹೇಳಿ ಅರ್ಧ ರಾಜ್ಯ ನಿಮ್ಮದಾಗುತ್ತೆ" ಅಂದ ಮಂತ್ರಿ

" ಏನಿಲ್ಲ ನಾನು ರಾಣಿ ಅವರ ಹತ್ತಿರ ಸ್ವಲ್ಪ ಒಬ್ಬನೇ ಮಾತಾಡಬೇಕು" ಎಂದ ಅಳಕುತ್ತ

"ಸರಿ" ಎಂದು ಮಂತ್ರಿ ಹೊರಗಡೆ ಹೋದ

ರಾಣಿ ವೈದ್ಯನನ್ನು ರಹಸ್ಯಕೋಣೆಗೆ ಕರೆದೊಯ್ದಳು. "ಏನು ಹೇಳು" ಅಂದ್ಲು

ವೈದ್ಯ ರಾಣಿಯ ದುಂಡಗಿನ ತುಂಬಿದ ದೇಹ ನೋಡಿ ತುಟಿಸವರಿಕೊಂಡ. ಇದುವರೆಗೂ ಯಾವ ಹೆಣ್ಣು ಅವನಿಗೆ ಒಲಿದಿರಲಿಲ್ಲ. ಕುರೂಪನಾದರೂ ಗಂಡಸಲ್ವಾ, ದೇಹದ ಆಸೆ ತಡೆಕೊಳ್ಳಲು ಕಷ್ಟಪಡುತ್ತಿದ್ದ. ಈಗ ಅವಕಾಶ ಉಪಯೋಗಿಸಕೊಂಡ.

" ನೀವು ಒಂದು ರಾತ್ರಿ ನನ್ನಜೊತೆ ಇದ್ದರೆ, ರಾಜನಿಗೆ ವಾಸಿ ಮಾಡುವೆ' ಎಂದ

ರಾಣಿ ತರಗೆಲೆ ತರ ಕಂಪಿಸಿದಳು. ಅವನ ಅಸಹ್ಯ ರೂಪ ನೋಡಿ ಕಣ್ಣು ಮುಚ್ಚಿಕೊಂಡಳು.

"ಯಾರಿಗೂ ಹೇಳೋದಿಲ್ಲ" ಅಂದ "ನನ್ನ ಕೈಲಿ ಮಾತ್ರ ರಾಜನಿಗೆ ವಾಸಿ ಮಾಡೋಕೆ ಆಗೋದು, ಅದಲ್ಲದೆ ನನಗೆ ಅರ್ಧ ರಾಜ್ಯನೂ ಬೇಡ, ಯೋಚನೆ ಮಾಡಿ ನಾಳೆ ಬತ್ತೀನಿ' ಎಂದು ಹೇಳಿ ಹೊರಟೇ ಹೋದ.

ರಾಣಿ ಅಂಗೇ ನೆಲಕ್ಕೆ ಕುಸಿದು ಬಿದ್ಲು.

ಯಾಕೆ ಎಲ್ಲರೂ ಹಂಗೆ ಕೂತುಬಿಟ್ರಿ, ನಾನ್ ಏನ್ ಹೇಳ್ಲಿ ಕತೆ ಇರೋದೇ ಹಂಗೆ. ಏ ಮಾರ ಯಾಕೋ ನಗ್ತಿ, ನಿನಗೆ ಅಂತ ಚಾನ್ಸ್ ಸಿಗಲಿಲ್ಲ ಅಂತಾನಾ, ಮಹಾನ್ ತರ್ಲೆ ನೀನು.

ಸರಿ ರಾಣಿ ಒಂದು ದಿವಸವೆಲ್ಲಾ ಯೋಚನೆ ಮಾಡಿದ್ಲು. ರಾಜ ಅವಳಿಗೆ ಬೋ ಪ್ರೀತಿ ಮಾಡ್ತಿದ್ದ. ನೀನೆ ಜೀವ ಅಂತಿದ್ದ. ನೀನೆ ನನ್ನ ಪ್ರಾಣ ಅಂತಿದ್ದ. ನೀ ಇಲ್ಲವಾದರೆ ನಾ ಬದುಕಲಾರೆ ಎಂತಿದ್ದ. ಅವನಿಗೆ ವಿಷಯ ಹೇಳಿದ್ರೆ ಒಪ್ಪಿಕೊಳ್ಳಲ್ಲ. ಆದ್ರೆ ರಾಜನ ಪ್ರಾಣಾನೇ ತನಗೆ ಮುಖ್ಯ ಎಂದು ಅನಿಸಿತು.

ಮಾರನೆ ದಿನ ವೈದ್ಯ ಬಂದ, ಚೆನ್ನಾಗಿ ಉಜ್ಜಿ ಉಜ್ಜಿ ಸ್ನಾನ ಮಾಡಿದ್ದ , ಕಪ್ಪಗೆ ಮಿಂಚುತಿದ್ದ. ಕೂದಲೆಲ್ಲಾ ಹಿಂದಿಕ್ಕಿ ಬಾಚಿ ಗಂಟಾಕಿದ್ದ. ಬಿಳಿ ಪಂಚೆಯಲ್ಲಿ ಕಚ್ಚೆ ಹಾಕಿದ್ದ. ಜುಬ್ಬಾ ತರಾ ಇರೋದನ್ನ ಧರಿಸಿ, ರುಮಾಲ್ ಸುತ್ತಿದ್ದ, ಕಂಬ್ಳಿ ತಂದಿರಲಿಲ್ಲ.

ರಾಣಿ ಮಾತು ಕೇಳಿ ಸಂತೋಷ ಪಟ್ಟ. ಅತೀ ದಾಹದಿಂದ ಇರೋ ವ್ಯಕ್ತಿ ನೀರು ಕುಡಿದ ಹಾಗೆ, ರಾಣಿಯ ಸೌಂದರ್ಯವನ್ನೆಲ್ಲ ಬೊಗಸೆ ಎತ್ತಿ ಎತ್ತಿ ಹೀರಿದ. ಹೆಣ್ಣಿನಲ್ಲಿ ಇರೋ ಕುತೂಹಲವನ್ನೆಲ್ಲಾ ಒಂದೇ ಬಾರಿ ತಿಳಿದುಕೊಳ್ಳುವವನ ತರಹ ಅವಳನ್ನು ಅಪ್ಪಿ ಅಪ್ಪಿ ಮುದ್ದಾಡಿದ. ಯಾವುದೇ ಮಾತುಕತೆ ನಡೆಯಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಣಿ ಹಾಗೆ ಎದ್ದು ತನ್ನ ಅಂತಃಪುರ ಸೇರಿಕೊಂಡಳು. ಅವನು ಸುಸ್ತಾಗಿ ಹಾಗೆ ತೃಪಿಯಿಂದ ಮಲಗಿಬಿಟ್ಟ.

ಒಂದು ವಾರದೊಳಗೆ ರಾಜ ಮೊದಲಿನಂತೆ ಆದ. ಎಲ್ಲರ ಸಂತೋಷ ಹೇಳತೀರದು. ರಾಣಿ ಬೋ ಸಂತೋಷಗೊಂಡ್ಲು. ನನಗೆ ಅರ್ಧರಾಜ್ಯ ಬೇಡವೆಂದ ವೈದ್ಯ ಹೊರಟುಹೋದ. ಅವನಿಗೆ ಬೇಕಾಗಿದ್ದಿದ್ದು ಸಿಕ್ಕಿತ್ತು.

ಹೀಂಗಿರಲು, ರಾಣಿ ಜೊತೆ ವೈದ್ಯ ಮಾತನಾಡಿದ್ದನ್ನು ಹೇಗೂ ಒಬ್ಬ ದಾಸಿ ಕದ್ದು ಕೇಳಿಸಿಕೊಂಡಿದ್ದಳು. ಅವಳಿಗೆ ಹೊಟ್ಟೆಯಲ್ಲಿ ರಹಸ್ಯ ಇಟ್ಟುಕೊಳ್ಳಲಾರದೆ, ಯಾರಿಗೂ ಹೇಳಬೇಡೆಂದು ಇನ್ನೊಬ್ಬ ದಾಸಿಗೆ ಹೇಳಿದಳು, ಅವಳಿಗೆ ಒಬ್ಬ ಪ್ರೇಮಿ ಇದ್ದ ಯಾವುದೂ ರಾತ್ರಿ ಅವನಿಗೆ ಹೇಳಿದಳು, ಹೀಗೆ ಅದು ರೆಕ್ಕೆ ಪುಕ್ಕ ಧರಿಸಿ ದೇಶದಲ್ಲೆಲ್ಲಾ ಹರಡಿತು. ರಾಜನಿಗೂ, ಮಂತ್ರಿಗೂ ಅನುಮಾನ ಬಂತು.

ಒಂದು ದಿವಸ ರಾಜ ಅಂತಃಪುರದಲ್ಲಿ ರಾಣೀನ ಕೇಳಿದ "ಇದು ನಿಜಾನಾ" ಅಂತ. ರಾಣಿ "ಹೌದು" ಎಂದಳು. ರಾಜ ತೆಗೆದು ಕೆನ್ನೆಗೆ ಬಿಟ್ಟ ನೀನು ನನ್ನ ರಾಣೀನೇ ಅಲ್ಲ ಅಂದ. "ನಿನ್ನ ಪ್ರಾಣಕ್ಕಾಗಿ ಮಾಡಿದ್ದು" ಎಂದಳು. "ಶೀಲಾ ಕಳೆದುಕೊಂಡ ನಿನ್ನ ಜೊತೆ ಇರಲಾರೆ" ಎಂದ ರಾಜ. ಅವಳನ್ನು ಹೊರಗಡೆ ದೂಡಿಬಿಟ್ಟ. ರಾಣಿ ಯಾವುದೋ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡಳು ಇರತೊಡಗಿದಳು.

ಹೀಗೆ ಒಂದು ತಿಂಗಳಾಯಿತು, ರಾಣಿಯ ಆಪ್ತದಾಸಿಯೊಬ್ಬಳು ಬೇರೆ ಊರಿಗೆ ಹೋಗಿದ್ದವಳು ವಿಷಯ ಕೇಳಿ ಓಡಿಬಂದಳು. ರಾಣಿಗಾದ ಅನ್ಯಾಯಕ್ಕೆ ದುಃಖಪಟ್ಟು, ರಾಜನ ಹತ್ತಿರ ಓಡಿದಳು. ರಾಜ ಮಂತ್ರಿ ಮತ್ತು ಇತರರೊಡನೆ ರಾಜ್ಯದ ಬಗ್ಗೆ ಮಾತನಾಡುತಿದ್ದ. ತುಂಬಾ ಜನ ಅಲ್ಲಿ ಸೇರಿದ್ದರು. "ಮಹಾ ಸ್ವಾಮೀ" ಎಂದು ಕಾಲು ಕಟ್ಟಿಕೊಂಡಳು. "ಏನು ಏನು ಎಂದ ರಾಜ".

"ಮಹಾರಾಣಿ ತಪ್ಪು ಮಾಡಿಲ್ಲ ಮಹಾರಾಜಾ, ನಾನೇ ತಪ್ಪು ಮಾಡಿವ್ನಿ" ಅಂದಳು

"ಅದೇನು ಬಿಡಿಸಿ ಹೇಳು" ಎಂದು ರಾಜ ಅರಚಿದ

ದಾಸಿ ಹೇಳಿದ್ನ ನಾನು ನಿಮಗೆ ಹೇಳ್ತಿನಿ.

ವೈದ್ಯ ಕೇಳಿದ್ನ ಒಪ್ಪಿಕೊಂಡಿದ್ದ ರಾಣಿ ತನ್ನ ಆಪ್ತದಾಸಿಯೊಂದಿಗೆ ಹೇಳಿ ಅತ್ತಿದ್ದಳು. ಹ್ಯಾಗಾದರೂ ರಾಣೀನ ಬಚಾವ್ ಮಾಡಬೇಕು ಎಂದುಕೊಂಡ ದಾಸಿ" ನಿಮ್ಮ ಜಾಗದಲ್ಲಿ ರಾತ್ರಿ ನಾನು ಹೋಗ್ತೀನಿ' ಎಂದಳು.

ರಾಣಿ "ಬೇಡ ಬೇಡ ನನಗಾಗಿ ನೀನು ಶೀಲ ಕಳೆದುಕೊಳ್ಳುವುದು ಬೇಡ" ಅಂದ್ಲು

ದಾಸಿ ನಕ್ಕು "ಅಮ್ಮ ನಾವು ದಾಸಿಯರು ನಮಗೆಲ್ಲಾ ಎಲ್ಲಮ್ಮ ಶೀಲ, ಆ ಮಂತ್ರಿಮಗ ಯಾವಾಗ್ಲೋ ತೆಗೆದುಬಿಟ್ಟಿದಾನೆ, ನೀವು ಒಪ್ಪಿಕೊಳ್ಳಿ, ನಿಮ್ಮ ಶೀಲ ಹೋಗ್ಲಿಕ್ಕೆ ನಾನು ಬಿಡೋದಿಲ್ಲ, ನಿಮ್ಮ ಪ್ರಿಯದಾಸಿ ಆಗಿದ್ದಕ್ಕೆ ಈ ಅವಕಾಶ ಕೊಡಿ" ಎಂದು ರಾಣಿ ಕಾಲು ಕಟ್ಟಿಕೊಂಡಳು.

ವಿಧಿಯಿಲ್ಲದೆ ರಾಣಿ ದಾಸಿಗೆ ತನ್ನೆಲ್ಲಾ ಬಟ್ಟೆ ಆಭರಣದಿಂದ ಸಿಂಗರಿಸಿ ಕಳಿಸಿಕೊಟ್ಟಳು. ಕತ್ತಲ್ಲಲಿ ಬಂದ ದಾಸಿಯನ್ನು ವೈದ್ಯ ರಾಣಿಯೆಂದು ತಿಳಿದುಕೊಂಡು ಅನುಭವಿಸಿದ್ದ. ಅವನ ಆವೇಶಕ್ಕೆ ದಾಸಿಯ ಮೈ ಎಲ್ಲಾ ಗಾಯಗಳಾಗಿ, ಸುಸ್ತಾಗಿ ಹೋಗಿದ್ದಳು, ರಾಣಿ ಅವಳನ್ನು ದೂರದೂರಿಗೆ ಕಳುಹಿಸಿ ಅಲ್ಲೆ ಅವಳ ಚಿಕಿತ್ಸೆ ಮಾಡಿಸುತ್ತಿದ್ದಳು. ರಾಜಗುಣವಾಗುವವರೆಗೆ ರಾಣಿಯೂ ವೈದ್ಯನಿಗೆ ಕಾಣಿಸಿಕೊಳ್ಳಲಿಲ್ಲ. ವೈದ್ಯ ತನ್ನ ಭ್ರಮೆಯಲ್ಲಿ ರಾಜನಿಗೆ ಗುಣಮಾಡಿ ಹೊರಟುಹೋಗಿದ್ದ. ಇಷ್ಟು ಹೇಳಿ ದಾಸಿ ತನಗಾದ ಗಾಯಗಳನ್ನು ರಾಜನಿಗೆ ತೋರಿಸಿದಳು.

ರಾಜ "ಅಯ್ಯೋ ನನ್ನ ರಾಣಿ" ಎಂದ. ಎಲ್ಲರನ್ನೂ ಕರೆದುಕೊಂಡು ರಾಣಿ ಇರುವ ಸ್ಥಳಕ್ಕೆ ಹೊರಟ. ಹೋಗಿ ರಾಣಿ ಕಾಲು ಕಟ್ಟಿಕೊಂಡು "ಅರಮನೆಗೆ ಬಾ" ಅಂದ. ರಾಣಿ "ಒಲ್ಲೆ" ಎಂದಳು. "ಯಾಕೆ " ಎಂದ.

"ನಿನಗೋಸ್ಕರ ನಿನ್ನ ಪ್ರಾಣಕೋಸ್ಕರ ನನ್ನ ಶೀಲ ಕಳೆದುಕೊಳ್ಳಲು ಸಿದ್ಧಳಾಗಿದ್ದೆ, ಅದನ್ನು ಅರ್ಥ ಮಾಡಿಕೊಳ್ಳದೆ, ನಾ ಹೇಳೋದು ಕೇಳದೆ, ನನ್ನನ್ನು ಹೊರಗಡೆ ಅಟ್ಟಿದೆ, ಈಗ ನಾನೇನು ಮಾಡಿಲ್ಲ ಎಂದು ತಿಳಿಕೊಂಡು ಕರೆಕೊಂಡು ಹೋಗಾಕೆ ಬಂದಿದೀಯಾ? ಶೀಲಕ್ಕಿಂತ ಒಳ್ಳೆ ಮನಸು ಮುಖ್ಯ ಎಂದು ನೀ ತಿಳೀಲಿಲ್ಲ, ನಾ ನಿನ್ನ ಜೊತೆ ಬರಲ್ಲ ಹೊಂಟೋಗು ಇಲ್ಲಿಂದ" ಎಂದು ಕಿರುಚಿದಳು.

ದಾಸಿಯೂ ಬೇಡಿಕೊಂಡ್ಲು, ರಾಣಿ ಒಪ್ಪಲಿಲ್ಲ, ರಾಜ ಪರಿ ಪರಿಯಾಗಿ ಕೇಳಿಕೊಂಡ ರಾಣಿ ಒಪ್ಪಲಿಲ್ಲ. ರಾಜ ವಿಧಿಯಿಲ್ಲದೆ ವಾಪಸ್ಸಾದ. ದಾಸಿ ಅಲ್ಲೇ ರಾಣಿಜೊತೆ ಉಳುಕೊಂಡ್ಲು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.