ಭಾನುವಾರ, ಜುಲೈ 25, 2021
20 °C

ಕಥೆ | ನಿರೋಷ

ಕಪಿಲ ಪಿ. ಹುಮನಾಬಾದೆ Updated:

ಅಕ್ಷರ ಗಾತ್ರ : | |

Prajavani

ಕೆಲವು ದಿನಗಳ ಹಿಂದೆ ನಿರೋಷ ತನ್ನ ರೂಮಿನ ಗೋಡೆ ಮೇಲೆ ‘ನಿದ್ದೆ ಸುಡುವ ಈ ರಾತ್ರಿಗಳಿಗೆ ಎಂದಾದರೂ ಒಂದು ದಿನ ವಿದಾಯ ಹೇಳಲೆಬೇಕು’ ಎಂದು ಬರೆದಿದ್ದಳು. ಅವಳು ಯಾಕೆ ಹಾಗೆ ಬರೆದಿದ್ದಳೋ ಯಾರಿಗೂ ಗೊತ್ತಿಲ್ಲ. ನಡುರಾತ್ರಿ ಮೂರು ಗಂಟೆ ಆಗಿರಬಹುದು. ದೂರದಿಂದ ನೋಡುವವರಿಗೆ ಆ ಕತ್ತಲಲ್ಲಿ ಉರಿಯುವ ಸಣ್ಣ ಕೆಂಡವೊಂದು ಯಾರೋ ಗಾಳಿಯಲ್ಲಿ ಅಲುಗಾಡದೆ ನಿಲ್ಲಿಸಿದ್ದಾರೆ ಎಂಬಂತೆ ನಿಶ್ಚಲವಾಗಿ ನಿಂತಿತ್ತು. ನಿರೋಷ ಕೈಯಲ್ಲಿ ಹಿಡಿದಿದ್ದ ಸಿಗರೇಟ್ ಮರೆತು ಏನೋ ಯೋಚಿಸುತ್ತ ಟೆರಸ್ ಮೇಲೆ ನಿಂತಿದ್ದಳು.

ಒಮ್ಮಿಂದೊಮ್ಮೆಲೆ ಬೆವರ ಮೈಗೆ ಬಡಿದ ತಂಪು ಗಾಳಿಗೆ ಎಚ್ಚರಗೊಂಡು. ಚೂರು, ಸಿಗರೇಟ್ ಬೆರಳುಗಳಿಂದ ಅಲುಗಾಡಿಸಿ ಬೂದಿ ಕೆಳಗೆ ಚೆಲ್ಲಿದ್ದಳು. ಅದು ಕಾಲಿನ ಮೇಲೆ ಚೆಲ್ಲಿ ಚದುರಿ ಬಿದ್ದಿತ್ತು. ಅವಳು ಅದು ಗಮನಿಸಿದರು ಸಹ ಕಾಲು ಜಾಡಿಸಿಕೊಳ್ಳಲಿಲ್ಲ. ಮತ್ತೆ ಸಿಗರೇಟಿನ ಸಣ್ಣ ಪುಡಿ ಮುಂಗಾಲಿನ ಮೇಲೆ ಬಿತ್ತು. ಈ ಸಲ ಚೂರು ಕಾಲು ಅಲುಗಾಡಿಸಿ ಚೆಲ್ಲಿದ್ದಳು. ಪೂರ್ತಿ ಎಲ್ಲವೂ ಉದುರಿ ಹೋಗದೆ ಬೂದಿಯ ಕಣಗಳು ಅಲ್ಲೇ ಇದ್ದವು. ತಟ್ಟನೆ ಏನೋ ಹೊಳೆದಂತೆ ತುಟಿ ಅಂಚಿಗೆ ಸಣ್ಣದೊಂದು ನಗು ಮೂಡಿಸಿ ಮತ್ತೇ ಗಂಭೀರವಾದಳು.

‘ಕೆಲವು ಸಂಗತಿಗಳೆ ಹೀಗೆ ಎಷ್ಟೇ ಮನಸಿನಿಂದ ಚೆಲ್ಲಿ ಖಾಲಿಯಾಗಬೇಕೆಂದರೂ ಈ ಮುಂಗಾಲಿನ ಮೇಲೆ ಉಳಿದಿರುವ ಪುಡಿ ಬೂದಿಯಂತೆ ಗುರುತುಳಿಸಲು ಹೆಣಗುತ್ತವೆ.’ ಎಂದುಕೊಂಡು, ಪೂರ್ತಿ ಕಾಲು ತೊಳೆದುಕೊಂಡಳು. ಒಣ ಬಟ್ಟೆಯಿಂದ ಮುಂಗಾಲು ತಿಕ್ಕಿ ದಿಟ್ಟಿಸಿ ನೋಡಿದಳು. ನುಣುಪು ಕಾಲು. ಮತ್ತೆ ಮತ್ತೆ ದಿಟ್ಟಿಸಿ ನೋಡಿದಳು. ಕಾಲಿನ ಮೇಲಿಂದ ಯಾವಾಗಲೋ ಜಾರಿ ಹೋಗಿದ್ದ ಬೂದಿಗೆ ತಾನೇ ಒಂದು ಅಸ್ತಿತ್ವ ಕೊಡಲು ಪ್ರಯತ್ನಿಸುತ್ತಿದ್ದೇನೆಯೆ? ಎಂದು ಗಲಿಬಿಲಿಗೊಂಡಳು.

ರೂಮಿಗೆ ಬಂದು ಆ ನಡುರಾತ್ರಿ ಕಣ್ಣುಗಳೆರೆಡು ಬಿಗಿಯಾಗಿ ಮುಚ್ಚಿ ಮಲಗಲು ಪ್ರಯತ್ನಿಸಿದಳು. ಮುಚ್ಚಿದ ಕಣ್ಣುಗಳ ಮುಂದೆ ಕತ್ತಲು ಬಿಟ್ಟರೆ ಏನಿರಲಿಲ್ಲ. ತಟ್ಟಂತ ಕಣ್ಣು ತೆರೆದಳು ಮತ್ತದೇ ಕತ್ತಲು. ಸ್ವಲ್ಪ ಹೊತ್ತಿನ ನಂತರ ಆ ಕತ್ತಲಲ್ಲಿಯೂ ಕೆಲವು ವಸ್ತುಗಳು ಕಾಣಿಸಿದವು. ನೀರು ತುಂಬಿಟ್ಟ ಕೊಡ, ನಾಲ್ಕು ಕಾಲಿನ ಬಣ್ಣ ಮಾಸಿರುವ ಮೇಜು, ಕಿಟಕಿಯಲ್ಲಿ ಇಳಿಬಿಟ್ಟಿರುವ ಹಳದಿ ಟವೆಲ್, ಛೇ! ಯಾಕಿಷ್ಟು ಯೋಚಿಸುತ್ತಿದ್ದೇನೆ. ನಿಜವಾಗಲೂ ಇವುಗಳೆಲ್ಲ ನನ್ನ ಕಣ್ಣುಗಳಿಗೆ ಕಾಣುತ್ತಿವೆಯಾ? ಅಥವಾ ನಾ ಬಿಡಿಸಿಟ್ಟುಕೊಂಡಿರುವ ಚಿತ್ರಗಳೆ? ಈ ನಾಜೂಕು ರಾತ್ರಿಯೊಂದು ಯಾರಾದರೂ ಒಡೆದು ಬಿಡಬೇಕು. ಇಲ್ಲಿ ನನಗೆ ಉಸಿರಾಡಲಾಗುತ್ತಿಲ್ಲ. ಆದಷ್ಟು ಬೇಗ ಈ ಹಗಲು ರಾತ್ರಿಗಳ ಗೆರೆ ದಾಟಿ ಎಲ್ಲಿಗಾದರೂ ಹಾರಿಬಿಡಬೇಕುಂದುಕೊಳ್ಳುತ್ತೇನೆ ಆಗುವುದಿಲ್ಲ. ಅವಳೊಳಗಿನ ಈ ಮಾತುಗಳು ತುದಿಯಿಲ್ಲದೆ ಪುಟಿಪುಟಿದು ಹೊರಗೆ ಬರುತ್ತಿದ್ದವು.

ಮೂರರ ಮೇಲಿದ್ದ ಫ್ಯಾನ್ ಫುಲ್ ಜೋರ್ ತಿರುಗಿಸಿಟ್ಟಳು. ಬಾಗಿಲು ತೆಗೆದರೆ ತಣ್ಣನೆಯ ಗಾಳಿ ಒಳ ನುಗ್ಗಬಹುದೆಂದು ಬಾಗಿಲು ತೆರೆದಿಟ್ಟಳು. ಈ ಡ್ರೆಸ್ ಮೇಲೆ ಮೋಸ್ಟ್ಲಿನಿದ್ದೆ ಹತ್ತಲಿಕ್ಕಿಲ್ಲವೆಂದು ಬಟ್ಟೆ ಬದಲಾಯಿಸಿ ಮಲಗಿದಳು. ಕಿಟಕಿಗಳೆಲ್ಲ ಓಪನ್ ಮಾಡಿ ಗಾಳಿಗೆ ಕಾಯ್ದಳು. ಯಾವುದಾದರೂ ಪುಸ್ತಕ ಕೈಗೆ ಹಿಡಿದರೆ ನಿದ್ದೆ ಬರಬಹುದೆಂದು ಓದಲು ಪ್ರಯತ್ನಿಸಿದಳು. ಅವಳಿಗೆ ಆಯಾಸವಾದಂತೆ ಆಯ್ತು. ಹಾಸಿಗೆಗಳೆಲ್ಲ ಮೈತುಂಬಾ ಸುತ್ತಿಕೊಂಡು ಹೊರಳಾಡಿದಳು. ಅಂದರೂ ನಿದ್ದೆ ಇಲ್ಲ. ಒಂದು ಸಾವಿರ ರೂಪಾಯಿ ಫೀಸ್ ಕಟ್ಟಿ ಡಾಕ್ಟರ್ ಹತ್ತಿರ ಬರಿಸಿಕೊಂಡು ಬಂದಿದ್ದ ಗೋಲಿಗಳು ತೆಗೆದುಕೊಂಡು ಹೊಟ್ಟೆ ತುಂಬಾ ನೀರು ಕುಡಿದು ಅಂಗಾತ ಮಲಗಿ ಕಣ್ಣು ಮುಚ್ಚಿದಳು. ಅವಳಿಗೆ ಸಂಬಂಧವೇ ಇಲ್ಲದ ಯೋಚನೆಗಳು, ಘಟನೆಗಳು ಬೇರೆ ಬೇರೆ ದಿಕ್ಕಿನಿಂದ ಬಂದು ತಲೆಗೆ ನುಗ್ಗುತ್ತಿದ್ದವು. ಅವಳ ತಲೆಯೊಳಗೆ ಒಂದು ಯುದ್ಧವೇ ನಡಯುತ್ತಿತ್ತು. ಒದ್ದಾಡಿ ಒದ್ದಾಡಿ ಎಷ್ಟೇ ಮಲಗಬೇಕೆಂದರು ಆಗದೆ ಮೂಲೆಯಲ್ಲಿ ಕೂತು ಜೋರಾಗಿ ಅತ್ತಳು.

ಇದು ಅವಳ ಬದುಕಿನ ಒಂದು ರಾತ್ರಿಯ ಕಥೆಯಾಗಿರಲಿಲ್ಲ. ಪ್ರತಿದಿನದ ಒದ್ದಾಟವಾಗಿತ್ತು. ಮುಂಜಾನೆ ಅಷ್ಟೋ ಇಷ್ಟೋ ಲವಲವಿಕೆಯಿಂದ ಓಡಾಡುವ ನಿರೋಷ ಕತ್ತಲಾದರೆ ಸಾಕು, ಕೈಯಲ್ಲೊಂದು ಪೆನ್ಸಿಲ್ ಹಿಡಿದು ಗೋಡೆ ಮೇಲೆ ಚಿತ್ರಗಳು ಬಿಡಿಸುತ್ತಾ ಕೂರುತ್ತಿದ್ದಳು. ಅವುಗಳೆಲ್ಲ ವಿಚಿತ್ರ ಚಿತ್ರಗಳು. ನೋಡುವವರಿಗೆ ಯಾವ ಅರ್ಥಗಳು ಬಿಟ್ಟುಕೊಡದೆ. ಪುಟ್ಟ ಮಗುವೊಂದು ಬಿಳಿ ಹಾಳೆ ಮೇಲೆ ಅಡ್ಡಾದಿಡ್ಡಿಯಾಗಿ ಕೊರೆದ ಗೆರೆಗಳಂತೆ ಇದ್ದವು. ಈ ಸಿಕ್ಕುಗಳೆಲ್ಲ ಬಿಡಿಸಿ ಒಳಹೊಕ್ಕು ಆ ಚಿತ್ರಗಳೊಳಗೆ ಏನಿವೇ ಎಂದು ನೋಡುವವರು ಯಾರಿರಲಿಲ್ಲ. ಮೂಲೆಯಲ್ಲಿ ಬಿದ್ದಿದ್ದ ವಿಸ್ಕಿ ಬಾಟಲ್‌ಗಳು, ಸೇದಿ ಬಿಸಾಡಿದ ಸಿಗರೇಟನ ತುಂಡುಗಳು, ತಲೆ ಬಾಚುವಾಗ ಸುರುಳಿ ಸುತ್ತಿ ಎಸೆದಿದ್ದ ಕೂದಲು, ಪೇಪರಿನ ಉಂಡೆಗಳು, ಕೈಕೊಟ್ಟು ಹಾಳಾದ ಹಳೆ ಲೈಟರ್‌ಗಳು, ಎಂದಿಗೂ ನೆಲಗುಡಿಸದೆ ವಯಸ್ಸಾದ ಕಸಬರಿಗೆ, ಏನೆಲ್ಲ ಮೂಲೆಯಲ್ಲಿ ಒಂದರೊಳಗೊಂದು ಸೇರಿ ಬಿದ್ದಿತ್ತೊ ಗೊತ್ತಿಲ್ಲ. ಬಾತ್‌ರೂಮಿನ ಮುಂದೆ ಕಾಲು ಒರೆಸಲಿಟ್ಟ ಮ್ಯಾಟ್ ನಿರೋಷಳ ಅಮ್ಮ ಹಳೆ ಚಿಂದಿ ಬಟ್ಟೆಗಳೆಲ್ಲ ಸೇರಿಸಿ ರೌಂಡ್ ಆಕಾರದಲ್ಲಿ ಹೊಲೆದು ಕೊಟ್ಟಿದ್ದಳು.

ಒಂದೆರೆಡು ದಿನಗಳ ಹಿಂದೆ. ಎಂದಿನ ಸಂಜೆಯಂತೆ ಆವತ್ತು ಸ್ಕೂಲ್ ಮುಗಿಸಿಕೊಂಡು ವ್ಯಾನಿನಲ್ಲಿ ಬರುವಾಗ ಹಸಿ ಕೆಸರಲ್ಲಿ ಮಲಗಿದ್ದ ಬೀದಿ ನಾಯಿಯೊಂದನ್ನು ನಿರೋಷ ನೋಡಿದಳು. ಅದರ ಹಿಂದೆ ಮುಂದೆ ಹುಡುಗರು ಓಡಾಡುತ್ತಿದ್ದರು. ಆಗಾಗ ಬೈಕ್, ಕಾರುಗಳು ಅದರ ಹತ್ತಿರದಿಂದಲೇ ಹೋಗುತ್ತಿದ್ದವು. ಅದು ಸುಮ್ಮನೆ ಮಲಗಿತ್ತು. ಅವಳಿಗೆ ಗೊತ್ತಿಲ್ಲದೆ ಪಳ್ ಅಂತ ನಾಲ್ಕೈದು ಹನಿಗಳು ಕಣ್ಣಿಂದ ಉದುರಿ ಬಿದ್ದವು. ಯಾರೂ ತನಗೆ ಗಮನಿಸಿಲ್ಲವೆಂದು ಖಾತ್ರಿಗೊಂಡು ಮತ್ತೇ ಗಂಭೀರವಾಗಿ ಕೂತಳು. ಆ ನಾಯಿ ಎಷ್ಟೊಂದು ಆರಾಮಾಗಿ ಮಲಗಿದೆಯಲ್ಲ ಎಂದು ಮುಖದ ಮೇಲೆ ಸಂತೃಪ್ತಿಯ ಭಾವ ತಂದುಕೊಂಡಳು.

ಯಾರೊಂದಿಗೂ ಅಷ್ಟಾಗಿ ಬೆರೆಯದ ನಿರೋಷ, ಇಂಗ್ಲಿಷ್ ಮೀಡಿಯಂ ಸ್ಕೂಲೊಂದರಲ್ಲಿ ಕನ್ನಡ ಟೀಚರ್ ಆಗಿ ವರ್ಕ್ ಮಾಡುತ್ತಿದ್ದಳು. ಯಾರಿಗೂ ಹೊರೆಯಾಗದೆ ತನ್ನ ಪಾಡಿಗೆ ತಾನಿರೋ ನಿರೋಷಗೆ ಯಾಕೋ ರಾತ್ರಿಗಳೆಂದರೆ ಆಗುತ್ತಿರಲಿಲ್ಲ. ತಾನು ಸಂಪೂರ್ಣವಾಗಿ ಮಲಗಿ ಎದ್ದಿರುವ ರಾತ್ರಿ ತನಗೆ ನೆನಪೆ ಇಲ್ಲವೆಂದು ಆಗಾಗ ಈ ರೂಮಿನ ಗೋಡೆಗಳಿಗೆ ಹೇಳುತ್ತಾಳೆ. ಆ ರೂಮಿನ ಗೋಡೆಗಳು ಸಹ ಅವಳು ಬರೆದಿರುವ ಚಿತ್ರಗಳ ಮೂಲಕ ಅಸಂಖ್ಯಾತ ಕಥೆಗಳು ಹೇಳುತ್ತವೆ. ಸದ್ದಿಲ್ಲದೆ ಬದುಕುವ ಈ ಹುಡುಗಿಗೆ ಮನೆ ಓನರ್ ಆಂಟಿ ಒಂದು ದಿನ ‘ಯಾವುದರೇ ಹೊಟ್ಯಾಗಿನ ಮಾತ ಇದ್ರೆ ನಮ್ಮ ಮುಂದ ಹೇಳಬೇಕವ್ವ, ಮನಸಿನಾಗ ಇಟ್ಟಕೊಂಡ ಸೊರಗಬ್ಯಾಡ. ತಂದೆ ತಾಯಿಗಿ ಬಿಟ್ಟು ದೂರ ಊರಿಗಿ ದುಡ್ಡಿಲಕ ಬಂದಿ. ಸುತ್ತಮುತ್ತಿನವರೆ ನಮ್ಮವರು ಅನ್ನಕೊಂಡು ಹೋಗಬೇಕ ನೋಡ’ ಅಂದರು.
ಸಣ್ಣಗೆ ಮುಗಳ್ನಗುತ್ತ ‘ಹ್ಞೂ ಆಂಟಿ ಹಂಗೇ ಆಗ್ಲಿ’ ಇಷ್ಟು ಹೇಳಿ ಸುಮ್ಮನಾದಳು. ಅವರ ಕೈಗೆ ಮತ್ತೇ ಅವಳು ಸಿಕ್ಕಿದ್ದು ಅಪರೂಪ.

ಅವಳಿಗೆ ಅತೀ ಹೆಚ್ಚು ಬಾರಿ ಬಿದ್ದಿದ್ದ ಕನಸೊಂದು ಈಗಲೂ ನೆನಪಿಸಿಕೊಂಡು ಅಳುತ್ತಾಳೆ. ‘ನನಗೂ ಕನಸುಗಳು ಬೀಳುತ್ತಿದ್ದವು ಅನ್ನುವುದಕ್ಕೆ ಇದೊಂದೆ ಕನಸು ನನ್ನೊಳಗಿರುವ ಸಾಕ್ಷಿ’ ಎಂದು ಹೇಳುವ ನಿರೋಷ. ಆ ಕನಸು ಲೆಕ್ಕವಿಲ್ಲದಷ್ಟು ಸಲ ತಾನು ನಡೆಯುತ್ತಿರುವ ರಸ್ತೆಗಳಿಗೆ, ತಲೆ ಮೇಲಿನ ಮೋಡಗಳಿಗೆ, ಟೆರಸ್ ಮೇಲೆ ಜೊತೆಗಾರನಂತಿರುವ ಸಿಗರೇಟಿಗೆ, ರದ್ದಿ ಪೇಪರಿನ ತುಂಡುಗಳಿಗೆ, ಅವಳ ಕಣ್ಣೆದುರು ಹಾದು ಹೋಗುವ ಇರುವೆ, ಹುಳು ಹುಪ್ಪಟಿಗಳಿಗೂ ಹೇಳಿದ್ದಾಳೆ. ಅವಳ ರೂಮಿನ ಟ್ಯೂಬಲೈಟ್‌ ಕೆಳಗೆ ಬಲೆ ಹೆಣೆದು ಅಲ್ಲೇ ಸತ್ತು, ಒಣಗಿ ಹೋಗಿ ಪೇಪರನಂತೆ ಆಗಿರುವ ಜೇಡಕ್ಕೂ ತನ್ನ ಕನಸು ಹೇಳಿದ್ದಾಳೆ. ಅವಳೆಂದಿಗೂ ಅದನ್ನು ಅಲ್ಲಿಂದ ಕ್ಲಿನ್ ಮಾಡಿ ತೆಗೆಯಲು ಹೋಗಿಲ್ಲ.


ಕಲೆ: ಮದನ್‌ ಸಿ.ಪಿ.

ಕಣ್ಣುಗಳಿಂದ ದಿಟ್ಟಿಸಿ ನೋಡಿದರೆ ಎದ್ದು ಬೀಳುವ ಜೇಡ ಬಲೆಯ ಅಸಂಖ್ಯಾತ ಎಳೆಎಳೆಯಾದ ದಾರಗಳಿಗೆ ಬೆರುಗುಗೊಂಡಿದ್ದಾಳೆ. ಇಷ್ಟೆಲ್ಲ ನಾಜೂಕಾಗಿ, ಒಂದು ತುದಿಯಿಂದ ಇನ್ನೊಂದು ಕಡೆಗೆ ಬಲೆ ಹೆಣೆದು ಜೋತು ಬಿದ್ದಿರುವ ಈ ಜೇಡಕ್ಕೆ ಮನೆಮಸಣಗಳೆಲ್ಲ ಒಂದೇ ಅಲ್ಲವೇ? ಒಳ್ಳೆದಾಯ್ತು ಬಿಡು, ಬೇಗ ಸತ್ತು ಹೋಗಿ ಹಾಯಾಗಿ ಮಲಗಿರುವೆ. ಎದ್ದು ತೆವಳಬೇಕಿಲ್ಲ. ಬಲೆ ಹೆಣೆಯುವ ಚಿಂತೆಯೂ ಇಲ್ಲ. ನಾನು ನಿನ್ನಂತೆ ಒಂದು ಜೇಡವಾಗಿದ್ದರೆ? ಹೀಗೆ ಎಷ್ಟು ಹೊತ್ತು ಯೋಚಿಸುತ್ತ ಕೂತಿದ್ದಳೋ ಗೊತ್ತಿಲ್ಲ. ತೆರೆದೆ ಇದ್ದ ಕಣ್ಣುಗಳಿಂದ ನೀರು ಜಿನುಗುವುದು ನೋಡಿ ಮುಖ ತೊಳೆದುಕೊಂಡು ಬಂದಳು.

ಸುತ್ತಲು ಒಣ ಹುಲ್ಲು. ಕಣ್ಣು ಬೀಸಿದಲೆಲ್ಲ ಎದ್ದು ನಿಂತಿರುವ ಚೂಪಾದ ಕಡ್ಡಿಯಂತಹ ರಾಶಿ ರಾಶಿ ಒಣ ಹುಲ್ಲು. ಅವನ ಕೈಹಿಡಿದು ನಡೆಯುತ್ತಿದ್ದಳು. ಕಾಲಿಗೆ ಕಡ್ಡಿಗಳು ಚುಚ್ಚುತ್ತಿದ್ದವು. ತಲೆ ಮೇಲಿನ ಉರಿ ಬಿಸಿಲು ಒಂದೇ ಸಮನೆ ಬೆವರು ಉಕ್ಕಿಸಿ ಸುಸ್ತಾಗಿಸುತ್ತಿತ್ತು. ಮೊಣಕಾಲಿನ ಕೆಳಗೆ ಸಣ್ಣಗೆ ರಕ್ತ ಜಿನುಗಲು ಶುರುವಾಗಿರಬೇಕು. ಈ ಹಾಳಾದವ ಇಲ್ಯಾಕೆ ಕರೆದುಕೊಂಡು ಬಂದಿದ್ದಾನೋ ಏನೋ? ಬೇರೆ ಜಾಗ ಸಿಗಲಿಲ್ಲವೆ ಎಂದು ಅವನಿಗೆ ಬೈದಳು. ಮಾತಿಲ್ಲದೆ ಇಬ್ಬರೂ ಎಷ್ಟು ದೂರ ನಡೆದರೋ ಗೊತ್ತಿಲ್ಲ. ನಿರೋಷ ಒಂದು ಮರದ ಕೆಳಗೆ ಕಾಲುಗಳು ಸೋತು ಕೂತಾಗ, ಹುಲ್ಲು ಕಣ್ಣೆದುರೆ ಧಗಧಗನೆ ಉರಿಯುತ್ತಿರುವಂತೆ ಕಾಣಿಸಿತು.

ಇದು ಭ್ರಮೆಯೋ ವಾಸ್ತವವೋ ಎಂಬ ಗೊಂದಲಕ್ಕೆ ಬಿದ್ದಳು. ಇಷ್ಟು ದೂರ ನಡೆಸುಕೊಂಡು ಬಂದ ಪುಣ್ಯಾತ್ಮ ಹಣೆ ಮೇಲಿಂದ ಉದುರುತ್ತಿರುವ ಈ ಬೆವರಿನ ಗೆರೆಗಳಿಗೆ ಬಾಯಿಂದ ತಣ್ಣನೆಯ ಗಾಳಿಯಾದರೂ ಊದಬಾರದೆ ಎಂದುಕೊಂಡಳು. ಅವಳ ಪಕ್ಕವೇ ಕೂತಿದ್ದ. ಅವನಿಗೂ ಬೆವರು ಎಲ್ಲೆಂದರಲ್ಲಿ ಪುಟಿದು ಅಂಗಿ ಹಸಿಯಾಗಿಸುತ್ತಿತ್ತು. ಸ್ವಲ್ಪ ಹೊತ್ತು ಇಬ್ಬರೂ ಮೌನವಾಗಿಯೇ ಕೂತಿದ್ದರು. ‘ನಿರೋಷ ನಿನ್ನ ಕಣ್ಣುಗಳು ತುಂಬಾ ಚೆನ್ನಾಗಿವೆ’ ಅಂದ. ಅವಳು ಏನು ಪ್ರತಿಕ್ರಿಯೆ ನೀಡಲಿಲ್ಲ. ಆ ನಿನ್ನ ಕಣ್ಣುಗಳಿಗೆ ಮುತ್ತಿಡಲೆ ಅಂದ. ನಿರೋಷ ತಲೆ ತಗ್ಗಿಸಿ ಕೂತಳು.

ತೀರಾ ಸಮೀಪ ಬಂದು ಅವಳ ಹಣೆ ಎತ್ತಿ ಕಣ್ಣರೆಪ್ಪೆಯ ಮೇಲೆ ನಾಜೂಕಾಗಿ ಮುತ್ತಿಟ್ಟು ಮತ್ತೆ ಸಿಗುತ್ತೇನೆ ಹುಡುಗಿ ಎಂದು ಹೇಳಿ ಎಲ್ಲಿಗೋ ಹೊರಟು ಹೋದ. ಇವಳು ಕಣ್ಣು ಬಿಟ್ಟಾಗ ತಲೆ ಎತ್ತಿ, ಬಗ್ಗಿಸಿ, ಗಾಳಿ ಬಿಸಿದತ್ತ ಮುಖ ಮಾಡುತ್ತಿದ್ದ ಒಣ ಹುಲ್ಲು, ಒಂಟಿ ಮರ ಮತ್ತು ಅವಳು ಬಿಟ್ಟರೆ ಅಲ್ಲಿ ಸುತ್ತಲು ಏನಿರಲಿಲ್ಲ. ಇದೊಂದು ಸಣ್ಣ ಮುತ್ತಿಗೆ ಇಷ್ಟು ದೂರ ಕರೆದುಕೊಂಡು ಬಂದನೆ? ತಟ್ಟನೆ, ವಾಪಸ್ ಹೋಗುವುದು ಹೇಗೆಂದು ಚಿಂತಿಸಿದಳು. ಕೈಕಾಲಿಗೆ ಚುಚ್ಚುವ ಒಣ ಕಡ್ಡಿಯಂತಹ ಹುಲ್ಲಿನ ಸಾಲು, ಒಂದು ಮುತ್ತಿನಲ್ಲಿಯೇ ಸತ್ತು ಹೋದ ಹುಡುಗ. ಒಬ್ಬಂಟಿ ನಿರೋಷ. ಬೆಂಕಿ ಚೆಲ್ಲುತ್ತಿರುವ ತಲೆ ಮೇಲಿನ ಬಿಸಿಲು.

ಈ ಹುಲ್ಲಿನ ಮಧ್ಯೆ ಮಗಳ ಕಾಲಿಗೆ ಮುಳ್ಳು ಚುಚ್ಚುಬಹುದೆಂದು ಮುಳ್ಳುಗಳು ಎತ್ತಿಡುತ್ತಿರುವ ಅಮ್ಮ. ಅರೆ! ಅಮ್ಮ ಇಲ್ಲಿ ಬಂದಳು. ಖುಷಿಯಿಂದ ಕುಣಿದಳು. ಅಮ್ಮ ಬಗ್ಗಿ ಮುಳ್ಳು ತೆಗೆಯುತ್ತಿದ್ದರೆ ಅಪ್ಪ ಅಮ್ಮನ ಕೂದಲು ಹಿಡಿದು ಜಗ್ಗಾಡುತ್ತಿದ್ದ. ಈ ನಡು ಮಧ್ಯಾಹ್ನ ಕುಡಿದು ಬಂದಿರಬೇಕು. ಗಾಳಿಗೆ ಕೆದರಿ ನಿಂತ ಅವ್ವನ ಕೂದಲು ನೋಡಿ. ‘ಏ ಬೋಸುಡಿ ಯಾರ ಮಗ್ಗಲಾಗ ಮೆತ್ತಗಾಗ ಬಂದಿಯೇ’ ಎಂದು ಒದರುತ್ತದೆ. ಕೈಗೆ ಸಿಕ್ಕಿದ ಕಲ್ಲು ತಗೊಂಡು ಅವಳ ತಲೆ ಮೇಲೆ ಎತ್ತಿ ಹಾಕಲು ಹೋದ. ದೂರದಿಂದಲೇ ನಿರೋಷಾ ಚಟ್ ಅಂತ ಚೀರಿದಳು. ನಿದ್ದೆಯಿಂದ ಎಚ್ಚರಾದವಳಿಗೆ ಕಣ್ಣೆದುರು ಕತ್ತಲು ಬಿಟ್ಟರೆ ಏನಿಲ್ಲವೆಂದು ನೋಡಿ. ಸಮಾಧಾನ ಮಾಡಿಕೊಂಡಳು.

ಇದೇ ಕನಸು ಅವಳಿಗೆ ಈ ಹಿಂದೆ ಎಷ್ಟೋ ಸಲ ಬಿದ್ದಿದ್ದೆ. ಕುಡಿದು ಸತ್ತು ಹೋದ ಅಪ್ಪನಿಗೆ ಅವಳ ಯಾವ ಕಣ್ಣೀರು ಇಲ್ಲ. ಈ ಸಲ ಸಂಬಳ ಬಂದ ತಕ್ಷಣ ಅವ್ವನಿಗೊಂದು ಮಸ್ತ್ ರೇಷ್ಮೆ ಸೀರೆ ತಗೋಬೇಕು. ನನ್ನ ಕೈಹಿಡಿದು ಕರೆದುಕೊಂಡ ಹೋದ ಹುಡುಗ ಯಾರಿರಬಹುದು? ಮುಖ ಹೆಸರು ಏನು ನೆನಪಾಗುತ್ತಿಲ್ಲ. ಈ ಹಾಳಾದ ಕನಸು ಅವನ ಹೆಸರಾದರು ಹೇಳಬಾರದೆ? ಎಂದು ನಿರೋಷ ತನಗೆ ತಾನೇ ಮಾತಾಡಿಕೊಂಡಳು.

ಈ ಕನಸಿಗೂ ಅವಳ ನಿದ್ದೆಗಳಿಲ್ಲದ ರಾತ್ರಿಗಳಿಗೂ ನಿರೋಷ ಯಾವುದೇ ಸಂಬಂಧವಿಲ್ಲವೆಂದೆ ಹೇಳುತ್ತಾಳೆ. ಸತ್ತು ಜೋತಾಡುತ್ತಿರುವ ಜೇಡ, ಸತ್ತು ಬಿದ್ದಿರುವ ಮರಿ ಇರುವೆಗೆ ಎಳೆದು ಒಯ್ಯುತ್ತಿರುವ ಇನ್ನೊಂದು ಇರುವೆ, ನಿರೋಷ ಚಿತ್ರಗಳು ಸುರಿದಿರುವ ಗೋಡೆಗಳು, ಅವಳ ಮಾತಿಗೆ ಯಾವ ಉತ್ತರವೂ ನೀಡದೆ ಸುಮ್ಮನಾಗುತ್ತವೆ. ಹೀಗೆ ನೂರಾರು ಯೋಚನೆಗಳಲ್ಲಿ ಮುಳುಗಿದವಳು. ಹಾಸಿಗೆಯಿಂದ ಎದ್ದು ಚಹಾ ಮಾಡಿಕೊಂಡಳು. ಸ್ವಲ್ಪ ಮೈಹಗುರ ಆದಂತೆ ಅನಿಸಿ. ಇವತ್ತು ಟಿಫಿನ್ ಏನು ಮಾಡ್ಲಿ ಅಂತ ಯೋಚಿಸುತ್ತ. ಸ್ನಾನಕ್ಕೆಂದು ಬಾತ್‌ರೂಮಿಗೆ ಹೋದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು