ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಪರಿವರ್ತನೆ

Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಏನೇ ಆದರೂ ವರ್ಷಗಳಿಂದ ದಿನಚರಿ ಮಾತ್ರ ಸ್ವಲ್ಪವೂ ಬದಲಾಗಿಲ್ಲ. ನಸುಕಿಗೇ ಏಳುವುದು. ನಿಲುವು ಕನ್ನಡಿಯ ಮುಂದೆ ಅರೆಗಳಿಗೆ ನಿಂತು, ಕೂದಲಲ್ಲಿ ಕೈಯಾಡಿಸಿಕೊಳ್ಳುವುದು. ಚಕಚಕನೆ ಹಲ್ಲುಜ್ಜಿ, ಟ್ರ್ಯಾಕ್ ಸೂಟ್, ರನ್ನಿಂಗ್ ಶೂ ಧರಿಸುವುದು. ಕಿವಿಗೆ ಇಯರ್‌ಫೋನ್ ಮೂಲಕ ಸಂಗೀತ ತುಂಬಿಕೊಂಡು ಬಿರುಸು ನಡಿಗೆ ಆರಂಭಿಸುವುದು. ಮುಂದಿನ ಒಂದು ಗಂಟೆ ಮೈ-ಮನಸ್ಸು ನಸುಕಿನ ಗಾಳಿ-ಚಳಿ-ಉದ್ಯಾನವನದ ಹಸಿರಿಗೆ ತೆರೆದುಕೊಳ್ಳುತ್ತದೆ. ಉಲ್ಲಾಸದಲಿ ಅರಳುತ್ತದೆ. ಪ್ರತಿ ನಿತ್ಯವೂ ಅದೇ ದಾರಿ. ಅದೇ ಸಮಯಕ್ಕೆ ಎದುರಾಗುವ ಅದೇ ಜನ. ಎಲ್ಲವೂ ಅದೇ.

ಆದರೆ, ಶಶಿಕಾಂತ ಸಮೀರವಾಡಿ ಮಾತ್ರ ಎದುರಿಗೆ ಬರುವ ಅವೇ ಅವೇ ಮುಖಗಳತ್ತ ತಪ್ಪಿಯೂ ನೋಡುವುದಿಲ್ಲ. ನಗೆ ಬೀರುವುದಿಲ್ಲ. ಮಾತಂತೂ ದೂರವೇ ಉಳಿಯಿತು. ಬೇರೆಯವರ ಸಲ್ಲದ ಉಸಾಬರಿ ನನಗೇಕೆ. ನನ್ನ ಬದುಕು, ಸ್ವಾತಂತ್ರ್ಯದ ಆಯ್ಕೆ ನನ್ನವೇ. ನಾನು ಬಯಸಿದರೆ ಮಾತ್ರ ಉಳಿದವರಿಗೆ ಅಲ್ಲಿ ಪ್ರವೇಶ. ಅನಗತ್ಯ, ದೇಶಾವರಿ ಸಂಬಂಧಗಳಿಗೆ ನನ್ನಲ್ಲಿ ಆಸ್ಪದವಿಲ್ಲ, ಎಂಬುದು ಆತನ ನಿಲುವು.

ಬಿರುಸು ನಡಿಗೆ ಮುಗಿಸಿ, ಮೂಲೆ ಅಂಗಡಿಯಲ್ಲಿ ಎಳೆನೀರು ಕುಡಿದು ಫ್ಲಾಟಿಗೆ ಬಂದರೆ ಕೆಲಸದವಳು ಅದಾಗಲೇ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ಸಿದ್ಧತೆಯಲ್ಲಿ ತೊಡಗಿರುತ್ತಾಳೆ. ಮುಂದಿನ ಅರ್ಧಗಂಟೆ ನಿಧಾನ ಸ್ನಾನಕ್ಕೆ ಮೀಸಲು. ದಾಡಿ ಮಾಡಿಕೊಳ್ಳುವಾಗ ಮತ್ತೊಮ್ಮೆ ತಲೆಗೂದಲಲ್ಲಿ ಕೈಯಾಡಿಸಿಕೊಳ್ಳುತ್ತ ಕನ್ನಡಿಯಲ್ಲಿ ಮುಖವನ್ನು ವಿವರವಾಗಿ ನೋಡಿಕೊಳ್ಳುವುದು ರೂಢಿ. ಪ್ರತಿ ಸಲವೂ ಮುಖ ಹೊಸದಾಗಿಯೇ ಕಂಡಾಗ ಅದೇನೋ ಖುಷಿ. ಮೊನ್ನೆ ತಾನೇ ಐವತ್ತು ಮುಗಿಯಿತು. ಆದರೂ ಕನಿಷ್ಠ ಹತ್ತು ವರ್ಷವಾದರೂ ಕಡಿಮೆ ವಯಸ್ಸಾದವನಂತೆ ಕಾಣುತ್ತೇನೆ. ಒಂದು ಚೂರೂ ಬೊಜ್ಜಿಲ್ಲದ, ಕ್ರೀಡಾಪಟುವಿನಂತೆ ಹುರಿಮಾಡಿಟ್ಟುಕೊಂಡ ದೇಹ. ಕಲೆಗಳಿಲ್ಲದ ಹಲ್ಲಿನ ಸಾಲು. ಕಣ್ಣ ಕೆಳಗೆ ಗೆರೆಗಳಿಲ್ಲದೆ ತುಂಬಿದ ಕೆನ್ನೆಗಳು. ಹತ್ತು ದಿನಕ್ಕೊಮ್ಮೆ ತಲೆ ಕೂದಲಿಗೆ ಬಣ್ಣ ಲೇಪಿಸುವುದರಿಂದ ಮುಖ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ‘ಸರ್, ನೀವು ತುಂಬಾ ಸ್ಮಾರ್ಟ್, ಸ್ಟ್ರಾಂಗ್ ಆಂಡ್ ಫಿಟ್’ ಎಂದು ಸಹೋದ್ಯೋಗಿಗಳು ಹೇಳಿದಾಗ ಅವು ಮುಖಸ್ತುತಿಯ ಮಾತುಗಳಾಗಿದ್ದರೂ ಮನಸ್ಸು ಹಿಗ್ಗುತ್ತದೆ. ‘ಎವರಿಥಿಂಗ್ ಕಮ್ಸ್ ವಿತ್ ಎ ಪ್ರೈಸ್ ಯು ನೋ!’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ. ಕೊಬ್ಬಿನ ಅಂಶವಿಲ್ಲದ ಮಿತ ಆಹಾರ, ಹಣ್ಣು, ಬಿರುಸು ನಡಿಗೆ, ವಾರಾಂತ್ಯದಲ್ಲಿ ನಾಲ್ಕು ತಾಸು ಜಿಮ್‌ನಲ್ಲಿ ವರ್ಕ್ ಮಾಡುವುದು, ಅಪರೂಪಕ್ಕೆ ವೈನ್ ಅಥವ ಶಾಂಪೇನ್. ಕ್ರಮಬದ್ಧ ಜೀವನಕ್ರಮ, ಕೀ ಕೊಡುವ ಅಗತ್ಯವೇ ಇಲ್ಲದ, ಗಡಿಯಾರದ ಮುಳ್ಳಿನಂತೆ.

ಶಶಿಕಾಂತ ಪ್ರತಿಯೊಂದರಲ್ಲೂ ಕರಾರುವಾಕ್ಕು. ಸ್ನಾನ ಮುಗಿಸಿ ಹೊರಬಂದಿದ್ದೇ ಉಪಾಹಾರ ಸಿದ್ಧವಾಗಿರಬೇಕು. ಆರಂಭದಲ್ಲಿ ಕೆಲಸದವಳು ಆತನ ಸಮಯ ಪಾಲನೆಗೆ ಹೊಂದಿಕೊಳ್ಳುವುದಾಗದೆ ಕೋಪಕ್ಕೆ ಗುರಿಯಾಗುತ್ತಿದ್ದುದುಂಟು. ಇದೀಗ ಅವಳಿಗೆ ಅಭ್ಯಾಸವಾಗಿದೆ. ಮಾತುಕತೆ ಇಲ್ಲದ, ಯಾಂತ್ರಿಕವಾಗಿ ಆಕೆ ಮಾಡಬೇಕಾದ ಕೆಲಸ ತೀರಿಸಿದರೆ ಮುಗಿಯಿತು. ಮೊದಲ ತೇದಿಯಂದು ಪಗಾರ ಖಾತ್ರಿ. ಹರ ಇಲ್ಲ-ಶಿವಾ ಇಲ್ಲ. ಒಳ್ಳೇ ಮೂಕ ಬಸಪ್ಪನ ಬದುಕು ಈ ಯಪ್ಪಂದು ಎಂದು ಆಕೆ ಸ್ವಗತದಲ್ಲಿ ಅಂದುಕೊಳ್ಳುವುದಿದೆ.

ಉಪಾಹಾರ ಮುಗಿಸುತ್ತ ಮೂರು-ನಾಲ್ಕು ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸುವುದು, ಆನಂತರ ರಾತ್ರಿಯೇ ಗುರುತಿಸಿಟ್ಟ ಬಟ್ಟೆ ತೊಟ್ಟು, ಟೈ ಬಿಗಿದು, ಅದಕ್ಕೆ ಹೊಂದುವ ಶೂ ಹಾಕಿಕೊಂಡು ಮೃದು ಚರ್ಮದ ಲ್ಯಾಪ್‌ಟಾಪ್ ಬ್ಯಾಗ್ ಕೈಗೆತ್ತಿಕೊಂಡರೆ ಕಚೇರಿಗೆ ಹೋಗಲು ಸಿದ್ಧವೆಂದೇ. ಕಾರಿನಲ್ಲಿ ಕೇಳಬೇಕಾದ ಹಾಡನ್ನು ಹೆಚ್ಚು-ಕಡಿಮೆ ನಿರ್ಧರಿಸಿ ಇಟ್ಟಿರುವುದು ಶಶಿಕಾಂತನ ಸ್ವಭಾವ. ತೊಪ್ಪೆ ಥರ ಅಲ್ಲ, ಕ್ಲಾಸ್ ಆಗಿ ಬದುಕಬೇಕು. ‘ಕ್ಲಾಸ್ ಆಗಿ’ ಎನ್ನುವುದು ಆತನ ಮೆಚ್ಚಿನ ಸ್ವಗತಗಳಲ್ಲಿ ಒಂದು. ಕಣ್ಣುಗಳಿಗೆ ತಂಪು ನೀಡುವ ತೆಳು ಬಣ್ಣಗಳು, ಕಿವಿಗೆ ಹಿತವಾಗುವ ಉತ್ತಮ ಸಂಗೀತ, ಕಲಾಭಿಜ್ಞತೆ ತೋರಿಸುವ ಕಲಾಕೃತಿಗಳು, ಆರ್ಟಿಸ್ಟಿಕಲಿ ಗುಡ್ ಮೂವೀಸ್, ಎಸ್ಥಟಿಕಲಿ ಫೈನ್ ಬುಕ್ಸ್, ವೈನ್ ಆಂಡ್ ವುಮೆನ್ ಹೀಗೆ ಆತನ ಆಯ್ಕೆಗಳು.

*

ಗುಡ್ ಮಾರ್ನಿಂಗ್, ಹಾಯ್, ಹೇ ಎನ್ನುತ್ತ ಕಚೇರಿ ಕೆಲಸ ಶುರುವಾಗುತ್ತದೆ. ತನ್ನ ವಿಶಾಲವಾದ ಕ್ಯಾಬಿನ್ ಪ್ರವೇಶಿಸುವ ಮೊದಲು ಎಲ್ಲವೂ ಶುಚಿಯಾಗಿರಬೇಕು ಎನ್ನುವುದು ಶಶಿಕಾಂತನ ಕಟ್ಟಾಜ್ಞೆ. ‘ಇರಲಿ ಬಿಡು. ಶಶಿ. ಎಲ್ಲವೂ ಬಿಳಿಬಿಳಿಯಾಗಿ ಹೊಳೆಯೋ ತರಹ ಇರೋದಕ್ಕೆ ಇದೇನು ಆಸ್ಪತ್ರೆಯೇ. ಹೇಳಿ-ಕೇಳಿ ಇದು ಅಡ್ವರ್‌ಟೈಸಿಂಗ್ ಏಜೆನ್ಸಿ. ಕೆಲವರು ರಾತ್ರಿ ಎಷ್ಟೋ ಹೊತ್ತಿನವರೆಗೂ ಕೆಲಸ ಮಾಡಿರ್ತಾರೆ’ ಎಂದು ಸಿಇಒ ಜೋಸೆಫ್ ಯಾವಾಗಲಾದರೂ ತಮಾಷೆ ಮಾಡುವುದಿದೆ. ‘ಜೋಸೆಫ್. ಪರ್ವಾಗಿಲ್ಲ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಅನ್ನೋ ಮೀಡಿಯೋಕರ್ ನಾನಲ್ಲ ಅಂತ ನಿನಗೆ ಗೊತ್ತು’ ಎಂದು ಶಶಿಕಾಂತ ತುಸು ವ್ಯಂಗ್ಯದ ಧ್ವನಿಯಲ್ಲಿ ಹೇಳಿ ಆತನ ಬಾಯಿ ಮುಚ್ಚಿಸುತ್ತಾನೆ. ಶಶಿಕಾಂತ ತನಗೆ ಸಿಇಒ ಹುದ್ದೆ ಬೇಡವೆಂದು ನಿರಾಕರಿಸಿದ ಮೇಲೆಯೇ ಅದು ಜೋಸೆಫ್‌ಗೆ ದೊರಕಿದ್ದರಿಂದ ಜೋಸೆಫ್, ಪೆಚ್ಚಾಗಿ ಓಕೆ ಬಾ ಬಾ ಎಂದು ಮಾತಿಗೆ ತೆರೆಯೆಳೆಯುತ್ತಾನೆ.

ಎಂದಿನಂತೆ ಕಾಫಿಯೊಂದಿಗೆ ಮೀಟಿಂಗ್ ಆರಂಭವಾಗುತ್ತದೆ. ಸಾಮಾನ್ಯವಾಗಿ ಅಂದಿನ ಪತ್ರಿಕೆಗಳಲ್ಲಿ ಬಂದ ಏಜೆನ್ಸಿಯ ಜಾಹೀರಾತುಗಳು, ಬೆಳಗಿನಿಂದ ಬಂದ ಫೀಡ್‌ಬ್ಯಾಕ್, ಗ್ರಾಹಕರು ಜಾಹೀರಾತನ್ನು ಹೇಗೆ ಸ್ವೀಕರಿಸಿದರು, ಜಾಹೀರಾತಿನಿಂದ ಉತ್ಪಾದನೆಯ ಮಾರಾಟ ಎಷ್ಟು ಹೆಚ್ಚಿತು ಇತ್ಯಾದಿಯನ್ನು ಅಂಕಿಅಂಶಗಳ ಸಹಿತ ಚರ್ಚಿಸಲಾಗುತ್ತದೆ. ಪ್ರತಿ ಚರ್ಚೆಯ ಸಾರಾಂಶ ಏಜೆನ್ಸಿಯ ಜಾಹೀರಾತುಗಳಿಗೆ ಗ್ರಾಹಕರು ಅತ್ಯುತ್ತಮವಾಗಿ ಸ್ಪಂದಿಸಿರುವುದು, ಮಾರಾಟ ಗಣನೀಯವಾಗಿ ಏರಿಕೆಯಾಗಿರುವುದೇ ಆಗಿರುತ್ತದೆ. ಸಿಇಒ ಜೋಸೆಫ್, ‘ನಿನ್ನ ಸ್ವಭಾವ ಏನೇ ಇರಲಿ. ಆದರೆ, ನಿನ್ನ ಕ್ರಿಯೇಟಿವಿಟಿಗೆ ಸಾಟಿ ಇಲ್ಲ ಬಿಡು. ಥ್ಯಾಂಕ್ಯೂ ಮೈ ಫ್ರೆಂಡ್’ ಎಂದು ಸಭೆ ಮುಗಿಸುತ್ತಾನೆ. ಶಶಿಕಾಂತನ ಮುಖದಲ್ಲಿ ಹಮ್ಮುಬಿಮ್ಮುಗಳ ನಗು ತುಂಬಿಕೊಳ್ಳುತ್ತದೆ. ಕಿರಿಯ ಸಹೋದ್ಯೋಗಿಗಳು ಒಂದು ರೀತಿಯ ವಿನೀತ ಭಾವದಲ್ಲಿ ಶಶಿಕಾಂತನನ್ನು ನೋಡುತ್ತ ತಮ್ಮ ತಮ್ಮ ಕೆಲಸಗಳಿಗೆ ಮರಳುತ್ತಾರೆ.

ಶಶಿಕಾಂತ ಸಮೀರವಾಡಿ ಜಾಹೀರಾತು ಲೋಕಕ್ಕೆ ಬಂದು ಇಪ್ಪತ್ತೈದು ವರ್ಷಗಳೇ ಆಗಿವೆ. ರುಸ್ತುಂ ಮಿಸ್ತ್ರಿ ಕ್ರಿಯೇಟಿವ್ ಡೈರಕ್ಟರ್ ಆಗಿದ್ದ ಕಾಲದಲ್ಲಿ ಅವರ ಸಹಾಯಕನಾಗಿ ಸೇರಿಕೊಂಡು ಇದೀಗ ಅವರ ಸ್ಥಾನವನ್ನೇ ಅಲಂಕರಿಸುವಲ್ಲಿ ಆತನ ಶಿಸ್ತು, ದಕ್ಷತೆ, ಕಠಿಣ ಪರಿಶ್ರಮ, ಯಾವುದರಲ್ಲೂ ಸಂಧಾನ ಮಾಡಿಕೊಳ್ಳದ ಜಿಗುಟುತನಗಳ ಕೊಡುಗೆಯೂ ಬೇಕಾದಷ್ಟಿದೆ ಎನ್ನವುದು ನಿಜವೇ. ಈತನ ಪ್ರತಿಭೆ ಮತ್ತು ಸಾಮರ್ಥ್ಯ ಬಲ್ಲ ಮ್ಯಾನೇಜ್‌ಮೆಂಟ್, ಕಂಪನಿಯನ್ನು ನಡೆಸುವ ಹೊಣೆ ನೀಡಿದಾಗ ಬೇಡವೆಂದು ಆತ ತಿರಸ್ಕರಿಸಿದ್ದಕ್ಕೆ ಕಾರಣ, ತಾನು ಸಿಇಒ ಆದರೆ ನಿರ್ವಹಣೆಯ ಜಂಜಾಟದಲ್ಲಿ ಕಳೆದು ಹೋಗಿ ಕನಸುಗಳನ್ನು ಸೃಷ್ಟಿಸುವ ಅವಕಾಶದಿಂದ ವಂಚಿತನಾಗುತ್ತೇನೆ ಎನ್ನುವುದೇ ಆಗಿತ್ತು. ಹಾಗೆಂದೇ, ತನ್ನೊಂದಿಗೇ ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದ ಜೋಸೆಫ್‌ನ ಹೆಸರನ್ನು ಸಿಇಒ ಸ್ಥಾನಕ್ಕೆ ಸೂಚಿಸಿದ್ದೂ ಶಶಿಕಾಂತನೇ. ಹೊರಗಡೆ ಇದು ಉದಾರವಾಗಿ ಕಂಡರೂ ಜೋಸೆಫ್ ತಾನು ಹೇಳಿದಂತೆ ಕೇಳುತ್ತಾನೆ ಎಂಬುದು ಒಳಗಿನ ಮಾತಾಗಿತ್ತು. ತಾನು ಕ್ರಿಯೇಟಿವ್ ಡೈರಕ್ಟರ್ ಆಗಿದ್ದುಕೊಂಡೇ ಸಿಇಒ ಹುದ್ದೆಯನ್ನೂ ನಿಯಂತ್ರಿಸುವ ತಂತ್ರಗಾರಿಕೆ ಇತ್ತು.

ಅದೇನೇ ಇದ್ದರೂ ಮುದ್ರಣ ಮತ್ತು ಟಿವಿ ಮಾಧ್ಯಮಗಳಲ್ಲಿ ಶಶಿಕಾಂತ ಸೃಷ್ಟಿಸುತ್ತಿದ್ದ ಜಾಹೀರಾತುಗಳು ದಿನ ಬೆಳಗಾಗುವಲ್ಲಿ ಪ್ರಸಿದ್ಧವಾಗುತ್ತಿದ್ದವು. ಉತ್ಪಾದನೆಗಳ ಮಾರಾಟ ಏಕಾಏಕಿ ಏರಿಕೆ ಕಾಣುತ್ತಿದ್ದವು. ಆತ ಸೃಷ್ಟಿಸುತ್ತಿದ್ದ ಕನಸಿನಲ್ಲಿ ಕಾಣಿಸಿಕೊಳ್ಳಲು ಮಾಡೆಲ್‌ಗಳು ಹಾತೊರೆಯುತ್ತಿದ್ದರು. ಬೇಕೆಂದರೆ ಒಂದು ಹೆಜ್ಜೆ ಹೆಚ್ಚಿಗೆ ಇಡಲು ಸದಾ ಸಿದ್ಧರಿರುತ್ತಿದ್ದರು. ಶಶಿಕಾಂತನೂ ತೀರ ಮೆಚ್ಚಿದ ಮಾಡೆಲ್‌ಗಳ ಸಾಂಗತ್ಯ ಪಡೆಯುತ್ತಿದ್ದುದುಂಟು. ಆದರೆ ಅದೊಂದು ಯಾವುದೇ ಕಮಿಟ್‌ಮೆಂಟ್‌ಗಳೂ ಇಲ್ಲದ ಕೃತಜ್ಞತಾಪೂರ್ವಕ ಒಪ್ಪಿಸಿಕೊಳ್ಳುವಿಕೆಯಾಗಿರುತ್ತಿತ್ತು. ಕಲ್ಪನೆಯನ್ನು ವಿಸ್ತರಿಸುವ ಸಹಾಯಕರು, ಕೆಮರಾಮೆನ್‌ಗಳು, ಬೆಳಕು, ಧ್ವನಿ, ಮೆಕಪ್ ತಂತ್ರಜ್ಞರು ಶಶಿಕಾಂತನ ಕ್ರಿಯಾಶೀಲತೆ, ಆ ಕ್ಷೇತ್ರದಲ್ಲಿದ್ದ ಪರಿಣತಿ ಮತ್ತು ಕರಾರುವಾಕ್ಕುತನಕ್ಕೆ ಬೆರಗಾಗುತ್ತಿದ್ದರು.

‘ಆತನ ಪ್ರತಿಭೆ, ಕ್ರಿಯಾಶೀಲತೆ, ಅದರಿಂದ ಪಡೀತಿರೋ ಯಶಸ್ಸು ಎಲ್ಲಾ ಸರಿನೇ. ಆದರೆ ಸ್ವಲ್ಪ ಮನುಷ್ಯತ್ವನೂ ಇರಬೇಕಲ್ಲ? ಬರೀ ಆತ್ಮಪ್ರಶಂಸೆ, ಸ್ವಾನುರಕ್ತಿ, ಪರಪೀಡನೆ ಅನ್ನೋ ಥರ ಆದ್ರೆ ಹೇಗೆ? ಸಹೋದ್ಯೋಗಿಗಳ ಬಗ್ಗೆ ಕಟುವಾಗಿರೋದು, ಸ್ವಲ್ಪ ವ್ಯತ್ಯಾಸವಾದರೂ ಹಂಗಿಸುವುದು, ಇಷ್ಟು ದೊಡ್ಡ ಹುದ್ದೆಯಲ್ಲಿರೋರಿಗೆ ಹೇಳಿ ಮಾಡಿಸಿದ್ದಲ್ಲ’ ಎಂಬ ಮಾತುಗಳೂ ಇದ್ದವು. ಆದರೇನು, ಮಾರುಕಟ್ಟೆ ಜಗತ್ತಿನಲ್ಲಿ ಶಶಿಕಾಂತ ನಾಗಾಲೋಟದಿಂದ ಓಡಿ ಗೆಲ್ಲಬಲ್ಲ ಕುದುರೆಯಾಗಿದ್ದ. ಅವನ ಲೋಕದಲ್ಲಿ ಎಲ್ಲವೂ ಅವನ ಕಣ್ಣರಿಕೆಯಲ್ಲಿಯೇ ಜರುಗುತ್ತಿದ್ದವು.

ಯಾವುದೇ ಅಡೆತಡೆಯಿರದ ದಿನಚರಿಯನ್ನು ಏರುಪೇರು ಮಾಡುವಂತೆ ಈ ಯುವಕ ಬಂದ. ಬೆಳಗಿನ ಬಿರುಸು ನಡೆಯಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಶಶಿಕಾಂತನಷ್ಟೇ ವೇಗದಲ್ಲಿ ನಡೆಯುತ್ತ ಸೇರಿಕೊಂಡವನು ನಕ್ಕು, ವಿಶ್ ಮಾಡಿದ. ಸಾಧಾರಣ ಪ್ಯಾಂಟು, ಅದರ ಮೇಲೊಂದು ಹೋಲಿಕೆಯೇ ಇಲ್ಲದ ದೊಗಳೆ ಟೀ-ಶರ್ಟ್, ಕಾಲಲ್ಲಿ ಹವಾಯಿ ಚಪ್ಪಲಿ ಹಾಕಿದ ಈ ಯುವಕನೊಡನೆ ನನ್ನ ವ್ಯವಹಾರವೇನು? ಎನ್ನುವಂತೆ ಶಶಿಕಾಂತ ಸಂಗೀತದ ವಾಲ್ಯೂಮ್ ಹೆಚ್ಚಿಸಿ ತನ್ನ ಪಾಡಿಗೆ ನಡಿಗೆಯ ವೇಗ ಇನ್ನಷ್ಟು ಹೆಚ್ಚಿಸಿದ. ಅಂದು ಬೆಳಗಿನ ಅವಧಿಯೆಲ್ಲ ಕಿರಿಕಿರಿ ಅನುಭವಿಸಿದ.

ಇದು ಮುಂದಿನ ಮೂರು ನಾಲ್ಕು ದಿನ ಪುನರಾವರ್ತನೆಗೊಂಡಿತು. ಕೊನೆಗೆ ಐದನೆಯ ದಿನ ರೋಸಿ, ‘ಯಾರ್‍ರೀ ನೀವು? ನಿಮಗೇನು ಬೇಕು? ಯಾಕೆ ತೊಂದರೆ ಕೊಡ್ತಿದೀರ?’ ಎಂದು ಯುವಕನ ಮೇಲೆ ಸಿಡುಕಿದ.

‘ಸಾರಿ ಸರ್. ಸುಮ್ಮನೆ ಕಂಪನಿ ಕೊಡೋಣಾಂತ ಮಾತಾಡಿದೆ, ಅಷ್ಟೇ! ನಾನು ಸೆಲ್ವರಾಜ್. ರಾಜ್ಯಮಟ್ಟದ ಮ್ಯಾರಾಥಾನ್‌ನಲ್ಲಿ ಭಾಗವಹಿಸೋದಕ್ಕೆ ಪ್ರಾಕ್ಟೀಸ್ ಮಾಡ್ತೀದಿನಿ. ವೇರಿ ಸಾರಿ ಸರ್’ ಎಂದು ಯುವಕ ವೀನಿತನಾಗಿ ಹೇಳಿದಕ್ಕೆ, ‘ಇಟ್ಸ್ ಆಲ್ ರೈಟ್. ಏನಾದ್ರೂ ಹಣದ ಸಹಾಯಬೇಕಾ?’ ಎಂದು ಕೈ ತೊಳೆದುಕೊಳ್ಳುವ ಮಾತನಾಡಿದ.

‘ಅಯ್ಯೋ! ಬೇಡಿ ಸರ್! ತುಂಬಾ ಥ್ಯಾಂಕ್ಸ್’ ಎಂದು ಆ ಯುವಕ ಕೈ ಬೀಸುತ್ತ ಹೊರಟೇ ಹೋದದ್ದು ಶಶಿಕಾಂತನನ್ನು ನಿರಾಳಗೊಳಿಸಿತು. ಹಿಮ್ಮಡಿಗಳಿಗೆ ಲಟಪಟ ಹೊಡೆದುಕೊಳ್ಳುತ್ತಿದ್ದ ಯುವಕನ ಚಪ್ಪಲಿಯ ಸದ್ದು ಇಯರ್‌ಫೋನಿನ ಸಂಗೀತವನ್ನೂ ಮೀರಿ ಕೇಳಿಸಿದವು. ಪೂರ್ ಫೆಲೋಸ್ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ ಶಶಿಕಾಂತನ ತಲೆಯಲ್ಲಿ ತಟ್ಟನೆ ಇದನ್ನು ಪವರ್‌ಫುಲ್ ಐಡಿಯಾ ಆಗಿ ಡೆವಲಪ್‌ಮಾಡಿ ಯಾವುದಾದರೂ ಬ್ರ್ಯಾಂಡಿಗೆ ಬಳಸಬೇಕು ಎಂದೆನಿಸಿತು. ಯಾವುದೂ ವ್ಯರ್ಥವಲ್ಲ ಎಂದು ತನ್ನಷ್ಟಕ್ಕೆ ನಕ್ಕ.

ಆಮೇಲೆಯೂ ಆ ಯುವಕ ಸೆಲ್ವರಾಜ್ ಶಶಿಕಾಂತನ ಮುಂದೆಯೋ-ಹಿಂದೆಯೋ ದಿನವೂ ಅದೇ ವೇಳೆಗೆ ಕಾಣಿಸುತ್ತಿದ್ದ. ಈತನ ಪತ್ರಿಕ್ರಿಯೆ ಇರದಿದ್ದರೂ ದೂರದಿಂದಲೇ ಕೈ ಬೀಸುತ್ತಿದ್ದ. ಉತ್ತಮ ಮೈ ಕಟ್ಟು, ಎತ್ತರ, ತನ್ನನ್ನೂ ಮೀರಿಸುವ ವೇಗವನ್ನು ಶಶಿಕಾಂತ ಗಮನಿಸಿದ. ಎಲ್ಲಕ್ಕೂ ಮಿಗಿಲಾಗಿ ಆತನ ತಾರುಣ್ಯ ಮತ್ತು ಆತ್ಮವಿಶ್ವಾಸವನ್ನು ಕಂಡಾಗ ಯಾಕೋ ತನಗೆ ವಯಸ್ಸಾಗುತ್ತಿದೆ ಎಂದು ಅಸೂಯೆಯಾಯಿತು.

ಮತ್ತೆ ಅಡೆತಡೆಯಿಲ್ಲದ ದಿನಚರಿ ಮೊದಲುಗೊಂಡಿತು. ಮಧ್ಯೆ ಬೆಳಗಿನ ಬಿರುಸು ನಡೆಯಲ್ಲಿ ಒಂದು ವಾರ ಸೆಲ್ವರಾಜ್ ಕಾಣದಿದ್ದಾಗ ಏನಾಯಿತೋ? ಎಂದುಕೊಂಡ.

ಅಂದು ನಸುಕಿನಲ್ಲಿ ಐದು ನಿಮಿಷ ತಡವಾಗಿ ಎಚ್ಚರವಾಯಿತು. ‘ಛೇ! ಏನಿದು’ ಎನ್ನುತ್ತಲೇ ಶಶಿಕಾಂತ ಬಿರುಸು ನಡಿಗೆ ಆರಂಭಿಸಿದ. ಉದ್ಯಾನವನದ ಇನ್ನೊಂದು ತುದಿಯಲ್ಲಿ ಸೆಲ್ವರಾಜ್ ಕಂಡು ಅಲ್ಲಿಂದಲೇ ಕೈ ಎತ್ತರಿಸಿ ವಿಶ್ ಮಾಡಿದ. ಶಶಿಕಾಂತನಿಗೆ ಏಕೋ ನಡಿಗೆಯ ವೇಗ ತಗ್ಗುತ್ತಿದೆ ಅನ್ನಿಸಿತು. ಸೆಲ್ವರಾಜ್ ಬಿರುಸಿನ ವೇಗದಲ್ಲಿ ತನ್ನತ್ತ ನುಗ್ಗುತ್ತಿರುವಂತೆ ಕಂಡಿತು. ಕಣ್ಣು ಕೊಂಚ ಮಂಜಾಗಿ ಪಕ್ಕದಲ್ಲಿದ್ದ ಮರದ ಬುಡದಲ್ಲಿ ಕುಳಿತುಕೊಳ್ಳುವಂತೆ ಮಾಡಿತು. ಜಿಂಕೆಯಂತೆ ಓಡಿ ಬರುತ್ತಿದ್ದ ಸೆಲ್ವರಾಜ್ ದೂರದಲ್ಲಿ ಕುಸಿದು ಬೀಳುವುದು ಕಂಡು ಶಶಿಕಾಂತನಿಗೆ ಭಯವಾಗಿ ಕಣ್ಣು ಮುಚ್ಚುವಂತಾಯಿತು.

*

ಕಣ್ಣು ತೆರೆದಾಗ ಜೋಸೆಫ್ ಮತ್ತು ಕಚೇರಿಯ ಒಂದಿಬ್ಬರು ಸಹೋದ್ಯೋಗಿಗಳು ಮಂಚದ ಪಕ್ಕ ನಿಂತಿದ್ದರು. ‘ನೀನೀಗ ಆಸ್ಪತ್ರೆಯಲ್ಲಿದೀಯ. ಬೆಸ್ಟ್ ಹಾಸ್ಪೆಟಲ್ ಇನ್ ದಿ ಸಿಟಿ. ಸ್ಟೇಟ್ ಆಫ್ ಆರ್ಟ್ ಫೆಸಿಲಿಟಿ ಇರೋ ಸೂಪರ್ ಮೆಡಿಕೇರ್ ಹಾಸ್ಪಿಟಲ್. ನಿನಗೇನೂ ಆಗಿಲ್ಲ. ಎಲ್ಲಾ ಟೆಸ್ಟ್‌ಗಳನ್ನು ಮಾಡಿಸಿದೀವಿ. ಸ್ವಲ್ಪ ವೀಕ್‌ನೆಸ್ ಅಷ್ಟೇ. ಮಧ್ಯಾಹ್ನ ಮನೆಗೆ ಹೋಗಬಹುದು, ಯೂ ಆರ್ ಆಲ್ ರೈಟ್ ಯೂ ಲಕಿ ಫೆಲೋ!’ ಎಂದು ಜೋಸೆಫ್, ಶಶಿಕಾಂತನ ಅಂಗೈ ಹಿಸುಕಿದ. ‘ಆಫೀಸ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಎರಡು ದಿನ ಆರಾಮವಾಗಿರು. ಮಧ್ಯಾಹ್ನ ಡಿಸ್‌ಚಾರ್ಜ್ ಸಮಯಕ್ಕೆ ಬರ್ತೀನಿ’ ಎಂದು ಸಹೋದ್ಯೋಗಿಗಳೊಂದಿಗೆ ಕೋಣೆಯಿಂದ ಹೊರನಡೆದ.

ಎರಡು ಗಳಿಗೆಗೆ ಮರಳಿ ಬಂದವನೇ, ‘ಬೇ ದಿ ವೇ. ಪಾರ್ಕಿನಲ್ಲಿ ಯಾರೋ ಯುವಕ ಓಡ್ತಾನೇ ಕಾರ್ಡಿಯಾಕ್ ಅರೆಸ್ಟ್ ಆಗಿ ಸ್ಪಾಟ್‌ನಲ್ಲೇ ಹೋದ. ಹಿ ವಾಸ್ ಜಸ್ಟ್, ಟ್ವೆಂಟಿ ಒನ್, ಯೂ ನೋ! ನೀನು ಮರದಡಿ ಪ್ರಜ್ಞೆ ಕಳೆದುಕೊಂಡಿದ್ದೆಯಲ್ಲ. ಅಲ್ಲಿಂದ ಹತ್ತು ಹೆಜ್ಜೆ ದೂರ. ಟು ಡೆ ಯೂ ಆರ್ ರಿಯಲಿ ಲಕಿ ಶಶಿ, ಇಟ್ ವಾಸ್ ಯುವರ್ ಡೇ ಕಣೋ!’ ಎಂದು ಮತ್ತೊಮ್ಮೆ ಭಾವುಕನಾದ. ‘ಇನ್ನು ಮೇಲಾದ್ರೂ ನಿನ್ನ ಅತಿ ಸಿಡುಕು, ಜಿಗುಟುತನ, ಒರಟಾಟ ಬಿಡೋ. ಎಲ್ಲರ ಥರ ಮನುಷ್ಯನ ಹಾಗೆ ಇರೋ! ನಾವೆಲ್ಲ ಸಣ್ಣಪುಟ್ಟ ಓರೆಕೋರೆ ಇರೋ ಮನುಷ್ಯರು. ಎಲ್ಲರನ್ನೂ ಅವರು ಹೇಗಿದ್ದಾರೋ ಹಾಗೆ ಒಪ್ಪಿಕೊ. ನಿನ್ನ ವಯಸ್ಸಾದ ತಾಯಿ ಯಾವುದೊ ಚಿಕ್ಕ ಊರಲ್ಲಿ ಇದಾರೆ ಅಂತ ಗೊತ್ತು. ಅವರನ್ನು ಇಲ್ಲಿಗೆ ಕರೆಸಿಕೊ. ನಾವಿಬ್ರೂ ಐವತ್ತು ದಾಟಿದೀವಿ ಮೈ ಫ್ರೆಂಡ್. ನಮಗೆ ಆಸರೆ ಬೇಕು. ನೀನು ಎಷ್ಟೇ ಒಂಟಿಯಾಗಿ ಬದುಕುತ್ತೀನಿ ಅಂದರೂ ಅದು ಸಾಧ್ಯವಿಲ್ಲ. ಅದರಲ್ಲೂ ಐವತ್ತು ದಾಟಿದ ಮೇಲೆ! ಬಾಳಿ ಬದುಕಬೇಕಾದ ಇಪ್ಪತ್ತರ ಹರೆಯದ ಹುಡುಗ ಇವತ್ತು ನಿನ್ನ ಮುಂದೆಯೇ ಕುಸಿದು ಸತ್ತು ಹೋದ. ನೀನು ಬದುಕಿದೆ. ನಿನಗಿದು ಗಿಫ್ಟ್! ಇದೆಲ್ಲ ಹೇಳ್ತಿರೋದು ಫಿಲಾಸಫರ್ ಆಗಿ ಅಲ್ಲ. ಇಪ್ಪತ್ತೈದು ವರ್ಷದಿಂದ ನಿನ್ನ ಸ್ವಭಾವದ ಪರಿಚಯ ಇರೋ ಗೆಳೆಯನಾಗಿ’ ಎಂದು ಸುಮ್ಮನೆ ನಿಂತ.

ಶಶಿಕಾಂತ, ‘ನೀನು ಹೇಳಿದ್ದು ಸರಿ, ಬದಲಾಗೋದಿಕ್ಕೆ ಪ್ರಯತ್ನ ಮಾಡ್ತೀನಿ’ ಅನ್ನುವಂತೆ ಜೋಸೆಫ್‌ನ ಕೈಗಳನ್ನು ಹಿಡಿದು ಬಲವಾಗಿ ಅದುಮಿದ. ಆತನ ತಾಯಿಯ ಮುಖ ನೆನಪಿಗೆ ಬರತೊಡಗಿದಂತೆ ಕಣ್ಣಲ್ಲಿ ನೀರು ತುಂಬಿಕೊಳ್ಳತೊಡಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT