ಸೋಮವಾರ, ಜೂನ್ 21, 2021
30 °C

ರೇಚ 

ಅಜಯ್ ಕುಮಾರ್ ಎಂ.ಗುಂಬಳ್ಳಿ Updated:

ಅಕ್ಷರ ಗಾತ್ರ : | |

Prajavani

ಮಸೀದಿಯಲ್ಲಿ ಸಾಬ್ರು ಕೂಗಿದಾಗ ರೇಚನಿಗೆ ಎಚ್ಚರವಾಯ್ತು. ಕಣ್ಣು ಬಿಟ್ಟ. ಮನೆ ತುಂಬ ಕತ್ತಲು. ಎಂದಿನಂತೆ ಅಲಾರಾಮ್ ಕಿರುಚಿಕೊಂಡಿರಲಿಲ್ಲ. ಮೊಬೈಲ್ ತಡುಕಿ ಟಾರ್ಚ್ ಆನ್ ಮಾಡಿದ. ಟೇಮು ಐದಾಗಿತ್ತು. ಮಾಮೂಲಿಯಾಗಿ ಅವನು ವ್ಯಾಯಾಮಾಭ್ಯಾಸಕ್ಕೆ ಹೊರಡುತ್ತಿದ್ದುದು ಐದುಮುಕ್ಕಾಲಿಗೆ. ನಲವತ್ತೈದು ನಿಮಿಷ ಬಾಕಿಯಿದ್ದರಿಂದ ಫೇಸ್‍ಬುಕ್, ವಾಟ್ಸ್‌ ಆ್ಯಪ್ ಓಪನ್ ಮಾಡಿ ಕಾಲ ಕಳೆಯುತ್ತಿದ್ದ. ಹುಂಜ ಕೂಗಿದ ಸದ್ದಿಗೆ ದಿಗಿಲಾಗಿ ರಗ್ಗು ಎಸೆದು ಎದ್ದು ಬಟ್ಟೆ, ಪ್ಯಾಂಟು ಹಾಕಿಕೊಂಡ. ಮಲಗುವಾಗ ಅಂಡರ್‍ವೇರ್, ಬನಿಯನ್ ಮಾತ್ರವಷ್ಟೇ ಅವನ ಮೈಮೇಲೆ. ಚಿಲಕ ತೆಗೆದು ಬಾಗಿಲು ಎಳೆದ. ಅವ್ವ ನಿದ್ದೆಗಣ್ಣಲ್ಲಿ ‘ಎಲ್ಲಿಗಪ್ಪ’ ಅಂದಳು. ಸದ್ದು ಮಾಡದೇ ನಡೆದ. ಸಣ್ಣಗೆ ಚಳಿಯಿತ್ತು. ಬೀದಿಯ ರಸ್ತೆಯಲ್ಲಿ ಒಂದೆರಡು ಬೈಕ್‍ಗಳು ನಿಂತಿದ್ದವು. ನಂಜಮ್ಮ ಎದ್ದು ನೀರಿಡಿಸುತ್ತಿದ್ದಳು. ತೊಂಬೆ ಅವಳ ಎದುರಿಗಿತ್ತು. ಅವಳ ಕತೆ ಏನು ಹೊಸದಲ್ಲ. ಮಬ್ಬಿಗೆ ಎದ್ದು ನೀರಿಡಿಸಿ, ಮನೆ ಮುಂದಿನ ಕಸ ಗುಡಿಸುವುದು ಅವಳ ದಿನಚರಿಯ ಆರಂಭ. ಎಲ್ಲಾ ಕೆಲಸ ಮುಗಿಸಿ ಮಲಗುವುದು ರಾತ್ರಿ ಹತ್ತಕ್ಕೆ.

ಮುಂದೆ ಸಾಗಿದ ರೇಚ ದೇವಯ್ಯನ ಹಟ್ಟಿ ಪೋಣಿಯಲ್ಲಿ ನೆರಳು ಕಂಡು ಬೆಚ್ಚಿದ. ನಾಯಿಗಳು ಕಚ್ಚಾಡುತ್ತ ಬೊಗಳುತ್ತಿದ್ದವು. ನೆಲದ ಮೇಲಿದ್ದ ಕಲ್ಲನ್ನು ಕೈಗೆತ್ತಿಕೊಂಡ. ಕಚ್ಚಾಡುತ್ತಿದ್ದಂಗೆ ಅವು ಒಂದರ ಹಿಂದೆ ಒಂದು ಓಡಿತು. ಕಲ್ಲನ್ನು ಕೆಳಕ್ಕಿಟ್ಟ. ಟೀ ಅಂಗಡಿ ತೆರೆದಿತ್ತು. ಕಲ್ಲುಬೆಂಚಿನ ಮೇಲೆ ಅಂಡೂರಿದ್ದವರಿಗೆ ಮಾದೇಶ ಟೀ ಕೊಡುತ್ತಿದ್ದ. ಕೆಲವರು ಚಳಿಯ ಹೊಡೆತಕ್ಕೆ ಬೀಡಿ ಕಸ್ಸಿದರು.

ಸಾಮಾಜಿಕ ಸಸ್ಯ ಕ್ಷೇತ್ರದಲ್ಲಿ ಗಿಡಗಳು ಹೆಚ್ಚಿದ್ದರಿಂದ ಚಳಿ ಹೆಚ್ಚಾಯಿತು. ಶಾಲಾ ಆವರಣದೊಳಕ್ಕೆ ನುಗ್ಗಿದ. ಅದೇ ಹೆಂಚಿನ ಕಟ್ಟಡದ ಜಗುಲಿ ಮೇಲಕ್ಕೆ ಹೋಗಿ ನಿಂತ. ಕಲ್ಲುಗಳಿಂದ ಕಟ್ಟಿದ್ದ ಹಳೇ ಕಾಲದ ದೇವಸ್ಥಾನದ ಮೇಲೆ ಗಿಡಗಳು ಮತ್ತು ಹುಲ್ಲು ಬೆಳೆದಿತ್ತು. ತಾನು ಇಸ್ಕೂಲಿಗೆ ಮೊದಲು ಕಾಲಿಟ್ಟಾಗ ಹೇಗಿತ್ತೋ? ಹಾಗೇ ಇದೆ. ಅದರ ಮೇಲೆ ಹತ್ತಿ ಇಳಿದಿದ್ದು. ಬಿದ್ದು ಮಂಡಿಗಳಲ್ಲಿ ಗಾಯವಾಗಿದ್ದು. ಕೆತ್ತನೆ ಇದ್ದ ಕಲ್ಲಿನ ಮೇಲೆ ಉಚ್ಚೆ ಉಯ್ದಿದ್ದು. ಎಲ್ಲವೂ ನೆನಪಾದವು. ಗಾಳಿಗೆ ಶಾಲಾ ಆವರಣದಲ್ಲಿ ಬಿದ್ದಿದ್ದ ಎಲೆಗಳು ಮುಂದೆ ತೆವಳುತ್ತಿದ್ದವು. ಕಬ್ಬಿಣದ ಕಂಬಿ ಹಿಡಿದು ರೇಚ ನಡುವನ್ನು ಬಗ್ಗಿಸಿದ್ದ. ನಂತರ ಓಡತೊಡಗಿ ಹಳೇ ಕಟ್ಟಡವನ್ನು ನಾಲೈದು ಸುತ್ತಾಕಿ ಏದಲು ಬಂದಾಗ ನಿಲ್ಲಿಸಿ ಕೊಠಡಿಗಳ ಕಿಟಕಿಯಲ್ಲಿ ಇಣುಕಿದ. ಮಕ್ಕಳು ಮಾಡಿದ್ದ ಪ್ರಾಜೆಕ್ಟ್ ವರ್ಕ್‍ಗಳು ಗೋಡೆ ಮೇಲೆ ನೇತಾಡುತ್ತಿದ್ದವು. ಹತ್ತನೆ ತರಗತಿಯಲ್ಲಿ ರೇಚನು ಹುಡುಗರ ಗುಂಪಿನೊಂದಿಗೆ ‘ಕನ್ನಡ ಸಂಧಿಗಳ’ ಚಾರ್ಟ್ ಮಾಡಿದ್ದ. ಶಾಲಾ ಗೋಡೆಗಳ ಮೇಲೆ ರಾಷ್ಟ್ರಧ್ವಜ, ನವಿಲು, ಹುಲಿ, ಕಮಲ, ನಾಲ್ಕು ತಲೆಯ ಸಿಂಹದ ಚಿತ್ರ ಬರೆಸಿದ್ದರು. ‘ಇದು ನಮ್ಮ ಶಾಲೆ. ನಮ್ಮೂರ ಶಾಲೆ’ ಎಂಬ ವಾಕ್ಯ ರೇಚನಲ್ಲಿ ಹೆಮ್ಮೆಯ ಭಾವ ಮೂಡಿಸಿತು. ಶಾಲಾ ದಿನಗಳು ‘ನಿಜಕ್ಕೂ ನಮ್ಮ ಪಾಲಿನ ಸ್ವಾತಂತ್ರ್ಯದ ದಿನಗಳು’ ಎಂದುಕೊಂಡ. ಶಾಲೆ ಹಿಂದಿನ ಬಸವನ ಗುಡಿ, ನೀರು ಹರಿವ ಕಾಲುವೆ, ಕಬ್ಬಿನ ಗದ್ದೆ, ಗರಿಕೆಗೆ ಬಾಯಾಕುತ್ತಿದ್ದ ದನಗಳು, ಕೂಲಿಗಾಗಿ ಹೋಗುತ್ತಿದ್ದ ಹೆಂಗಸರು, ಸಸ್ಯಕ್ಷೇತ್ರದ ಕೆಲಸದವರು, ಹಣ್ಣು ಮಾರುತ್ತಿದ್ದ ಅಜ್ಜಿ. ಎಲ್ಲದರ ನೆನಪಾಗಿ ಕಾಂಪೌಂಡಿಗೆ ಹತ್ತಿ ಕೂತ.

ರೇಚ ಡಿಗ್ರಿ ಓದಿ ಮುಗಿಸಿ ಕೆಲಸಕ್ಕಾಗಿ ಅರ್ಜಿ ಹಾಕುತ್ತಿದ್ದ. ‘ಒಂದನ್ನೆ ನೆಚ್ಚಿಕೊಂಡರೆ ಆಗಲ್ಲ’ ಎನ್ನುತ್ತಿದ್ದ ಅಪ್ಪನ ಮಾತಿಗೆ ಉತ್ತರವೆಂಬಂತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ವಾರಗೆಯವರು ಏಳು, ಎಂಟನೇ ತರಗತಿಗೆ ಸ್ಕೂಲು ಬಿಟ್ಟು ದುಡಿತಕ್ಕೆ ಒಗ್ಗಿಕೊಂಡಿದ್ದರು. ಅಪ್ಪ-ಅವ್ವನೂ ‘ಬಾಳುವವರ ಸಮಕ್ಕೆ ನಾವು ಬಾಳ್‍ಬಾರ್ದಾ ಕೂಸೇ’ ನಯವಾಗಿಯೇ ಮಗನಿಗೆ ಜವಾಬ್ದಾರಿ ಪಾಠ ಹೇಳುತ್ತಿದ್ದರು. ಇದೆಲ್ಲವೂ ಅವನಲ್ಲಿ ಯೋಚನೆ ತರುತ್ತಿದ್ದವು. ಜೊತೆಗೆ ‘ಪ್ರಿಯಾ’ಳ ಪ್ರೀತಿ ಅವನ ತಲೆ ಕೆಡಿಸಿತ್ತು. ಅವಳ ಮನೆಯಲ್ಲಿ ಮದುವೆ ಮಾತೆತ್ತಿರುವುದು ಅವನಿಗೆ ತಿಳಿದಿತ್ತು. ‘ನನಗೆ ದಕ್ಕಬೇಕಿದ್ದರೆ ಖಂಡಿತ ಸಿಗುತ್ತದೆ’ ಎಂದು ಪ್ರಿಯಾಳ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದ.

ಕೆರೆಕಡೆಯಿಂದ ಬಂದ ಶಿವು ‘ಏನ್ ಗುರು. ಸ್ಟೀಲ್ ಬಾಡಿ’ ಕೆಣಕಿದ. ಅವನ ಬಟ್ಟೆಯಲ್ಲಿ ಬಣ್ಣಗಳ ಚುಕ್ಕೆಗಳಿದ್ದವು. ಅಲ್ಲದೇ ಶಿವು ರೇಚನಿಗಿಂತ ಎರಡು ವರ್ಷ ಚಿಕ್ಕವನು. ರಜಾ ದಿನಗಳಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತ ಕಾಲೇಜಿಗೂ ಹೋಗುತ್ತಿದ್ದ. ರೇಚ ಅಸೂಹೆಯಿಂದ ಅವನನ್ನು ರೇಗಿಸಿದ. ಶಿವೂ ‘ಬರ್ತಿನಿ ತಡಿ’ ಎಂದು ಹೊರಟಾಗ ಕಾಂಪೌಂಡಿನಿಂದ ದುಮುಕಿ ಮನೆಕಡೆಗೆ ಹೆಜ್ಜೆ ಇಟ್ಟ.

ಬಿಸಿಲು ಚುರುಕಾಗಿತ್ತು. ರೇಚ ಅಂಗಡಿಯಲ್ಲಿ ಪೇಪರ್ ಓದುತ್ತಿದ್ದು ಅವ್ವನ ಕೂಗಿಗೆ ಮನೆಗೋದ. ‘ಗೋವಿಂದ ಮಾವನೊಂದಿಗೆ ಬೆಂಗ್ಳೂರಿಗೆ ಹೋಗ್ತೀಯಾ’ ಎಂದ ಅಪ್ಪ. ರೇಚನ ಮುಖದಲ್ಲಿ ಸಂತಸವೋ? ದುಃಖವೋ? ಯಾವ ಭಾವನೆಯೂ ಸ್ಪಷ್ಟವಾಗಿ ಕಾಣಿಸಲಿಲ್ಲ. ಹೋಗುವುದಾಗಿ ತಲೆ ಅಲ್ಲಾಡಿಸಿದ. ಗೋವಿಂದ ಬೆಂಗಳೂರನ್ನು ತಾನೊಬ್ಬನೇ ಕಂಡವನಂತೆ ವರ್ಣಿಸುತ್ತ ಅಲ್ಲಿನ ಕೆಲಸದ ಬಗ್ಗೆ ಸಣ್ಣ ವಿವರಣೆ ನೀಡಿ ‘ಇಷ್ಟೆ ಕೆಲ್ಸ’ ಅಂದಾಗ ತಿಮ್ಮಯ್ಯ, ತುಳಸಿ ಇಬ್ಬರಲ್ಲು ನೆಮ್ಮದಿಯ ಉಸಿರು. ಗೋವಿಂದ ಹೋಟೆಲ್ಲೊಂದರಲ್ಲಿ ಭಟ್ಟನಾಗಿದ್ದ. ಕ್ಲೀನಿಂಗ್ ಕೆಲಸಕ್ಕೆ ಹುಡುಗರು ಬೇಕೆಂದು ಬೋಳು ತಲೆಯ ಓನರ್ ಹೇಳಿದ್ದರಿಂದ ರೇಚನ ಹಟ್ಟಿ ಬಾಗಿಲಿಗೆ ಅವನೇ ಬಂದಿದ್ದ. ದೇವಿಯ ಮಗ ನಿಂಗರಾಜು, ಸಿದ್ದಲಿಂಗಯ್ಯನ ಮಗ ಶಂಕರ್‌ನನ್ನು ಗೋವಿಂದ ಒಪ್ಪಿಸಿದ್ದ. ಕೆಲಸಕ್ಕಾಗಿ ತುದಿಗಾಲಲ್ಲಿ ನಿಂತಿದ್ದ ರೇಚನಿಗೆ ಒಂದು ಕ್ಷಣ ಮನಸ್ಸು ಭಾರವಾಯಿತು. ಊರು, ಸ್ನೇಹಿತರು, ಮನಸ್ಸಿಗೆ ಖುಷಿ ಕೊಡುತ್ತಿದ್ದ ಪ್ರಿಯಾಳ ಬಿಟ್ಟು ಹೊರಡುವುದು ‘ತನ್ನಿಂದಾಗದು’ ಎಂದುಕೊಂಡವನಿಗೆ ಅಪ್ಪ-ಅವ್ವ ಬದ್ದ ವೈರಿಗಳಂತೆ ಕಂಡರು. ಕಾಲೇಜು ಮುಗಿದ ದಿನಗಳಿಂದ ಗೋಡೆ ಮೊಳೆಗೆ ತಗುಲಿಸಿದ್ದ ಬ್ಯಾಗಿಗೆ ಬಟ್ಟೆಬರೆ ತುಂಬಿ, ಒಂದು ರೌಂಡು ಪ್ರಿಯಾಳ ಮನೆ ಸಮೀಪದಲ್ಲಿ ಓಡಾಡಿದ. ಅವಳು ಇಣುಕಲು ಇಲ್ಲ. ಸೀದಾ ಮನೆಗೆ ಬಂದವನೇ ಬ್ಯಾಗು ಎತ್ತಿಕೊಂಡು ‘ಹೋಗ್ತಿನಿ’ ಎಂದು ಹೊರಟ. ಮಗ ಮನೆ ಬಿಟ್ಟು ಹೋದ ಕೂಡಲೇ ತುಳಸಿ ಅತ್ತಳು. ತಿಮ್ಮಯ್ಯನೂ ಸಪ್ಪಗಿದ್ದ. ಗೋವಿಂದನೊಟ್ಟಿಗೆ ಎಲ್ಲರು ಊರು ಬಿಟ್ಟರು.

ಶಂಕರ್, ನಿಂಗರಾಜುವಿಗು ಎಲ್ಲಿಲ್ಲದ ಖುಷಿ ಇತ್ತು. ಬೆಂಗಳೂರು ತಲುಪಿದಾಗ ಸಂಜೆ ನಾಲ್ಕೂವರೆ ಗಂಟೆ. ಸಿಟಿ ಬಸ್ಸು ಸುತ್ತಿ ಬಳಸುತ್ತ ಆಗಾಗ ಸಿಗ್ನಲ್‍ಗಳಲ್ಲಿ ಸಿಲುಕಿಕೊಳ್ಳುತ್ತ ಶಿವಾಜಿನಗರಕ್ಕೆ ತೆವಳುತ್ತಿತ್ತು. ಕಿಟಕಿಯಲ್ಲಿ ಬೆಂಗಳೂರಿನ ವಾತಾವರಣ, ಜನಸಂದಣಿ, ಕಟ್ಟಡಗಳು, ವಾಹನಗಳು, ಹೈವೇಗಳು, ಫ್ಲೈ ಓವರ್‌ಗಳನ್ನು ಶಂಕರ್, ನಿಂಗರಾಜು ಬೆರಗಿನಿಂದ ನೋಡುತ್ತಿದ್ದರೆ, ರೇಚ ಸಪ್ಪಗಿದ್ದ. ಹೋಟೆಲ್ ಬಳಿಗೆ ಬಂದಿಳಿದರು. ಗೋವಿಂದ ಇವರತ್ತ ಕೈ ತೋರಿಸಿ ಓನರ್‌ಗೆ ‘ಏನೋ’ ಹೇಳಿದ. ಮಾಲೀಕನ ಮಾತಿನ ವೈಖರಿ ಹುಡುಗರಿಗೆ ಇಷ್ಟವಾಗಿತ್ತು. ಕೆಲಸದವರು ಹೊಸಬರಿಗೆ ಸ್ವಾಗತ ಹೇಳಿ, ಹಲ್ಲು ಬಿಟ್ಟರು. ಓನರ್ ಕೂರುವ ಹಿಂದಿನ ಗೋಡೆಗೆ ವೆಂಕಟರಮಣಸ್ವಾಮಿ ಫೋಟೋ ನೇತಾಕಿಕೊಂಡಿದ್ದ. ದಿನವೂ ಫೋಟೋಗೆ ಹಾರಹಾಕಿ, ಕಡ್ಡಿ ಹಚ್ಚುವುದು ಅವನ ಪರಮ ಕರ್ತವ್ಯವೆಂಬುದು ನೋಡಿದ ಯಾರಿಗಾದರೂ ತಿಳಿಯುತ್ತಿತ್ತು. ‘ಊಟ ಮಾಡಿಸಿ ರೂಮಿಗೆ ಕಳಿಸು’ ಓನರ್ ಗಿರಾಕಿಗಳಿಂದ ಹಣ ಈಸಿಕೊಳ್ಳುತ್ತಿದ್ದ. ಗಿರಾಕಿಗಳು ಟೇಬಲ್ ಮೇಲೆ ಕೂತು ಚಪಾತಿ ಊಟ-ಸೆಟ್ ದೋಸೆ-ಮಸಾಲೆ-ಇಡ್ಲಿಸಾಂಬಾರ್-ಕ್ಯಾರೆಟ್ ಹಲ್ವಾ-ಕಾಫಿ-ಟೀ ಹೀಗೆ ಬೇಕಾದ್ದನ್ನು ಆರ್ಡರ್ ಮಾಡುತ್ತಿದ್ದರು. ಗೋವಿಂದ ಮೂವರನ್ನು ರೂಮಿಗೆ ಕರಕೊಂಡು ಬಂದು ‘ಭಯ ಬೇಡ. ನಾನಿಲ್ಲೆ ಇರ್ತೀನಿ. ಏನಾದ್ರು ಬೇಕಾದ್ರೆ ಕೇಳಿ’ ಅವರಲ್ಲಿ ಉತ್ಸಾಹ ತುಂಬಿ ಬಟ್ಟೆ ಬದಲಿಸಿದ. ಗೋವಿಂದನಿದ್ದ ರೂಮು ಅವರಲ್ಲಿ ಆತಂಕದ ಭಾವ ಮೂಡಿಸಿತು. ಗೋಡೆಯಿಂದ ಬಣ್ಣದ ಪದರು ಉದುರುತ್ತಿತ್ತು. ಅಲ್ಲಲ್ಲಿ ನೆಲ ತೇಪೆ ಹಾಕಿಸಿಕೊಂಡಿದ್ದರೆ, ಒಂದೆರಡು ಬಿಲಗಳು ಇವರತ್ತ ಪಿಳಿಪಿಳಿ ಕಣ್ಣು ಬಿಟ್ಟಂತಿತ್ತು. ಮೂರು ರೂಮುಗಳಿಗೆ ಒಂದೇ ಶೌಚಾಲಯ; ಅದರ ಸ್ಥಿತಿ ಶೋಚನೀಯವಾಗಿತ್ತು. ‘ನೀವು ಬನ್ನಿ. ಹೋಟೆಲ್ಲಿನ ಪರಿಚಯ ಆಗ್ಲಿ’ ಹೊರಡುವಾಗ ಕರೆದ. ಹೋಟೆಲ್‍ನಲ್ಲಿ ಕೆಲಸಕ್ಕಿದ್ದವರು ಹದಿನೈದು ಮಂದಿ. ಅವರಲ್ಲಿ ಅಕ್ಕ ಪಕ್ಕದ ರಾಜ್ಯದವರೇ ಹೆಚ್ಚಾಗಿದ್ದರು. ಗೋವಿಂದನೂ ಸೇರಿ ನಾಲ್ಕು ಮಂದಿ ಕನ್ನಡಿಗರಿದ್ದರು. ಮಾಲೀಕ ಮಲಯಾಳಿ ಆಗಿದ್ದ. ಐದು ಮಹಡಿಗಳ ಸುಸಜ್ಜಿತ ಕಟ್ಟಡದ ಮೊದಲನೇ ಮಹಡಿ ಹೋಟೆಲ್ ಆಗಿತ್ತು. ಎರಡನೇ ಮಹಡಿ ಎಲ್‍ಐಸಿ ಕಚೇರಿ. ಮೂರನೆಯದು ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಕಚೇರಿ. ನಾಲ್ಕನೆಯದು ಪೇಪರ್ ಮಿಲ್ಸ್ ಲಿಮಿಟೆಡ್. ಕೊನೆಯ ಮಹಡಿ ಖಾಲಿಬಿದ್ದಿತ್ತು. ಮೇಲಿನ ಮೂರು ಮಹಡಿಗಳ ಉದ್ಯೋಗಿಗಳು ತಿಂಡಿ, ಊಟಕ್ಕೆ ಮತ್ತು ವಿರಾಮದ ಟೇಮುಗಳಲ್ಲಿ ಹೋಟೆಲ್‍ಗೆ ಧಾವಿಸುತ್ತಿದ್ದರು. ಬಿಡುವಿಲ್ಲದ ಕೆಲಸವಿತ್ತು. ಇದ್ದ ಹದಿನೈದು ಮಂದಿಯೂ ಆ ಹೋಟೆಲ್ಲಿಗೆ ಕಡಿಮೆಯೇ. ಅದಕ್ಕೆಂದೇ ಓನರ್ ಹುಡುಗರಿಗಾಗಿ ಗೋವಿಂದನಿಗೆ ಹೇಳಿದ್ದ. ವ್ಯಾಪಾರ ಮಾತ್ರ ಸಿಕ್ಕಾಪಟ್ಟೆ ಆಗುತ್ತಿತ್ತು.

ಹುಡುಗರೊಟ್ಟಿಗೆ ಗೋವಿಂದ ಹೋಟೆಲ್ಲಿಗೆ ಬಂದವನು ಕೆಲಸಕ್ಕೆ ನಿಂತು, ಆಗಾಗ ಇವರತ್ತ ಕಣ್ಣು ಹೊರಳಿಸುತ್ತಿದ್ದ. ಶಂಕರ್, ನಿಂಗರಾಜು ಹೋಟೆಲ್ಲಿನ ಅಂದ ಚಂದವನ್ನು ನೋಡಿ ಬೆರಗಾದರು. ಓನರ್ ಬಳಿ ಬಂದು, ‘ನೋಡಿ ಇಲ್ಲಿ ಶಿಸ್ತಿನಿಂದ ಇರ್ಬೇಕು. ಕೆಲ್ಸ ಮಾಡುವಾಗ ಕೈಗಳಿಗೆ ಗ್ಲೌಸ್, ತಲೆಗೆ ಟೋಪಿ ಅಲ್ಲದೇ ಯೂನಿಫಾಮ್ ಹಾಕೋಬೇಕು.’ ಇನ್ನಿತರ ವಿಷಯಗಳನ್ನು ತಿಳಿಸಿ ‘ಹೋಗಿ ನಿಮ್ಗೆ ಗೊತ್ತಾಗುತ್ತೆ’ ಕಳಿಸಿದ. ಗೋವಿಂದ ಅವರನ್ನು ಕರೆದು, ‘ಏನು ಕಷ್ಟ ಇಲ್ಲ. ಮಾಡಿ’ ಎಂದ. ಹಟ್ಟೀಲಿ ತನ್ನಿಷ್ಟ ಬಂದಂಗೆ ಇದ್ದು, ಅಲ್ಲಿಯ ಶೈಲಿಗೆ ಒಗ್ಗಿಕೊಂಡಿದ್ದ ರೇಚನಿಗೆ ಹೋಟೆಲ್ ‘ಕಟ್ಟುಪಾಡು’ ಕಷ್ಟವೆನಿಸಿತು. ಕ್ಲೀನಿಂಗ್ ಸಮಯದಲ್ಲಿ ಎಲ್ಲಾ ಪಾತ್ರೆಗಳು, ಡೈನಿಂಗ್ ಟೇಬಲ್‍ಗಳು, ಲೋಟಗಳು, ತಟ್ಟೆಗಳು, ಜಗ್ಗುಗಳು-ಹೀಗೆ ಹೋಟೆಲ್ಲಿನ ವಸ್ತುಗಳನ್ನು ತೊಳೆದು ಸ್ವಚ್ಛಗೊಳಿಸಬೇಕಾಗಿತ್ತು. ಹೊಸಬರೆಂದು ಕಡಿಮೆ ಕೆಲಸಗಳನ್ನು ವಹಿಸಿ ‘ಹೀಗೆ ಮಾಡಿಯೆಂದು’ ಹೇಳಿಕೊಟ್ಟರು. ಹೋಟೆಲ್ ಬಾಗಿಲು ಮುಚ್ಚಿದ್ದು ಹತ್ತುಮುಕ್ಕಾಲಿಗೆ. ಓನರ್ ಬೊಜ್ಜು ದೇಹವನ್ನು ಸ್ಕೂಟರ್ ಸೀಟಿನ ಮೇಲಿರಿಸಿದ. ಕೆಲಸದವರು ತಮ್ಮ ತಮ್ಮ ಗೂಡುಗಳತ್ತ ನಡೆದರು. ಗೋವಿಂದ ‘ಬನ್ನಿ ರೂಮಿಗೆ ಹೋಗುವ’ ಕರೆದ. ಮಹಡಿ ಮೇಲಿದ್ದ ರೂಮುಗಳಲ್ಲಿ ಹುಡುಗರ ಗಲಾಟೆ ವಿಪರೀತವಾಗಿತ್ತು. ಕುಡಿದ ಅಮಲಿನಲ್ಲಿ ಕಚ್ಚಾಡುತ್ತಿದ್ದರು. ಮೊದಲೇ ರೇಚನಿಗೆ ಹೋಟೆಲ್ ಹಿಡಿಸಿರಲಿಲ್ಲ. ಮೂರು ರೂಮುಗಳಿದ್ದ ಮಹಡಿ ತಾರಸಿ ಮೇಲೆ ಕಸದ ರಾಶಿಯೇ ಇತ್ತು. ಬಿಯರ್, ಬ್ರಾಂಡಿ, ವೊಡ್ಕಾ, ವೋಲ್ಡ್ ಮಾಂಕ್-ಇನ್ನಿತರ ಬ್ರಾಂಡ್‍ಗಳ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಲ್ಲೆಂದರಲ್ಲಿ ಅಂಡರ್‍ವೇರ್‌ಗಳನ್ನು ಒಣಗಾಕಲಾಗಿತ್ತು. ಹಳೆಯ ಬಟ್ಟೆಗಳು ತಾರಸಿಗೆ ಅಂಟಿಕೊಂಡಿದ್ದವು. ಒಟ್ಟಿನಲ್ಲಿ ಶಿಸ್ತು ಆ ರೂಮಿನಲ್ಲಿ ಒಂದಿಷ್ಟು ಇರಲಿಲ್ಲ. ಶಂಕರ್, ನಿಂಗರಾಜುವಿಗೆ ಊರಿನ ನೆನಪು ಕೊರೆಯಲು ಶುರುವಾಯಿತು. ಸಪ್ಪಗಿದ್ದರು. ಕಣ್ಣಂಚಲ್ಲಿ ನೀರಹನಿಗಳು ನಿಂತಿದ್ದವು. ಗೋವಿಂದ ಠೀವಿ ಆನ್ ಮಾಡಿದಾಗ, ಅವರ ದೃಷ್ಟಿ ಬದಲಾದವು. ಗೋವಿಂದ ಕೆಲಸದ ಬಗ್ಗೆ ‘ಮಾಡ್ತೀರ’ ಎಂದು ಕೇಳಿ ‘ಮಾಡಬಹದು’ ಎಂದು ತಾನೇ ಹೇಳಿಕೊಂಡ. ರೇಚ ಉಸಿರೆತ್ತದೆ ಕೂತಿದ್ದ. ರಾತ್ರಿ ಹನ್ನೆರಡಕ್ಕೆ ದೀಪ ಆರಿತು.

ಒಂದು ರಾತ್ರಿಗೆ ಶಂಕರ್, ನಿಂಗರಾಜುವಿಗೆ ಬಿಟ್ಟರೆ ಸಾಕು ಎನ್ನುವಂತಾಗಿತ್ತು. ತಿಂಡಿ ತಿನ್ನದೇ ಊರಿಗೆ ಹೋಗಬೇಕೆಂದು ಹಠ ಹಿಡಿದಿದ್ದರು. ಗೋವಿಂದ ತಲೆಕೆಡಿಸಿಕೊಂಡಿದ್ದ. ರೇಚ ತೆಳ್ಳಗೆ ಒಗ್ಗಿಕೊಂಡಂತೆ ಅವರಿವರ ಜೊತೆ ಮಾತಾಡುತ್ತ ಓಡಾಡುತ್ತಿದ್ದ. ಉಳಿದಿಬ್ಬರು ಅವನಲ್ಲಿ ಊರಿನ ಚಿತ್ರಣ ನೆನಪಿಸಿ ಸೆಳೆಯಲು ಪ್ರಯತ್ನಿಸಿದರು. ಅವನು ಗಟ್ಟಿ ಮನಸ್ಸು ಮಾಡಿದ್ದ. ಅಪ್ಪ-ಅವ್ವನ ಆಸೆ ಅವನಲ್ಲಿ ಚಿಗುರಾಗಿತ್ತು. ಗೋವಿಂದ ಸಿಡುಕಿನಲ್ಲಿ ಅವರೊಟ್ಟಿಗೆ ಹೋಟೆಲ್ಲಿನಿಂದ ಹೊರಟು, ಆಟೋ ಹತ್ತಿದ. ಮಾರ್ಕೆಟ್‍ನಲ್ಲಿ ಕೊಳ್ಳೇಗಾಲಕ್ಕೆ ಬಸ್ಸು ಹತ್ತಿಸಿ, ಬಸ್‍ಚಾರ್ಜಿಗೆ ದುಡ್ಡನ್ನು ಕೊಟ್ಟು ಬೇಜಾರಿನಿಂದ ವಾಪಸ್ಸಾದ. ಹೋಟೆಲ್‍ನಲ್ಲಿ ರೇಚ ಕಾಣಿಸಲಿಲ್ಲ. ಟೇಬಲ್ ಮೇಲೆ ಅವನ ಬ್ಯಾಗು ಇರಲಿಲ್ಲ. ಗಾಬರಿಗೊಂಡು ಓನರ್ ಬಳಿಗೆ ಓಡಿ ‘ಹುಡುಗ ಎಲ್ಲೋದ ಅಣ್ಣ’ ಅಂದ. ಠೀವಿಯೆಡೆಗೆ ಗಮನವಿದ್ದ ಓನರ್ ಉತ್ತರಿಸಲಿಲ್ಲ. ಕ್ಲೀನರ್ ನಂದೀಶನನ್ನು ವಿಚಾರಿಸಲಾಗಿ ಅತ್ತ ಬೆರಳು ತೋರಿಸಿ ಅವನು ‘ನಿಮ್ಮಿಂದೆ ಅವನೂ ಬಂದನಲ್ಲ’ ಎಂದ. ಗೋವಿಂದ ಬೆವರಿದ. ಹೋಟೆಲಿನ ಆಚೆಗೆ ಬಂದು ಕಣ್ಣು ಕಾಣಿಸಿದಷ್ಟು ದೂರದವರೆಗೂ ನೋಡಿದ. ಬೀಡ ಅಂಗಡಿ, ಜ್ಯುವೆಲ್ಲರಿ, ಜ್ಯೂಸ್ ಸೆಂಟರ್, ಇಲೆಕ್ಟ್ರಾನಿಕ್ಸ್ ಹೌಸ್, ಹಣ್ಣಿನ ಅಂಗಡಿ, ಡಾಲ್ಫಿನ್ ಬೇಕರಿ- ಇವುಗಳಲ್ಲಿ ಹದ್ದಿನಂತೆ ಹುಡುಕಿದ. ರೇಚನ ನಾಪತ್ತೆ ಗೋವಿಂದನಿಗೆ ವ್ಯಥೆ ತಂದಿದ್ದರೆ ಸುತ್ತಲಿನ ಎಲ್ಲರಿಗೂ ಕಾಮಿಡಿಯ ವಿಷ್ಯ ಆಗಿತ್ತು. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅವನಿಗೆ ಬೆಂಗಳೂರು ‘ಭಯಂಕರ’ ಎನಿಸಿತು. ಕುಲುಮೆಯೊಳಗಿನ ಕಬ್ಬಿಣದಂತೆ ಕೆಂಪಾಗಿದ್ದ. ಹೋಟೆಲ್ಲಿನ ಓನರ್ ‘ಹೋದ್ರೆ ಹೋಗ್ತಾನೆ ಬಾ ಕೆಲ್ಸ ನೋಡು’ ಹುಬ್ಬು ಗಂಟಿಕ್ಕಿಕೊಂಡು ಹೇಳಿದ. ಗೋವಿಂದನಲ್ಲಿ ಕೋಪ ಉಕ್ಕುತ್ತಿದ್ದರೂ ಶಾಂತವಾಗಿದ್ದ. ಸಂಜೆಗೆ ಹೆಸರಿಲ್ಲದ ನಂಬರಿನಿಂದ ಕರೆಬಂದಿತು. ರೇಚನ, ಅಪ್ಪ-ಅವ್ವ ಇರಬೇಕೆಂದು ಫೋನ್ ರಿಸೀವ್ ಮಾಡಲಿಲ್ಲ. ಪದೇ ಪದೇ ಕರೆ ಬರುತ್ತಲೇ ಇತ್ತು. ರಿಸೀವ್ ಮಾಡಿ ಕಿವಿಗಿಟ್ಟ. ಆ ಕಡೆಯಿಂದ ‘ಅಣ್ಣ, ನಾನು ರಮೇಶ. ರೇಚ ನನ್ನಲ್ಲಿಗೆ ಬಂದವನೆ. ಇಲ್ಲೇ ಕೆಲ್ಸ ಮಾಡ್ಕೊಂಡು ಇರ್ತಾನೆ’ ಎಂದೇಳಿ ಫೋನ್ ಕೊಟ್ಟ. ಗೋವಿಂದನಿಗೆ ಮಿಡಿತ ನಿಂತಿದ್ದ ಹೃದಯ ಮತ್ತೆ ಸಂತೋಷವಾಯಿತು. ರೇಚನಿಗೆ ನಾಲ್ಕು ಕೊಟ್ಟಿದ್ದರೆ ಚೆಂದ ಎನಿಸಿತಾದರೂ ಜೀವಕ್ಕೆ ನೆಮ್ಮದಿಯ ಸಣ್ಣ ಎಳೆ ಸಿಕ್ಕಂತಾಗಿ ನಿಟ್ಟುಸಿರುಬಿಟ್ಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.