ಮಂಗಳವಾರ, ಸೆಪ್ಟೆಂಬರ್ 21, 2021
22 °C

ಕಥೆ: ಸುರಂಗ

ಮುನವ್ವರ್ ಜೋಗಿಬೆಟ್ಟು Updated:

ಅಕ್ಷರ ಗಾತ್ರ : | |

Prajavani

‘ನಂದನವನ’ ಎಂದು ಬೋರ್ಡು ಹಾಕಿದ್ದ ಗೇಟಿನೊಳಗೆ ದಿನ ಪತ್ರಿಕೆ ‘ಟಪ್’ ಸದ್ದು ಮಾಡಿ ಒಳ ಬೀಳುತ್ತಿದ್ದಂತೆ, ಪೇಪರು ಹಾಕುವ ಹುಡುಗನ ಸೈಕಲ್‌ನ ಪೆಡಲು ತುಳಿಯುವ ಶಬ್ದವೂ ತೇಲಿ ಬಂತು. ಅದರ ಬೆನ್ನಿಗೇ ನಾಯಿ ವಿಪರೀತವಾಗಿ ಬೊಗಳತೊಡಗಿತು. ಆಫೀಸಿಗೆ ರಜೆ ಇದ್ದಿದ್ದರಿಂದ ಸ್ವಲ್ಪ ತಡವಾಗಿ ಏಳಬೇಕೆಂದು ತೀರ್ಮಾನಿಸಿದ್ದ ರಾಜನಿಗೆ ನಿರಾಶೆ. ಕಿಟಕಿ ಗಾಜಿನಿಂದ ಬೆಳಕು ಹರಿದು ಕಣ್ಣ ಮೇಲೆ ನೇರ ಬಿದ್ದು ‘ಎದ್ದು ಕೆಲಸ ನೋಡು ಸೋಮಾರಿ’ ಎಂದು ಖಾರ ಬಿಸಿಲು ನಿರಶನ ಹೂಡಿದಂತಿತ್ತು. ಇನ್ನು ಹೇಗೆ ಕಣ್ಣು ಮುಚ್ಚಿದರೂ ನಿದ್ರೆ ಬರುವುದಿಲ್ಲವೆಂದು ಖಾತ್ರಿ ಮಾಡಿಕೊಂಡು, ನಿದ್ರಾಭಂಗಕ್ಕೆ ಕಾರಣವಾದ ನಾಯಿಯನ್ನು ವಿಶ್ವಾಮಿತ್ರ‌ ಮುನಿಯಂತೆ ಶಪಿಸುತ್ತಾ ಟವಲೆಳೆದುಕೊಂಡು ರಾಜ ಬಚ್ಚಲು ಕೋಣೆ ಸೇರಿದ. ಚಳಿಗಾಲದ ಮುಂಜಾನೆಯಲ್ಲಿ ಹೀಟರ್‌ನ ಪೈಪಿನಲ್ಲಿದ್ದ ಹೊಗೆಯಾಡುವ ಬಿಸಿ ನೀರು ತಿರುಗಿಸಿದಂತೆ ಮನಸ್ಸು ಕೊಂಚ ನಿರಾಳವಾಯಿತು. ಅರ್ಧ ಬಕೆಟ್ ತುಂಬುವಷ್ಟರಲ್ಲೇ ಟ್ಯಾಪ್ ಪ್ರಾಣೋತ್ಕರಣದಲ್ಲಿರುವಂತೆ ತುಂಡು ತುಂಡೇ ನೀರು ಚೆಲ್ಲಿ ಮೌನವಾಯಿತು. ‘ಥತ್, ಇವತ್ತಿನ ದಿನವೇ ಸರಿಯಿಲ್ಲ’ ಎನ್ನುತ್ತಾ ಹೇಗೂ ಅರ್ಧ ಬಕೆಟಿನಲ್ಲಿ ಅರೆಬರೆ ಸ್ನಾನ ಮುಗಿಸಿದ. ಸೋಪಿಗಾಗಿ ಹುಡುಕಿದರೆ ಅದು ನಿನ್ನೆಯೇ ಮುಗಿದು ಹೋಗಿತ್ತು.

‘ಥೋ, ಇವತ್ತು ಏನೂ ಸರಿಯಾಗುತ್ತಲೇ ಇಲ್ವಲ್ಲ’ ಎಂದು ಹಳಿಯುತ್ತಾ ಅವನಷ್ಟಕ್ಕೆ ಮಾತನಾಡಿಕೊಂಡು ಬಚ್ಚಲು ಮನೆಯಿಂದ ಹೊರಬಿದ್ದ. ಈಗಲೋ ಮತ್ತೆಯೋ ಕಿತ್ತು ಕೈಯಲ್ಲಿ ಬರಲಿರುವ ಸಾಕಷ್ಟು ಪ್ಲಾಸ್ಟರ್ ಮೆತ್ತಿಕೊಂಡಿದ್ದ ಚಾರ್ಜರ್ ಕೇಬಲ್‌ನಲ್ಲಿ ನೇಣು ಹಾಕಿದ್ದ ಮೊಬೈಲ್ ಓಪನ್ ಮಾಡಿದ. ಅದಾಗಲೇ ನೂರು ಶೇಕಡಾ ತುಂಬಿರುವಂತೆ ತೋರುತ್ತಿತ್ತು. ಇನ್ನೇನು ಡಾಟಾ ಆನ್ ಮಾಡಬೇಕೆನ್ನುವಷ್ಟರಲ್ಲಿ ಕಣಜದ ಗೂಡಿಗೆ ಕಲ್ಲೆಸೆದಂತೆ ಮಸೇಜುಗಳ ಮಳೆಗೆರೆಯಿತು. ‘ಉಸ್ಸಪ್ಪಾ’ ಎನ್ನುತ್ತಾ ಮೇಸೇಜ್ಗಳ ಪ್ರವಾಹಕ್ಕೆ ಸಿಕ್ಕ ಫೋನು ನೇಣು ಹಾಕಿಕೊಕೊಳ್ಳತೊಡಗಿದಾಗ ಅಲ್ಲೇ ಸ್ವಲ್ಪ ಹೊತ್ತು ಇರಿಸಿ, ಟವೆಲು ಕಟ್ಟಿಕೊಂಡ ರಾಜ ಕಿಟಕಿಯ ಹೊರಗೊಮ್ಮೆ ಇಣುಕಿದಾಗ ಮನೆಯ ಬದಿಯಲ್ಲಿನ ಪೇರಳೆ ಗಿಡದ ಗೂಡಿನಲ್ಲಿ ಕಾವು ಕುಳಿತಿದ್ದ ತಾಯಿ ಟುವ್ವಿ ಹಕ್ಕಿ ಪರಿಚಯದಿ ಕೂಗಿತು. ಹೆಚ್ಚು ಕಡಿಮೆ ರಾಜ ಬಾಡಿಗೆಗಾಗಿ ಮನೆಸೇರಿಕೊಂಡ ದಿನವೇ ಆ ಹಕ್ಕಿಯೂ ಪೇರಳೆ ಮರದಲ್ಲಿ ಗೂಡು ಕಟ್ಟಲು ಶುರು ಮಾಡಿತ್ತು.

ಮಂಗಳೂರು, ಮೀನು ಮಾರಾಟಗಾರರಿಂದ ರಾತ್ರಿಯಲ್ಲಿ ಚಟುವಟಿಕೆ ಆರಂಭಿಸಿಕೊಳ್ಳುವುದರಿಂದ ನಗರದ ಜನ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿಲ್ಲ. ಆದರೆ ಕಂಕನಾಡಿ ಹಾಗಲ್ಲ, ನಗರದ ಗೌಜಿ ಗದ್ದಲಗಳಿದ್ದರೂ ರಾತ್ರಿ ನಿದ್ದೆಗೆಡುವಂತದೇನೂ ನಡೆಯದು. ಓದುವ ಹುಡುಗರಿಗಾಗಲೀ, ಬೆಳಿಗ್ಗೆ ಬೇಗನೆ ಕೆಲಸಕ್ಕೆ ಹೊರಡುವವರಿಗಾಗಲೀ ನಿದ್ದೆಗೆಡುವ ಪರಿಸ್ಥಿತಿ ಬಾರದು. ರಾಜು ಮೇಲಂತಸ್ತಿನಲ್ಲಿ ಪೇಯಿಂಗೆಸ್ಟಾಗಿ ರೂಮು ಪಡೆದುಕೊಂಡಿದ್ದ.

ಅಷ್ಟರಲ್ಲೇ ಗಂಡು ಹಕ್ಕಿ ಹಾರುತ್ತಾ ಗೂಡಿನ ಬಳಿ ಬಂದಾಗ, ಇನ್ನು ಅವುಗಳ ಖಾಸಗಿ ಮಾತುಕತೆಗೆ ಇಣುಕುವುದು ತರವಲ್ಲವೆಂದು ರಾಜಾ ಮತ್ತೆ ಮೊಬೈಲ್‌ ಕಡೆ ತಿರುಗಿದ. ಅಷ್ಟರಲ್ಲೇ ಆರುಶ್‌ನ ಮೆಸೇಜ್ ಬಂದು ನೋಟಿಫಿಕೇಶನ್ ಲೈಟ್ ಮಿಂಚತೊಡಗಿತು. ‘ಹೇಯ್, ಬರ್ತೀಯಾ ಮಾರಾಯ, ಗಡಾಯಿಕಲ್ಲಿಗೆ ಹೋಗೋಣ’ ಅಂತ.

ಆಗಲೇ ಎದ್ದು ಹೆಚ್ಚು ಹೊತ್ತು ಆಗಿಲ್ಲದಿದ್ದರಿಂದ ಗಂಟಲು ಸರಿಪಡಿಸಿಕೊಂಡು ರಾಜಾನ ವಾಯ್ಸ್ ನೋಟೊಂದು ಹೀಗೆ ಹೋಯಿತು. ‘ಆಹ್.. ನಾನೂ ಇದನ್ನೇ ನಿರೀಕ್ಷಿಸುತ್ತಿದ್ದೆ. ನಾನು ಮಂಗಳೂರಿನಲ್ಲಿದ್ದೇನೆ ಮಾರಾಯ. ಈಗ ರೆಡಿಯಾಗಿ ಬರ್ತೇನೆ. ಹತ್ತು ಗಂಟೆಗೆ ಬೆಳ್ತಂಗಡಿಯಲ್ಲಿ ಇರ್ತೇನೆ’ ಅಂತ. ಆ ಕಡೆಯಿಂದ ಎತ್ತಿ ತೋರುವ ಹೆಬ್ಬೆರಳೊಂದು ಬಂತು.

ರಾಜಾ ಲಗುಬಗೆಯಿಂದ ಮೊದಲೇ ಇಸ್ತ್ರಿ ಹಾಕಿ ನೇತುಹಾಕಿದ್ದ ತನ್ನ ಶರ್ಟ್ ಹಾಕಿ, ಬ್ಯಾಗೇರಿಸಿಕೊಂಡು ರೂಂಗೆ ಬೀಗ ಹಾಕಿ ಮೆಟ್ಟಿಲಿಳಿಯುತ್ತಾ ಕೆಳ ಬಂದ. ಅದಾಗಲೇ ಗಾರ್ಡನ್‌ಗೆ ನೀರು ಹರಿಸುತ್ತಾ ನಿಂತಿದ್ದ ಮನೆಯೊಡತಿಯನ್ನು, ‘ಆಂಟಿ ಇವತ್ತು ಊಟಕ್ಕೆ‌ ನಾನಿಲ್ಲ ಆಯ್ತಾ, ಸ್ವಲ್ಪ ಹೊರಗಡೆ ಹೋಗ್ಬೇಕಿತ್ತು’ ಅಂತ ಹೇಳಿ ಬೈಕ್ ಚಾಲೂ ಮಾಡಿದ. ಸೆಲ್ಫ್ ಒತ್ತಿದರೆ ಬಾಯಿ ಮುಕ್ಕಳಿಸುವಂತೆ ನಾಲ್ಕು ಬಾರಿ ಒದರಿತ್ತೇ ವಿನಃ ಸ್ಟಾರ್ಟಾಗಲೇ ಇಲ್ಲ. ‘ಛೇ ಒಳ್ಳೆಯ ಫಜೀತಿ ಆಯ್ತು’ ಅಂತ ಮನದಲ್ಲಂದುಕೊಂಡು ರಾಜ ಕಿಕ್ಕರ್ ಬಡಿಯತೊಡಗಿದ. ಕಾಲು ಸೋಲುತ್ತದೆ ಎನ್ನುವಾಗ ಹೇಗೂ ಹಣ್ಣು ಮುದುಕ ಕೆಮ್ಮಿದಂತಹ ಶಬ್ದ ಹೊಮ್ಮಿಸಿ ಬೈಕ್ ಹೇಗೂ ಚಾಲೂ ಆಯಿತು. ಇನ್ನು ಮನೆಯೊಡತಿ ಮಗಳ ಕಣ್ಣಿಗೆ ಬಿದ್ದು ಮರ್ಯಾದೆ ಕಳೆಯುವುದೂ ಬೇಡವೆಂದೇ ತುರಾತುರಿಯಲ್ಲಿ ಸಾಕಷ್ಟು ವೇಗದಿಂದಲೇ ಗೇಟ್ ದಾಟಿ ರಸ್ತೆಗೆ ಬಿದ್ದ.

***

ಆಗ ಗಂಟೆ ಎಂಟುವರೆಯಾಗಿರಬಹುದು. ಆರುಶ್‌ನ ಬೈಕ್ ಬೆಳ್ತಂಗಡಿ ದಾಟಿ ಕಿಲ್ಲೂರು ರಸ್ತೆ ತಿರುಗಿತು. ಮೋಡಗಳ ಮಧ್ಯೆ ಹಾರುವ ಗಿಡುಗನಂತೆ ಮಂಜು ಕವಿದಿದ್ದ ಆ ರಸ್ತೆಯನ್ನು ಸೀಳುತ್ತಾ ಕಪ್ಪು ಬೈಕು ಸಾಗುತ್ತಿತ್ತು. ಏನೇನೂ ಕಾಣದಷ್ಟು ರಸ್ತೆ ಮಬ್ಬು ಮಬ್ಬು. ತಕ್ಷಣಕ್ಕೆ ವೇಗ ಕಡಿಮೆಯಾಯಿತು. ಏನೋ ನೆನಪಾದವನಂತೆ ಆರುಶ್ ಬೈಕ್ ರಸ್ತೆ ಬದಿಗೆ ತಂದ. ಕಿವಿಗಿಟ್ಟ ಇಯರ್ ಫೋನ್ ಸರಿಪಡಿಸುತ್ತಾ, ‘ಹಲೋ, ಹಲೋ ನಾನು ಕಿಲ್ಲೂರು ದಾರಿಯಲ್ಲಿದ್ದೇನೆ ಮಾರಾಯ, ಬೇಗ ಬರ್ತೀಯಾ ನೀನು?’ ಅಂದ.

‘ಶಿಟ್ ಮ್ಯಾನ್.. ಓಹ್... ನನ್ನ ಬೈಕ್ ಮತ್ತೆ ಕೈ ಕೊಟ್ಟಿದೆ. ನಾನಿಲ್ಲಿ ರೂಂ ಬಳಿಯೇ ಬಾಕಿಯಾಗಿದ್ದೇನೆ ಮಾರಾಯ. ನೀನು ಕರೆಯದಿದ್ರೆ ಇವತ್ತು ಸಂಜೆ ಮನೆಗೆ ಹೋಗುವಂತ ಇದ್ದೆ. ಈಗ ನಾನು ಬಸ್ಸಲ್ಲಿ ಬಂದ್ರೆ ಆಗ್ಬಹುದಾ?’

‘ಇನ್ನು ಯಾವಾಗ ಬಸ್ಸಲ್ಲಿ ಬರುವುದು. ನೀನು ಇನ್ನೊಮ್ಮೆ ಬಾ... ನಾನು ಒಬ್ಬನೇ ಹೋಗ್ತೇನೆ ಬರುವ ವಾರ ಜೊತೆಗೆ ಹೋಗೋಣ’

‘ಹುಂ ಸರಿ ಬೈ ಕಣೋ‌.. ಹ್ಯಾಪಿ ಜರ್ನಿ’

‘ಬೈ ಬೈ ಥ್ಯಾಂಕ್ಯೂ’

ಕಾಡು ಸಿಗಿದ ಕಪ್ಪು ರಸ್ತೆಯಲ್ಲಿ ಮತ್ತೆ ಬೈಕ್ ಹೊರಟಿತು. ದೂರದಲ್ಲೇ ಸಿಗರೇಟು ಹಚ್ಚಿ ನಿಂತ ಅಜಾನು ಬಾಹುವಿನಂತೆ ಕಾಣುವ ಗಡಾಯಿಕಲ್ಲು. ಒಂದು ಕಾಲದಲ್ಲಿ ಟಿಪ್ಪು ಸುಲ್ತಾನ ರಕ್ಷಣೆಗಾಗಿ ನಿರ್ಮಿಸಿದ ಅದ್ಭುತ ಕೋಟೆ. ಮಂಜಿನ ಹೊಗೆಯುಗುಳುತ್ತಾ ಇನ್ನಷ್ಟು ಕುತೂಹಲ ಹುಟ್ಟಿಸಬಲ್ಲ ಭವ್ಯ ಬೆಟ್ಟಗಳ ಸಾಲು. ದಾರಿಯುದ್ದಕ್ಕೂ ಹಸಿರು ಕಾಡು, ಉಸಿರೆಳೆದುಕೊಂಡರೆ ಶ್ವಾಸಕೋಶವನ್ನೆಲ್ಲಾ ಫ್ರಿಡ್ಜ್‌ನೊಳಗಿಟ್ಟು ತೆಗೆದಂತಹ ಚಳಿಯ ಅನುಭವ. ಆರುಶ್ ಎಸ್ಕಲೇಟರ್ ಹಿಂಡಿದ. ಬೈಕ್ ಮತ್ತಷ್ಟು ವೇಗ ಪಡೆದುಕೊಂಡು ಮುನ್ನುಗ್ಗಿತು.

ಟಿಪ್ಪು ಸುಲ್ತಾನ್ ತನ್ನ ತಾಯಿಯ ನೆನೆಪಿಗಾಗಿ ಕಟ್ಟಿಸಿದ ವಿಶಿಷ್ಟ ಕೋಟೆ. ಚಾರಣಕ್ಕೆ ಬರುವವರಿಗೆ ಹೃದ್ಯ ಅನುಭೂತಿ ನೀಡಬಲ್ಲ ಪರ್ವತ. ಮರದ ನೆರಳಲ್ಲಿ ಬೈಕು ನಿಲ್ಲಿಸಿದವನೇ ಪ್ರವೇಶ ದ್ವಾರದಲ್ಲಿ ಹೆಸರು ಬರೆದು, ಪ್ರವೇಶ ಶುಲ್ಕ ತೆತ್ತು ನಡೆಯತೊಡಗಿದ. ಅದಾಗಲೇ ನಾಲ್ಕೈದು ಜೋಡಿಗಳು, ಕೋಟೆ ನೋಡಲು ಬಂದ ವಿದೇಶಿ ಪ್ರವಾಸಿಗರು ಆಗಮಿಸಿದ್ದರು.

ಅವರೆಲ್ಲರೂ ಜೊತೆ- ಜೊತೆಯಾಗಿ ಹತ್ತುತ್ತಿದ್ದರು. ಆರುಶ್ ಮಾತ್ರ ಒಬ್ಬಂಟಿಯಾಗಿ ಹತ್ತತೊಡಗಿದ. ಯಾಕೋ ಈ ಯಾತ್ರೆ ಹೆಚ್ಚು ಸಾಹಸವೆಂದು ಆತನಿಗೆ ಅತೀಂದ್ರಿಯವೆಂದು ಹೇಳುತ್ತಲೇ ಇತ್ತು. ಮೊದಲಲ್ಲಿ ಸರಾಗ ದಾರಿ. ಅಗಲವಾದ ಮೆಟ್ಟಿಲುಗಳು. ಏರಿದಂತೆ ದಾರಿ ಮತ್ತಷ್ಟು ಕಡಿದಾಗತೊಡಗಿತು. ಆಗತಾನೇ ಸೂರ್ಯನ ಬೆಳಕು ಸರಿಯಾಗಿ ಮೂಡುತ್ತಿತ್ತಷ್ಟೆ. ಇಬ್ಬನಿ ಮೈ ತೋಯ್ದು ಬಿಡುವಷ್ಟು ದಟ್ಟವಿತ್ತು. ಒಂದು ತಿರುವು ಬಂತು. ಅಲ್ಲೊಂದು ಅಗಲವಾದ ಮರ. ಕಡಿಮೆಯೆಂದರೆ ಇನ್ನೂರು ವರ್ಷಗಳಷ್ಟು ಹಳೆಯದು. ಅಲ್ಲೆ ನೆರಳಲ್ಲಿ ಸ್ವಲ್ಪ ಹೊತ್ತು ಕುಳಿತು ಮತ್ತೆ ಹೊರಡೋಣವೆಂದು ಆರುಶ್ ತೀರ್ಮಾನಿಸಿದ್ದ. ಜೊತೆಗಿದ್ದ ಉಳಿದ ಗುಂಪುಗಳು ತೀರಾ ಹಿಂದಿದ್ದವು. ಫೋನ್ ತೆಗೆದವನೇ, ರಾಜಾನಿಗೆ ಫೋನ್ ಮಾಡಿದ.
‘ಹಲೋ ರಾಜಾ... ನಾನು ಜಮಲಾಬಾದ್‌ನಲ್ಲಿದ್ದೇನೆ’

‘ಹೌದಾ.. ಲಕ್ಕೀ ಮಾರಾಯ ನೀನು, ನನ್ದು ಬೈಕ್ ಸರಿಯಾಗುವ ಲಕ್ಷಣ ಕಾಣುವುದಿಲ್ಲ ಮಾರಾಯ. ಸರಿಯಾದರೆ ಸಂಜೆ ಮನೆಗೆ ಹೋಗಬೇಕು’

‘ಸರಿ, ನಾನು ನಿನ್ಗೆ ಹೇಳಿದ್ದೆ ಅಲ್ವಾ. ಆ ಸುರಂಗ ಮಾರ್ಗಗಳ ಬಗ್ಗೆ. ಇಲ್ಲೂ ಕೆಲವು ಸುರಂಗ ಮಾರ್ಗಗಳಿವೆ ಅಂತ ಕಾಣುತ್ತೆ. ಬಹುಶಃ ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಕೊರೆದದ್ದಿರಬಹುದು’

‘ಹೌದಾ ಮಾರಾಯ, ಸರಿ‌ ನಾನು ಬಂದಿದ್ರೆ ಸ್ವಲ್ಪ ಇಳಿದು ಪರೀಕ್ಷೆ ಮಾಡ್ಬಹುದಿತ್ತಲ್ವಾ’

‘ಹುಂ ಕಣೋ ನೀನು ಬರದಿದ್ರೂ ನಾನು ನೋಡಿಯೇ ಬಿಡ್ಬೇಕಂತ ತೀರ್ಮಾನ ಮಾಡಿದ್ದೇನೆ. ನಾನು ಮತ್ತೆ ಫೋನ್ ಮಾಡ್ತೇನೆ’ ಅಂತ ಆರುಶ್ ಫೋನಿಟ್ಟ. ಆರುಶ್ ಸುತ್ತಲೂ ಕಣ್ಣು ಹಾಯಿಸಿದ. ಆ ದೊಡ್ಡ ಮರದ ಬಳಿ ಕಲ್ಲು ಚಪ್ಪಡಿಯೊಂದು ಕಂಡಿತು. ಅಲ್ಲೇ ಹತ್ತಿರದಲ್ಲಿ ಪಾಳು ಬಿದ್ದ ಫಿರಂಗಿಗಳು. ಹತ್ತಿರದಲ್ಲಿದ್ದ ಕಲ್ಲು ಕಟ್ಟಡದ ಬಳಿ ಬಂದು ಜೋರಾಗಿ ಕೂಗಿಕೊಂಡ. ಅವನ ಧ್ವನಿ ಮತ್ತೆ ಮತ್ತೆ ಪ್ರತಿಧ್ವನಿಸಿದವು. ಕಲ್ಲು ಕಟ್ಟಡದ ಬಳಿ ಇದ್ದ ಆ ಸಣ್ಣ ಗರ್ಭಗುಡಿಯಂತಹ ಇಕ್ಕಟ್ಟಿನ ಕೋಣೆ. ಅದರ ತಳದಲ್ಲೊಂದು ಕಬ್ಬಿಣದ ಬಾಗಿಲು. ಆ ಬಾಗಿಲು ತೆರೆದಂತೆ ಒಳಗೆ ಸಾಲು ಸಾಲು ಮೆಟ್ಟಿಲುಗಳು. ಆರುಶ್ ಬಾಲ್ಯದಿಂದಲೇ ಆ ಸುರಂಗ ಮಾರ್ಗಗಳ ಕನಸು ಕಂಡವನು. ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗ್ ಸಡಿಲಿಸಿಕೊಂಡು ಮೆಲ್ಲಗೆ ಆ ಮೆಟ್ಟಿಲು ಇಳಿಯತೊಡಗಿದ. ಕತ್ತಲ ಸಾಮ್ರಾಜ್ಯ, ಮೊಬೈಲ್ ಬೆಳಕು ಹಾಕಿಕೊಂಡ, ಅದಾಗಲೇ ನೆಟ್ವರ್ಕ್ ಕಡಿದು ಹೋಯಿತು. ಇನ್ನಷ್ಟು ಮೆಟ್ಟಿಲಿಳಿಯುತ್ತಾ ಮುಂದೆ ನಡೆಯತೊಡಗಿದ. ಸುರಂಗ ದಾರಿಗಳು ಬಹಳ ಹತ್ತಿರದ ದಾರಿಗಳಂತೆ. ಒಂದೇ ದಿನದಲ್ಲಿ ಮೈಸೂರು ತಲುಪಬಲ್ಲ ದಾರಿಗಳು ಜಮಲಾಬಾದಿನ ಸುರಂಗ ಮಾರ್ಗಗಳ ಹಿಂದಿದ್ದವೆಂದು ಪ್ರಚಾರದಲ್ಲಿತ್ತು. ಆರುಶ್ ಮೊಬೈಲ್ ಬೆಳಕಲ್ಲೇ ಮುಂದೆ ನಡೆಯ ತೊಡಗಿದ‌. ಜೇಡರ ಬಲೆ ತುಂಬಿದ್ದರೂ ದಾರಿ ಸಲೀಸಾಗಿದ್ದವು. ಆರುಶ್ ಕತ್ತಲು ಸೀಳಿಕೊಂಡು ಮೊಬೈಲ್ ಬೆಳಕಲ್ಲಿ ಹೊರಟೇ ಬಿಟ್ಟ.

****

ಬೈಕ್ ಕಂಕನಾಡಿ ದಾಟಿ ಪಂಪ್ವೆಲ್ ತಿರುಗಿ ತೊಕ್ಕೊಟ್ಟು ದಾರಿಯಾಗಿ ಉಪ್ಪಿನಂಗಡಿಗೆ ಬರುವ ಉಪಾಯ ರಾಜನಿಗಿತ್ತು. ಅಷ್ಟು ದೂರದ ದಾರಿ ಆಯ್ಕೆ ಮಾಡಿದ್ದೇ ಆತನಿಗಿರುವ ಕುತೂಹಲಕ್ಕೆ. ಹಿಂದಿನ ದಿನವೂ ಬಸ್ಸಿನಲ್ಲಿ ಕಾಲೇಜು ಹೋಗುತ್ತಿದ್ದ ದಾರಿಯಲ್ಲಿ ಹೋಗುವಾಗ ಹುಟ್ಟಿದ ಹುಚ್ಚು ಕುತೂಹಲವದು. ‘ಬೋಳಿಯಾರು ಮುಡಿಪು ರಸ್ತೆಯ ಮಧ್ಯೆ ಇದ್ದ ಆ ಪಾಳು ರಸ್ತೆ ಎಲ್ಲಿಗೆ ಹೋಗಿ ತಲುಪಬಹುದು?’. ಬೈಕ್ ನೇತ್ರಾವತಿ ಸೇತುವೆ ದಾಟಿರಬೇಕು. ಬೈಕ್ ಒಮ್ಮೆಗೆ ತಣ್ಣಗಾಯಿತು. ದಮ್ಮು ರೋಗಿಯಂತೆ ಏದುಸಿರು ಬಿಡತೊಡಗಿತು. ಮತ್ತೆ ಕೈಕೊಟ್ಟಿತು.

‘ಹಾಳಾದ ಬೈಕ್, ಈ ದಿನವೇ ಕೈ ಕೊಡ್ಬೇಕಾ?’ ಕೈ ಕೈ ಹಿಸುಕುತ್ತಾ ರಸ್ತೆ ಬದಿಗೆ ಸರಿಸಿ ಕಿಕ್ಕರ್ ಹೊಡೆಯತೊಡಗಿದ. ಆಗಲೇ ಬಿಸಿಲ ಉರಿ ತೀಕ್ಷ್ಣವಾಗಿತ್ತು. ಕೊನೆಯ ಬಾರಿ ಎಂಬಂತೆ ರಾಜಾ ಕಿಕ್ಕರ್ ಮೇಲೆ ಒದ್ದ. ಹಳ್ಳದಲ್ಲಿ ಮಲಗಿದ್ದ ಕೋಣನಂತೆ ಯಾವ ಪ್ರತಿಕ್ರಿಯೆಯೂ ಬರದೆ ಬೈಕ್ ಸುಮ್ಮನಾಯಿತು.
‘ಇದೊಳ್ಳೆ ಫಜೀತಿ ಆಯ್ತಲ್ವಾ’ ಅಂದುಕೊಂಡು ಗೊತ್ತಿರುವ ಪ್ರಯತ್ನವೆಲ್ಲಾ ಪ್ರಯೋಗಿಸಿದ. ಬೈಕ್ ಜಪ್ಪಯ್ಯ ಅನ್ನಲಿಲ್ಲ‌‌. ಆದದದ್ದಾಗಲಿ ಎಂದು ಕಲ್ಲಾಪಿನವರೆಗೂ ಬೈಕ್ ತಳ್ಳಿಕೊಂಡೇ ಬಂದ. ಮೆಕ್ಯಾನಿಕ್ ಬಳಿ ಬಂದಾಗ ಆತ ನಾಲ್ಕು ಲೂಸಾದ ಬೋಲ್ಟು ತಿರುಗಿಸಿದ. ಅಷ್ಟರಲ್ಲೇ ಬೈಕ್ ಸ್ಟಾರ್ಟಾಯಿತು. ‘ಇದಕ್ಕೆ ಸಣ್ಣೊದೊಂದು ರಿಪೇರಿ ಬೇಕು, ಆ ಸಾಮಾನು ನೀವು ಮಂಗಳೂರಿನಿಂದ ತರಬೇಕು’

‘ಸರಿ’ ಎಂದವನೇ ಸ್ವಲ್ಪ ಸ್ಟಾರ್ಟಾಗಿದ್ದ ಬೈಕನ್ನು ನಾಲ್ಕಾರು ಬಾರಿ ಎಸ್ಕಲೇಟರ್ ತಿರುಗಿಸುತ್ತಾ ರಂಪ ಮಾಡುವ ಮಗುವಿನ ಕಿವಿಹಿಂಡಿದಂತೆ ರಾಜ ಕೋಪ ತೀರಿಸಿಕೊಂಡ‌. ಅದು ಊಟದ ಹೊತ್ತು. ಅಲ್ಲೇ ಹತ್ತಿರದ ಹೋಟೇಲ್‌ನಲ್ಲಿ ಊಟ ಮುಗಿಸಿ ರಾಜಾ ಮಂಗಳೂರಿಗೆ ಬಸ್ಸಿನಲ್ಲಿ ಹೊರಟ. ಸುಮಾರು ಹುಡುಕಾಟದ ಬಳಿಕ ತಥಾಕಥಿತ ಸಾಮಾನು‌ ಸಿಕ್ಕಿತು. ಸಿಟಿ ಬಸ್ಸು ಹತ್ತಿ ಮತ್ತೆ ಮೆಕಾನಿಕ್‌ನ ಬಳಿ ಬರುವುದಾದರೆ ಗಂಟೆ ಮೂರುವರೆ ದಾಟಿತ್ತು.‌ ತರುವಾಯ ಮೆಕ್ಯಾನಿಕ್ ಬೇರೆ ಕೆಲಸವನ್ನು ಮುಗಿಸಿ ಬೈಕನ್ನು ಸುಸ್ಥಿತಿಗೆ ತರುವಷ್ಟರಲ್ಲಿ ಸಂಜೆ ಚಹಾ ಸಮಯವಾಗಿತ್ತು. ಬಂದ ಒಂದೇ ಗ್ಲಾಸು ಚಹಾವನ್ನು ಮೆಕ್ಯಾನಿಕ್ ಕಣ್ಣು ಕಟ್ಟಿಗಾದರೂ ‘ಬೇಕಾ’ ಎಂದು ಕೇಳುವ ಸೌಜನ್ಯವೂ ತೋರದೆ ಎರಡೇ ಗುಟುಕಿನಲ್ಲಿ ಬಿಸಿ ಚಹಾ ಹೀರಿದ. ಹಾಗಂತ ರಾಜಾನಿಗೆ ಚಹಾದ ಅಭ್ಯಾಸವಿಲ್ಲ. ಅಲ್ಲೇ ಹತ್ತಿರದ ಅಂಗಡಿಗೆ ಹೋಗಿ ಜ್ಯೂಸ್ ಆರ್ಡರ್ ಮಾಡಿದ. ಸೂರ್ಯ ಅದಾಗಲೇ ಬಂಗಾರವಾಗುತ್ತಿದ್ದ. ಜ್ಯೂಸ್ ಬಂತು. ಅದನ್ನು ಹೇಗೋ ಮನಸ್ಸಿನಲ್ಲಿ ಜ್ಯೂಸೆಂದು ಭಾವಿಸಿದರೂ ಕುಡಿಯಲಾಗದೆ ಲೋಟದಲ್ಲಿ ಅರ್ಧ ಹಾಗೇ ಬಿಟ್ಟು ಮೆಕ್ಯಾನಿಕ್ ಶಾಪ್‌ಗೆ ತಿರುಗಿ ಬಂದ. ಬೈಕ್ ತಯ್ಯಾರಾಗಿತ್ತು. ಮೆಕಾನಿಕ್‌ಗೂ ಸ್ವಲ್ಪ‌ ಕಾಸು ಸುರಿದು, ರಾಜಾ ಮತ್ತೆ ಹೊರಟ.

ಹಕ್ಕಿಗಳೆಲ್ಲಾ ಗೂಡು ಸೇರುವ ಇರಾದೆಯಿಂದ ಗುಂಪಾಗಿ ಹೊರಟಿದ್ದವು. ಆ ಸಂಜೆಯ ತಂಗಾಳಿ ಆವಾಹಿಸುತ್ತಾ‌ ರಾಜಾ ತೊಕ್ಕೊಟ್ಟು- ದೇರಳಕಟ್ಟೆ ರಸ್ತೆಗೆ ತಿರುಗಿದ. ಮುಡಿಪು ಕ್ರಾಸಿಂಗ್ ದಾಟಿ ಬೈಕ್ ಮುಂದೆ ಹೋಯಿತು. ಆ ಸೇತುವೆಯೂ ದಾಟಿತು. ಎಡಕ್ಕೇ ಪಾಳು ಬಿದ್ದ ಕುತೂಹಲ ಹುಟ್ಟಿಸುವ ರಸ್ತೆ. ರಾಜಾ‌ ಒಂದು ಕ್ಷಣ ನಿಂತು ಯೋಚಿಸಿದ‌. ಏನೋ ಹೊಳೆದವನಂತೆ ಅದೇ ರಸ್ತೆಗೆ ಬೈಕ್ ತಿರುಗಿಸಿ ಮುಂದುವರಿದ.‌ ಕಾಡೆಂದರೆ ಕಾಡು, ಕತ್ತಲು ಕವಿಯುತ್ತಿದ್ದರಿಂದ ಬಾವಲಿಗಳು ಕಾರ್ಯಚರಣೆಗಿಳಿಯುತ್ತಿದ್ದವು. ದಟ್ಟವಾದ ಮರಗಳ ಮಧ್ಯೆ ಆ ಟಾರು ರಸ್ತೆ‌. ನಿರ್ಜನ ಪ್ರದೇಶ, ರಸ್ತೆಯ ಕೊನೆಯಲ್ಲಿ ಒಂದು ಪಾಳುಬಿದ್ದ ಹಳೆಯ ಕಾಲದ ಹೆಂಚಿನ ಮನೆ‌. ಆ ಮನೆಯಲ್ಲಿ ಈಚೆಗಿನ ಒಂದು ದಶಕದಿಂದ ಜನವಾಸ್ತವ್ಯ ಇದ್ದಂತಿಲ್ಲ. ಆ ಬಳಿಕ ಮಣ್ಣಿನ ದಾರಿ. ಅದಾಗಲೇ ರಾಜ ಸಾಕಷ್ಟು ದೂರ ಬಂದಾಗಿತ್ತು. ‘ಇದರ ಕೊನೆಯೆಲ್ಲಿ?’ ಎಂಬ ಹುಡುಕಾಟ ಕೊನೆಯಾಗುವಂತಿರಲಿಲ್ಲ. ಕಾಡು ಇನ್ನಷ್ಟು ಗಮ್ಯವಾಗುತ್ತಿತ್ತು. ರಸ್ತೆಯ ಕೊನೆಯಲ್ಲೊಂದು ದೇವರ ಗುಡಿ. ಪ್ರಾಚೀನ ಗುಡಿ, ಬೇರು ಬಿಳಲುಗಳಿಂದ ಆವರಿಸಿಕೊಂಡು ಹೆದರಿಕೆ ಹುಟ್ಟಿಸುತ್ತಿತ್ತು. ಎಡಕ್ಕೆ ತಿರುಗಿದ ಆ ಕಾಡು ದಾರಿಯಲ್ಲಿ ರಾಜಾ ಬೈಕು ನಿಲ್ಲಿಸಿ ನಡೆಯತೊಡಗಿದ. ಒಂದಿಷ್ಟು ಫಿರಂಗಿಗಳು, ಮೈಲುಗಲ್ಲಿನ ಮೇಲೆ ಅಸ್ಪಷ್ಟವಾಗಿ ಬರೆದ ಪ್ರಾಚೀನ ಫಲಕಗಳು. ಗೂಬೆಗಳ ಸದ್ದು ಪ್ರತಿಧ್ವನಿಸುತ್ತಾ ಕಲ್ಲು ಕಟ್ಟಡವು ಇನ್ನಷ್ಟು ಕುತೂಹಲ ಹುಟ್ಟಿಸುತ್ತಿದ್ದವು. ರಾಜಾ‌ ಇನ್ನೂ ಮುಂದೆ ಸಾಗಿದ. ಅಲ್ಲೊಂದು ಬಂಡೆಯೊಳಗೆ ಕೆತ್ತಿದ ಗವಿಯಂತಹ ರಚನೆ. ಅದಾಗಲೇ ಕತ್ತಲು ಕವಿಯತೊಡಗಿತ್ತು. ರಾಜನ ಬ್ಯಾಗಿನೊಳಗಿದ್ದ ಲೈಟು ಉಪಯೋಗಕ್ಕೆ ಬಂತು. ಟ್ರಕ್ಕಿಂಗಿಗೆ ಹೋಗಿ ಅಭ್ಯಾಸವಿದ್ದದ್ದರಿಂದ ಇವೆಲ್ಲಾ ರಾಜನ ಬ್ಯಾಗಿನಲ್ಲಿ ತಪ್ಪಿಸಿಕೊಳ್ಳದ ನಿತ್ಯದ ಅತಿಥಿಗಳು. ಅಲ್ಲೊಂದು ಕೆಳಂತಸ್ತಿನ ಮೆಟ್ಟಿಲು. ಕುತೂಹಲ ತಡೆಯಲಾಗದೆ ರಾಜಾ ಇಳಿಯತೊಡಗಿದ. ಇಳಿಯುತ್ತಿದ್ದಂತೆ ಉಸಿರು ಕಟ್ಟುವಷ್ಟು ಕತ್ತಲು. ಕುತೂಹಲ ಇಮ್ಮಡಿಗೊಂಡು ಟಾರ್ಚು ಲೈಟು ಹಾಕುತ್ತಾ‌ ಮುನ್ನಡೆದ.

****

ಚಾರಣಿಗರೆಲ್ಲರ ರಿಜಿಸ್ಟ್ರು ಮಾಡಿದ್ದ ಕೊನೆಯಲ್ಲಿ ಹಿಂತಿರುಗಿದ ಸಹಿ ಇತ್ತು. ಆದರೆ ಆರುಶ್ ಹೆಸರಿನ ಬಳಿ ಖಾಲಿ ಜಾಗ! ದಿಗಿಲಾದ ಸಿಬ್ಬಂದಿ, ನಮೂದಿಸಿದ ನಂಬರ್‌ಗೆ ಕಾಲ್ ಮಾಡಿದರು. ಸ್ವಿಚ್ಡ್ ಆಫ್!

ಆ ಅಪರಾತ್ರಿ ಟಾರ್ಚು ತೆಗೆದುಕೊಂಡು ಇಬ್ಬರು ಸಿಬ್ಬಂದಿ ಜೊತೆಗೂಡಿ ಹುಡುಕಲು ಹೊರಟರು. ಕಾಡು ದಾರಿಯಲ್ಲಿ ತುಂಬಾ ಅಲೆದರೂ ಪತ್ತೆಯೇ ಇಲ್ಲ. ರಾತ್ರಿಯಾದ್ದರಿಂದ ಇನ್ನಷ್ಟು ಸರಿಯಾಗಿ ಹುಡುಕಾಟಕ್ಕೆ ತೆರಳುವುದು ಸೂಕ್ತವಲ್ಲ‌. ಹೇಗೂ, ಹುಲಿ, ಚಿರತೆ ಕಾಡಾನೆಗಳಿರುವ ಕಾಡು. ಫಾರೆಸ್ಟ್ ರೇಂಜರ್‌ಗೂ ವಿಷಯ ತಿಳಿಸಿದರು. ಸುದ್ದಿ ಆರುಶ್‌ನ ಮನೆಯವರಿಗೂ ತಲುಪಿತು. ಅಷ್ಟರಲ್ಲಿ ಮಂಗಳೂರಿನಲ್ಲಿ ಕಾಣೆಯಾದ ರಾಜಾನ ಸುದ್ದಿಯೂ ವಾಹಿನಿಯಲ್ಲಿ ಪ್ರಸಾರವಾಗತೊಡಗಿದವು. ಮರುದಿನ ಪತ್ರಿಕೆಯಲ್ಲಿ ಅವರಿಬ್ಬರ ಫೋಟೋದೊಂದಿಗೆ ಕಾಣೆಯಾದ ಸುದ್ದಿ ಪ್ರಕಟವಾಯಿತು. ಎಲ್ಲಿ ಹುಡುಕಿದರೂ ಪತ್ತೆಯಿಲ್ಲ‌. ಸ್ಥಳೀಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾದವು. ಯಾವ ಸುಳಿವೂ ಇಲ್ಲ.

ಮರುದಿನ ಆರುಶ್‌ನ ಬೈಕ್ ಯಥಾ ಸ್ಥಿತಿಯಲ್ಲಿ ಪತ್ತೆಯಾಯಿತು. ಇತ್ತ ರಾಜಾನ ಮೊಬೈಲ್ ಸ್ವಿಚ್ಡ್ ಆಫ್! ಮನೆಗೆ ಬರುವೆನೆಂದು ಹೇಳಿ ಹೊರಟವನ ಸುದ್ದಿ ಹೆಸರಿಲ್ಲ. ಸೈಬರ್ ಇಲಾಖೆ ತ್ವರಿತಗತಿಯಲ್ಲಿ ಸಹಕರಿಸಬೇಕೆಂಬ ಫರ್ಮಾನು ಬಂತು. ಅವರು ಇಬ್ಬರ ಫೋನ್ ನೆಟ್ವರ್ಕ್ ಕೊನೆಗೆ ಕಟ್ಟಾದ ಕಡೆ ತಿಳಿಸಲಷ್ಟೇ ಶಕ್ತರಾದರು. ಮನೆಯವರ ರೋದನೆ ಮುಗಿಲು ಮುಟ್ಟಿತು. ಗಟ್ಟಿಮುಟ್ಟಾದ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬದವರನ್ನು ಸಂತೈಸುವುದಷ್ಟು ಸುಲಭವಿರಲಿಲ್ಲ. ರಾಜಾ ಮತ್ತು ಆರುಶ್ ಕೊನೆಯದಾಗಿ ಸಂಭಾಷಿಸಿದ ಕರೆಗಳಲ್ಲಿ ಒಬ್ಬ ಗಡಾಯಿಕಲ್ಲಿನಲ್ಲೇ ಕಳೆದುಹೋಗಿದ್ದಾನೆಂಬ ತೀರ್ಮಾನಕ್ಕೆ ಬಂದರು.‌ ರಾಜನ ಬೈಕ್ ಬೋಳಿಯಾರ್ ಒಳ ರಸ್ತೆಯಲ್ಲಿ ಪತ್ತೆಯಾಯಿತು. ಅಲ್ಲೆಲ್ಲಾ ಹುಡುಕಾಡಿದರೂ ಯಾವ ಸುಳಿವೂ ಸಿಗಲಿಲ್ಲ. ಇಡೀ ಜಿಲ್ಲೆಯ ಲಕ್ಷ್ಯ ನಾಪತ್ತೆಯಾದ ಹುಡುಗರ ಕಡೆಗೆ ತಿರುಗಿತು. ಎರಡನೇ ದಿನವೂ ಸುಳಿವಿಲ್ಲ.

****

ಮೂರನೇ ದಿನ, ಮಂಗಳೂರು ಸುಲ್ತಾನ್ ಬತ್ತೇರಿಯ ಕಡೆಯಿಂದ ಮೀನು ಮಾರುವವನೊಬ್ಬ ಹೊಸ ಸುದ್ದಿಯೊಂದನ್ನು ತಂದ. ಸುಲ್ತಾನ್ ಬತ್ತೇರಿಯ ಲೈಟ್ ಹೌಸಿನ ಬದಿಯಿರುವ ಆ ಸುರಂಗ ಮಾರ್ಗದಲ್ಲಿ ವಿಪರೀತ ವಾಸನೆ ಬರುತ್ತಿದೆ. ಗಾಳಿ ಬರುತ್ತಿದ್ದಂತೆಲ್ಲ ಆ ಸುರಂಗ ಮಾರ್ಗದಿಂದ ಅಸಹ್ಯ ವಾಸನೆಯಿದೆ ಎಂದು ಸಹದ್ಯೋಗಿ ಮೊಗವೀರ ಮೀನುಗಾರರಲ್ಲಿ ಭಿನ್ನವಿಸಿಕೊಂಡ‌. ಅವರಿಗೆ ಸಹಾಯಕ್ಕಾಗಿ ಮಿಡಿಯುವ ಅತೀ ಮನುಷ್ಯತ್ವ ಉಳ್ಳವರು. ಕೊನೆಗೂ ಏನೆಂದು ಪತ್ತೆಹಚ್ಚಬೇಕೆಂದು ಸರ್ಕಾರ ನಿರ್ಬಂಧಿಸಿದ ಆ ಸುರಂಗದೊಳಗೆ ಒಂದಿಬ್ಬರು ಟಾರ್ಚು ತೆಗೆದುಕೊಂಡು ಮುನ್ನಡೆದರು. ಸರಾಗ ದಾರಿ, ಅವರು ಒಳಗೆ ಹೋದಂತೆಲ್ಲಾ ಇಲಿಗಳ ಗಲಾಟೆ ಅಧಿಕವಾಯಿತು. ವಾಸನೆ ಅಧಿಕವಾಗುತ್ತಾ ಹೋಯಿತು. ಅಷ್ಟರಲ್ಲೇ ಅವರಲ್ಲೊಬ್ಬ ‘ಹೇಯ್, ಶವ ಅಂತ ಕಾಣುತ್ತೆ ಮಾರಾಯ, ನೋಡು’ ಅಂದ. ಹಿಂದಿದ್ದವನು ಜಾಗ ಮಾಡಿಕೊಂಡು ಟಾರ್ಚು ಲೈಟು ಬಿಟ್ಟ. ಅವರು ಇಳಿದಲ್ಲಿಂದ ಸುಮಾರು 200 ಮೀ ದೂರದಲ್ಲಿ ಎರಡು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು. ಆ ಕೂಡಲೇ ಇಬ್ಬರೂ ಹಿಂತಿರುಗಿದರು. ‘ಶವ ಶವ’ ಎನ್ನುತ್ತಾ ಇಬ್ಬರೂ ಏದುಸಿರು ಬಿಡುತ್ತಿದ್ದರು. ಅಷ್ಟರಲ್ಲಿ ಶವಗಳು ಪತ್ತೆಯಾದ ವಿಚಾರ ಇಡೀ ನಗರಕ್ಕೆ ತಲುಪಿತು. ಟಿ.ವಿಯವರು, ಪತ್ರಿಕೆಯವರು ಧಾವಿಸತೊಡಗಿದರು. ಲೈವ್ ಕವರೇಜ್ ಪ್ರಾರಂಭಗೊಂಡಿತು. ಅಗ್ನಿ ಶಾಮಕ ದಳದವರು ಕೊಳೆತ ಶವವನ್ನು ಹೊರತೆಗೆದರು. ಒಂದಲ್ಲ ಎರಡು ಶವಗಳು. ಗುರುತು ಹಿಡಿಯಲಾರದಷ್ಟು ಇಲಿಗಳು ತಿಂದು ಹಾಕಿದ್ದವು. ಶವಗಳೆರಡೂ ಶವಾಗಾರಕ್ಕೆ ಹೊರಟವು.

***

ಮರು ದಿನ ಬೆಳಿಗ್ಗೆ ‘ನಂದನವನದ’ ಗೇಟಿನೊಳಗಡೆ ಎಂದಿನಂತೆ ಪತ್ರಿಕೆ ಬಿತ್ತು. ಅಲ್ಲೇ ಗಿಡಕ್ಕೆ ‌ನೀರು ಬಿಡುತ್ತಿದ್ದ ಮನೆಯೊಡತಿ ಪತ್ರಿಕೆಯೆತ್ತಿಕೊಂಡರು. ನೋಡಿದರೆ ಬಾಡಿಗೆಗಿದ್ದ ‘ರಾಜಾ’ನ ಫೋಟೋ ಜೊತೆಗೆ ಆರುಶ್ ! ದಿಗ್ಬ್ರಮೆಯಿಂದ ಪತ್ರಿಕೆ ಓದುತ್ತಿರಬೇಕಾದರೆ ಇಬ್ಬರ ಬೈಕು ಸಿಕ್ಕಿದ್ದು ಬೇರೆ ಬೇರೆ ಊರಿನಲ್ಲಿ. ಶವವಾಗಿ ಸಿಕ್ಕಿದ್ದು ಒಂದೇ ಸ್ಥಳದಲ್ಲಿ ಹೇಗೆ ಎಂಬ ಯಕ್ಷಪ್ರಶ್ನೆ ಹಾಗೆಯೇ ಉಳಿಯಿತು. ಅಷ್ಟರಲ್ಲೇ ‘ಆಂಟಿ ಇವತ್ತು ಊಟಕ್ಕೆ‌ ನಾನಿಲ್ಲ ಆಯ್ತಾ, ಸ್ವಲ್ಪ ಹೊರಗಡೆ ಹೋಗ್ಬೇಕಿತ್ತು’ ಎಂದು ರಾಜಾ ಹೇಳಿದಂತೆ ಕೇಳಿಸಿತು. ಗೇಟಿನೆದುರಿಗೆ ಬುಲೆಟ್ಟೊಂದು ಅವನದೇ ಬೈಕಿನ ‘ಗುಡು-ಗುಡು’ ಶಬ್ದ ಮಾಡುತ್ತಾ ಹಾದು ಹೋಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.