ಬುಧವಾರ, ಜೂನ್ 29, 2022
24 °C

ದೊಡ್ಡವರೆಲ್ಲ ಜಾಣರಲ್ಲ...!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಮಕರ ಸಂಕ್ರಾಂತಿ ಹಬ್ಬದ ಎಳ್ಳು ಬೆಲ್ಲ ಕೊಟ್ಟು ‘ನಾನು ನೀನು ಎಳ್ಳು ಬೆಲ್ಲದ್ಹಾಂಗ್ ಇರೋಣ’ ಅಂತ ಹೇಳಾಕಂತ ಪ್ರಭ್ಯಾನ ಮನಿಗೆ ಹೋದ್ರ, ಆಸಾಮಿ ಮನ್ಯಾಗs ಇದ್ದಿರಲಿಲ್ಲ. ‘ಎಲ್ಲಿ ಹೋಗ್ಯಾನ ಬೇ ನಿನ್ನ ಭಂಡ ಗಂಡ’ ಅಂತ ಪಾರೋತಿಗೆ ಕೇಳ್ದೆ. ‘ಪಾರ್ಟಿ ಕಚೇರಿ ಓಪನ್‌ ಮಾಡಾಕ್‌ ಪಟೇಲ್ರು ಬರ್ತಾರಂತ ಹೋಗ್ಯಾನ್ರಿ’ ಅಂದ್ಳು. ಅಷ್ಟೊತ್ತಿಗೆ ಬೈಕ್‌ ಇಳಿದು ಬಂದ ಪ್ರಭ್ಯಾ, ‘ಏನಪಾ ಸವಾರಿ ಇಲ್ಲಿತನ್ಕ ಬಂದದಲ್ಲ. ಏನ್‌ ವಿಷ್ಯಾ’ ಅಂತ ಕೇಳುತ್ತಲೇ, ‘ಲೇ ಪಾರಿ, ಪಾನಕಾ ಗೀನಕಾ ಕೊಟ್ಟಿ ಇಲ್ಲ ನನ್ನ ದೋಸ್ತಗ್‌’ ಅಂತ ಕಕ್ಕುಲಾತಿಯಿಂದ ಕೇಳ್ದಾ. ‘ಚಹಾ ಕುಡ್ದ ಕುಂತಿನೇಳೊ. ಪಟೇಲ್ರು ಬಂದಾರಂತ ಹೋಗಿದ್ದೆಲ್ಲ. ಯಾರೊ ಅದು’ ಎಂದು ಕುತೂಹಲದಿಂದ ಕೇಳ್ದೆ.

‘ಅಮಿತ್‌ ಶಾ ಸಾಹೇಬ್ರು ಬಂದಿದ್ರು. ನಮ್ಮ ಸುಶಿಕ್ಷಿತ ಎಂ.ಪಿ ಪ್ರಖರ ಸೂರ್ಯ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ರಿಗೆ ತಮ್ಮನ್ನು ಹೋಲಿಸಿದ ಪೇಂಟಿಂಗ್‌ ಫ್ರೇಮ್‌ ಉಡುಗೊರೆ ಕೊಟ್ಟಿದ್ದು ನೋಡಿ ಶಾ ಭಾಳ್‌ ಖುಷಿಯಾದ್ರಪಾ’ ಎಂದ. ‘ಸಂಸ್ಥಾನಗಳನ್ನು ಒಕ್ಕೂಟದ ಒಳಗೆ ಸೇರಿಸಿ ಅಖಂಡ ಭಾರತ ಜೋಡಿಸಿದ ಪಟೇಲ್ರು ಎಲ್ಲಿ, ತುಕಡೆ ತುಕಡೆ ಗ್ಯಾಂಗ್ ವಿರುದ್ಧ ಬೆಂಕಿ ಉಗುಳುತ್ತಿರುವ ಶಾ ಎಲ್ಲಿ. ಎತ್ತಣಿಂದೆತ್ತ ಹೋಲಿಕೆನಯ್ಯಾ’ ಎಂದು ಮೂದಲಿಸಿದೆ. ‘ಮಂಗ್ಯಾನ್‌ ಮಗ್ನ, ಗೃಹ ಮಂತ್ರಿಗಳನ್ನ ಅಷ್ಟು ಹಗುರವಾಗಿ ಹಂಗಸ್‌ಬ್ಯಾಡಾ. ಒಳಗ್‌ ಗಿಳಕ್‌ ಹಾಕ್ಯಾರ್‌ ಹುಷಾರದಾಗ್‌ ಇರಲೇ’ ಎಂದ.

‘ತುಕಡೆ ತುಕಡೆ ಗ್ಯಾಂಗ್ ಬಗ್ಗೆ ಮಾತನಾಡವ್ರನ್ನ ಸರ್ದಾರ್‌ ಪಟೇಲ್‌ರಿಗೆ ಹೋಲಿಸೋರ ಬುದ್ಧಿಗೂ ತುಕ್ಕು ಹಿಡಿದಿರಬೇಕಲೆ. ಒಬ್ಬ ಉಕ್ಕಿನ ಮನುಷ್ಯ, ಇನ್ನೊಬ್ಬ ತುಕ್ಕು ಹಿಡಿದಿರೋ ಮನುಷ್ಯ ಅಂತ ಟ್ವಿಟರ್‌ನ್ಯಾಗ್‌ ಟೀಕಿಸ್ಯಾರ್. ದೇಶದಾಗ್ ಯಾವುದೇ ತುಕಡೆ ತುಕಡೆ ಗ್ಯಾಂಗ್‌ ಇಲ್ಲ ಅಂತ ಕೇಂದ್ರ ಗೃಹ ಸಚಿವಾಲಯನs ಹೇಳೇದ. ಹೀಂಗಾಗಿ ಮೊನ್ನೆ ಲಖನೌ ಸಭೆದಾಗ್‌ ತುಕಡೆ ತುಕಡೆ ಗ್ಯಾಂಗ್‌ ಬಗ್ಗೆ ಶಾಣ್ಯಾ ತುಟಿ ಪಿಟಕ್‌ ಅಂದಿಲ್ಲ’ ಎಂದೆ. ನಾನು ಮಾತ್‌ ಮುಗಿಸೊ ಮೊದ್ಲ ದಿಢೀರನೆ ಎದ್ದು ನಿಂತ ಪ್ರಭ್ಯಾ, ‘ನೀ ಹಿಂಗೆಲ್ಲ ಹೇಳೂದಿದ್ರ ನಮ್ಮ ಮನಿಗೆ ಯಾಕ್‌ ಬಂದಿ ಏಳ್‌ ಎದ್ದೇಳ್‌’ ಅಂದ. ಅವನ ಮಾತ್‌ ಕೇಳಿ ನನಗ್‌, ಭಯದಾನಂದ ಸ್ವಾಮೀಜಿ ‘ನಿರಾಣಿ ಅವರನ್ನ ನೀವು ಮಂತ್ರಿ ಮಾಡ್ಲೆಬೇಕ್‌ ನೋಡ್ರಿ’ ಅಂತ ತಾಕೀತು ಮಾಡುತ್ತಿದ್ದಂತೆ, ರಾಜಾ ಹುಲಿ ತಟಕ್ಕನೆ ಎದ್ದು ನಿಂತಿದ್ದು ನೆನಪಾತು.

‘ಅಯ್ಯ, ಹಂಗ್ಯಾಕ್‌ ತೊಣಸಿ ಹೊಕ್ಕವ್ರಂಗ್‌ ಹಾರ‍್ಯಾಡಾಕತ್ತಿ. ಅವರೇನ್‌ ಅಂಥಾದ್ದು ಹೇಳ್ಯಾರ್‌. ಬಾಯಿಗೆ ಬಂದ್ಹಂಗ್‌ ಬೈದುಕೊಳ್ಳುತ್ತ ಪುಕ್ಸಟ್ಟೆ ಮನರಂಜನೆ ನೀಡುವ ಸಿದ್ದಣ್ಣ, ವಿಶ್ವಣ್ಣ ಮತ್ತು ಈಶಣ್ಣ ದ್ವೇಷ ಮರೆತು ಹೀ ಹೀ ಹೀ ಅಂತ ಹಲ್‌ ಕಿಸ್ಕೊಂಡು ಪೋಸ್‌ ಕೊಟ್ಟಿದ್ದು ನೋಡ್ಯರ್‌ ನೀ ಕಲಿಬೇಕಿತ್ತು’ ಎಂದು ಪಾರೋತಿ ಅಡುಗಿ ಮನ್ಯಾಗನಿಂದ ಆವಾಜ್‌ ಹಾಕುತ್ತಿದ್ದಂತೆ ಪ್ರಭ್ಯಾ ತೆಪ್ಪಗಾದ. ಆಡಿಯೋರಪ್ನೋರು ‘ಬುದ್ದಿ, ನೀವ್‌ ಹೀಂಗ್‌ ಹೇಳಿದ್ರ ಭಾಳ್‌ ಕಷ್ಟ ಆಗ್ತೈತಿ’ ಅಂತ ಬುದ್ಧಿ ಮಾತಿನ ವಚನಾಮೃತದ ಗುದ್ದು ನೀಡಿದ್ದು ನೆನಪಾಗಿ ಗಹಗಹಿಸಿ ನಕ್ಕೆ.

‘ಶಾಣೆ ಸಾಹೇಬ್ರು ಮತ್ತು ರಾಜಾ ಹುಲಿ ಬಗ್ಗೆ ಮಾತಾಡಕ್ಕ ನಿಂಗ್‌ ಯಾವ ಅರ್ಹತೆಯೂ ಇಲ್ಲೇಳ್‌’ ಎಂದು ಬುದ್ದಿಯವರ ಶಿಷ್ಯನ ಥರಾ ಅವಡುಗಚ್ಚಿದ. ‘ಅರ್ಹತೆ ಶಬ್ದ ನೆನಪಿಸಿದ್ದು ಛಲೋ ಆತ್‌ ನೋಡ್‌. ಎಲೆಕ್ಷನ್‌ದಾಗ್ ಅನರ್ಹತೆ ಪಟ್ಟ ಕಳಚ್‌ಕೊಂಡು ಗೆದ್ದ ಅರ್ಹರನ್ನ ಮಾರನೆ ದಿನಾನ್‌ ಮಂತ್ರಿ ಮಾಡ್ತೀವಿ ಅಂತ ಹೇಳ್ದವ್ರೂ ಸಂಕ್ರಾಂತಿ ಮುಗುದ್ರೂ ಮಗುಮ್ಮಾಗಿ ಕುಂತಾರಲ್ಲೊ, ಪಾಪ’ ಎಂದು ಲೊಚಗುಟ್ಟಿದೆ.

‘ಏನ್‌ ಮಾಡೋದು. ನಮ್ಮ ರಾಜಾ ಹುಲಿ ನಸೀಬs ನೆಟ್ಟಗಿದ್ಹಂಗ್‌ ಕಾಣುದಿಲ್ಲ. ದೊಡ್ಡವರಿಗೆ  ಹೇಳಿದ ಬುದ್ಧಿ ಮಾತs ಮುಳುವಾದ್ಹಂಗ್‌ ಕಾಣಸ್ತೈತಿ’ ಎಂದ. ‘ಬಜೆಟ್‌ನ್ಯಾಗ್‌ ಮಠಗಳಿಗೆ ಯಾರ‍್ದೊ ದುಡ್ಡು ಎಲ್ಲಮ್ಮನ ಜಾತ್ರಿ ಥರಾ ಹಂಚಿ ಬೆಳೆಸಿದ್ದಕ್ಕ ತಕ್ಕ ಶಾಸ್ತಿ ಆಗೇದ್‌ ನೋಡ್‌’ ಎಂದೆ. ಮಾತಿನ ಹಳಿ ತಪ್ಸಾಕ್‌, ‘ಅನರ್ಹ ವಲಸಿಗರನ್ನ ಹೊರಗ್‌ ಹಾಕಾಕ್‌ ಶಾ ಸಾಹೇಬ್ರು ತೊಡಿ ತಟ್ಟಿ ನಿಂತಿದ್ದಕ್ಕ ದೇಶದಾಗ್‌ ಇಷ್ಟ್ಯಾಕ್‌ ರಂಪಾಟ್‌ ನಡದೈತಿ’ ಎಂದು ಮಳ್ಳನಂಗ್‌ ಕೇಳ್ದಾ. ‘ಏಯ್‌ ಹುಚಪ್ಯಾಲಿ, ಒಂದ್‌ ಮಾತ್‌ ತಿಳ್ಕೊ. ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಕಮಲದ ಪಕ್ಷಕ್ಕೆ ವಲಸೆ ಬಂದ ಅನರ್ಹ ಶಾಸಕರಿಗೂ ಅನ್ವಯಿಸಿದ್ರ ಅವರನ್ನ ಮಂತ್ರಿ ಮಾಡುದು ಒತ್ತಟ್ಟಿಗಿರಲಿ, ಅವ್ರನ್ನ ಪಕ್ಷದಿಂದನs ಹೊರಗ್‌ ಹಾಕ್‌ಬೇಕಾಗ್ತೈತಿ. ಆಗ ಸರ್ಕಾರನs ಪಂಕ್ಚರ್‌ ಆಗ್ತೈತಿ. ಎಲ್ಲಾ ಪಕ್ಷದಾಗೂ ವಲಸಿಗರು ತುಂಬ್ಕೊಂಡಾರ್‌. ಕಾಂಗ್ರೆಸ್‌ನ್ಯಾಗ್‌ ಹೆಂಗ್‌ ಹೊಯ್‌ಕೈ ನಡ್ದದ್‌ ನೋಡಿ ಇಲ್ಲ. ಭಾಜಪಕ್ಕೂ ಈಗ ಆ ರೋಗ ಅಂಟ್ಕೊಂಡದ. ವಲಸಿಗರಲ್ಲಿ ಕೆಲವರನ್ನ ಮಂತ್ರಿ ಮಾಡದಿದ್ರ ಅದೇ ಕಾರಣಕ್ಕ ಹಳೆ ಪಕ್ಷಕ್ಕೆ ಕೈಕೊಟ್ಟು ಬಂದವ್ರು ಬಾಯಿ ಬಡ್ಕೊಬೇಕಾದೀತು. ಹೊಸ ಪಕ್ಷ ಕಟ್ಟಿ ಮೂಲ ಪಕ್ಷಕ್ಕೆ ಮಣ್ಣು ಮುಕ್ಕಿಸಿ ಆಮ್ಯಾಲ್‌ ಘರ್‌ ವಾಪ್ಸಿ ಥರಾ ಹೊಳ್ಳಿ ಬಂದ ವಲಸಿಗರನ್ನೂ ಹೊರಗ್‌ ಹಾಕ್ಬೇಕಾಗ್ತೈತಿ. ಆಗ್‌ ಖರೇನs ಪೌರತ್ವ ತಿದ್ದುಪಡಿ ಕಾಯ್ದೆಗೆ ಅರ್ಥ ಬರ್ತದ್‌’ ಎಂದೆ ಅ(ನ)ರ್ಥಗರ್ಭಿತವಾಗಿ.

ಇದು ಯಾಕೋ ತನ್ನ ಅಭಿಮಾನಿ ಮಹಾನ್ ನಾಯಕರ ಬುಡಕ್ಕ ಬರುದು ಗೊತ್ತಾಗಿ, ಪ್ರಭ್ಯಾ ಸಿಟ್ಟು ಮಾಡ್ಕೊಂಡ್‌ ಎದ್ದು ಹೊರಟ. ಅದೇ ಹೊತ್ತಿಗೆ ಸಾಲಿಯಿಂದ ಓಡಿ ಬಂದ ಪ್ರಭ್ಯಾನ ಮಗ ಪಕ್ಯಾ, ಗುರು ಶಿಷ್ಯರು ಚಿತ್ರದ ‘ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ, ಗುರುಗಳು ಹೇಳಿದ ಮಾತುಗಳು ಒಂದೂ ನಿಜವಲ್ಲ’ ಅಂತ ಹಾಡು ಹೇಳುವುದಕ್ಕೂ ನಾನು ಎದ್ದು ಹೊರಗೆ ಹೋಗುವುದಕ್ಕೂ ಸರಿ ಹೋಯ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು