ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಗೇನು ಗೊತ್ತುಗಂಡಸರ ದುಃಖ!

Last Updated 4 ಆಗಸ್ಟ್ 2019, 1:25 IST
ಅಕ್ಷರ ಗಾತ್ರ

ಶೇವಿಂಗ್ ಎಂಬುದು ಗಂಡಸರ ನಿತ್ಯ ಕರ್ಮ. ಪ್ರಾಯಕ್ಕೆ ಬಂದಾಗಿನಿಂದ ಸಾಯೋತನಕ ಗಡ್ಡ ಬೋಳಿಸಿಕೊಳ್ಳುವುದು ತಪ್ಪದು. ಜೀವನ ಪರ್ಯಂತ ಕಾಡುವ ಬಿ.ಪಿ, ಶುಗರ್ ಕಂಟ್ರೋಲ್ ಮಾಡಿಕೊಳ್ಳಬಹುದು ಆದರೆ, ಬೆಳೆಯೋ ಗಡ್ಡಕ್ಕೆ ನಿಯಂತ್ರಣವಿಲ್ಲ. ಇವತ್ತು ಶೇವ್ ಮಾಡಿ ಬೆಳಗಾಗುವ ವೇಳೆಗೆ ಮುಖದ ಕೂದಲು ಬೆಳೆದು ತರಚಲು ಶುರುವಾಗುತ್ತದೆ.

ಹೀಗಾಗಿ ಗಂಡಸರು ಸ್ವಯಂಶೇವಕರಾಗಲು ತಮ್ಮದೊಂದು ಶೇವಿಂಗ್ ಕಿಟ್ ಇಟ್ಟುಕೊಂಡಿರುತ್ತಾರೆ. ಬ್ಲೇಡು, ರೇಸರು, ಬ್ರಷ್ಷು, ಕ್ರೀಮು, ಚೋಟು ಕತ್ತರಿಯನ್ನು ಕಿಟ್ಟಿನಲ್ಲಿ ಸ್ವಯಾರ್ಜಿತ ಆಸ್ತಿಯಂತೆ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಹೆಂಗಸರು ಮೇಕಪ್ ಕಿಟ್ಟು ಇಟ್ಟುಕೊಳ್ಳುವಂತೆ ಗಂಡಸರಿಗೂ ಒಂದು ಕಿಟ್. ಶೇವಿಂಗ್ ತರಬೇತಿಯನ್ನು ಯಾರೂ ನೀಡುವುದಿಲ್ಲ. ಗಡ್ಡ, ಮೀಸೆ ಬೆಳೆಯಲು ಶುರುವಾದ ಮೇಲೆ ತಮಗೆ ತಾವೇ ಕಲಿತುಕೊಳ್ಳಬೇಕು. ಆರಂಭದಲ್ಲಿ ಮುಖ ಕೊಯ್ದುಕೊಂಡು ಎಡವಟ್ಟಾಗುವುದು ಸಹಜ. ಆಗ ಗಾಯಕ್ಕೊಂದು ಬ್ಯಾಂಡೇಜ್ ಅಂಟಿಸಿಕೊಂಡು ತಮ್ಮ ಮುಖಾವಸ್ಥೆಯನ್ನು ಜನಕ್ಕೆ ತೋರಿಸಬೇಕಾದ ಪರಿಸ್ಥಿತಿ. ಎಷ್ಟೇ ಅಚ್ಚುಕಟ್ಟಾಗಿ ಶೇವಿಂಗ್ ಮಾಡಿಕೊಳ್ಳಲು ಪ್ರಯತ್ನಿಸಿದರೂ ಕೆನ್ನೆ ಮೇಲೆ ಅಲ್ಲಲ್ಲಿ ಕೂದಲು ಉಳಿದುಬಿಟ್ಟಿರುವುದನ್ನು ನೋಡಿದವರು ಗುರುತಿಸುತ್ತಾರೆ. ಮೀಸೆ ಕಟ್ ಮಾಡಿಕೊಳ್ಳುವಾಗಲೂ ಅಷ್ಟೆ, ಒಂದು ಕಡೆ ಉದ್ದ ಇನ್ನೊಂದು ಕಡೆ ತೀರಾ ತುಂಡು ಮಾಡಿಕೊಂಡು ಅಭಾಸ ಮಾಡಿಕೊಂಡ ಅನುಭವ ಬಹಳಷ್ಟು ಜನಕ್ಕಿದೆ.ನುಣ್ಣಗೆ ಶೇವ್ ಮಾಡಿಕೊಂಡು ಮದುವೆಗೋ, ಸಭೆ ಸಮಾರಂಭಕ್ಕೋ ಹೋಗುವ ಸಡಗರದಲ್ಲಿ ರೇಸರ್ ಹಿಡಿತ ತಪ್ಪಿ ಕೆನ್ನೆ ಕೊಯ್ದು ಬಿಡುತ್ತದೆ. ಅಂತಹ ವೇಳೆಯೂ ಬ್ಯಾಂಡೇಜ್ ಹಾಕಿಕೊಂಡು ಕೇಳಿದವರಿಗೆಲ್ಲಾ ಕಥೆ ಹೇಳಲಾಗದೆ ಮುಖ ಮರೆಸಿಕೊಳ್ಳುವ ಸಂದರ್ಭ ಎದುರಾಗಿಬಿಡುತ್ತದೆ.

ಶೇವಿಂಗ್ ಎಂಬುದು ಸ್ವಯಂ ಕಲೆಯಾಗಿ ರೂಢಿಯಾಗುತ್ತದೆ. ಅನುಭವಿಗಳು ಕನ್ನಡಿ ನೋಡದೇ ಶೇವಿಂಗ್ ಮಾಡಿಕೊಳ್ಳುವಷ್ಟು ಪರಿಣತಿ ಹೊಂದಿದ್ದಾರೆ.ಶೇವಿಂಗ್ ಸಹವಾಸ ಬೇಡ ಎಂದು ಗಡ್ಡ, ಮೀಸೆ ಬೆಳೆಸಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಯಾವ ದೇವರಿಗೆ ಮುಡಿಕೊಡಲು ಹರಕೆ ಹೊತ್ತಿದ್ದೀರಿ, ಯಾಕೆ ಗಡ್ಡ ಬೆಳೆಸಿದ್ದೀರಿ, ಜೀವನ ಅಂದ ಮೇಲೆ ಕಷ್ಟ ಸುಖ ಇದ್ದೇ ಇರುತ್ತೆ ಅಷ್ಟಕ್ಕೆಲ್ಲಾ ಜಿಗುಪ್ಸೆ ತಾಳಿದರೆ ಹೇಗೆ ಎಂಬ ಮಾತುಗಳನ್ನು ಕೇಳಬೇಕಾದೀತು.


ಗಡ್ಡ ಸಮೃದ್ಧವಾಗಿ ಬೆಳೆದರೆ ಮುಖಕ್ಕೊಂದು ವಿನೂತನ ಲಕ್ಷಣ ಅಂತ ಬೆಳೆಸಬಹುದು. ಆದರೆ ಕೆಲವರಿಗೆ ಕುರುಚಲು ಗಡ್ಡ, ಅಕ್ಕಲು ಗಡ್ಡ, ಮೇಕೆ ಗಡ್ಡ ರೀತಿ ಬೆಳೆದು ಮುಖ ಲಕ್ಷಣವನ್ನು ವಿರೂಪಗೊಳಿಸಬಹುದು. ಜೊತೆಗೆ, ವಯಸ್ಸಾದಂತೆ ಗಡ್ಡದಲ್ಲಿ ಬಿಳಿ ಕೂದಲು ಕಾಣಿಸಿಕೊಂಡು ‘ತಾತ’ ಅಂದುಕೊಳ್ಳುತ್ತಾರೇನೊ ಅನ್ನೋ ಫೀಲಿಂಗ್ ಶುರುವಾಗಬಹುದು, ಹಾಗಂತ ಗಡ್ಡ ಮೀಸೆಗೆ ಹೇರ್ ಡೈ ಹಚ್ಚಿದರೆ ಆ ಬಣ್ಣ ನಾಲ್ಕಾರು ದಿನವೂ ಬಾಳಿಕೆ ಬರೋಲ್ಲ. ಅಲ್ಲಲ್ಲಿ ಬಣ್ಣ ಬಿಳಚಿಕೊಂಡು ಮುಖದ ಅಂದಗೆಡಿಸಿ ಇನ್ನಷ್ಟು ವಿಕಾರ ಮಾಡುತ್ತದೆ. ಇದರ ಬದಲು ಶೇವಿಂಗೇ ಬೆಟರ್ ಅನ್ನೋ ತೀರ್ಮಾನಕ್ಕೆ ಬರಬೇಕಾಗುತ್ತದೆ. ತಿಂಗಳ ಮನೆ ಸಾಮಾನು ಪಟ್ಟಿಯಲ್ಲಿ ಗಂಡಸರ ಶೇವಿಂಗ್ ಐಟಂಗಳು ಸೇರಿಕೊಂಡಾಗ ಹೆಂಡ್ತಿಗೆ ಕಣ್ಣು ಉರಿ ಆಗಬಹುದು. ತಿಂಗಳ ಖರೀದಿಯಲ್ಲಿ ಹೆಂಗಸರ ಸೌಂದರ್ಯ ಸಾಮಗ್ರಿಗಳೂ ಸೇರಿಕೊಳ್ಳುವುದರಿಂದ ಗಂಡಸರು ಐಟಂಗಳು ಸೇರಿದರೆ ಅದೇನು ಆಕ್ಷೇಪಾರ್ಹವಲ್ಲ ಎಂದು ಹೆಂಡತಿಗೆ ಮನವರಿಕೆ ಮಾಡಿಕೊಡಬೇಕು.
ಹೆಂಗಸರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಗಂಡಸರು ಚುಡಾಯಿಸಿದರೆ ‘ಗಂಡಸಿಗೇನು ಗೊತ್ತು ಗೌರಿ ದುಃಖ’ ಎಂದು ಮೂಗು ಮುರಿಯುತ್ತಾರೆ. ಅವರ ಮೇಕಪ್ಪಿನಷ್ಟು ಖರ್ಚು, ಕಾಲ ಹರಣ ಗಂಡಸರ ಶೇವಿಂಗ್‍ನಿಂದ ಆಗೊಲ್ಲ. ಆದರೂ ಹೆಂಡತಿಯರು ‘ಅದೆಷ್ಟು ಹೊತ್ತು ಶೇವಿಂಗ್ ಮಾಡಿಕೊಳ್ತೀರಿ...’ ಎಂದು ಮುಖ ಕಿವುಚಿಕೊಳ್ಳುತ್ತಾರೆ. ಶೇವಿಂಗ್ ಸಮಸ್ಯೆ ಏನೆಂದು ಅನುಭವಿಸುವವರಿಗೇ ಗೊತ್ತು, ಗೌರಿಗೇನು ಗೊತ್ತು ಗಂಡಸರ ದುಃಖ!


ಗಡ್ಡ, ಮೀಸೆಗೆ ಬಡತನ, ಸಿರಿತನ ಜಾತಿ, ಧರ್ಮದ ತಾರತಮ್ಯವಿಲ್ಲ. ಯಾವುದೇ ಆರೈಕೆ, ಪೂರೈಕೆ ಇಲ್ಲದೆ ಎಲ್ಲ ಗಂಡಸರಿಗೂ ಬೆಳೆದು ಪ್ರತಿ ದಿನ ಕಟಾವಿಗೆ ಬರುತ್ತದೆ. ಬೋಳಿಸಿಕೊಳ್ಳುವುದನ್ನು ಗಂಡಸರು ಅಭ್ಯಾಸ ಮಾಡಿಕೊಳ್ಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT