ಗುರುವಾರ , ಜೂನ್ 24, 2021
22 °C

ಅಥಣಿ ಪುರಸಭೆ ಅಧ್ಯಕ್ಷರಾಗಿ ಲೋನಾರಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಇಲ್ಲಿಯ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಫೋಟೋ ಫಿನಿಶ್ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಬುಕಿಟಗಾರ ಅವರನ್ನು ಒಂದು ಮತದಿಂದ ಸೋಲಿಸುವ ಮೂಲಕ ಬಿಜೆಪಿಯ ದಿಲೀಪ್‌ ಲೋನಾರಿ ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರಿದರು.ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಮಹಾದೇವಿ ಪರಾಂಜಪೆ ಅವಿರೋಧ ಆಯ್ಕೆಯಾದರು. ಸಾಮಾನ್ಯ ವರ್ಗದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಸದ ಮತ್ತು ಶಾಸಕರ ಮತ ಸೇರಿ ಲೋನಾರಿ ಪರ 13 ಮತ ಬಂದರೆ ಬುಕಿಟಗಾರ 12 ಮತ ಪಡೆದರು. ಒಟ್ಟು 23 ಸದಸ್ಯ ಬಲದ ಪೈಕಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ 13 ಸದಸ್ಯರನ್ನು ಹೊದಿದ್ದರೂ ಕೊನೆ ಘಳಿಗೆಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಉಲ್ಟಾ ಹೊಡೆದ ಪರಿಣಾಮ ಮೈತ್ರಿಕೂಟಕ್ಕೆ ಹಿನ್ನಡೆಯಾಯಿತು,

ಸಂಸದ ರಮೇಶ ಕತ್ತಿ ಮತ್ತು ಶಾಸಕ ಲಕ್ಷ್ಮಣ ಸವದಿ ಹೆಣೆದ ತಂತ್ರಗಾರಿಕೆಯ ಎದುರು ಕೊನೆ ಕ್ಷಣದವರೆಗೂ ಪರದಾಡಿದಂತೆ ಕಂಡ ಕಾಂಗ್ರೆಸ್ ಮುಖಂಡರು, ಜೆಡಿಎಸ್ ಸದಸ್ಯರನ್ನೂ ಸುಖಾಸುಮ್ಮನೆ ಹೈರಾಣಾಗಿಸಿದರು, ಎರಡೂವರೆ ವರ್ಷ ಅವಧಿಯಲ್ಲಿ ಮೊದಲ 10 ತಿಂಗಳು ಜೆಡಿಎಸ್ ನಂತರದ 20 ತಿಂಗಳು ಕಾಂಗ್ರೆಸ್ ಅಧಿಕಾರ ಹಂಚಿಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು,ಆದರೆ ಕೊನೆ ಕ್ಷಣದಲ್ಲಿ  ವರಸೆ ಬದಲಿಸಿದ ಕಾಂಗ್ರೆಸ್ ಮೊದಲ ಅವಧಿ ಬಿಟ್ಟುಕೊಡುವಂತೆ ಎತ್ತಿದ ತಗಾದೆಯನ್ನು ಅನುಕೂಲ ಸಿಂಧುವಾಗಿ ಬಳಸಿಕೊಂಡ ಬಿಜೆಪಿ ಗೆಲುವಿನ ದಡ ಸೇರಿತು,ಬುಕಿಟಗಾರ ಅವರನ್ನು ಮುಂದಿಟ್ಟುಕೊಂಡು ಹೈ ಡ್ರಾಮಾ ನಡೆಸಲು ಮುಂದಾದ ಕಾಂಗ್ರೆಸ್ ಅನ್ನು ಅಕ್ಷರಶಃ ಯಾಮಾರಿಸಿದ ಬಿಜೆಪಿ, ಕೈ ತೆಕ್ಕೆಯಿಂದಲೇ ಉಪಾಧ್ಯಕ್ಷ ಅಭ್ಯರ್ಥಿಯನ್ನು ತನ್ನ ಪಾಳಯಕ್ಕೆ ಸೆಳೆಯುವ ಮೂಲಕ ತಿರುಮಂತ್ರ ಮಾಡಿತು. ಇದೇ ವೇಳೆ ಅಭ್ಯರ್ಥಿ ಅಂತಿಮಗೊಳಿಸುವ ವಿಚಾರದಲ್ಲಿಯೂ ಸಹ ಕಾಂಗ್ರೆಸನಲ್ಲಿ ಒಡಕು ಕಂಡು ಬಂದಿದ್ದರಿಂದ ಚುನಾವಣೆ ಪೂರ್ವದಲ್ಲಿಯೇ ಹಲವು ಮುಖಂಡರು ಅಲ್ಲಿಂದ ಕಾಲ್ಕಿತ್ತರು. ಜೆಡಿಎಸ್ ನ್ನು ಅಧಿಕಾರದಿಂದ ದೂರವಿಡುವ ಭರದಲ್ಲಿ ಕಾಂಗ್ರೆಸ್  ಅವಕಾಶ ಕೈ ಚೆಲ್ಲುತ್ತಿರುವುದನ್ನು ಕಂಡು ಒಂದು ಹಂತದಲ್ಲಿ ತೀವ್ರ ಬೇಸರಗೊಂಡ ಜೆಡಿಎಸ್ ಮುಖಂಡ ಸದಾಶಿವ ಬುಟಾಳಿ  ಗಳಗಳನೆ ಅತ್ತುಬಿಟ್ಟರು, ಆದರೂ ಕೈ  ಪಟ್ಟು ಸಡಿಲಿಸದ ಕಾರಣ ಬುಕಿಟಗಾರ ಬೆಂಬಲಿಸಲು ಕೊನೆ ಕ್ಷಣದಲ್ಲಿ ಬುಟಾಳಿ ರಾಜಿಯಾದರು. ನಂತರ ಪುರಸಭೆ ಸಭಾಭವನಕ್ಕೆ ವರ್ಗಾವಣೆಗೊಂಡ ಈ ಹೈಡ್ರಾಮಾ ಸಂಸದ ಮತ್ತು ಶಾಸಕರ ರಂಗಪ್ರವೇಶದಿಂದ ಮತ್ತಷ್ಟು ರಂಗು ಪಡೆದು ಸುಮಾರು 5 ತಾಸಿನವರೆಗೆ ಸಂಚಾರ ಅಸ್ತವ್ಯಸ್ತಗೊಳಿಸಿತು, ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ, ಜನದಟ್ಟಣೆ ಕಾರಣ ಮುಂದೊಡ್ಡಿ ಪತ್ರಕರ್ತರಿಗೂ ಪ್ರವೇಶ ನಿರಾಕರಿಸಲಾಯಿತು, ಆರಂಭದಲ್ಲಿ ಜೆಡಿಎಸ್ ನ ರಾವಸಾಬ ಐಹೊಳೆ, ಸಯ್ಯದ್ ಅಮೀನ್ ಗದ್ಯಾಳ, ಶ್ರೀಶೈಲ ಹಳದಮಳ್ಳ,ಬಿಜೆಪಿಯ ಭರತಸಿಂಗ ರಜಪೂತ,ದಿಲೀಪ ಲೋನಾರಿ ಮತ್ತು ಕಾಂಗ್ರೆಸ್ ನಿಂದ ಮೀನಾಕ್ಷಿ ಬುಕಿಟಗಾರ ನಾಮಪತ್ರ ಸಲ್ಲಿಸಿದ್ದರು, ನಂತರ ನಾಲ್ವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಅಂತಿಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಿತು, ತಹಶೀಲ್ದಾರ್ ಅಪರ್ಣಾ ಪಾವಟೆ ಚುನಾವಣಾಧಿಕಾರಿಯಾಗಿ ಮತ್ತು ಉಪತಹಶೀಲ್ದಾರ್ ರಾಜು ಬುರ್ಲಿ, ರಾಜು ವಾಳ್ವೇಕರ,ದೇಸಾಯಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.