ಗುರುವಾರ , ಜನವರಿ 23, 2020
26 °C

ಅರ್ಥಶಾಸ್ತ್ರ ಶಾಲೆ: ಜಿಂದಾಲ್ ಮನವೊಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಉದ್ಯಮಿ ಸೀತಾರಾಮ್ ಜಿಂದಾಲ್ ಅವರನ್ನು ಭೇಟಿ ಮಾಡಿ, ನಮ್ಮ ನಿಲುವು ವಿವರಿಸುತ್ತೇವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬೆಂಗಳೂರು ಅರ್ಥಶಾಸ್ತ್ರ ಶಾಲೆಗೆ 100 ಕೋಟಿ ರೂಪಾಯಿ ದೇಣಿಗೆ ನೀಡುವಂತೆ ಅವರ ಮನವೊಲಿಸುತ್ತೇವೆ~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತಿನ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಡಿಕೇಟ್ ಸದಸ್ಯರಾದ ಡಿ.ಎಸ್.ಕೃಷ್ಣ, ಸಿ.ಕೆ.ಜಗದೀಶ್ ಪ್ರಸಾದ್, ಡಾ.ಕೆ.ಬಿ.ವೇದಮೂರ್ತಿ, ಎಂ.ಬಿ.ಗಿರೀಶ್, ಡಾ.ಮಾನಸ ನಾಗಭೂಷಣಂ, ಟಿ.ಎಚ್.ಶ್ರೀನಿವಾಸಯ್ಯ, ಶೈಕ್ಷಣಿಕ ಪರಿಷತ್ತಿನ ಸದಸ್ಯರಾದ ಸಂಜೀವ್ ಕುಬಕಡ್ಡಿ, ಡಾ.ಆರ್.ಕರುಣಾಮೂರ್ತಿ, ಡಾ.ಕೆ.ಶೇಷಮೂರ್ತಿ, ಎಚ್. ಕರಣ್ ಕುಮಾರ್, ಬಾಬುರಾವ್, ವಿ.ಜ್ಯೋತಿ ಮೊದಲಾದವರು,   `ಜಿಂದಾಲ್ ಸಮೂಹ ದೇಣಿಗೆ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ನಿಯಮಾವಳಿ ಪ್ರಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕೆಂಬುದಷ್ಟೆ ನಮ್ಮ ವಾದ~ ಎಂದರು.`ವಿ.ವಿ.ಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಾಲೆ ಸ್ಥಾಪನೆಗಾಗಲಿ, ಜಿಂದಾಲ್ ಸೇರಿದಂತೆ ಉದ್ಯಮಿಗಳು ದೇಣಿಗೆ ಕೊಡುವುದಕ್ಕಾಗಲಿ ಅಭ್ಯಂತರ ಇಲ್ಲ. ಉದ್ದೇಶಿತ ನೂತನ ಶಾಲೆಯನ್ನು ಪ್ರಜಾಪ್ರಭುತ್ವದ ವಿಧಿ ವಿಧಾನಗಳ ಮೂಲಕ ಅರ್ಥಾತ್ ವಿ.ವಿ ನಿಯಮಾವಳಿಗಳ ಪ್ರಕಾರ ಸ್ಥಾಪಿಸಬೇಕು. ಅದಕ್ಕಾಗಿ ಶೈಕ್ಷಣಿಕ ಪರಿಷತ್ತು ಮತ್ತು ಸಿಂಡಿಕೇಟ್ ಸದಸ್ಯರು, ವಿಭಾಗಗಳ ಮುಖ್ಯಸ್ಥರು, ತಜ್ಞರ ಅಭಿಪ್ರಾಯ, ಸಲಹೆ ಮತ್ತು ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು~ ಎಂದು ಮನವಿ ಮಾಡಿದರು.`ಅರ್ಥಶಾಸ್ತ್ರ ಶಾಲೆ ಸ್ಥಾಪನೆಯ ವಿಚಾರವು ಇವತ್ತಿನವರೆಗೆ ಸಿಂಡಿಕೇಟ್ ಸಭೆಯ ಮುಂದೆ ಬಂದಿಲ್ಲ. ಆದಾಗ್ಯೂ ಅರ್ಥಶಾಸ್ತ್ರ ಶಾಲೆ ಸ್ಥಾಪನೆಯ ಅಗತ್ಯ ಮತ್ತು ಮಹತ್ವದ ಅರಿವು ನಮಗಿದೆ. ಇದರಿಂದ ಬೆಂಗಳೂರು ವಿ.ವಿ.ಯ ಹಿರಿಮೆ ಹೆಚ್ಚಾಗಲಿದೆ. ಶಾಲೆ ಸ್ಥಾಪನೆಗೆ ಜಿಂದಾಲ್ ಸಮೂಹ ಆಸಕ್ತಿ ವಹಿಸಿರುವುದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ~ ಎಂದು ಅವರು ತಿಳಿಸಿದರು.`ಯೋಜನೆಯ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಜಿಂದಾಲ್ ಸಮೂಹ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹೊಸ ಶಾಲೆಯ ರೂಪುರೇಷೆಗಳ ಬಗ್ಗೆ ವಿ.ವಿ.ಯ ಆಡಳಿತದ ಶಾಸನಬದ್ಧ ಸಂಸ್ಥೆಗಳಲ್ಲಿ ವಿಸ್ತೃತವಾಗಿ ಚರ್ಚೆ ಆಗಬೇಕು~ ಎಂದು ಅವರು ಅಭಿಪ್ರಾಯಪಟ್ಟರು.`ಇಂತಹ ಖಾಸಗಿ ಸಹಭಾಗಿತ್ವದ ಯೋಜನೆಗಳನ್ನು (ಪಿಪಿಪಿ) ರೂಪಿಸಿ, ಕಾರ್ಯಗತಗೊಳಿಸುವ ಬಗ್ಗೆ ಬೆಂಗಳೂರು ವಿ.ವಿ., ಇತರ ವಿ.ವಿ.ಗಳಿಗೆ ಮೇಲ್ಪಂಕ್ತಿ ಹಾಕಿಕೊಡುವ ಹಾಗೆ ಆಗಬೇಕು. ಅದಕ್ಕಾಗಿ ವಿ.ವಿ.ಗಳಲ್ಲಿ ಖಾಸಗಿ ಸಹಭಾಗಿತ್ವದ ಯೋಜನೆಗಳ ಜಾರಿ ಬಗ್ಗೆ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕು~ ಎಂದು ಅವರು ಹೇಳಿದರು.`ಉದ್ದೇಶಿತ ಶಾಲೆ ಸ್ಥಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಂದೇಹಗಳನ್ನು ಪರಿಹರಿಸುವಂತೆ ಇತ್ತೀಚೆಗೆ ನಡೆದ ಶೈಕ್ಷಣಿಕ ಪರಿಷತ್ತಿನ ಸಭೆಯಲ್ಲಿ ಕುಲಪತಿಯವರನ್ನು ಒತ್ತಾಯಿಸಲಾಯಿತು. ಶಾಲೆಯನ್ನು ವಿರೋಧಿಸಿ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಆ ಸಭೆಯಲ್ಲಿ ಶೈಕ್ಷಣಿಕ ಪರಿಷತ್ತು, ಸಿಂಡಿಕೇಟ್ ಸದಸ್ಯರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಕುಲಪತಿ ಪ್ರಕಟಿಸಿದರು. ಇನ್ನು ಸಮಿತಿ ರಚನೆಯಾಗಿಲ್ಲ. ಆದರೂ ಜಿಂದಾಲ್ ಸಮೂಹ ಏಕಾಏಕಿ ಹಿಂದೆ ಸರಿದಿದೆ. ಈ ಎಲ್ಲ ವಿಚಾರಗಳನ್ನು ಜಿಂದಾಲ್ ಅವರ ಗಮನಕ್ಕೆ ತರಲು ಬಯಸಿದ್ದೇವೆ~ ಎಂದು ನುಡಿದರು.

ಪ್ರತಿಕ್ರಿಯಿಸಿ (+)