ಶುಕ್ರವಾರ, ಮೇ 14, 2021
35 °C

`ಆಟೋ ಚಾಲಕರಿಗೆ ಸಮವಸ್ತ್ರ ಕಡ್ಡಾಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಚಾಲನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ ಹೇಳಿದರು.ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಬುಧವಾರ ಸಂಚಾರಿ ಪೊಲೀಸ್ ಠಾಣೆ ಹಾಗೂ ಜೈ ಭೀಮ್ ಆಟೋ ಮಾಲೀಕರ ಮತ್ತು ಚಾಲಕರ ಸಂಘ ಏರ್ಪಡಿಸಿದ್ದ ಆಟೋ ಚಾಲಕರ ವೃತ್ತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸುಗಮ ಸಂಚಾರಕ್ಕೆ ಚಾಲಕರು ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿಯೇ ಚಾಲನೆ ಮಾಡಬೇಕು.  ಒಂದು ವಾರ ಗಡುವು ನೀಡಲಾಗುವುದು. ಚಾಲನ ಪರವಾನಗಿ ಸೇರಿದಂತೆ ಇತರೆ ದಾಖಲೆಗಳನ್ನು ಹೊಂದಿರಬೇಕು. ಎರಡು ತಿಂಗಳು ಕಾಲಾವಕಾಶ ನೀಡಲಾಗುವುದು. 18 ವರ್ಷದೊಳಗಿನವರು ಆಟೋ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ಅಸಂಘಟಿತ ಭದ್ರತಾ ಮಂಡಳಿ ವತಿಯಿಂದ ಆಟೋ ಚಾಲಕರಿಗೆ ಜೀವ ವಿಮೆ ಮಾಡಿಸಲಾಗುತ್ತಿದೆ. ವರ್ಷಕ್ಕೆ ್ಙ 25 ಪಾವತಿಸಿ ವಿಮೆ ಕಾರ್ಡ್ ಹೊಂದಬೇಕು. ಚಾಲಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ರೂ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡರೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.ಆಟೋ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಮುಂಬೈ ಆಟೋ ಚಾಲಕನ ಮಗಳು ಸಿಎ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆದಿರುವುದನ್ನು ಉದಾಹರಿಸಿದರು. ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ಕರೆದುಕೊಂಡು ಹೋಗುವುದು ಅಪರಾಧ.  ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನುಡಿದರು.ಡಿಎಸ್‌ಪಿ ವಿ.ವಿ.ಕುಂಬಾರ ಮಾತನಾಡಿ, ಆಟೋ ಮತ್ತು ಟಂ ಟಂ ಚಾಲಕರು ಕಾನೂನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.ಶಿಕ್ಷಕ ಎಸ್.ಎನ್.ಬಳ್ಳಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಚಾಲಕರಿಗೆ ಗುರುತಿನ ಚೀಟಿ ಹಾಗೂ ವಿಮೆ ಕಾರ್ಡ್‌ಗಳನ್ನು ವಿತರಿಸಲಾಯಿತು. ಗುರುತಿನ ಚೀಟಿಯನ್ನು ಚಾಲಕರ ಆಸನದ ಹಿಂಭಾಗ ಅಂಟಿಸಬೇಕು. ಚೀಟಿಯಲ್ಲಿ ಚಾಲಕನ ಹೆಸರು, ಲೈಸೆನ್ಸ್ ನಂಬರ್, ದೂರವಾಣಿ ಸಂಖ್ಯೆ, ವಿಳಾಸ ಇರುತ್ತದೆ.ಸಿಪಿಐ ಸಂತೋಷ ಪವಾರ್, ಪಿಎಸ್‌ಐ ಮಹಾಂತೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ ಹಾಗೂ ಆಟೋ ಚಾಲಕರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.