ಶನಿವಾರ, ಜುಲೈ 31, 2021
27 °C

ಇಂಡಿಯನ್ ಓಪನ್ ಬ್ಯಾಡ್ಮಿಂಟನ್: ಚಾಂಗ್ ವೇ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಮಲೇಷ್ಯಾದ  ಚಾಂಗ್ ವೇ ಅವರು ಇಲ್ಲಿ ಮುಕ್ತಾಯವಾದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸರಣಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇಲ್ಲಿನ ಸಿರಿಫೋರ್ಟ್ ಸಂಕೀರ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚಾಂಗ್ ವೇ 21-12, 12-21, 21-15ರಲ್ಲಿ ಡೆನ್ಮಾರ್ಕ್‌ನ ಪೀಟರ್ ಗಾಡೆ ಅವರನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಮೊದಲ ಗೇಮ್‌ನಲ್ಲಿ ಗಾಡೆ 4-2ರಲ್ಲಿ ಮುನ್ನಡೆ ಹೊಂದಿದ್ದರು. ನಂತರ ಚಾಂಗ್ ಅವರು ಪ್ರಭಾವಿ ಪ್ರತಿರೋಧ ತೋರಿ 9-3ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರು. ಮೊದಲ ಸುತ್ತಿನ ಕೊನೆಯಲ್ಲಿ ಕರಾರುವಕ್ಕಾದ ಆಟದ ಮೂಲಕ ಪಾಯಿಂಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಮೊದಲನೇ ಗೇಮ್‌ನ ಸೋಲಿಗೆ ತಿರುಗೇಟು ನೀಡಿದ ಗಾಡೆ ಒಂದು ಹಂತದಲ್ಲಿ 12-8ಪಾಯಿಂಟ್‌ನಿಂದ ಮುನ್ನಡೆ ಹೊಂದಿ ಗೆಲುವನ್ನು ಸ್ಪಷ್ಟಪಡಿಸಿಕೊಂಡಿದ್ದರು. ನಂತರ ಅಷ್ಟೇನೂ ಪ್ರತಿರೋಧ ತೋರದ ಚಾಂಗ್ ವಿರುದ್ಧ ಎರಡನೇ ಗೇಮ್‌ನಲ್ಲಿ ಗೆಲ್ಲುವಲ್ಲಿ ಗಾಡೆ ಯಶಸ್ಸು ಕಂಡರು. 

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮಾತ್ರ ಅಪಾಯಕ್ಕೆ ಆಹ್ವಾನ ನೀಡದಂತೆ ಎಚ್ಚರಿಕೆ ವಹಿಸಿ ಚಾಂಗ್ ಪ್ರಶಸ್ತಿ ಜಯಿಸಿದರು. ಈ ಗೇಮ್‌ನಲ್ಲಿ ಉಭಯ ಆಟಗಾರರು 9-9ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಚುರುಕಿನ ಆಟವಾಡಿದ ಚಾಂಗ್ ಪ್ರಶಸ್ತಿಯನ್ನು ತಮ್ಮ ಕೈ ಜಾರದಂತೆ ಎಚ್ಚರಿಕೆ ವಹಿಸಿದರು. ಕೊನೆಯ ಗೇಮ್‌ನಲ್ಲಿ ಹೆಚ್ಚಿನ ಪಾಯಿಂಟ್ ಗಳಿಸಲು ಮುಂದಾಗುವುದಕ್ಕಿಂತ ಚಾಂಗ್ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೀಟರ್ ಗಾಡೆ ದಕ್ಷಿಣ ಕೊರಿಯಾದ ಸುಂಗ್ ಹವಾನ್ ಪಾರ್ಕ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಚಾಂಗ್ ಎರಡು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ಹಾಗೂ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಸಿರಿ ಫೋರ್ಟ್ ಅದೃಷ್ಟ; ‘ಸಿರಿಫೋರ್ಟ್ ಕ್ರೀಡಾಂಗಣ ನನ್ನ ಪಾಲಿಗೆ ಅದೃಷ್ಟದ ಕ್ರೀಡಾಂಗಣವಾಗಿತ್ತು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದು ಇದೇ ಕ್ರೀಡಾಂಗಣದಲ್ಲಿ. ಈ ಸಲದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸರಣಿಯಲ್ಲಿ ಮತ್ತೆ ಪ್ರಶಸ್ತಿ ಜಯಿಸುವ ಮೂಲಕ ಇದು ನನ್ನ ಪಾಲಿಗೆ ಅದೃಷ್ಟದ ಕ್ರೀಡಾಂಗಣ ಎಂಬುದು ಸಾಬೀತಾಯಿತು’ ಎಂದು ಚಾಂಗ್  ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.