ಮಂಗಳವಾರ, ಮೇ 17, 2022
27 °C

ಕನಕಪುರ: ಪುರಸಭೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಸಮುದಾಯ ಭವನ ನಿರ್ಮಾಣಕ್ಕಾಗಿ ನಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಪುರಸಭಾ ಸದಸ್ಯರ ವರ್ತನೆಯನ್ನು ಖಂಡಿಸಿ ಇಲ್ಲಿನ 13ನೇವಾರ್ಡ್ ಮೆಳೆಕೋಟೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದ ಪುರಸಭಾ ಸದಸ್ಯರು, ವಾಸವಿರುವ ಜನರನ್ನು ಒಕ್ಕಲೆಬ್ಬಿಸಿ ಬಡವರ ಭೂಮಿಯನ್ನು ಕಿತ್ತುಕೊಂಡು ಆ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದಾರೆಂದು ಅವರು ಆರೋಪಿಸಿದರು. ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿಗಳ ಹಾಗೂ ಪುರಸಭಾ ಸದಸ್ಯ ದುರ್ಗಯ್ಯನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, 75 ವರ್ಷಗಳಿಂದ ನೆಲೆಸಿರುವವರ ಜಾಗ ಕಿತ್ತುಕೊಳ್ಳಲು ಯತ್ನಿಸಲಾಗುತ್ತಿದೆ. ಸಮುದಾಯ ಭವನ ನಿರ್ಮಾಣಕ್ಕೆ ಯೋಗ್ಯವಲ್ಲದ ಜಾಗ ಇದಾಗಿದ್ದರೂ ಸಹ ಇವರು ಏಕಾ-ಏಕಿ ದೌರ್ಜನ್ಯದಿಂದ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಿ ಬೀದಿಪಾಲು ಮಾಡಿದ್ದಾರೆಂದು~ ಆರೋಪಿಸಿದರು. ಎರಡು-ಮೂರು ತಲೆಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಚಿಕ್ಕತಾಯಪ್ಪ, ಚಿಕ್ಕವೆಂಕಟಯ್ಯ, ಕಮಟಯ್ಯ, ವೆಂಕಟಮ್ಮ, ಬಸವಯ್ಯ, ಮುದ್ದಯ್ಯ, ಬೀರಯ್ಯ, ವೆಂಕಟಯ್ಯ ಸೇರಿದಂತೆ ಅನೇಕ ಕುಟುಂಬಗಳನ್ನು ಇವರ ಧೋರಣೆಯಿಂದ ಬೀದಿಗೆ ಬರುವಂತಾಗಿದೆ. ಸರ್ಕಾರ ಈ ಕುಟುಂಬಗಳಿಗೆ ಈಗ ಆಶ್ರಯ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.`ಈ ಕಾರ್ಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ದಲಿತರ ಪರವಾಗಿ ಪುರಸಭೆಯಲ್ಲಿ ಕೆಲಸ ನಿರ್ವಹಿಸದೆ, ಬಡ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಪುರಸಭೆ ಸದಸ್ಯ ದುರ್ಗಯ್ಯ  ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಹಿನ್ನೆಲೆ: ಪಟ್ಟಣದ ದಲಿತರ ಕಾಲೊನಿ ಮೆಳೆಕೋಟೆ ಗ್ರಾಮದಲ್ಲಿ 50-60 ವರ್ಷಗಳ ಹಿಂದೆ ಮಂಜೂರಾಗಿರುವ ಜಾಗದಲ್ಲಿ ಏಳೆಂಟು ಕುಟುಂಬಗಳು ಗುಡಿಸಲು ನಿರ್ಮಿಸಿ ವಾಸ ಮಾಡುತ್ತಿದ್ದರು. ಈ  ಜಾಗದಲ್ಲಿ ಸಮುದಾಯ ಭವನ ನಿರ್ಮಿಸುವುದಕ್ಕಾಗಿ ಪುರಸಭೆಯವರು ಗುಡಿಸಲುಗಳನ್ನು ನೆಲಸಮ ಮಾಡಿದರು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದರು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಮೀಸೆ ಮುನಿಯಯ್ಯ, ಲಕ್ಷ್ಮಣಯ್ಯ, ನಿಂಗಯ್ಯ, ಶಿವಣ್ಣ, ನೀಲಿ ರಮೇಶ್ ಸೇರಿದಂತೆ ಕಾಲೋನಿ ಮಹಿಳೆಯರು ವೃದ್ಧರು ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.