ಸೋಮವಾರ, ಜೂನ್ 21, 2021
21 °C

ಕಾಮಗಾರಿಗಳ ಚಿತ್ರಸಹಿತ ವರದಿ ಸಲ್ಲಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಜಿಲ್ಲೆಯ ವಿವಿಧೆಡೆ ಕೈಗೊಂಡ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಅಂತಹ ಕಾಮಗಾರಿಗಳ ಚಿತ್ರಸಹಿತ ವರದಿ ನೀಡಬೇಕು ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಂಸತ್ ಸದಸ್ಯರ ನಿಧಿಯಲ್ಲಿ ಅನುದಾನ ನೀಡಲಾಗಿದೆ. ಅನೇಕ ಭಾಗಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಎಲ್ಲವನ್ನೂ ಗಮನಿಸಲು ಆಗುವುದಿಲ್ಲ. ಹಾಗಾಗಿ, ಪ್ರಗತಿಯ ಬಗ್ಗೆ ಸಂಬಂಧಿಸಿದ ಏಜೆನ್ಸಿಗಳು ಚಿತ್ರ ಸಹಿತ ವರದಿ ನೀಡಬೇಕು ಎಂದು ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ರುದ್ರಪ್ಪ ಹಾಗೂ ನಿರ್ಮಿತಿ ಕೇಂದ್ರದ ರಾಜಪ್ಪ ಅವರಿಗೆ ಸೂಚಿಸಿದರು.ಕಾಮಗಾರಿ ಕೈಗೊಳ್ಳುವ ಮುನ್ನ ಎಷ್ಟು ಹಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತೋ ಅಷ್ಟೆ ಹಣದಲ್ಲಿ ಕಾಮಗಾರಿ ಪೂರೈಸಬೇಕು. ಮೊದಲೇ ಹಣ ಪಡೆದು ವಿಳಂಬ ಮಾಡಿದರೆ ಅದಕ್ಕೆ ತಾವು ಹೊಣೆಯಲ್ಲ. ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲ. ಸಿಮೆಂಟ್, ಕಬ್ಬಿಣದ ದರ ಹೆಚ್ಚಾಗಿದೆ ಎಂದು ಮತ್ತೆ ಹೆಚ್ಚಿನ ಅನುದಾನ ಕೇಳುತ್ತೀರಿ. ಒಂದು ವೇಳೆ ಕಡಿಮೆಯಾದರೆ ಹಣ ವಾಪಸ್ ಕೊಡುತ್ತೀರಾ ಎಂದು ಪ್ರಶ್ನಿಸಿದರು.ಗರ್ಭಗುಡಿ ಗ್ರಾಮದಲ್ಲಿ ಬಸ್ ಸಂಚಾರವೇ ಇಲ್ಲದ ಭಾಗಗಳಲ್ಲಿ ಬಸ್‌ತಂಗುದಾಣ ನಿರ್ಮಾಣ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿ ನಿರ್ಮಿಸಿಲ್ಲ ಎಂಬ ಅಧಿಕಾರಿಯ ಹೇಳಿಕೆಗೆ ಕೆಂಡಾಮಂಡಲವಾದ ಸಿದ್ದೇಶ್ವರ, ಸ್ಥಳಕ್ಕೆ ಹೋಗಿ ಸತ್ಯಾಸತ್ಯತೆ ಪರಿಶೀಲಿಸೋಣ, ನಾನು ರಾಜೀನಾಮೆ ನೀಡುತ್ತೇನೆ. ಇಲ್ಲವೇ, ನೀವು ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಹೀಗೆ ಆಗುತ್ತದೆ. ಸ್ಥಳಕ್ಕೆ ಹೋಗದ ಕಾರಣ ಮಧ್ಯವರ್ತಿಗಳು ಪರಿಸ್ಥತಿಯ ಲಾಭ ಪಡೆಯುತ್ತಾರೆ ಎಂದು ಎಚ್ಚರಿಸಿ, ಕಾಮಗಾರಿ ಆರಂಭವಾಗದೇ ಇರುವ, ವಿವಾದಿತ ಜಾಗದಲ್ಲಿ ನೀಡಿದ್ದ ಅನುದಾನ ವಾಪಸ್ ಪಡೆಯಲು ಸೂಚಿಸಿದರು.ನಿರ್ಮಿತಿ ಕೇಂದ್ರದ ಕಾಮಗಾರಿ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರಕ್ಕೆ ಹೆಚ್ಚಿನ ಹೊರೆಯಾದರೆ ಇತರ ಏಜೆನ್ಸಿಗಳಿಗೆ ವರ್ಗಾಯಿಸಲು ಸಲಹೆ ನೀಡಿದರು.ಹಿಂದೆ ನಿರ್ಮಿಸಿದ ಕಾಮಗಾರಿಗಳ ಹೆಸರನ್ನು ಚುನಾವಣೆ ಮತ್ತಿತರ ಸಂದರ್ಭದಲ್ಲಿ ಅಳಿಸಿದ್ದು, ಮತ್ತೆ ಬರೆಸಲು ಅನುದಾನ ನೀಡಲು ನಿಯಮದಲ್ಲಿ ಅವಕಾಶ ಇರುವುದಿಲ್ಲ ಎಂಬ ಅಧಿಕಾರಿಗಳ ಹೇಳಿಕೆಗೆ ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.ಸಂಸತ್ ಸದಸ್ಯರ ಅನುದಾನದಲ್ಲಿ ಹರಪನಹಳ್ಳಿ ಹಾಗೂ ಚನ್ನಗಿರಿಗೆ ಅಂಬುಲೆನ್ಸ್ ನೀಡಲು ಒಪ್ಪಿಗೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.