ಸೋಮವಾರ, ಮೇ 17, 2021
22 °C

ಜಿಲ್ಲೆಯಲ್ಲಿ 10ರಿಂದಲೇ ಗುಟ್ಕಾ ನಿಷೇಧ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮಡಿಕೇರಿ: ರಾಜ್ಯ ಸರ್ಕಾರದ ಆದೇಶದಂತೆ ಜೂನ್ 10ರಿಂದಲೇ ಜಿಲ್ಲೆಯಲ್ಲಿ ಗುಟ್ಕಾ ನಿಷೇಧಿಸಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಜ್ಜಾಗಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಇಲಾಖೆ ಸಿಬ್ಬಂದಿ ಮಾಡಿಕೊಂಡಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಹಾರ ಸುರಕ್ಷತೆ ಅಧಿಕಾರಿ (ಫುಡ್ ಸೇಫ್ಟಿ ಆಫೀಸರ್ಸ್‌) ಸಭೆ ನಡೆಸಿ, ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗಿದೆ.`ಗುಟ್ಕಾ ನಿಷೇಧಿಸಬೇಕೆಂದು ಸರ್ಕಾರ ನಮಗೆ ಸೂಚನೆ ನೀಡಿದೆ. ಅದರನ್ವಯ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮ ಮೊದಲ ಆದ್ಯತೆ ಸರ್ಕಾರದ ಆದೇಶದ ಬಗ್ಗೆ ಗುಟ್ಕಾ ಮಾರಾಟಗಾರರು ಹಾಗೂ ಗುಟ್ಕಾ ಸೇವಿಸುವವರಿಗೆ ಮಾಹಿತಿ ನೀಡುವುದಾಗಿದೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಗುಟ್ಕಾ ಸೇವಿಸುವವರ ಸಂಖ್ಯೆ ಕಡಿಮೆ ಇದೆ. ಸಾಮಾನ್ಯವಾಗಿ ಇಲ್ಲಿ ಕೂಲಿ ಕಾರ್ಮಿಕರು, ತೋಟದ ಕೆಲಸಗಾರರು, ಡ್ರೈವರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಿದ್ದಾರೆ. ಇವರ ಮನವೊಲಿಸಲು ಪ್ರಯತ್ನಿಸಲಾಗುವುದು. ಸರ್ಕಾರದ ನಿಷೇಧದ ಆದೇಶ ಹಾಗೂ ಗುಟ್ಕಾ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಅವರಿಗೆ ಮನದಟ್ಟು ಮಾಡಿಕೊಡಲಾಗುವುದು' ಎಂದು ವಿವರಿಸಿದರು.ಬೀಡಾ ಅಂಗಡಿ ಸೇರಿದಂತೆ ಎಲ್ಲ ರೀತಿಯ ಅಂಗಡಿ, ಮಳಿಗೆಗಳಿಗೆ ಭೇಟಿ ನೀಡಲಾಗುವುದು. ಗುಟ್ಕಾ ಮಾರಾಟ ಮಾಡಿದರೆ ಹಾಗೂ ಗುಟ್ಕಾ ಸಂಗ್ರಹಿಸಿಟ್ಟುಕೊಂಡರೆ ಕಾನೂನಿನಲ್ಲಿರುವ ಶಿಕ್ಷೆ ಪ್ರಮಾಣವನ್ನು ಅವರಿಗೆ ತಿಳಿಸಲಾಗುವುದು. ಆರಂಭದ ದಿನಗಳಲ್ಲಿ ತಿಳಿವಳಿಕೆ ನೀಡುವುದು ಮೊದಲ ಆದ್ಯತೆ, ಇಷ್ಟಾಗಿಯೂ ಅವರು ಸುಧಾರಿಸದಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.ಪಾನ್ ಮಸಾಲಗೆ ಈ ಆದೇಶವು ಅನ್ವಯವಾಗುವುದಿಲ್ಲ. ಪಾನ್ ಮಸಾಲದಲ್ಲಿ ತಂಬಾಕು, ನಿಕೋಟಿನ್ ಬಳಸಿರುವುದಿಲ್ಲ ಎಂದು ಅವರು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.