ಶನಿವಾರ, ಮೇ 28, 2022
30 °C

ಜೀರ್ಣಿಸಿಕೊಳ್ಳಲಾಗದಷ್ಟು ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಗುರುಮಠಕಲ್ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದು, ಜೀರ್ಣಿಸಿಕೊಳ್ಳಲು ಆಗದಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ಬಾಬುರಾವ ಚಿಂಚನಸೂರ ಹೇಳಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಿರಲಿಲ್ಲ. ಕಡೇಚೂರು, ಬಾಡಿಯಾಳ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸುಮಾರು 3,300 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ  ಆರಂಭಿಸಲಾಗಿದೆ. ಈಗಾಗಲೇ ರೈತರಿಗೆ ಪರಿಹಾರ ನೀಡಲು ರೂ.25 ಕೋಟಿ ಮಂಜೂರಾಗಿದ್ದು, ರೈತರು ಪರಿಹಾರದ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದರು.ಈ ಭಾಗದಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆಗಳು ತಲೆ ಎತ್ತಬೇಕು. ಇಲ್ಲಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕು. ರೈತಾಪಿ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬುದೇ ತಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.ಗುರುಮಠಕಲ್ ಮತಕ್ಷೇತ್ರದಲ್ಲಿ ನೀರಾವರಿ ಸೌಲಭ್ಯವಿಲ್ಲ. ಈ ಭಾಗದಲ್ಲಿ ಕೆರೆಗಳನ್ನೇ ಅವಲಂಬಿಸಿ, ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿ ಕೆರೆಗಳ ಪುನರುಜ್ಜೀವನ, ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದು, ಕಾಮಗಾರಿಗಳು ಬಹುತೇಕ ಪ್ರಗತಿಯ ಹಂತದಲ್ಲಿವೆ ಎಂದರು.ಭೀಮಾ ನದಿಗೆ ಬ್ಯಾರೇಜ್ ನಿರ್ಮಾಣ, ಸನ್ನತ್ತಿ ಏತ ನೀರಾವರಿ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ, ಗುರುಮಠಕಲ್ ಹಾಗೂ ಸುತ್ತಲಿನ 27 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೂ.37 ಕೋಟಿ ಮೊತ್ತದ ಯೋಜನೆ ಕಾಮಗಾರಿ ಆರಂಭವಾಗಿದ್ದು, ಮುಗಿಯುವ ಹಂತದಲ್ಲಿದೆ. ಹತ್ತಿಕುಣಿ ಜಲಾಶಯದ ನವೀಕರಣಕ್ಕೆ ಸುಮಾರು ರೂ.7 ಕೋಟಿ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.ವಿರೋಧ ಪಕ್ಷದ ಶಾಸಕನಾಗಿ ತಾವು ಇಷ್ಟೊಂದು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಕ್ಷೇತ್ರದಲ್ಲಿ ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ. ಬೇರೆ ಪಕ್ಷಗಳು ಅಭಿವೃದ್ಧಿಯತ್ತ ಗಮನ ನೀಡದೇ, ಕೇವಲ ಪ್ರಚಾರದಲ್ಲಿ ತೊಡಗಿವೆ. ಆದರೆ ತಾವು ಯಾವುದೇ ಪ್ರಚಾರ ಬಯಸದೇ ಅಭಿವೃದ್ಧಿಯತ್ತ ಗಮನ ನೀಡುತ್ತಿದ್ದು, ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮತದಾರರೇ ನನ್ನ ದೇವರು. ಅನ್ನದಾತನೇ ನನ್ನ ತಂದೆ. ಇವರ ಅಭಿವೃದ್ಧಿಯೇ ನನ್ನ ಗುರಿ. ಗುರುಮಠಕಲ್ ಮತಕ್ಷೇತ್ರದಲ್ಲಿ ಸಾಕಷ್ಟು ಬಡತನವಿದೆ. ಇದನ್ನು ನಿರ್ಮೂಲನೆ ಮಾಡುವುದೇ ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿರುವ, ಸದ್ಯಕ್ಕೆ ಕೇಂದ್ರ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದು, ಕೆಲವೇ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಂದ ಇನ್ನೂ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ, ಮಹಿಪಾಲರಡ್ಡಿ ಹತ್ತಿಕುಣಿ, ಪ್ರಭುಲಿಂಗ ವಾರದ, ವಿಶ್ವನಾಥ ನೀಲಳ್ಳಿ, ಮಹಿಪಾಲರಡ್ಡಿ ದುಪ್ಪಲ್ಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.