ಭಾನುವಾರ, ಏಪ್ರಿಲ್ 18, 2021
23 °C

ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಹಾಕಿ ನಗರದ ಸೌಂದರ್ಯ ಹಾಳು ಮಾಡುತ್ತಿರುವ ರಾಜಕೀಯ ಮುಖಂಡರು ಹಾಗೂ ಅವರ ಬೆಂಬಲಿಗರಿಗೆ, ಚಲನಚಿತ್ರ ನಿರ್ಮಾಪಕರಿಗೆ ಭಾರಿ ದಂಡ ವಿಧಿಸಿ ಕಾನೂನು ಕ್ರಮ ತೆಗೆದುಕೊಳ್ಳಿ~ ಎಂದು ಹೈಕೋರ್ಟ್ ಬಿಬಿಎಂಪಿಗೆ ಶುಕ್ರವಾರ ಆದೇಶಿಸಿದೆ.`ಈ ಹಿಂದೆ ಕೋರ್ಟ್ ಸೂಚನೆ ನೀಡಿದ್ದರೂ ಇದುವರೆಗೆ ಒಬ್ಬ ರಾಜಕಾರಣಿ ವಿರುದ್ಧವಾಗಲೀ, ಚಲನಚಿತ್ರ ಪೋಸ್ಟರ್‌ಗಳನ್ನು ಹಾಕುವ ನಿರ್ಮಾಪಕರ ವಿರುದ್ಧವಾಗಲೀ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ನಿರ್ಭೀತಿಯಿಂದ ಅವರು ಬ್ಯಾನರ್, ಫ್ಲೆಕ್ಸ್ ಮುಂತಾದವುಗಳನ್ನು ನಿಯಮ ಉಲ್ಲಂಘಿಸಿ ಹಾಕುತ್ತಲೇ ಇದ್ದಾರೆ.ಇನ್ನಾದರೂ ಕಠಿಣ ಕ್ರಮ ಕೈಗೊಳ್ಳಿ. ಇಲ್ಲದೇ ಹೋದರೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರಿಗೆ ಸಮನ್ಸ್ ಜಾರಿಗೆ ಆದೇಶಿಸಬೇಕಾಗುತ್ತದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಾವು ಹೊರಡಿಸಿರುವ ಈ ಆದೇಶ ಎಷ್ಟರಮಟ್ಟಿಗೆ ಪಾಲನೆ ಆಗಿದೆ ಎಂಬ ಬಗ್ಗೆ ಆಗಸ್ಟ್ 10ರ ಒಳಗೆ ವರದಿ ನೀಡುವಂತೆ ಪಾಲಿಕೆಗೆ ಪೀಠ ಸೂಚಿಸಿದೆ. ಬ್ಯಾನರ್, ಫ್ಲೆಕ್ಸ್‌ಗಳ ವಿರುದ್ಧ ಎಸ್. ರಾಜಾರಾಮ್ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.ಪಾಲಿಕೆಯ ಅನುಮತಿ ಪಡೆದುಕೊಳ್ಳದೆ, ನಿಯಮ ಬಾಹಿರವಾಗಿ ಇವುಗಳನ್ನು ಅಳವಡಿಸಲಾಗುತ್ತಿವೆ. ಪೆಯಿಂಟಿಂಗ್ ಮುಂತಾದ ಕ್ರಮಗಳ ಮೂಲಕ ನಗರದ ಸೌಂದರ್ಯ ಕಾಪಾಡಲು ಪಾಲಿಕೆ ಸಾಕಷ್ಟು ಶ್ರಮಿಸುತ್ತಿದೆ.

 

ಆದರೆ, ಹುಟ್ಟುಹಬ್ಬ ಹಾಗೂ ಇನ್ನಿತರ ಸಮಾರಂಭಗಳ ಸಂದರ್ಭದಲ್ಲಿ ರಾಜಕೀಯ ಧುರೀಣರಿಗೆ ಶುಭ ಕೋರಲು, ಚಲನಚಿತ್ರಗಳ ಜಾಹೀರಾತು ನೀಡಲು ಬೇಕಾಬಿಟ್ಟೆಯಾಗಿ ಫ್ಲೆಕ್ಸ್, ಪೋಸ್ಟರ್‌ಗಳನ್ನು ಹಾಕುವ ಕಾರಣ, ನಗರದ ಸೌಂದರ್ಯ ಹಾಳಾಗುತ್ತಿದೆ ಎನ್ನುವುದು ಅವರ ಆರೋಪ. ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಾಲಿಕೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಪೀಠ, ವಿಚಾರಣೆ ಮುಂದೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.