ಗುರುವಾರ , ಮೇ 13, 2021
39 °C

ತಾ.ಪಂ ಕಚೇರಿಗೆ ದಸಂಸ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ದಲಿತರ ವಿರೋಧಿಯಾಗಿದ್ದು, ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಬಡವರಿಗೆ ಮೋಸ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ಆರೋಪಿಸಿದರು.ಬೆಳ್ಳೂರು ಹೋಬಳಿಯ ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಬಡ ಕೂಲಿ ಕಾರ್ಮಿಕರು ಶುಕ್ರವಾರ ನಡೆಸಿದ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುತ್ತಿಗೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಜವರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಹಳ್ಳಿ (ಕೆಂಬಾರೆ)ಯಲ್ಲಿ 112 ನಿವೇಶನಗಳನ್ನು ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಈ ಕೂಡಲೇ ಗುರುತಿಸಬೇಕು. ಮೂಲ ಮಂಜೂರುದಾರರ ಹೊರತಾಗಿ ಅಕ್ರಮ ಪ್ರವೇಶ ಮಾಡಿರುವವರ ಮೇಲೆ ಅಕ್ರಮ ಪ್ರವೇಶ ಮತ್ತು ದೌರ್ಜನ್ಯ ಕಾಯ್ದೆ ಅನ್ವಯ ಕೇಸು ದಾಖಲಿಸಿ ಕೂಡಲೇ ಬಂಧಿಸಬೇಕು. ಕರ್ತವ್ಯ ನಿರ್ವಹಿಸದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಜವರನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು ಎಂಬ ಒತ್ತಾಯಿಸಿ ಕಚೇರಿಗೆ ಮುತ್ತಿಗೆ ಹಾಕಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಿಂದ ಬೈಕ್ ಜಾಥಾದೊಂದಿಗೆ ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಅಕ್ರಮ ತಡೆಯಬೇಕಿದ್ದ ತಾಲ್ಲೂಕು ಆಡಳಿತ ಯಂತ್ರ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಜವರನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ವಿಮುಖರಾಗಿ ಕುಳಿತಿದ್ದಾರೆ. ಸಮಸ್ಯೆ ಬಗ್ಗೆ ಗಮನ ಸೆಳೆದಿರುವ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸಂಖ್ಯೆ: ಆಶ್ರಯ: 13/2011-12 ದಿನಾಂಕ 11-1-12 ರಂತೆ ಆದೇಶ ಮಾಡಿ ನಿವೇಶನವನ್ನು ಲೇ ಔಟ್ ಮಾಡಿ ಅರ್ಹ ಫಲಾನುಭವಿಗಳಿಗೆ ಹಂಚುವಂತೆ ತಿಳಿಸಿದ್ದರೂ, ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಆರೋಪಿಸಿದರು.ಸ್ಥಳಕ್ಕೆ ತಹಶೀಲ್ದಾರ್ ಬರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಗದೀಶ್ ಅವರು ಏ.21 ರ ಒಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು  ಕೈಬಿಡಲಾಯಿತು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಜಿಲ್ಲಾ ಮುಖಂಡರಾದ ಕಂಚಿನಕೋಟೆ ಮೂರ್ತಿ, ಡಿ.ವೆಂಕಟೇಶ್, ತಾಲ್ಲೂಕು ಮುಖಂಡರಾದ ಬೆಳ್ಳೂರು ಶಿವಣ್ಣ, ಚಾಕೇನಹಳ್ಳಿ ಸುರೇಂದ್ರ, ತಾಲ್ಲೂಕು ಜೆಡಿಎಸ್ ಎಸ್‌ಸಿ-ಎಸ್‌ಟಿ ವಿಭಾಗದ ಅಧ್ಯಕ್ಷ ಪ್ರಸನ್ನ, ಮುಳುಕಟ್ಟೆ ವಿನೋದ್, ಮಹಿಳಾ ಸಂಚಾಲಕಿ ಸುಭದ್ರಮ್ಮ, ಲಕ್ಷ್ಮಮ್ಮ, ಸುಮಲತಾ, ಎಲ್.ವಿ ಶ್ರೀನಿವಾಸ್, ದಿನೇಶ್, ಮಂಜು, ಆನಂದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಆರಕ್ಷಕ ವೃತ್ತ ನಿರೀಕ್ಷಕ ಟಿ.ಡಿ.ರಾಜು, ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೆಂಕಟೇಗೌಡ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.