ಶುಕ್ರವಾರ, ಮೇ 14, 2021
31 °C

ನೈತಿಕ ಪೊಲೀಸ್‌ಗಿರಿಗೆ ಜಾಗವಿಲ್ಲ: ಜಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿಗೆ ಇನ್ನು ಜಾಗವಿಲ್ಲ. ಇಂತಹ ಪ್ರಕರಣ ಕಂಡು ಬಂದರೆ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.`ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಇನ್ನು ಕಾನೂನು ಮುರಿಯುವುದಕ್ಕೆ ಆಸ್ಪದವಿಲ್ಲ. ಎಲ್ಲರೂ ಸೇರಿ ಈ ಕೋಮುಸೌಹಾರ್ದವನ್ನು ಕಾಪಾಡಬೇಕಿದೆ' ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, `ಸರ್ಕಾರ ಬದಲಾಗಿರುವುದು ಜನರಿಗೆ ಮನವರಿಕೆ ಆಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು' ಎಂದರು.ಶಾಸಕ ಜೆ.ಆರ್.ಲೋಬೊ ಮಾತನಾಡಿ, `ಪೊಲೀಸ್ ಇಲಾಖೆ ಕೆಲವು ಇಸ್ಪೀಟ್ ಕ್ಲಬ್‌ಗಳಿಗೆ ಪರವಾನಗಿ ನೀಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಕ್ರಮ ಚಟುವಟಿಕೆ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕರಾವಳಿಯ ಶಿಕ್ಷಣ ಸಂಸ್ಥೆಗಳಲ್ಲಿ ದೇಶವಿದೇಶದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಡ್ರಗ್ಸ್ ಮಾಫಿಯಾದಿಂದ ವಿದ್ಯಾರ್ಥಿಗಳ ಬದುಕು ಹಾಳಾಗುತ್ತಿದೆ. ಇದಕ್ಕೆ ಇಲಾಖೆ ಕಡಿವಾಣ ಹಾಕಬೇಕು' ಎಂದರು.`ಎಸಿಪಿ ಜಗನ್ನಾಥ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಎಎಸ್‌ಐ ಶ್ರೀಕಲಾ ದೂರು ನೀಡುವ ಧೈರ್ಯ ಮಾಡಿದ್ದಾರೆ. ಆದರೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಇನ್ನು ಸಾಮಾನ್ಯ ಹೆಣ್ಣುಮಕ್ಕಳು ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ?' ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನಿಸಿದರು.ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, `ಪಬ್ ದಾಳಿ, ಚರ್ಚ್ ದಾಳಿ, ಹೋಂ ಸ್ಟೇ ದಾಳಿಗಳಿಂದ ಜಿಲ್ಲೆಯ ಹೆಸರು ಕೆಟ್ಟಿತು. ಇಂತಹ ದಾಳಿಗಳನ್ನು ಬಯಲಿಗೆಳೆದ ಪತ್ರಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಯಿತು. ಮಸೀದಿಗೆ ಹಂದಿ ಮಾಂಸ ಎಸೆದವರನ್ನು ಬಂಧಿಸುವ ಬದಲು ಅದನ್ನು ಪ್ರತಿಭಟಿಸಿದ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇಂತಹ ಚಟುವಟಿಕೆಗೆ ಪೂರ್ಣವಿರಾಮ ಹಾಕಬೇಕು' ಎಂದರು.ಐವನ್ ಡಿಸೋಜ ಮಾತನಾಡಿ, `ಚರ್ಚ್ ದಾಳಿ ವೇಳೆ ಕೆಲವು ಯುವಕರ ಹೆಸರನ್ನು ಅನಗತ್ಯವಾಗಿ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ. ಅವರಿಗೆ ನ್ಯಾಯ ಒದಗಿಸಬೇಕು' ಎಂದರು.ಕಾಂಗ್ರೆಸ್ ಮುಖಂಡರಾದ  ವಿಜಯ ಕುಮಾರ್ ಶೆಟ್ಟಿ, ಕೆ.ಎಸ್.ಎಂ.ಮಸೂದ್, ಯು.ಎಚ್.ಖಾದರ್, ಸುರೇಶ್ ಬಲ್ಲಾಳ್, ಪದ್ಮನಾಭ ನರಿಂಗಾನ, ಬದ್ರುದ್ದೀನ್, ಬಲರಾಜ್ ರೈ, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಮಿಥುನ್ ರೈ, ಪ್ರವೀಣಚಂದ್ರ ಆಳ್ವ ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.