ಪತಿಯ ಮರುಮದುವೆ ಆಸೆ: ವಿಷ ಕುಡಿದ ಪತ್ನಿ
ತುರುವೇಕೆರೆ: ಗಂಡನ ದೌರ್ಜನ್ಯಕ್ಕೆ ತತ್ತರಿಸಿ ಪತ್ನಿ ವಿಷ ಸೇವಿಸಿದರೆ ಪೋಲೀಸ್ ದೌರ್ಜನ್ಯವೆಂದು ಆರೋಪಿಸಿ ಗಂಡ ಕುಸಿದು ಬಿದ್ದು ಪತಿ-ಪತ್ನಿಯರಿಬ್ಬರೂ ಒಂದೇ ಆಸ್ಪತ್ರೆ ಸೇರಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ದೇವನಾಯಕನಹಳ್ಳಿಯ ಹೈದರ್ ಆಲಿ (22) ಹಾಗೂ ನಾಗಲಾಪುರದ ನಾಸಿಮುನ್ನೀಸಾ (21) ಎಂಟು ತಿಂಗಳ ಹಿಂದೆ ಕುಟುಂಬಗಳ ವಿರೋಧದ ನಡುವೆಯೂ ಪ್ರೀತಿಸಿ ಮದುವೆ ಆಗಿದ್ದರು. ಕೆಲದಿನಗಳಲ್ಲೇ ನಾಸಿಮುನ್ನೀಸಾ ಗರ್ಭವತಿಯಾದರು. ಮಗು ತೆಗೆಸೆಂದು ಹೈದರ್ ಆಲಿ ತೀವ್ರ ಕಿರುಕುಳ ನೀಡಿದರು.
ಇದಕ್ಕೆ ನಾಸಿಮುನ್ನೀಸಾ ಒಪ್ಪದಿದ್ದಾಗ ಹೈದರ್ ಕಾಲಿನಿಂದ ಒದ್ದು ಅಮಾನವೀಯವಾಗಿ ಗರ್ಭಪಾತ ಮಾಡಿಸಿದ ಎಂದು ನಾಸಿಮುನ್ನೀಸಾ ತಾಯಿ ಖಮರುನ್ನೀಸಾ ಕಣ್ಣೀರಿಟ್ಟರು.
ಈಗ ನಾಸಿಮುನ್ನೀಸಾ ಮತ್ತೆ ಗರ್ಭವತಿಯಾಗಿದ್ದಾಳೆ. ಮಗು ತೆಗೆಸಲು ಮತ್ತು ಇನ್ನೊಂದು ಮದುವೆಯಾಗಲು ಒಪ್ಪಿಗೆ ನೀಡುವಂತೆ ಒತ್ತಾಯಿಸಿ ಹೈದರ್ ಮಾನವೀಯತೆಯನ್ನೇ ಮರೆತು ಮೃಗದಂತೆ ನಾಸಿಮುನ್ನೀಸಾ ದೇಹದ ವಿವಿದೆಡೆ ಕಚ್ಚಿ ಹಿಂಸೆ ನೀಡಿ ನರಕಯಾತನೆ ಅನುಭವಿಸುವಂತೆ ಮಾಡಿದ್ದಾನೆ ಎಂದು ದೂರಿದರು.
ಹೈದರ್ ಕಿರುಕುಳ ತಾಳಲಾರದೆ ಪಟ್ಟಣದ ಪೋಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಬುಧವಾರ ಹೈದರ್ನನ್ನು ಠಾಣೆಗೆ ಕರೆಸಲಾಗಿತ್ತು. ಠಾಣೆಯಲ್ಲಿ ಪೊಲೀಸರು ಹೊಡೆದ ಕಾರಣ ಹೈದರ್ ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು.
ಹೈದರ್ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕಾರಣ ಅವನಿಗೆ ಆಮ್ಲಜನಕ ನೀಡಿ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿರುವುದಾಗಿ ಡಾ.ಎಚ್.ಎಲ್.ಪುರುಷೋತ್ತಮ್ ತಿಳಿಸಿದರು.
ಈ ಬೆಳವಣಿಗೆಗಳ ಮಧ್ಯೆಯೇ ನಾಸಿಮುನ್ನೀಸಾ ಬುಧವಾರ ಬೆಳಿಗ್ಗೆ ವಿಷ ಸೇವಿಸಿರುವ ಸುದ್ದಿ ತಿಳಿದಾಗ ಆಸ್ಪತ್ರೆ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ನಾಸಿಮುನ್ನೀಸಾಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಕೆಯನ್ನೂ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅನಾರೋಗ್ಯದ ನಾಟಕ ವಾಡುತ್ತಿರುವ ಹೈದರ್ನನ್ನು ಕೂಡಲೇ ಬಂದಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.