ಮಂಗಳವಾರ, ಮೇ 11, 2021
28 °C
ಕುವೆಂಪು ವಿ.ವಿ. ವಿದ್ಯಾವಿಷಯಕ ಪರಿಷತ್ತು ಸಭೆಯಲ್ಲಿ ತೀರ್ಮಾನ

ಪ್ರತಿ ಕಾಲೇಜಿನಲ್ಲೂ `ಇನೋವೇಷನ್ ಕ್ಲಬ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರತಿ ಕಾಲೇಜಿನಲ್ಲೂ ಅನ್ವೇಷಣೆ ಮತ್ತು ಸಂಶೋಧನೆ ಚಟುವಟಿಕೆ ಕೈಗೊಳ್ಳಲು `ಇನೋವೇಷನ್ ಕ್ಲಬ್' ಆರಂಭಕ್ಕೆ ಸೂಚಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಬಾರಿ ತಿಳಿಸಿದರು.ಶಂಕರಘಟ್ಟದ ಜ್ಞಾನ ಸಹ್ಯಾದ್ರಿದಲ್ಲಿ ಶುಕ್ರವಾರ ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಅವರು ಈ ವಿಷಯ ಹೇಳಿದರು.ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತರುವ ದೃಷ್ಟಿಯಿಂದ ಈ `ಇನೋವೇಷನ್ ಕ್ಲಬ್' ತೆರೆಯಲು ಸೂಚಿಸಲಾಗಿದೆ. ಕಾಲೇಜಿಗೆ ಸಂಯೋಜನೆ ನೀಡುವ ಸಂದರ್ಭದಲ್ಲಿ `ಇನೋವೇಷನ್ ಕ್ಲಬ್' ಇರಬೇಕು ಎಂಬ ನಿಬಂಧನೆ ಹೇರಲಾಗುವುದು ಎಂದರು 

`ಇನೋವೇಷನ್ ಕ್ಲಬ್'ನಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಹೊಸಹೊಸ ಅನ್ವೇಷಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಹಾಗೆಯೇ, ಸಂಶೋಧನೆಗಳನ್ನೂ ಕೈಗೊಳ್ಳಬಹುದು ಎಂದು ಹೇಳಿದರು.ವಿಶ್ವವಿದ್ಯಾಲಯವೂ ಕಳೆದ ಕೆಲ ವರ್ಷಗಳಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಅದರಂತೆ ಈ `ಇನೋವೇಷನ್ ಕ್ಲಬ್'ಗೆ ಒಂದು `ಪೋಷಣಾ ಕೇಂದ್ರ'ವನ್ನು ವಿಶ್ವವಿದ್ಯಾಲಯ ಆವರಣದಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಈ ಕೇಂದ್ರದ ನಿರ್ವಹಣೆಗೆ ಅಧಿಕಾರಿಗಳ ನೇಮಕಾತಿ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದರು. `ಓರ್ವ ಟೀಚರ್, ಒಂದು ಪ್ರಸ್ತಾವನೆ' ಎಂಬ ತತ್ವದಡಿ ಪ್ರತಿಯೊಬ್ಬ ಪ್ರಾಧ್ಯಾಪಕರು ತಮ್ಮ ತರಗತಿಯ ಪಾಠದ ಜತೆ ವರ್ಷಕ್ಕೊಂದು ಸಂಶೋಧನಾ ಪ್ರಬಂಧ ಮಂಡಿಸಬೇಕು. ಒಟ್ಟಾರೆ ಸಂಶೋಧನಾ ಕಾರ್ಯ ನಿರಂತರವಾಗಿ ಸಾಗಬೇಕೆಂಬ ದೃಷ್ಟಿಯಿಂದ ಈ ರೀತಿಯ ಯೋಜನೆ ರೂಪಿಸಲಾಗಿದೆ ಎಂದರು.ಈಚೆಗೆ ದಾವಣಗೆರೆಯಲ್ಲಿ ಉನ್ನತ ಶಿಕ್ಷಣ ಸಚಿವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಕೂಡ ಸಚಿವರು, ಅನ್ವೇಷಣೆ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ಮಾಡಿದರು. ಹಾಗೆಯೇ, ವಿಶ್ವವಿದ್ಯಾಲಯದ ಅಧಿಕಾರಿಗಳು ಕರ್ತವ್ಯದಲ್ಲಿ ಬದ್ಧತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತೋರಿಸಬೇಕು ಎಂದು ಸೂಚಿಸಿದ್ದಾರೆ ಎಂದರು. ಚಿಕ್ಕಮಗಳೂರು ನಗರದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಬೇಡಿಕೆ ಬಂದಿದ್ದು, ಸಮೀಕ್ಷೆ ನಡೆಸಲಾಗಿದೆ. ಈ ವರ್ಷದಿಂದಲೇ ಅಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ  ಎಂದು ಹೇಳಿದರು.ಪದವಿ ತರಗತಿಗಳು ಜೂನ್ 24ರಿಂದ ಆರಂಭಗೊಳ್ಳುತ್ತವೆ. ಕೆಲವು ಕಾಲೇಜು ಆಡಳಿತ ಮಂಡಳಿ ಜುಲೈ 1ರಿಂದ ಆರಂಭಕ್ಕೆ ಅನುಮತಿ ಕೇಳಿವೆ. ಆದರೆ, ಜೂನ್ 24ರಿಂದಲೇ ಆರಂಭಿಸಲು ಸೂಚಿಸಲಾಗಿದೆ. ಹಾಗೆಯೇ, ಆಗಸ್ಟ್ 1ರಿಂದ ಸ್ನಾತಕೋತ್ತರ ತರಗತಿಗಳು ಆರಂಭಗೊಳ್ಳಲಿವೆ ಎಂದರು.ಈ ಹಿಂದೆ ಪರೀಕ್ಷಾಂಗ ವಿಭಾಗದಲ್ಲಿ ಸಮಸ್ಯೆಗಳು ಸೃಷ್ಟಿಯಾಗಿದ್ದವು. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ, ಮೌಲ್ಯಮಾಪಾನ, ಫಲಿತಾಂಶ ಪ್ರಕಟಣೆಗಳಲ್ಲಿ ಸುಧಾರಣೆ ತರಲಾಗಿದೆ. ಕಳೆದ ವರ್ಷದಿಂದಲೇ ಫಲಿತಾಂಶವನ್ನು ವೆಬ್‌ಸೈಟ್, ಎಸ್‌ಎಂಎಸ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಜೂನ್ 27ಕ್ಕೆ ಪದವಿ ಪರೀಕ್ಷೆಗಳ ಮೌಲ್ಯಮಾಪನ ಮುಗಿಯಲಿದ್ದು, 30ರ ಒಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.ಸಭೆಯಲ್ಲಿ ಕುಲಸಚಿವ (ಆಡಳಿತ) ಪ್ರೊ.ಎ.ರಾಮೇಗೌಡ ಉಪಸ್ಥಿತರಿದ್ದರು.ವಿದ್ಯಾರ್ಥಿ-ವಿ.ವಿ. ಪೂರ್ವಾಪರ ಲಭ್ಯ

ಇನ್ನು ಮುಂದೆ ಸ್ನಾತಕೋತ್ತರ ಕೇಂದ್ರದ ಪ್ರತಿ ವಿದ್ಯಾರ್ಥಿಯ ಪೂರ್ವಾಪರಗಳೆಲ್ಲ ಬೆರಳ ತುದಿಯಲ್ಲಿ ಸಿಗಲಿವೆ. ಹಾಗೆಯೇ, ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಪಟ್ಟ ದಾಖಲಾತಿಗಳೆಲ್ಲವೂ ಕ್ಷಣಮಾತ್ರದಲ್ಲಿ ಲಭ್ಯವಾಗಲಿವೆ.ಕುವೆಂಪು ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಇಂತಹದೊಂದು ದಾಖಲಾತಿ ಸಂಗ್ರಹಕ್ಕೆ ಮುಂದಾಗಿದೆ. ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಯ ಡಾಟಾಬೇಸ್ ಹಾಗೂ ವಿವಿ ಆಡಳಿತಕ್ಕೆ ಸಂಬಂಧಪಟ್ಟ ದಾಖಲಾತಿಗಳ ಡಾಟಾಬೇಸ್ ನಿರ್ವಹಣೆ ಮಾಡಲು ಉದ್ದೇಶಿಸಿದೆ.ಹಾಗೆಯೇ, ವಿಶ್ವವಿದ್ಯಾಲಯದಲ್ಲಿ ಆಡಳಿತಕ್ಕೆ ಒಳಪಟ್ಟ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ವಿಭಾಗ, ದಿನಾಂಕ, ರವಾನೆ ಸಂಖ್ಯೆ ಮತ್ತು ವಿಷಯವಾರು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಈ ವಿಷಯವನ್ನು ಮಂಡಳಿ ಸಂಚಾಲಕ ಪ್ರೊ.ಕೃಷ್ಣಮೂರ್ತಿ ಶುಕ್ರವಾರ ನಡೆದ ಕುವೆಂಪು ವಿವಿ ವಿದ್ಯಾವಿಷಯಕ ಪರಿಷತ್ತು ಸಭೆಗೆ ತಿಳಿಸಿದರು.ಬಿಕಾಂಗೆ ಹೆಚ್ಚುವರಿ ಸೀಟು

ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಬಿ.ಕಾಂ. ತರಗತಿಗಳಿಗೆ ಶೇ 20ರಷ್ಟು ಹೆಚ್ಚುವರಿ ಸೀಟುಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಕುವೆಂಪು ವಿವಿಯ ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಡಾ.ಬಿ.ಗಣೇಶ್ ತಿಳಿಸಿದರು.ಕಾಲೇಜುಗಳಲ್ಲಿ ಬಿಕಾಂಗೆ ಬೇಡಿಕೆ ಜಾಸ್ತಿ ಆಗಿದೆ. ಆದರೆ, ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸುವಂತಿಲ್ಲ. ಪ್ರವೇಶ ಕೋರಿ ಬರುವ ಯಾರಿಗೂ ಪ್ರವೇಶ ನಿರಾಕರಿಸುವಂತಿಲ್ಲ ಎಂಬ ಆದೇಶವನ್ನೂ ಸರ್ಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾಲೇಜಿನಲ್ಲಿ ಕೊಠಡಿ, ಅಧ್ಯಾಪಕರು ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಯೋಚಿಸದೆ ಹೆಚ್ಚುವರಿ ಸೆಕ್ಷನ್ ಮಂಜೂರು ಮಾಡಲಾಯಿತು ಎಂದು ಅವರು ತಿಳಿಸಿದರು.ಮುಂದಿನ ವರ್ಷದಿಂದ ಆಯಾ ಕಾಲೇಜುಗಳು ಇಂತಿಷ್ಟು ಸೀಟುಗಳು ಬರಬಹುದು ಎಂದು ಅಂದಾಜಿಸಿ ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.ಇದಕ್ಕೂ ಮೊದಲು ಸದಸ್ಯ ಪ್ರೊ.ಮುರಳೀಧರ್, ಬಿಕಾಂಗೆ ಸಾಕಷ್ಟು ಅರ್ಜಿಗಳು ಬಂದಿವೆ. ಯಾರಿಗೆ ಸೀಟು ನೀಡಬೇಕೆಂಬುದೇ ಸಮಸ್ಯೆಯಾಗಿದೆ. ಅಲ್ಲದೇ, ಇದುವರೆಗೂ ಪಿಯು ಅಂಕಪಟ್ಟಿ ಬಾರದಿರುವುದರಿಂದ ವಿದ್ಯಾರ್ಥಿಗಳ ಪ್ರವೇಶಾತಿಗೂ ಸಮಸ್ಯೆಯಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.