ಮಂಗಳವಾರ, ಏಪ್ರಿಲ್ 20, 2021
26 °C

ಬಂಡಾಯ ಕಹಳೆ ಮೊಳಗಿಸಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಗದೀಶ ಶೆಟ್ಟರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಅತೃಪ್ತರು ಬಂಡಾಯದ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ದಾರೆ. ಬಳ್ಳಾರಿಯ `ಗಣಿಧಣಿ~ ಜಿ.ಕರುಣಾಕರ ರೆಡ್ಡಿ ನಿವಾಸದಲ್ಲಿ ಶುಕ್ರವಾರ ಹಲವು ಶಾಸಕರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚಿಸಿದರು.ಶಾಸಕರಾದ ಸಿ.ಸಿ.ಪಾಟೀಲ, ಬಿ.ಸುರೇಶ ಗೌಡ, ಬೇಳೂರು ಗೋಪಾಲಕೃಷ್ಣ, ಅಪ್ಪು ಪಟ್ಟಣ ಶೆಟ್ಟಿ, ಎಂ.ಪಿ.ಕುಮಾರಸ್ವಾಮಿ, ನೇಮಿರಾಜ ನಾಯಕ್, ಬಿ.ಚಂದ್ರ ನಾಯಕ್, ಎಂ.ಎಸ್.ಸೋಮಲಿಂಗಪ್ಪ ಮತ್ತಿತರರು ರೆಡ್ಡಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.ಪಕ್ಷದ ವರಿಷ್ಠರ ಒಪ್ಪಿಗೆಯೊಂದಿಗೆ ದೆಹಲಿಯಿಂದ ಬಂದ ಸಚಿವರ ಪಟ್ಟಿಯಲ್ಲಿ ಕೆಲವು ಬದಲಾವಣೆಗಳು ಆಗಿವೆ ಎಂದು ಶಾಸಕರು ದೂರಿದ್ದಾರೆ. ಪಟ್ಟಿಯಲ್ಲಿ ಬದಲಾವಣೆ ಆಗಲು ಕಾರಣವೇನು ಎಂಬ ಅಂಶಗಳ ಬಗ್ಗೆ ಶಾಸಕರು ಚರ್ಚೆ ನಡೆಸಿದರು. ಶನಿವಾರ ಅಥವಾ ಸೋಮವಾರ ಮತ್ತೆ ಸಭೆ ಸೇರಿ ಮುಂದಿನ ಕಾರ್ಯತಂತ್ರ ರೂಪಿಸಲು ಯೋಚಿಸಿದ್ದಾರೆ ಎನ್ನಲಾಗಿದೆ.ಗರಂ: ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಅಸಮಾಧಾನ ಸ್ಫೋಟಿಸಲು ಕಾರಣವಾಗಿದೆ. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾದ ಸುರೇಶ ಗೌಡ, ಬೇಳೂರು ಮತ್ತಿತರರು ಕೆಂಡಾಮಂಡಲರಾಗಿದ್ದಾರೆ.

 

ಮತ್ತೊಬ್ಬ ಬೆಂಬಲಿಗ ಶಾಸಕ ಬಿ.ಪಿ. ಹರೀಶ್ ಅವರು ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿ, `ಪುಟ್ಟಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಿದರೆ ನಮ್ಮ ಬಣದ ಶಾಸಕರು ಅಸಮಾಧಾನಗೊಳ್ಳುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಅವರ ಹೆಸರನ್ನು ತಕ್ಷಣ ಕೈಬಿಡುವಂತೆ ಸೂಚಿಸಿ~ ಎಂಬ ಸಲಹೆ ನೀಡಿದರು ಎಂದು ಗೊತ್ತಾಗಿದೆ.ಸಲಹೆಗೆ ಸ್ಪಂದಿಸಿದ ಯಡಿಯೂರಪ್ಪ ತಕ್ಷಣ ಪುಟ್ಟಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ, `ಪ್ರಮಾಣ ವಚನ ಸ್ವೀಕರಿಸುವುದು ಬೇಡ~ ಎಂದು ಸೂಚಿಸಿದರು. ಆದರೂ ಪುಟ್ಟಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪುಟ್ಟಸ್ವಾಮಿ ಅವರು ಯಡಿಯೂರಪ್ಪನವರ ಸೂಚನೆ ಮೀರಿ ಪ್ರಮಾಣ ವಚನ ಸ್ವೀಕರಿಸಿದರೇ? ಅಥವಾ ಗುಟ್ಟಿನಲ್ಲಿ ಇನ್ನೇನಾದರೂ ನಡೆಯಿತೇ ಎಂಬ ಕುರಿತೂ ಶಾಸಕರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.ಐವರು ಸಚಿವರಿಗೆ ಸಮ: ಇದಕ್ಕೂ ಮುನ್ನ ಗುರುವಾರ ನಡೆದ ಆಪ್ತರ ಸಭೆಯಲ್ಲಿ ಯಡಿಯೂರಪ್ಪ ಅವರು, `ಒಬ್ಬ ಪುಟ್ಟಸ್ವಾಮಿ ಐದು ಸಚಿವರಿಗೆ ಸಮ. ಅವರು ಡಿ.ವಿ. ಸದಾನಂದ ಗೌಡರ ವಿರುದ್ಧ ಈಗಾಗಲೇ ಅನೇಕ ದಾಖಲೆ ಸಂಗ್ರಹಿಸಿದ್ದಾರೆ. ನಿಮ್ಮಿಂದ ಈ ಕೆಲಸ ಸಾಧ್ಯವೇ~ ಎಂದು ಪ್ರಶ್ನಿಸಿದ್ದಾರೆ ಎಂದು ಅವರ ಬಣದ ಮೂಲಗಳು ತಿಳಿಸಿವೆ.ಪುಟ್ಟಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಪಕ್ಷದ ವರಿಷ್ಠರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯಡಿಯೂರಪ್ಪ ಅವರು ಹಟ ಹಿಡಿದು ಪುಟ್ಟಸ್ವಾಮಿ ಅವರಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ. `ಬೇರೆ ಯಾರನ್ನು ಮಾಡದಿದ್ದರೂ ಪರವಾಗಿಲ್ಲ.ಪುಟ್ಟಸ್ವಾಮಿ ಅವರನ್ನಂತೂ ಮಂತ್ರಿ ಮಾಡಲೇಬೇಕು~ ಎಂದು ಯಡಿಯೂರಪ್ಪ ಸೂಚಿಸಿದ್ದರು. ಈ ಕಾರಣಕ್ಕೇ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.ಈ ವಿಷಯ ಯಡಿಯೂರಪ್ಪ ಬೆಂಬಲಿಗರಿಗೆ ಗೊತ್ತಾಗಿದೆ. ಅವರೆಲ್ಲ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಪರ ಇರುವ ಸಚಿವರು ಕೂಡ ಇದಕ್ಕೆ ಧ್ವನಿಗೂಡಿಸಿದರು ಎನ್ನಲಾಗಿದೆ.`ಪುಟ್ಟಸ್ವಾಮಿ ಅವರು ಬಿಜೆಪಿಗೆ ನೀಡಿರುವ ಕೊಡುಗೆ ಏನು? ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಕುಟುಂಬವನ್ನು ಟೀಕೆ ಮಾಡಿದ್ದು ಬಿಟ್ಟರೆ, ಪುಟ್ಟಸ್ವಾಮಿ ಮತ್ತೇನು ಮಾಡಿದ್ದಾರೆ. ಈ `ಸಾಧನೆ~ಗಾಗಿ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗಿದೆ. ಅದರೊಂದಿಗೆ ಸಚಿವ ಸ್ಥಾನ ನೀಡುವ ಅಗತ್ಯ ಇತ್ತೆ? 3-4 ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಎಲ್ಲಿಂದಲೋ ಬಂದವರಿಗೆ ಇಷ್ಟೊಂದು ಮನ್ನಣೆ ಏಕೆ~ ಎಂದು ಯಡಿಯೂರಪ್ಪ ವಿರುದ್ಧ ಬೆಂಬಲಿಗರೇ ಕಿಡಿಕಾರಿದ್ದಾರೆ.ಅತೃಪ್ತರು: ರೆಡ್ಡಿ ನೇತೃತ್ವದ ಅತೃಪ್ತರ ಗುಂಪಿನಲ್ಲಿ ಕರಡಿ ಸಂಗಣ್ಣ, ಶ್ರೀಶೈಲಪ್ಪ ಬಿದರೂರು, ಜಿ.ಎನ್.ನಂಜುಂಡಸ್ವಾಮಿ, ಲಕ್ಷ್ಮೀನಾರಾಯಣ, ಪರಣ್ಣ ಮುನವಳ್ಳಿ, ಪ್ರತಾಪಗೌಡ ಪಾಟೀಲ, ವಾಲ್ಮೀಕಿ ನಾಯಕ ಮತ್ತಿತರರು  ಇದ್ದಾರೆ ಎಂದು ಗೊತ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.