ಶನಿವಾರ, ಏಪ್ರಿಲ್ 10, 2021
30 °C

ಬಳಕೆಯಾಗದ ಶೌಚಾಲಯ!

ಪ್ರಜಾವಾಣಿ ವಾರ್ತೆ/ ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು, ನಾಗರಿಕರಿಗೆ ಸೌಲಭ್ಯಗಳನ್ನು ಒದಗಿಸಲು ನಗರಸಭೆಗೆ ಹಣದ ಕೊರತೆ ಇಲ್ಲ. ಕಳೆದ ಎರಡು ವರ್ಷಗಳಲ್ಲಿ 30 ಕೋಟಿ ರೂಪಾಯಿಗೂ ಅಧಿಕ ಹಣ ನಗರಸಭೆಗೆ ಹರಿದು ಬಂದಿದೆ.ಇಷ್ಟಾದರೂ ನಗರದಲ್ಲಿ ಉತ್ತಮ ರಸ್ತೆಗಳಿಲ್ಲ. ಮನರಂಜನೆ-ವಾಯು ವಿಹಾರ ಪ್ರಿಯರಿಗಾಗಿ ಸುಂದರ ಉದ್ಯಾನವನಗಳು ಇಲ್ಲ.ಆದರೆ, ಬಹು ಮುಖ್ಯ ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ಸಾರ್ವಜನಿಕ ಶೌಚಾಲಯಗಳು ಸಹ ನಗರದಲ್ಲಿ ಬಳಕೆಗೆ ಲಭ್ಯವಿಲ್ಲ ಎಂಬುದು ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದೇ ಹೇಳಬೇಕು.ಇನ್ನೂ ವಿಚಿತ್ರ ಎಂದರೆ ತಾನೇ ನಿರ್ಮಿಸಿದ್ದ ಶೌಚಾಲಯಗಳನ್ನು ಕೆಡವಿ ಹಾಕಿರುವ ನಗರಸಭೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಇವುಗಳು ಸಹ ಬಳಸಲು ಯೋಗ್ಯವಾಗಿಲ್ಲ.ಅದರಲ್ಲೂ, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ಎಂಬುವವರು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಪಡೆದಿರುವ ಮಾಹಿತಿ ನಗರಸಭೆಯ ಕಾರ್ಯ ವೈಖರಿಯನ್ನೇ ಪ್ರಶ್ನಿಸುವಂತಿದೆ.ನಗರದಲ್ಲಿ ಎಷ್ಟು ಸಾರ್ವಜನಿಕ ಶೌಚಾಲಯಗಳಿವೆ. ಇವುಗಳ ಪೈಕಿ ಎಷ್ಟು ಶೌಚಾಲಯಗಳು ಚಾಲನೆಯಲ್ಲಿವೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಕಳೆದ ಸೆ. 27ರಂದು ಹೊದ್ಲೂರು ಅವರು ಸಲ್ಲಿಸಿದ್ದರು. ಇದಕ್ಕೆ ನಗರಸಭೆ ನೀಡಿರುವ ಉತ್ತರದ ಪ್ರಕಾರ ನಗರದಲ್ಲಿ 5 ಸಾರ್ವಜನಿಕ ಶೌಚಾಲಯಗಳಿದ್ದು ಈ ಪೈಕಿ 4 ಮಾತ್ರ ಚಾಲನೆ ಇವೆ.ಅಂಚೆ ಕಚೇರಿ ಹತ್ತಿರ ಅಂಬೇಡ್ಕರ್ ವೃತ್ತದ ಬಳಿ, ಸಿಪಿಎಸ್ ಶಾಲೆ ಹತ್ತಿರ, ಗಡಿಯಾರ ಕಂಬದ ಹತ್ತಿರ ಹಾಗೂ ಗೌರಿ ಅಂಗಳದಲ್ಲಿರುವ ಬ್ರಹ್ಮನವಾಡಿ ಶಾಲೆ ಹತ್ತಿರ ಹೀಗೆ ಒಟ್ಟು ಸಾರ್ವಜನಿಕ ಶೌಚಾಲಯಗಳಿವೆ ಎಂದು ಉತ್ತರಿಸಿರುವ ನಗರಸಭೆ ಈ ಪೈಕಿ ಯಾವ 4 ಚಾಲನೆಯಲ್ಲಿವೆ ಎಂಬ ಮಾಹಿತಿ ಒದಗಿಸಿಲ್ಲ!ಇನ್ನು, ಮಹಿಳಾ ಶೌಚಾಲಯಗಳ ಸಂಖ್ಯೆ 29. ಈ ಪೈಕಿ 6 ಶೌಚಾಲಯಗಳು ಮಾತ್ರ ಚಾಲನೆಯಲ್ಲಿವೆ ಎಂದೂ ನಗರಸಭೆ ಉತ್ತರ ನೀಡಿದೆ. ಅಂದರೆ, 23 ಶೌಚಾಲಯಗಳು ಬಳಕೆಯಾಗುತ್ತಿಲ್ಲ ಎಂದಾಯಿತು.ಈ ಎಲ್ಲ ಶೌಚಾಲಯಗಳಿದ್ದು ಒಂದೇ ಸಮಸ್ಯೆ. ಯಾವ ಶೌಚಾಲಯಗಳಲ್ಲಿಯೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಬಳಕೆ ಮಾಡುವುದಾದರೂ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನು, ಕೆಲ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇದ್ದರೂ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಬಳಕೆ ಮಾಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನಗರಸಭೆಯ ಕೆಲ ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಾರೆ.ಪ್ರತಿ ಸಾಮಾನ್ಯ ಸಭೆಯಲ್ಲೂ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸಿ ಸಮಯ ಹಾಗೂ ಹಣವನ್ನು ಪೋಲು ಮಾಡುವ 31 ಜನ ಪುರಪಿತೃಗಳಿಗೆ ನಗರದಲ್ಲಿ ಶೌಚಾಲಯಗಳ ಸಮಸ್ಯೆ ಬಗ್ಗೆ ಯೋಚಿಸಲೂ ಪುರುಸೊತ್ತು ಇಲ್ಲ ಎಂದು ಜನ ಟೀಕಿಸುವಂತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.