ಬಿಜೆಪಿ ಆರೋಪ: ಲೋಕಾಯುಕ್ತ ತನಿಖೆಗೆ ಮನವಿ
ನವದೆಹಲಿ: ‘ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಹೋದರರು ಮತ್ತು ಸಂಬಂಧಿಕರ ಒಡೆತನದ ಎರಡು ಕಂಪೆನಿಗಳ ಖಾತೆಗಳಿಗೆ 167 ಕೋಟಿ ಜಮಾ ಮಾಡಲಾಗಿದೆ ಎಂಬ ಬಿಜೆಪಿ ಆರೋಪ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಸೋಮವಾರ ಲೋಕಾಯುಕ್ತರನ್ನು ಭೇಟಿ ಮಾಡಿ, ರಾಜ್ಯದ ಜನರಿಗೆ ನಿಜವಾದ ಸಂಗತಿ ತಿಳಿಸುವ ಉದ್ದೇಶದಿಂದ ಮನವಿ ಸಲ್ಲಿಸಲಿದ್ದೇನೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಬಿಜೆಪಿ ಸದಸ್ಯರು ಗುರುವಾರ ಬೆಳಿಗ್ಗೆ ನನ್ನ ಸಹೋದರರು ಹಾಗೂ ಸಂಬಂಧಿಕರ ಒಡೆತನದ ಬಿಎಸ್ಕೆ ಟ್ರೈನಿಂಗ್ ಕಂ. ಮತ್ತು ರಾಜರಾಜೇಶ್ವರಿ ಎಂಟರ್ ಪ್ರೈಸಸ್ ಖಾತೆಗಳಿಗೆ ಆರು ತಿಂಗಳಲ್ಲಿ 167 ಕೋಟಿ ಜಮಾ ಆಗಿದೆ’ ಎಂದು ದೂರಿದ್ದಾರೆ. ‘ಸಾಕ್ಷ್ಯಾಧಾರಗಳ ಸಹಿತ ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿಗಳು ರಾಜಕೀಯದಿಂದ ನಿವೃತ್ತಿ ಆಗುವರೇ ಎಂದು ಕೇಳಿದರು. ‘ಯಡಿಯೂರಪ್ಪ ಜವಾಬ್ದಾರಿಯಿಂದ ಮಾತನಾಡಬೇಕು. ಬೀದಿಯಲ್ಲಿ ನಿಂತವರಂತೆ ವರ್ತಿಸಬಾರದು’ ಎಂದು ಚುಚ್ಚಿದರು.
‘ಡಿ.ವಿ.ಸದಾನಂದಗೌಡರು ನನ್ನ ಕುಟುಂಬದ ವಿರುದ್ಧ ಆರೋಪ ಮಾಡಿದ್ದಾರೆ. ಪುತ್ರನ ಹೆಸರಲ್ಲಿ ಟ್ರಸ್ಟ್ ಮಾಡಿ ಶಿಕ್ಷಣ ಸಂಸ್ಥೆ ಆರಂಭಿಸಲು ಹೊರಟಿರುವ ಇವರಿಗೆ ಮುಖ್ಯಮಂತ್ರಿ ಕಾನೂನು ಮೀರಿ 20 ಎಕರೆ ಅರಣ್ಯ ಭೂಮಿಯನ್ನು ನೀಡಿದ್ದಾರೆ. ಋಣ ತೀರಿಸಲು ಬಿಜೆಪಿ ಮಾಜಿ ಅಧ್ಯಕ್ಷರು ತುದಿಗಾಲಲ್ಲಿ ನಿಂತಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಬಿಜೆಪಿ ಆರೋಪ: ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಹೋದರರು ಮತ್ತು ಸಂಬಂಧಿಕರ ಒಡೆತನದ ಬಿಎಸ್ಕೆ ಟ್ರೇಡಿಂಗ್ ಕಂಪೆನಿ ಮತ್ತು ರಾಜರಾಜೇಶ್ವರಿ ಎಂಟರ್ ಪ್ರೈಸಸ್ ಖಾತೆಗಳಿಗೆ ಆರು ತಿಂಗಳಲ್ಲಿ 167 ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಡೆದಿದೆ ಎನ್ನಲಾದ ‘ಅಕ್ರಮ’ಗಳನ್ನು ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ ಸ್ಪೀಕರ್ ಕ್ರಮದ ವಿರುದ್ಧ ಸಂಸತ್ ಭವನದ ಆವರಣದಲ್ಲಿ ಗುರುವಾರ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ ವೇಳೆ ಈ ಆರೋಪ ಮಾಡಿದರು.
ಯಾವ ಅವಧಿಯಲ್ಲಿ ಯಾವ ಖಾತೆಗಳಿಗೆ ಎಷ್ಟು ಹಣ ಪಾವತಿ ಮಾಡಲಾಗಿದೆ ಎಂಬ ವಿವರಗಳನ್ನು ಬಿಡುಗಡೆ ಮಾಡಲಾಯಿತು. ಎಚ್. ಡಿ. ರಮೇಶ್, ಎಚ್. ಕವಿತಾ, ಡಾ. ಸೌಮ್ಯ, ಕೆ. ಎಂ. ಹೊನ್ನಪ್ಪ, ಜಯಮ್ಮ, ಎಚ್. ಡಿ. ಬಾಲಕೃಷ್ಣಗೌಡ ಮೊದಲಾದವರ ಖಾತೆಗಳಿಗೆ ಹಣ ಜಮಾ ಆಗಿದೆ ಎಂದು ದೂರಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರರಿಬ್ಬರು ಟ್ರಸ್ಟಿಗಳಾಗಿರುವ ಶಿವಮೊಗ್ಗದ ‘ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್’ ಕೆಲವು ಕಾರ್ಪೋರೇಟ್ ಸಂಸ್ಥೆಗಳಿಂದ 27ಕೋಟಿ ಅಕ್ರಮ ವಂತಿಗೆ ಪಡೆದಿದೆ ಎಂದು ಆರೋಪಿಸಲು ಶೂನ್ಯ ವೇಳೆಯಲ್ಲಿ ದೇವೇಗೌಡರಿಗೆ ಅವಕಾಶ ನೀಡಲಾಯಿತು. ಆದರೆ, ಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಲು ಬಿಜೆಪಿ ಸದಸ್ಯರಿಗೆ ಅವಕಾಶ ನಿರಾಕರಣೆ ಮಾಡಲಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.