ಶುಕ್ರವಾರ, ಜೂನ್ 5, 2020
27 °C

ಮಳಿಗೆ ಹರಾಜು ಕುರಿತು ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಪಟ್ಟಣದಲ್ಲಿ ` 1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಪಟ್ಟಣದ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ ಮಳಿಗೆಗಳಲ್ಲಿ ನಾಲ್ಕು ಮಳಿಗೆಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸದೆ ನಾಲ್ವರು ವ್ಯಕ್ತಿಗಳಿಗೆ ಈ ಹಿಂದೆ ನಡೆದ ಸಭೆಯಲ್ಲಿ ಮಂಜೂರು ಮಾಡಿರುವುದು ಕಾನೂನುಬಾಹಿರ ಆಗುತ್ತದೆ ಎಂದು ಪ.ಪಂ. ಅಧ್ಯಕ್ಷ ಜೆ.ವಿ. ನಾಗರಾಜ್ ಹೇಳಿದರು.ರೈತರಿಗಾಗಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ವ್ಯಕ್ತಿಗಳಿಗೆ ನೇರವಾಗಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡರು. ಸದಸ್ಯ ಇಕ್ಬಾಲ್ ಅಹ್ಮದ್‌ಖಾನ್ ಅವರು ಅಧ್ಯಕ್ಷರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಹಿಂದಿನ ಸಭೆಯಲ್ಲಿ ಮಂಜೂರು ಮಾಡಲಾದ 4 ಮಳಿಗೆಗಳ ಹರಾಜು ಮಾಡುವುದು ಸರಿಯಲ್ಲ. ಸಭೆಯಲ್ಲಿ ಈ ವಿಷಯ ಚರ್ಚೆಗೆ ತನ್ನಿ. ಅಧ್ಯಕ್ಷರೇ ನೇರವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಒಪ್ಪತಕ್ಕದ್ದಲ್ಲ ಎಂದರು.ಪ.ಪಂ. ಕಚೇರಿಯಲ್ಲಿ ಆಯುಧ ಪೂಜೆಗೆ ` 8 ಸಾವಿರ ಸೇರಿದಂತೆ ಬೇಕಾಬಿಟ್ಟಿಯಾಗಿ ಲಕ್ಷಾಂತರ  ಖರ್ಚು ತೋರಿಸಲಾಗಿದೆ. ಖರ್ಚಿನ ವಿವರಗಳು ಹಾಗೂ ವೋಚರ್‌ಗಳನ್ನು ಕೊಡಿ ಎಂದು ಸದಸ್ಯರಾದ ಜೆ.ಒ. ನಾಗರಾಜ್ ನಾಯಕ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸೂಕ್ತ ದಾಖಲೆಗಳನ್ನು ಹಾಜರು ಪಡಿಸಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಪರದಾಡಿದರು.ಪಟ್ಟಣದ ವಿದ್ಯಾನಗರಕ್ಕೆ ಬಹುತೇಕ ಅನುದಾನ ನೀಡಲಾಗಿದೆ. ಇದರಿಂದ ಉಳಿದ ವಾರ್ಡ್‌ಗಳ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಅಧಿಕಾರಿಗಳು ತಾರತಮ್ಯದಿಂದ ವರ್ತಿಸುತ್ತಿದ್ದಾರೆ ಎಂದು ಸದಸ್ಯರಾದ ನಾಗಮ್ಮ, ತಿಪ್ಪೇಸ್ವಾಮಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷ ನಾಗರಾಜ್ ‘ಮುಂದೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಪಟ್ಟಣದ ಮಧ್ಯ ಭಾಗದಲ್ಲಿ ಪೆಟ್ರೋಲ್‌ಬಂಕ್‌ಗೆ ಬಾಡಿಗೆ ನೀಡಲಾಗಿರುವ ನಿವೇಶನದ ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ.ಪಂ.ಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯಿಸಿ ಮಾರ್ಚ್‌ನಲ್ಲಿ ಸದಸ್ಯರ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.