ಬುಧವಾರ, ಮೇ 12, 2021
18 °C

ರಸ್ತೆಗೆ ಕಸ ತ್ಯಾಜ್ಯ:ಡಿಸಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅಂಗಡಿಯಲ್ಲಿನ ಕಸಕಡ್ಡಿ ತಂದು ರಸ್ತೆಗೆ ಸುರಿದು ರಸ್ತೆಯನ್ನೇ ಕಸದ ತೊಟ್ಟಿಗಳನ್ನಾಗಿಸುತ್ತಿದ್ದ ಹಾಗೂ ಅಂಗಡಿ ಮುಂದಿನ ರಸ್ತೆ ಜಾಗೆಯೂ ತಮ್ಮದೇ ಎಂದು ಮೂಟೆಗಳ `ನಿಟ್ಟು'ಒಟ್ಟಿರುತ್ತಿದ್ದ ವ್ಯಾಪಾರಸ್ಥರಿಗೆ ಮಂಗಳವಾರ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.ನಗರದ ಗಂಜ್ ರಸ್ತೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆ ರಸ್ತೆ ಪಕ್ಕದ ಅಂಗಡಿ ಮುಂದೆ ಬಿದ್ದ ಕಸ ಕಂಡು ಕೆಂಡಾಮಂಡಲವಾದರು.  ಅಂಗಡಿ ಮುಂದೆ ಕಸ ಸುರಿದ ವ್ಯಾಪಾರಿ ತರಾಟೆಗೆ ತೆಗೆದುಕೊಂಡು ರಸ್ತೆ ಸಾರ್ವಜನಿಕರದ್ದು. ಕಸ ಸುರಿಯಬಾರದು ಎಂದು ಹೇಳಿ ಪುನಃ ಕಸವನ್ನು ಆ ವ್ಯಾಪಾರಿ ಅಂಗಡಿಯೊಳಕ್ಕೆ ಹಾಕಿಸಿ ಬಿಸಿ ಮುಟ್ಟಿಸಿದರು.ಅಂಗಡಿ ಮುಂದಿನ ಜಾಗೆಯಲ್ಲಿ ಗಿಡದ ಬಡ್ಡೆಗಳನ್ನು ಇಟ್ಟಿರುವುದನ್ನು ಕಂಡು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದರು. ಸಂಚಾರಕ್ಕೆ ತೊಂದರೆ ಆಗುತ್ತದೆ. ನಾಳೆಯೇ ಇದು ತೆರವುಗೊಳಿಸಬೇಕು. ನಾಳೆ ಬಂದು ನೋಡುತ್ತೇನೆ. ಹಾಗೆಯೇ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪುನಃ ಎಚ್ಚರಿಸಿದರು.ಬಳಿಕ ಪಟೇಲ್ ರಸ್ತೆಗೆ ತೆರಳಿದ ಜಿಲ್ಲಾಧಿಕಾರಿಗೆ ಕಂಡಿದ್ದು ಅಂಗಡಿಯೊಂದರ ಮುಂದಿನ ರಸ್ತೆಯಲ್ಲಿ ಉಪ್ಪಿನ ಮೂಟೆಗಳ ನಿಟ್ಟು. ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ತರಿಸಿ ಉಪ್ಪಿನ ಚೀಲಗಳನ್ನು ಎತ್ತಂಗಡಿ ಮಾಡಿಸಿದರು.ಪರವಾನಗಿ ಇಲ್ಲದೇ ವ್ಯಾಪಾರ ಮಾಡುವವರ ಅಂಗಡಿಗೆ ಬೀಗ ಜಡಿಯಬೇಕು, ರಸ್ತೆಯನ್ನೇ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುವವರಿಗೆ ಎಚ್ಚರಿಕೆ ನೀಡಿ ಕ್ರಮ ಜರುಗಿಸಬೇಕು, ಸ್ವಚ್ಛತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ರಸ್ತೆಗೆ ಕಸ ಸುರಿದು ಕಲುಷಿತ ವಾತಾವರಣಕ್ಕೆ ಕಾರಣರಾಗುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಎಂಜಿನಿಯರ್ ವೆಂಕಟೇಶ, ನೈರ್ಮಲ್ಯ ವಿಭಾಗ ಅಧಿಕಾರಿ ಮಲ್ಲಿಕಾರ್ಜುನ ಅವರಿಗೆ ಆದೇಶಿಸಿದರು.ಸದ್ಯ ನಗರಸಭೆ ಆಡಳಿತ ಮಂಡಳಿ ರಚನೆಗೊಂಡಿಲ್ಲ. ಅಲ್ಲಿಯವರೆಗೂ ಆಡಳಿತಾಧಿಕಾರಿ ತಾವೇ ಆಗಿದ್ದ, ನಗರ ಸ್ವಚ್ಛತೆ, ಅಭಿವೃದ್ಧಿ ಕುರಿತ ಕೆಲಸ ಕಾರ್ಯ ಗಮನಿಸಬೇಕಾಗಿದೆ. ಹೀಗಾಗಿ ಇಂದು ಭೇಟಿ ನೀಡಿ ಪರಿಶೀಲಿಸಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.ಪ್ರಾಜಾವಾಣಿ ವರದಿಗೆ ಸ್ಪಂದನೆ: ನಗರದ ಪ್ರಮುಖ ರಸ್ತೆ, ಬಡಾವಣೆಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿದು ಗಲೀಜು ವಾತಾವರಣದ ಬಗ್ಗೆ ಪ್ರಜಾವಾಣಿಯು ಸೋಮವಾರ ನಗರ ಸಂಚಾರದಲ್ಲಿ ` ರಸ್ತೆಗಳೇ ಕಸದ ತೊಟ್ಟಿಗಳು' ಎಂಬ ವರದಿ ಪ್ರಕಟಿಸಿತ್ತು.ಮಂಗಳವಾರ ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳೇ ನಗರದ ರಸ್ತೆಗಳಲ್ಲಿ ನಡೆದುಕೊಂಡು ಹೋಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಬಿಸಿ ಮುಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.