ಬುಧವಾರ, ಜೂನ್ 23, 2021
22 °C

ವಾಲಿದ ಕಟ್ಟಡ ತಂದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿದ ಕಟ್ಟಡ ತಂದ ಆತಂಕ

ಬೆಂಗಳೂರು:  ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಿರುಕು ಬಿಟ್ಟು, ವಾಲಿಕೊಂಡ ಪರಿಣಾಮ ಮಂಗಳವಾರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಶಾಂತಿಪುರ ಮುಖ್ಯರಸ್ತೆಯಲ್ಲಿರುವ ವಿನಾಯಕ ಲೇಔಟ್‌ನಲ್ಲಿ ತಮಿಳುನಾಡು ಮೂಲದ ವಿಜಯ್‌ಕುಮಾರ್ ಎಂಬುವರು ಕಳೆದ ಸೆಪ್ಟೆಂಬರ್‌ನಿಂದ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದರು.

`ಕಟ್ಟಡದ ಒಳಗೆ ಮಲಗಿದ್ದೆವು. ಬೆಳಿಗ್ಗೆ 5 ಗಂಟೆಗೆ ಜೋರಾಗಿ ಶಬ್ದ ಕೇಳಿಸಿತು. ಆತಂಕಗೊಂಡ ಹೊರಗೆ ಓಡಿ ಬಂದು ನೋಡಿದರೆ ಕಟ್ಟಡ ಬಿರುಕು ಬಿಟ್ಟು ಎಡ ಭಾಗಕ್ಕೆ ವಾಲಿಕೊಂಡಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆವು~ ಎಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದರು.

ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಲಿದ ಕಟ್ಟಡದ ಪಕ್ಕದಲ್ಲಿರುವ ಹಾಗೂ ಹಿಂಬದಿಯಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿಗಳನ್ನು ಸ್ಥಳಾಂತರಿಸಿದರು. ಮುಂಜಾಗ್ರತ ಕ್ರಮವಾಗಿ ಆ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಅನಿಲ ಸಿಲಿಂಡರ್‌ಗಳನ್ನು ಹೊರ ತಂದರು.

`ಕಾಮಗಾರಿ ಆರಂಭವಾದ ಐದು ತಿಂಗಳಲ್ಲಿಯೇ ಬಿರುಕು ಬಿಟ್ಟಿದ್ದು, ಕಟ್ಟಡದ ಅಡಿಪಾಯದಲ್ಲಿ ಲೋಪವಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 14 ಮನೆಗಳಿದ್ದು, ಇಡೀ ಕಟ್ಟಡವೇ ಕಳಪೆ ಕಾಮಗಾರಿಯಿಂದ ಕೂಡಿದೆ. ಕಟ್ಟಡವನ್ನು ಪರಿಶೀಲಿಸಿದ ಸಿವಿಲ್ ಎಂಜಿನಿಯರ್‌ಗಳು ಅದನ್ನು ನೆಲಸಮ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ~ ಎಂದು ಎಲೆಕ್ಟ್ರಾನಿಕ್‌ಸಿಟಿಯ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಸ್.ರಮಣೇಗೌಡ ಹೇಳಿದರು.

ಕಟ್ಟಡ ನೆಲಸಮ : ಕಟ್ಟಡದ ಮಾಲೀಕ ವಿಜಯ್ ಅವರ ಸಂಬಂಧಿ ಬಾಬು ರೆಡ್ಡಿ ಎಂಬುವರು ಜೆಸಿಬಿ ಯಂತ್ರಗಳನ್ನು ತಂದು ಕಟ್ಟಡವನ್ನು ಸಂಜೆ ಆರು ಗಂಟೆ ಸಮಯದಲ್ಲಿ ನೆಲಸಮ ಮಾಡಲು ಆರಂಭಿಸಿದರು.

ನಿರ್ಲಕ್ಷ್ಯದ ಆರೋಪದ ಮೇಲೆ ವಿಜಯ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಸುತ್ತಿದ್ದೇವೆ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.