ವಿಶ್ವ ಹಾಕಿ ಸರಣಿ: ಶೇರ್ ಎ ಪಂಜಾಬ್ ಚಾಂಪಿಯನ್

ಮುಂಬೈ: ವೇಗ ಹಾಗೂ ಚುರುಕಿನ ಆಟದ ಪ್ರದರ್ಶನ ತೋರಿದ ಶೇರ್ ಎ ಪಂಜಾಬ್ ತಂಡ ಚೊಚ್ಚಲ ವಿಶ್ವ ಹಾಕಿ ಸರಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿತು. ಸೋಮವಾರ ಇಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ 5-2 ಗೋಲುಗಳಿಂದ ಪುಣೆ ಸ್ಟ್ರೈಕರ್ಸ್ ವಿರುದ್ಧ ಜಯ ಸಾಧಿಸಿತು.
ವಿ.ಎಸ್. ವಿನಯ್ (6ನೇ ನಿಮಿಷ), ದೀಪಕ್ ಠಾಕೂರ್ (33), ಪ್ರಭ್ಜೋತ್ ಸಿಂಗ್ (47 ಮತ್ತು 66) ಹಾಗೂ ಹರ್ಪ್ರೀತ್ ಸಿಂಗ್ (57) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಪುಣೆ ತಂಡದ ಗೋಲುಗಳನ್ನು ಟೈರನ್ ಪೆರೇರಾ (4ನೇ ನಿಮಿಷ) ಹಾಗೂ ಸಿಮ್ರನ್ಜೀತ್ (70) ತಂದಿತ್ತರು. ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ಮರುಹೋರಾಟ ನಡೆಸಿದ ಪಂಜಾಬ್ ತಂಡ ಅರ್ಹ ಗೆಲುವು ಒಲಿಸಿಕೊಂಡಿತು.
ಮೊದಲ ನಿಮಿಷದಿಂದಲೇ ಎರಡೂ ತಂಡಗಳು ಆಕ್ರಮಣಕಾರಿ ಪ್ರದರ್ಶನ ನೀಡಲಾರಂಭಿಸಿದವು. ಇದರಿಂದ ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿದ್ದ ಹಾಕಿ ಪ್ರಿಯರಿಗೆ ಸಾಕಷ್ಟು ರಸದೌತಣ ಲಭಿಸಿತು. ಮೊದಲ 30 ನಿಮಿಷಗಳ ಕಾಲ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.
ಟೈರನ್ ಗೋಲಿನ ಮೂಲಕ ಪುಣೆ ತಂಡ ಮೇಲುಗೈ ಪಡೆಯಿತು. ಆದರೆ ತಂಡದ ಸಂತಸ ಹೆಚ್ಚುಹೊತ್ತು ಉಳಿಯಲಿಲ್ಲ. ಆರನೇ ನಿಮಿಷದಲ್ಲಿ ಪಂಜಾಬ್ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ವಿನಯ್ ಚೆಂಡನ್ನು ಗುರಿ ಸೇರಿಸಿದ ಕಾರಣ 1-1 ಸಮಬಲ ಕಂಡುಬಂತು.
ಆ ಬಳಿಕ ಪಂಜಾಬ್ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸತೊಡಗಿತು. ಈ ತಂಡದ ಮುನ್ನಡೆ ಆಟಗಾರರು ಪದೇ ಪದೇ ಚೆಂಡಿನೊಂದಿಗೆ ಎದುರಾಳಿ ಗೋಲುಪೆಟ್ಟಿಗೆ ಗುರಿಯಾಗಿಸಿ ದಾಳಿ ನಡೆಸತೊಡಗಿದರು.
ಪಂಜಾಬ್ ತಂಡದ ಪ್ರಯತ್ನಕ್ಕೆ 33ನೇ ನಿಮಿಷದಲ್ಲಿ ಫಲ ಲಭಿಸಿತು. ಎದುರಾಳಿ ರಕ್ಷಣಾ ಆಟಗಾರರು ಮತ್ತು ಗೋಲ್ಕೀಪರ್ನ್ನು ತಪ್ಪಿಸುವಲ್ಲಿ ಯಶಸ್ವಿಯಾದ ದೀಪಕ್ ಗೋಲು ಗಳಿಸಿದರು.
ವಿರಾಮದ ವೇಳೆಗೆ 2-1 ರಲ್ಲಿ ಮುನ್ನಡೆ ಪಡೆದಿದ್ದ ಪಂಜಾಬ್ ಆ ಬಳಿಕವೂ ಆಕ್ರಮಣಕಾರಿ ಪ್ರದರ್ಶನ ನೀಡಿತು. ಇದರಿಂದ ಮತ್ತೆ ಮೂರು ಗೋಲುಗಳು ಬಂದವು. ಪಂಜಾಬ್ ತಂಡದ ಗೋಲ್ಕೀಪರ್ ಮತ್ತು ರಕ್ಷಣಾ ಆಟಗಾರರು ಕೂಡಾ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಎರಡು ಗೋಲುಗಳನ್ನು ತಂದಿತ್ತ ಪ್ರಭ್ಜೋತ್ ಫೈನಲ್ ಪಂದ್ಯದ `ಹೀರೊ~ ಎನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.